ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆಯಲ್ಲೂ ದ್ರಾಕ್ಷಿ; ವರಮಾನ ಜಾಸ್ತಿ..!

Last Updated 22 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ನಾಲತವಾಡ:ಆಲೂರ ಗ್ರಾಮದ ಪ್ರಗತಿಪರ ರೈತ ಶಿವಪುತ್ರ ಗೂಳಿ ತಮ್ಮ 12 ಎಕರೆ ಜಮೀನಿನಲ್ಲಿ ಕೃಷಿ ನಡೆಸಿದ್ದಾರೆ. ಎಂಟು ಎಕರೆಯಲ್ಲಿ ಕಬ್ಬು ಬೆಳೆದಿದ್ದರೆ; ನಾಲ್ಕು ಎಕರೆಯಲ್ಲಿ ಭರಪೂರ ದ್ರಾಕ್ಷಿ ಬೆಳೆದಿದ್ದಾರೆ.

ನೀರಿನ ಕೊರತೆಯಲ್ಲೂ ಗೂಳಿ ಸಮೃದ್ಧ ಕೃಷಿ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 12 ಕೊಳವೆಬಾವಿ ಕೊರೆಸಿದರೂ ನೀರು ಸಿಗದಿದ್ದಾಗ ಧೃತಿಗೆಡದೆ, ತೆರೆದ ಬಾವಿ ತೋಡಿಕೊಂಡು ತಮ್ಮ ನೀರಿನ ಅಭಾವ ನೀಗಿಸಿಕೊಂಡಿದ್ದಾರೆ.

ಕಬ್ಬು ಕಡಿಮೆ ಶ್ರಮ ಬೇಡುವ ಬೆಳೆ. ಆದಾಯವನ್ನು ಕೊಡಲಿದೆ. ನೆಚ್ಚಿನ ಬೆಳೆಯನ್ನಾಗಿ ದ್ರಾಕ್ಷಿ ಬೆಳೆದಿದ್ದು, ಪ್ರತಿ ವರ್ಷವೂ ಸಮೃದ್ಧ ಫಸಲು, ನಿಶ್ಚಿತ ವರಮಾನ ಪಡೆಯುವುದು ಗೂಳಿ ಕುಟುಂಬಕ್ಕೆ ಕರಗತವಾಗಿದೆ.

ನೀರಿನ ಕೊರತೆ ನಡುವೆಯೂ, ಸಾಧಾರಣ ಭೂಮಿಯಲ್ಲಿ ಉತ್ಕೃಷ್ಟ ಫಸಲು ಪಡೆದಿದ್ದಕ್ಕೆ 2018ನೇ ಸಾಲಿನ ತಾಲ್ಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಶಿವಪುತ್ರ ಗೂಳಿ ಅರಸಿ ಬಂದಿದೆ. ಸತತ ಐದು ವರ್ಷದಿಂದ ದ್ರಾಕ್ಷಿಯಲ್ಲಿ ಲಾಭ ಕಂಡುಕೊಳ್ಳುತ್ತಿದ್ದಾರೆ.

ತೋಟಗಾರಿಕಾ ಇಲಾಖೆಯ ತಜ್ಞರ ಸಲಹೆಯಂತೆ, ಹೆಚ್ಚು ಸಿಹಿ, ತೆಳುವಾದ ತೊಗಟೆ ಹೊಂದಿರುವ ಥಾಮ್ಸನ್ ತಳಿಯ ಸೀಡ್‌ಲೆಸ್‌ ದ್ರಾಕ್ಷಿ ಆಯ್ಕೆ ಮಾಡಿಕೊಂಡು, ಜಮೀನಿನಲ್ಲಿ ಬೆಳೆದಿದ್ದಾರೆ. ಆರಂಭದಲ್ಲಿ ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆ ಮಾಡಿದ್ದರು. ಇದೀಗ ಸಂದರ್ಭಾನುಸಾರ ಸಾವಯವ, ಕೊಟ್ಟಿಗೆ, ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

‘ಯಾವುದೇ ಬೆಳೆಗೆ ದನದ ಸಗಣಿ, ಸಾವಯವ ಗೊಬ್ಬರ ಬಳಕೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು, ಸಮೃದ್ಧ ಫಸಲು ಸಿಗಲಿದೆ. ದ್ರಾಕ್ಷಿಗೆ ಬಳಸಿದರೆ ಬಳ್ಳಿಯ ಎಲೆಗಳು ದಪ್ಪವಾಗಿರುತ್ತವೆ. ಹಣ್ಣುಗಳಲ್ಲಿ ಸಿಹಿ ಅಂಶ ಹೆಚ್ಚಿ ರುಚಿಕರವಾಗಿರುತ್ತದೆ’ ಎನ್ನುತ್ತಾರೆ ಗೂಳಿ.

‘ಬಳ್ಳಿಗಳ ನಿರ್ವಹಣೆ ಆರಂಭದಲ್ಲಿ ತ್ರಾಸ್‌ ಎನಿಸುತ್ತಿತ್ತು. ಇದೀಗ ಅದರ ಪರಿಪೂರ್ಣ ಮಾಹಿತಿ ಕರಗತವಾಗಿದೆ. ಸಕಾಲಕ್ಕೆ ಒದಗಿಸಬೇಕಾದ ನೀರು, ಗೊಬ್ಬರ, ಕೀಟನಾಶಕದ ಮಾಹಿತಿ ಇರುವುದರಿಂದ ಕಡಿಮೆ ಶ್ರಮದಲ್ಲಿ ಉತ್ತಮ ಗುಣಮಟ್ಟದ ಫಸಲು ಪಡೆಯುತ್ತಿರುವೆ’ ಎಂದು ಶಿವಪುತ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ದ್ರಾಕ್ಷಿ ಹಣ್ಣನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆ, ಮಣೂಕ ಮಾಡಲು ಮುಂದಾದರು ಗೂಳಿ. ಮಣೂಕವನ್ನು ಸಹ ನೆರೆಯ ಮಹಾರಾಷ್ಟ್ರದ ತಾಸ್ಕಗಾಂವ್ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ, ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ದ್ರಾಕ್ಷಿ ಬಳ್ಳಿಗಳಲ್ಲಿ ಗೊನೆಗಳಲ್ಲಿನ ಹಣ್ಣು ಪಕ್ವವಾಗಿ, ಮಾಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿ, ಕೊಯ್ಲಿಗೂ 10 ದಿನ ಮೊದಲೇ ನೀರು ಕೊಡುವುದನ್ನು ನಿಲ್ಲಿಸಿದರೆ, ಸಿಹಿ ಅಂಶ ಹೆಚ್ಚಾಗಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅದೇ ರೀತಿ ತಮ್ಮ ಬೆಳೆ ನಿರ್ವಹಿಸುತ್ತಿರುವುದು ಇವರ ವಿಶೇಷ.

ಹಸಿ ದ್ರಾಕ್ಷಿ ಒಣಗಿಸಲಿಕ್ಕಾಗಿಯೇ 16×24ರ ಅಳತೆಯಲ್ಲಿ ನಿರ್ಮಿಸಿದ ಶೆಡ್‌ನಲ್ಲಿನ ಟ್ರೇಗಳಲ್ಲಿ ತುಂಬುತ್ತಾರೆ. ಇದಕ್ಕೆ ಗಂಧಕದ ಹೊಗೆ ಕೊಡುವ ಮೂಲಕ ಉತ್ತಮ ಬಣ್ಣ ಬರುವಂತೆ ನೋಡಿಕೊಳ್ಳುವ ಜತೆ ಫಂಗಸ್ ತಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT