ಭಾನುವಾರ, ಮೇ 29, 2022
22 °C

ಕೃಷಿ ಮೇಳಕ್ಕೆ ರೈತರು, ಆಸಕ್ತರ ದಂಡು: ಇಂದು ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ನಡೆ ಯುತ್ತಿರುವ ‘ನಾಲ್ಕನೇ ರಾಷ್ಟ್ರೀಯ ತೋಟಗಾರಿಕಾ ಮೇಳ-2021’ಕ್ಕೆ ಶುಕ್ರವಾರ (ಫೆ. 12) ತೆರೆ ಬೀಳಲಿದೆ.

ಐದು ದಿನಗಳ ಮೇಳವನ್ನು ಮೊದಲ ನಾಲ್ಕು ದಿನ ನೇರವಾಗಿ 20 ಸಾವಿರಕ್ಕೂ ಹೆಚ್ಚು ಹಾಗೂ ವರ್ಚುವಲ್‌ ಮೂಲಕ 30 ಸಾವಿರಕ್ಕೂ ಹೆಚ್ಚುಜನರು ವೀಕ್ಷಿಸಿದ್ದಾರೆ. ಕೋವಿಡ್‌ ನಡುವೆಯೂ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಆಸಕ್ತರು ನೇರವಾಗಿ ಮೇಳ ವೀಕ್ಷಿಸಲು ಬಂದಿದ್ದಾರೆ. ಕೊನೆಯ ದಿನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.

‘ಮೊದಲ ಬಾರಿ ಆಯೋಜಿಸಿದ್ದ ಮೇಳವನ್ನು 10 ಸಾವಿರ ಜನರು ವೀಕ್ಷಿಸಿದ್ದರು. ಎರಡನೇ ಬಾರಿ 30 ಸಾವಿರ, ಕಳೆದ ವರ್ಷ ನಡೆದ ಮೇಳಕ್ಕೆ 80 ಸಾವಿರ ರೈತರು, ಆಸಕ್ತರು ಬಂದಿದ್ದರು. ಈ ಬಾರಿ, ಇನ್ನೂ ಹೆಚ್ಚಿನ ಜನ ಸಂಖ್ಯೆಯಲ್ಲಿ ಜನರು ನೇರವಾಗಿ ಬರುತ್ತಿದ್ದಾರೆ. ವರ್ಚುವಲ್‌ ಮೂಲಕವೂ ವೀಕ್ಷಿಸುತ್ತಿದ್ದಾರೆ’ ಎಂದು ಐಐಎಚ್ಆರ್ ನಿರ್ದೇಶಕ ಎಂ.ಆರ್‌. ದಿನೇಶ್‌ ಹೇಳಿದರು.

‘ಐಐಎಚ್ಆರ್‌ನ 720 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಗಳ ಹೂವು, ಹಣ್ಣು, ತರಕಾರಿಗಳ ಪ್ರದರ್ಶನವಿದೆ. ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹೂವಿನ ಗಿಡ, ಅಲಂಕಾರಿಕ ಪುಷ್ಪಗಳು, ಔಷಧೀಯ ಗಿಡಗಳು, ಸೌಗಂಧಿಕ ಬೆಳೆಗಳು,ಅಣಬೆ ಬೆಳೆಗಳ ಉತ್ಪಾದನೆ ಮತ್ತು ತಂತ್ರಜ್ಞಾನಗಳ ನೋಟ ಮೇಳಕ್ಕೆ ಮೆರುಗು ನೀಡಿದೆ’ ಎಂದು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಬಿ. ನಾರಾಯಣಸ್ವಾಮಿ ಹೇಳಿದರು.

‘ಕೊರೊನಾ ಕಾರಣದಿಂದ ಸ್ಥಳೀಯ ರೈತರ ಭೇಟಿಗೆ ಮಾತ್ರ ಮೇಳ ವೀಕ್ಷಿಸಲು ಅವಕಾಶ ನೀಡಲಾ ಗಿತ್ತು. ಹೊರರಾಜ್ಯಗಳ ರೈತರಿಗೆ ವರ್ಚುವಲ್‌ ಮೂಲಕ ಮೇಳದ ವೀಕ್ಷಣೆಗೆ ಅವಕಾಶವಿದೆ. ಆದರೂ, ನೆರೆಯ ರಾಜ್ಯಗಳಾದ ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡು, ಪುದುಚೇರಿಯಿಂದ ಕೃಷಿಕರು, ತೋಟಗಾರಿಕಾ ಉತ್ಪನ್ನಗಳ ಉದ್ದಿಮೆದಾರರು ಮೇಳಕ್ಕೆ ಭೇಟಿ ನೀಡಿದ್ದಾರೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಸಕ್ತರು ಬಂದಿದ್ದಾರೆ’ ಎಂದೂ ಅವರು ವಿವರಿಸಿದರು.

ಉತ್ತರ ಕರ್ನಾಟಕ ಭಾಗದ ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಹೆಚ್ಚು ಆಕರ್ಷಿತಗೊಂಡು, ಸ್ತ್ರೀಶಕ್ತಿ,ಸ್ವಸಹಾಯ ಗುಂಪುಗಳ, ಕೃಷಿ ಆಧಾರಿತ ಸ್ವಸಹಾಯ ಸಂಘಗಳ ಮೂಲಕ ಭೇಟಿ ನೀಡಿದರು. ರೈತರು, ಸಂರಕ್ಷಿತ ಬೇಸಾಯ, ತೋಟಗಾರಿಕೆ ಬೇಸಾಯ ಪದ್ಧತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಕೃಷಿ, ತೋಟಗಾರಿಕೆ ಪದವಿಗೆ ಹೆಣ್ಣು ಮಕ್ಕಳ ಒಲವು’

ಬೆಂಗಳೂರು: ‘ಕೃಷಿ ಮತ್ತು ತೋಟಗಾರಿಕೆಯಲ್ಲಿ ಪದವಿ ಪಡೆಯತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಪ್ರತಿ ರಾಜ್ಯದಲ್ಲಿ ಸರಾಸರಿ ಶೇ 35ರಷ್ಟಿದೆ. ಕೇರಳದಲ್ಲಿ ಶೇ 65ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಈ ವಿಭಾಗಗಳಲ್ಲಿ ಪದವಿ ಕಲಿಯುತ್ತಿದ್ದಾರೆ’ ಎಂದು  ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಕಿರಿಯ ಸಂಶೋಧಕಿ (ಹಣ್ಣು ಬೆಳೆ ವಿಭಾಗ) ಪಿ.ಎಲ್‌. ಅನುಷ್ಮಾ ಹೇಳಿದರು.

ರಾಷ್ಟ್ರೀಯ ತೋಟಗಾರಿಕೆ ಮೇಳದ ನಾಲ್ಕನೇ ದಿನ ವಾದ ಗುರುವಾರ ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ನಡೆದ ತಾಂತ್ರಿಕ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಿದ್ದಾರೆ. ಸ್ವಸಹಾಯ ಸಂಘಗಳು ಮತ್ತು ಮನೆಯ ವಾತಾವರಣದಲ್ಲಿ ಹೆಣ್ಣು ಮಕ್ಕಳಿಗೆ ತೋಟಗಾರಿಕೆ ಮತ್ತು ಕೃಷಿಯಲ್ಲಿ ಅನುಭವ ಸಿಗುವುದರಿಂದ ಅವರು ಈ ವಿಭಾಗಗಳಲ್ಲಿ ಪದವಿ ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಇದಕ್ಕೆ ಸಂಬಂಧಿಸಿದ ಉಪ ಉದ್ಯಮದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ತೋಟಗಾರಿಕೆ ಮತ್ತು ಕೃಷಿಯಲ್ಲಿ ಇತ್ತೀಚೆಗೆ ಉದ್ಯೋಗಾವಕಾಶಗಳು ಸಿಗುವುದರಿಂದ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶಕ್ಕೆ ಇದೂ ಒಂದು ಕಾರಣ’ ಎಂದರು.

ಈ ಗೋಷ್ಠಿಯಲ್ಲಿ ಮೇಘಾಲಯ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ರೈತರು ವರ್ಜುವಲ್‌ ಮೂಲಕ ಭಾಗವಹಿಸಿದರು. ಮಾವು ಬೆಳೆಗೆ ಸಂಬಂಧಿಸಿದಂತೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು. ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ ಮತ್ತು ಮಣಿಪುರದ ರೈತರಿಗೆ ಬಾಳೆ ಗಿಡ ರೋಗ ತಡೆಗಟ್ಟುವ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದರು. ಬಾಳೆಗಿಡವನ್ನು ಕಾಡುವ ಸಿಗೋಟಕ ರೋಗವನ್ನು ತಡೆಗಟ್ಟುವ ಕುರಿತು ರಾಷ್ಟ್ರೀಯ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ರಾಮಜಯಂ ಅವರು ಈಶಾನ್ಯ ರಾಜ್ಯಗಳ ರೈತರಿಗೆ ಮಾಹಿತಿ ನೀಡಿದರು. ರೈತರಿಂದ ಮುಂಚಿತವಾಗಿ ಪ್ರಶ್ನೆಗಳನ್ನು ತರಿಸಿಕೊಳ್ಳಲಾಗಿತ್ತು.

ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ರಾಜ್ಯಗಳ ರೈತರು ಸೀಬೆ, ಮಾವು, ದ್ರಾಕ್ಷಿ, ದಾಳಿಂಬೆ, ಕಿತ್ತಲೆ, ಹಲಸು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಜ್ಞಾನಿಗಳಿಗೆ ಕೇಳಿದ್ದರು. ಈ ಬಗ್ಗೆ ಐಸಿಎಆರ್‌ನ ವಿಜ್ಞಾನಿಗಳು ಮಾಹಿತಿ ನೀಡಿದರು. ದಾಳಿಂಬೆಗೆ ಬರುವ ಗಂಟು ಹುಳ ತಡೆ ಕುರಿತು ಸಂವಾದ ನಡೆಯಿತು. ಮಧ್ಯಪ್ರದೇಶ ರೈತರಿಗೆ ಹಲಸು, ಮಾವು, ಪಪ್ಪಾಯಿ ಬೆಳೆಗಳಿಗೆ ಸಂಬಂಧಿಸಿದ ರೋಗ ತಡೆ, ಕೊಯ್ಲೋತ್ತರ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು