ಬುಧವಾರ, ಅಕ್ಟೋಬರ್ 21, 2020
25 °C

ಕೊಪ್ಪದಲ್ಲಿ ದಾಖಲೆಯ ವರ್ಷಧಾರೆ: ಅಡಿಕೆಗೆ ಕೊಳೆರೋಗ, ರೈತರ ಆತಂಕ

ಜಿನೇಶ್ ಇರ್ವತ್ತೂರು Updated:

ಅಕ್ಷರ ಗಾತ್ರ : | |

Deccan Herald

ಕೊಪ್ಪ: ತಾಲ್ಲೂಕಿನಾದ್ಯಂತ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ, ಕಾಫಿ, ಕಾಳುಮೆಣಸು ಇನ್ನಿತರ ಬೆಳೆಗಳಿಗೆ ಕೊಳೆರೋಗ ವ್ಯಾಪಿಸಿದ್ದು, ರೈತರನ್ನು ಆತಂಕಕ್ಕೆ ಗುರಿಮಾಡಿದೆ.

ತಾಲ್ಲೂಕಿನಲ್ಲಿ ಈ ವರ್ಷದ ಮಳೆಯ ಪ್ರಮಾಣ ಹತ್ತಾರು ವರ್ಷಗಳ ದಾಖಲೆ ಮುರಿದಿದ್ದು, ಈಗಾಗಲೇ 110 ಇಂಚಿಗೂ ಅಧಿಕ ಮಳೆಯಾಗಿದೆ. ಸತತ ಮಳೆ, ಬಿರುಗಾಳಿ, ಶೀತ ಹವೆಯಿಂದಾಗಿ ವಾತಾವರಣ ಥಂಡಿಯಾಗಿದ್ದು, ಅಡಿಕೆ, ಕಾಫಿ ಗಿಡಗಳಲ್ಲಿ ನೀರು ನಿಂತು ಫಂಗಸ್ ಬೆಳೆದು ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ.

ಬಹುತೇಕ ರೈತರ ತೋಟಗಳಲ್ಲಿ ಮಳೆ, ಬಿರುಗಾಳಿಗೆ ಅಪಾರ ಪ್ರಮಾಣದ ಅಡಿಕೆ ಮರಗಳು ಮುರಿದು ಬಿದ್ದಿವೆ. ಬಿರುಗಾಳಿಗೆ ವಾಲಾಡುವ ಗಿಡಗಳ ತಾಕಲಾಟದಿಂದ ಅಡಿಕೆ ಕೊನೆಗಳಿಗೆ ಘಾಸಿಯಾಗಿ, ಕಾಯಿಗಳೆಲ್ಲ ಉದುರಿ ಕೊಳೆಯುವುದರಿಂದ ಬಹುಬೇಗ ಇಡೀ ತೋಟಕ್ಕೆ ಕೊಳೆರೋಗ ಹರಡುತ್ತಿವೆ.

ತಾಲ್ಲೂಕಿನ ಹರಿಹರಪುರದ ಕೃಷಿಕ ದೇವಮೂರ್ತಿ ಅವರ ಅಸಗೋಡು ಗಣಪತಿ ಕಟ್ಟೆ ಮತ್ತು ಹರಿಹರಪುರದ ತೋಟಗಳಲ್ಲಿ 100ಕ್ಕೂ ಹೆಚ್ಚು ಅಡಿಕೆ ಗಿಡಗಳು ಮಳೆ ಬಿರುಗಾಳಿಗೆ ಸಿಕ್ಕಿ ಧರೆಗುರುಳಿವೆ. ತೋಟಗಳ ತುಂಬಾ ಅಡಿಕೆ ಹೀಚುಗಾಯಿಗಳು ಉದುರಿ ಬಿದ್ದಿವೆ.

‘ಜೂನ್ ತಿಂಗಳಲ್ಲಿ ಕೊಳೆ ಔಷಧಿ ಸಿಂಪಡಿಸಿದ್ದೆವು. ಸಾಮಾನ್ಯವಾಗಿ 45 ದಿನದ ನಂತರ ಮತ್ತೆ ಔಷಧಿ ಹೊಡೆದರೆ ಸಾಕಿತ್ತು. ಆದರೆ, ಈ ಮಳೆಗಾಲದಲ್ಲಿ ನಿರಂತರ ಮಳೆ ಸುರಿಯುವುದರಿಂದ 30 ದಿನಕ್ಕೇ ಮತ್ತೆ ಔಷಧಿ ಹೊಡೆಯಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಅದಕ್ಕೂ ಮಳೆ ಅವಕಾಶ ನೀಡುತ್ತಿಲ್ಲ. ನಮ್ಮ ಎರಡೂ ತೋಟಗಳಿಗೆ ಕೊಳೆ ರೋಗ ಬಂದಾಗಿದೆ. ಬಿಸಿಲನ್ನು ಕಾಯುತ್ತಾ ಕೂತರೆ ತೋಟ ಉಳಿಯುವುದಿಲ್ಲ. ಹಾಗಾಗಿ ಸುರಿವ ಮಳೆಯಲ್ಲೇ ಔಷಧಿ ಹೊಡೆಯುತ್ತಿದ್ದೇವೆ. ಆದರೂ ಈ ಬಾರಿ ನಿರೀಕ್ಷಿತ ಫಸಲು ಕೈಗೆ ಬರುವ ವಿಶ್ವಾಸವಿಲ್ಲ’ ಎನ್ನುತ್ತಾರೆ ದೇವಮೂರ್ತಿ.

ಇದು ಅವರೊಬ್ಬರ ಕಥೆಯಲ್ಲ. ತಾಲ್ಲೂಕಿನ ಉದ್ದಗಲಕ್ಕೂ ಎಲ್ಲ ರೈತರದೂ ಇದೇ ಕಥೆ- ವ್ಯಥೆ. ಹುಲುಸಾಗಿ ಬೆಳೆಸಿದ ತೋಟ ಕಣ್ಣೆದುರೇ ಕೊಳೆರೋಗಕ್ಕೆ ತುತ್ತಾಗುವುದನ್ನು ನೋಡಲಾಗುತ್ತಿಲ್ಲ. ಉದುರಿದ ಅಡಿಕೆ ಹೆರಕಿ ನಾಶಪಡಿಸದಿದ್ದರೆ ಇಡೀ ತೋಟಕ್ಕೆ ರೋಗ ಹರಡುವುದರಿಂದ ಉದುರು ಅಡಿಕೆಗಳನ್ನು ಹೆಕ್ಕಿ ನಾಶಮಾಡುವುದೇ ರೈತರ ನಿತ್ಯದ ಕಾಯಕವಾಗಿದೆ.

ಈ ಬಾರಿ ಅವಧಿಗೆ ಮುಂಚೆ ಹದವಾದ ಮಳೆ ಬಂದಿದ್ದರಿಂದ ಬಂಗಾರದ ಫಸಲಿನ ನಿರೀಕ್ಷೆಯಲ್ಲಿದ್ದ ರೈತರ ಪಾಲಿಗೆ ಮುಂಗಾರು ಮುನಿದಿದೆ. ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ. ಲಾಭದ ಮಾತಿರಲಿ, ಕೊಳೆ ಔಷಧಿ ವೆಚ್ಚ, ಸಿಂಪಡಿಸುವ ಕೊನೆಕಾರರ ಮಜೂರಿಗೆ ಹಾಕಿದ ಹಣವೂ ವ್ಯರ್ಥ ಅಂತ ಗೊತ್ತಿದ್ದರೂ ತಮ್ಮ ಕರ್ತವ್ಯ ಬಿಡಲಾಗುತ್ತಿಲ್ಲ.

ತಾಲ್ಲೂಕು ವ್ಯಾಪ್ತಿಯ ಬಹುತೇಕ ರೈತರ ಶೇ 50ಕ್ಕೂ ಹೆಚ್ಚು ಅಡಿಕೆ ಫಸಲು ಹಾನಿಗೊಳಗಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಮುಂದಿನ ಹಂಗಾಮಿಗೂ ತೋಟ ಉಳಿಯುವುದು ಕಷ್ಟ ಎನ್ನುತ್ತಾರೆ ರೈತರು. ತಾಲ್ಲೂಕು ಆಡಳಿತ, ಅದರಲ್ಲೂ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರ ಈ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲಬೇಕಿದೆ. ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಬೇಕು, ತಾಲ್ಲೂಕನ್ನು ಅತಿವೃಷ್ಟಿಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆ ಮೂಲಕ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲ ರೈತರ ಒಕ್ಕೊರಳಿನ ಆಗ್ರಹವಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು