ಅರಿಸಿನದಲ್ಲಿ ‘ಪ್ರತಿಭಾ’ನ್ವೇಷಣೆ!

7

ಅರಿಸಿನದಲ್ಲಿ ‘ಪ್ರತಿಭಾ’ನ್ವೇಷಣೆ!

Published:
Updated:
Deccan Herald

ಅರಿಸಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಕೋಯಿಕ್ಕೋಡ್‌ನಲ್ಲಿರುವ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆ (ಐಐಎಸ್‌ಆರ್) ಹೆಚ್ಚು ಇಳುವರಿ ನೀಡುವ ‘ಪ್ರತಿಭಾ’ ಎಂಬ ಹೊಸ ತಳಿಯನ್ನು ಕಳೆದ ವರ್ಷ ಬಿಡುಗಡೆ ಮಾಡಿದೆ. ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ ಈ ತಳಿಯನ್ನು ರೈತರಿಗೆ ವಿತರಿಸಿದೆ. ಕೇರಳ, ಕರ್ನಾಟಕ ಸೇರಿದಂತೆ ದೇಶದಲ್ಲಿ ಅರಿಸಿನ ಬೆಳೆಯುವ ಪ್ರದೇಶಗಳಿಗೆ ಈ ತಳಿಯನ್ನು ಬಿಡುಗಡೆ ಮಾಡಿದೆ. ಮೈಸೂರಿನ ತೋಟಗಾರಿಕಾ ಕಾಲೇಜು ರಾಜ್ಯಕ್ಕೆ ಈ ತಳಿಯನ್ನು ಪರಿಚಯಿಸುತ್ತಿದೆ. ಕರ್ನಾಟಕದ ಮಣ್ಣಿನ ಲಕ್ಷಣ ಈ ತಳಿಗೆ ಹೊಂದಿಕೆಯಾಗುವ ಕಾರಣ, ಸಾಂಪ್ರದಾಯಿಕವಾಗಿ ಅರಿಸಿನ ಬೆಳೆಯದ ಪ್ರದೇಶಗಳಲ್ಲಿಯೂ ಈ ತಳಿಯನ್ನು ಬೆಳೆಸಲು ರೈತರು ಆಸಕ್ತಿ ತೋರಿದ್ದಾರೆ.

ಪ್ರತಿಭಾ ತಳಿಯ ವಿಶೇಷ

ಪ್ರಸ್ತುತ ದೇಶದಲ್ಲಿ ಅರಿಸಿನವನ್ನು ಕುರ್ಕುಮಿನ್ ಮತ್ತು ಒಲಿಯೋರಿಸಿನ್ ಎಂಬ ರಾಸಾಯನಿಕಗಳ ಉತ್ಪಾದನೆಗಾಗಿ ಬಳಸಲಾಗುತ್ತಿದೆ. ಆದರೆ, ಈಗ ಬೆಳೆಯುತ್ತಿರುವ ತಳಿಗಳಗಳಲ್ಲಿ ಕುರ್ಕುಮಿನ್ ಅಂಶ ಗರಿಷ್ಠ ಶೇ 3.5 ಮತ್ತು ಒಲಿಯೋರಿಸಿನ್ ಅಂಶ ಗರಿಷ್ಠ ಶೇ 10ರಿಂದ ಶೇ 12ರಷ್ಟು ಇದೆ. ಆದರೆ, ಪ್ರತಿಭಾ ತಳಿಯಲ್ಲಿ ಕುರ್ಕುಮಿನ್ ಅಂಶ ಶೇ 6.5ರಷ್ಟಿದ್ದು, ಒಲಿಯೋರಿಸಿನ್ ಅಂಶ ಶೇ 16.5ರಷ್ಟಿದೆ. ಹಾಗಾಗಿ ಈ ತಳಿಯನ್ನು ಬೆಳೆಸಲು ಸಂಶೋಧನಾ ಮಂಡಳಿ ಉತ್ತೇಜನ ನೀಡುತ್ತಿದೆ.

ಬೇಸಾಯ ಕ್ರಮ

ಒಂದು ಎಕರೆಗೆ 5 ಕಿಂಟಲ್ ಅರಿಸಿನದ ಬಿತ್ತನೆ ಬೆರಳುಗಳು (ಗೆಡ್ಡೆಗಳು) ಬೇಕು. ಬಿತ್ತನೆ ಗೆಡ್ಡೆಗಳನ್ನು ನಾಟಿ ಮಾಡುವುದಕ್ಕೆ ಒಂದು ದಿನ ಮೊದಲು ನೀರಿನಲ್ಲಿ ನೆನೆಸಬೇಕು (12 ಗಂಟೆ ನೆನೆಸಬೇಕು). ನಾಟಿಗೂ ಮುನ್ನ ಗೆಡ್ಡೆಗಳನ್ನು ಶೇ 0.5ರಷ್ಡು ಬ್ಯಾವೆಸ್ಟಿನ್ ದ್ರಾವಣದಲ್ಲಿ 20 ನಿಮಿಷ ಅದ್ದಬೇಕು. ಇದರಿಂದ ರೋಗರಹಿತ ಸಸಿಯ ಜತೆಗೆ, ಸಮಾನ ಗಾತ್ರದ ಗೆಡ್ಡೆಗಳನ್ನು ಪಡೆಯಬಹುದು.

3 ಅಡಿ ಅಗಲದ 5 ಅಡಿ ಎತ್ತರದ ಏರುಮಡಿಗಳನ್ನು ಮಾಡಿ, ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರತಿ ಏರುಮಡಿಗೆ ಒಂದು ಹನಿ ನೀರಾವರಿ ಪೈಪು ಬೇಕಾಗುತ್ತದೆ. ಸಾಲಿನಿಂದ– ಸಾಲಿಗೆ 2 ಅಡಿ ಮತ್ತು ಗಿಡದಿಂದ– ಗಿಡಕ್ಕೆ 0.75 ಅಡಿ ಅಂತರದಲ್ಲಿ ಜೋಡಿಸಾಲು ಪದ್ಧತಿಯಲ್ಲಿ ಗೆಡ್ಡೆಗಳನ್ನು ನಾಟಿ ಮಾಡಬೇಕು. ಗೆಡ್ಡೆಗಳು ಬಿತ್ತನೆ ಮಾಡಿದ 15 ದಿನಕ್ಕೆ ಮೊಳಕೆಯೊಡೆಯಲು ಆರಂಭವಾಗುತ್ತವೆ. 30ರಿಂದ 35 ದಿನಗಳವರೆಗೆ ಮೊಳಕೆ ಬರುತ್ತದೆ.

ಪ್ರತಿಭಾ ತಳಿ ನಾಟಿ ಮಾಡಿದ 60 ದಿನಗಳಲ್ಲಿ ಗೆಡ್ಡೆಗಳು ಚಿಗುರು ಒಡೆದು 0.5 ಮಿಟರ್‌ನಷ್ಟು ಎತ್ತರಕ್ಕೆ ಬೆಳೆಯುತ್ತವೆ. ಒಂದು ಗಿಡಕ್ಕೆ 12 ತೆಂಡೆಗಳು ಮೂಡುತ್ತವೆ. 210 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಕರೆಗೆ ಸರಾಸರಿ 13 ಟನ್ ಹಸಿ ಅರಿಸಿನ ಇಳುವರಿ ನಿರೀಕ್ಷಿಸಲಾಗಿದೆ. ಒಂದು ಎಕರೆಗೆ ಒಣ ಅರಿಸಿನ ಇಳುವರಿ 25 ಕ್ವಿಂಟಲ್‌. ನೂರು ಕೆ.ಜಿ ಹಸಿ ಅರಿಸಿನದಿಂದ 18.5 ಕೆ.ಜಿ ಒಣ ಅರಿಸಿನ ಪಡೆಯಬಹುದು. ಒಂದು ಎಕರೆಗೆ 5 ಕ್ವಿಂಟಲ್ ಅರಿಸಿನದ ಬೆರಳುಗಳು ಬೇಕು. ಒಂದು ಎಕರೆಯಲ್ಲಿ 23 ಸಾವಿರ ಅರಿಸಿನ ಗಿಡಗಳನ್ನು ಬೆಳೆಯಲಾಗುತ್ತದೆ. ಸಾಮಾನ್ಯ ತಳಿಯ ಗೆಡ್ಡೆಯಿಂದ 17 ಸಾವಿರ ಗಿಡಗಳು ಮಾತ್ರ ಬರುತ್ತವೆ.

ಬೆಳೆ ಕಟಾವು ಸಮಯ

ನಾಟಿ ಮಾಡಿದ ಗೆಡ್ಡೆ ಚಿಗುರಿ, ಎಲೆಗಳಾಗಿ, ಆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಾಂಡಗಳು ಒಣಗಿ ಕೆಳಕ್ಕೆ ಬಿದ್ದಾಗ ಗೆಡ್ಡೆಗಳ ಬೆಳವಣಿಗೆ ಹಂತ ಮುಗಿದಿರುತ್ತದೆ ಎಂದು ಅರ್ಥ. ಆ ಹಂತದಿಂದ ಗೆಡ್ಡೆಗಳನ್ನು ಮಾಗಲು ಬಿಡಬೇಕು. ಅದಕ್ಕಾಗಿ ಎಲೆಗಳನ್ನು ಕತ್ತರಿಸಿ ಗೆಡ್ಡೆಗಳನ್ನು 15 ದಿನ ಮಣ್ಣೊಳಗೆ ಬಿಡಬೇಕು. ನಂತರ ಅಗೆದು ಅವುಗಳನ್ನು ಮಣ್ಣಿನಿಂದ ಬೇರ್ಪಡಿಸಬೇಕು.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಅರಿಸಿನಗೆಡ್ಡೆ ನಾಟಿ ಮಾಡುತ್ತಾರೆ. ಬಿತ್ತನೆ ತಿಂಗಳು ಮುಗಿದಿದೆ. ಹೊಸ ತಳಿ ಬಳಕೆಗೆ ಇನ್ನೊಂದು ವರ್ಷ ಕಾಯಬೇಕೆಂದು ರೈತರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ತೋಟಗಾರಿಕೆ ಕಾಲೇಜು ಎರಡು ತಿಂಗಳ ಹಿಂದೆಯೇ ಪ್ರತಿಭಾ ತಳಿ ಬಿತ್ತನೆ ಮಾಡಿದೆ. ಅವುಗಳಿಗೆ ಈಗ 60 ದಿನಗಳ ಪ್ರಾಯ. ಹುಲುಸಾಗಿ ಬೆಳೆದಿವೆ. ಈಗಾಲೆ ಹಳೆಯ ತಳಿಯನ್ನು ನಾಟಿ ಮಾಡಿರುವ ರೈತರು, ಅವುಗಳ ಸಾಲುಗಳ ನಡುವಿರುವ ಜಾಗದಲ್ಲಿಯೇ ಈ ಸಸಿಗಳನ್ನು ನೆಡಬಹುದು. ಉತ್ತಮ ಇಳುವರಿ ನೀಡುವಲ್ಲಿ ಇದು ನೂರಕ್ಕೆ ನೂರರಷ್ಟು ಭರವಸೆ ಮೂಡಿಸಿದೆ ಎನ್ನುತ್ತಾರೆ ಮೈಸೂರಿನ ತೋಟಗಾರಿಕಾ ಕಾಲೇಜಿನ ವಿಜ್ಞಾನಿ ಪಲ್ಲವಿ ಮರಿಗೌಡ.

ರಾಜ್ಯದಾದ್ಯಂತ ವಿತರಣೆ: ತೋಟಗಾರಿಕೆ ಕಾಲೇಜು ಈ ವರ್ಷವೇ ಪ್ರತಿಭಾ ತಳಿ ಬೀಜಗಳನ್ನು ಪೂರ್ಣಪ್ರಮಾಣದಲ್ಲಿ ಪೂರೈಸುತ್ತಿದೆ. ಈಗಾಗಲೇ ಕಲಬುರ್ಗಿ, ಹುಮನಾಬಾದ್‌, ಬೀದರ್‌, ಬಸವಕಲ್ಯಾಣ, ಬೆಳಗಾವಿ, ರಾಮದುರ್ಗ, ರನ್ನ ಬೆಳಗಲಿ, ಮುಧೋಳ ಸೇರಿದಂತೆ, ಅರಿಸಿನ ಬೆಳೆಯುವ ಮತ್ತು ಬೆಳೆಯಲು ಆಸಕ್ತಿ ತೋರುವ ರೈತರಿಗೆ ಪ್ರತಿಭಾ ತಳಿಯನ್ನು ಪೂರೈಸಲಾಗಿದೆ. ಬೇಡಿಕೆ ಇನ್ನೂ ಸಾಕಷ್ಟಿದೆ ಎನ್ನುತ್ತಾರೆ ಪಲ್ಲವಿ ಮರಿಗೌಡ.

ಅರಿಸಿನ ಬೆಳೆಯುವ ಆಸಕ್ತರು  ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಮೈಸೂರು, ಅರಬಾವಿಯಲ್ಲಿರುವ ತೋಟಗಾರಿಕಾ ಕಾಲೇಜು ಹಾಗೂ ಜಿಲ್ಲೆಗಳಲ್ಲಿರುವ ತೋಟಗಾರಿಕಾ ಇಲಾಖೆಗಳಲ್ಲೂ ಗೆಡ್ಡೆ ಹಾಗೂ ಸಸಿಗಳು ಲಭ್ಯ ಇವೆ. 
ಹೆಚ್ಚಿನ ಮಾಹಿತಿಗೆ: 0821 2973414 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !