4
ತೋಟಗಾರಿಕೆ ವಿದ್ಯಾರ್ಥಿಗಳ ಸುಲಭ ಕೃಷಿ

ಕಲಿಯುತ್ತಾ... ಗಳಿಸುತ್ತಾ...!

Published:
Updated:
ನರ್ಸರಿಯ ಪ್ರೋಟ್ರೇನಲ್ಲಿ ಸಸಿ ಬೆಳೆಸಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು.

ಶಿರಸಿಯ ತೋಟಗಾರಿಕಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ತರಕಾರಿ, ಹೂ ಗಿಡಗಳನ್ನು ಬೆಳೆಸಿ, ಫಲ ಬಂದ ಮೇಲೆ ಮಾರಾಟ ಮಾಡಿ, ಹಣಗಳಿಸುತ್ತಿದ್ದರು. ಆದರೆ, ಈ ಬಾರಿ ಅವರು ಹೊಸ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ, ಫಲಕೊಡುವ ಸಸಿಗಳನ್ನೇ ಬೆಳೆಸಿ, ಅವುಗಳನ್ನು ರೈತರಿಗೆ ಮಾರಾಟ ಮಾಡಿ ಕಿಸೆ ತುಂಬಿಸಿಕೊಂಡಿದ್ದಾರೆ. ಈ ಮೂಲಕ ಕಾಲೇಜಿನ ಕಲಿಯುತ್ತಲೇ ಗಳಿಸುತ್ತಾ, ಬದುಕಿನಲ್ಲಿ ಸ್ವಾವಲಂಬಿಗಳಾಗಿ ಬದುಕಲು ಕಾಲೇಜಿನ ಪ್ರಾಧ್ಯಾಪಕರು ಇವರಿಗೆ ತರಬೇತಿ ನೀಡುತ್ತಿದ್ದಾರೆ.

ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುತ್ತದೆ ಶಿರಸಿಯ ತೋಟಗಾರಿಕಾ ಕಾಲೇಜು. ಈ ಕಾಲೇಜಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆರು ತಿಂಗಳ ಪ್ರಾಯೋಗಿಕ ಕಲಿಕೆ ಕಡ್ಡಾಯ. ಪ್ರಯೋಗಶೀಲತೆಗೆ ಅನಿವಾರ್ಯವಾಗಿ ಒಡ್ಡಿಕೊಳ್ಳುವ ಮಕ್ಕಳು, ಸಹಪಾಠಿಗಳೊಂದಿಗಿನ ಸೌಹಾರ್ದ ಸ್ಪರ್ಧೆಯಲ್ಲಿ, ಕ್ರಮೇಣ ಸೃಜನಶೀಲವಾಗಿ ಯೋಚಿಸಲು ಶುರು ಮಾಡುತ್ತಾರೆ. ಕೆಲವರು ಬೀನ್ಸ್, ಹಾಗಲಕಾಯಿ, ಟೊಮೆಟೊ, ಸೊಪ್ಪು ಇಂಥ ತರಕಾರಿ ಬೆಳೆದು ಮಾರಾಟ ಮಾಡಿದರೆ, ಇನ್ನೊಂದಿಷ್ಟು ಮಂದಿ ಸೇವಂತಿಗೆ, ಅಂಥೋರಿಯಂನಂತಹ ಹೂಗಳನ್ನು ಬೆಳೆಯುತ್ತಾರೆ. ಒಂದಿಷ್ಟು ಮಂದಿ ವೈವಿಧ್ಯಮಯ ಜ್ಯೂಸ್ ತಯಾರಿಸಿ, ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಾರೆ.

ಆದರೆ, ಈ ವರ್ಷದ ಅಂತಿಮ ಪದವಿಯ 10 ವಿದ್ಯಾರ್ಥಿಗಳ ಒಂದು ತಂಡ ತರಕಾರಿ, ಹೂಗಿಡಗಳ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿ, ರೈತರಿಗೆ ಆರ್ಡರ್ ತಗೊಂಡು ಮಾರಾಟ ಮಾಡಿ, ಹಣ ಗಳಿಸುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿರುವ ಪಾಲಿಹೌಸ್‌ನಲ್ಲಿ ಪ್ರೋಟ್ರೇನಲ್ಲಿ 3000ಕ್ಕೂ ಅಧಿಕ ದೊಣ್ಣೆ ಮೆಣಸಿನಕಾಯಿ ಹಾಗೂ 20 ಸಾವಿರಕ್ಕೂ ಹೆಚ್ಚು ಮಲೇಷಿಯಾ ಸೇವಂತಿಗೆ ಸಸಿಗಳನ್ನು ಬೆಳೆಸಿದ್ದಾರೆ.

‘ಈ ಯೋಜನೆ ಆರಂಭಿಸುವ ಮೊದಲು ಒಂದು ಬಾರಿ ನಗರ ಪ್ರದಕ್ಷಿಣೆ ಮಾಡಿದ್ದೆವು. ರೈತರನ್ನು ಮಾತನಾಡಿಸಿ, ಅವರ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿದ್ದೆವು. ದೊಡ್ಡ ಮೇಳಗಳಿಗೆ ಹೋಗಿ, ಕರಪತ್ರ ವಿತರಿಸಿದ್ದೆವು. ಕೃಷಿ, ತೋಟಗಾರಿಕೆ ವಹಿವಾಟು ನಡೆಯುವ ಟಿಎಸ್‌ಎಸ್, ಟಿಎಂಎಸ್‌ಗೆ ಭೇಟಿ ನೀಡಿ, ರೈತರಿಗಿರುವ ತರಕಾರಿ ಒಲವು ಅರಿತು, ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಾಂ) ಸಸಿ ಬೆಳೆಸಿದ್ದೇವೆ’ ಎನ್ನುತ್ತಾರೆ ವಿದ್ಯಾರ್ಥಿ ಭರತಕುಮಾರ್. 

ವಿದ್ಯಾರ್ಥಿಗಳ ಆಸಕ್ತಿಗೆ ರೈತರು ಸ್ಪಂದಿಸಿದ್ದಾರೆ. ಬಹಳಷ್ಟು ಜನ ಕರೆ ಮಾಡಿ ಗಿಡಗಳ ಬಗ್ಗೆ ವಿಚಾರಿಸುತ್ತಾರಂತೆ. ‘ನಮಗೆ ಬೇಡಿಕೆಗೆ ತಕ್ಕಷ್ಟು ಗಿಡಗಳನ್ನು ಪೂರೈಕೆ ಮಾಡಲು ಆಗುತ್ತಿಲ್ಲ. ಈಗಾಗಲೇ ಹೊಸದಾಗಿ 16 ಸಾವಿರ ಗಿಡಗಳಿಗೆ ಬೇಡಿಕೆ ಬಂದಿದೆ. ಕೋಕೊಪಿಟ್‌ನಲ್ಲಿ ಬೀಜ ಹಾಕಿ, ನಿತ್ಯ ನೀರು ಹಾಕುವುದಷ್ಟೇ ನಮ್ಮ ಕೆಲಸವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಇತಿಮಿತಿಗಳಲ್ಲೂ ನಡೆಯುತ್ತಿರುವ ನರ್ಸರಿ ವಹಿವಾಟನ್ನು ವಿವರಿಸುತ್ತಾರೆ.

‘ನಾಟಿ ಮಾಡಿದ ಬೀಜಗಳು 21–25 ದಿನಗಳಿಗೆ ಸಸಿಗಳಾಗಿ ಚಿಗುರೊಡೆಯುತ್ತವೆ. ನಡುವೆ ಒಮ್ಮೆ ನೀರಿನಲ್ಲಿ ಕರಗುವ ಗೊಬ್ಬರ ಸಿಂಪರಣೆ ಮಾಡಬೇಕು. ಒಂದು ಗಿಡ ಬೆಳೆಸಲು ನಮಗೆ ತಗಲುವ ವೆಚ್ಚ ಮೂರು ರೂಪಾಯಿ. ನಾವು ಅದನ್ನು ₹10ಕ್ಕೆ ಮಾರಾಟ ಮಾಡುತ್ತೇವೆ’ ಎನ್ನುವಾಗ ಅವರ ಮೊಗದಲ್ಲಿ ದ್ವಿಗುಣ ಲಾಭಗಳಿಸಿದ ಖುಷಿಯಿತ್ತು.

ಮಲೇಷ್ಯಾ ಸೇವಂತಿಗೆ ಕಟಿಂಗ್‌ ಅನ್ನು ಟ್ರೇನಲ್ಲಿ ಊರುತ್ತಿದ್ದ ವಿದ್ಯಾರ್ಥಿ ಬಸವರಾಜಯ್ಯ ಅನುಭವ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸೇವಂತಿಗೆ ಗಿಡದ ಕಟಿಂಗ್‌ಗಳ ರಾಶಿ ಹಾಕಿಕೊಂಡಿದ್ದ ಅವರು, ನಿಧಾನವಾಗಿ ಟ್ರೇಯೊಳಗಿನ ಮಣ್ಣಿನೊಳಗೆ ಒಂದೊಂದೇ ಟಿಸಿಲನ್ನು ಇಡುತ್ತಿದ್ದರು. ‘ಈ ತಳಿಯ ಒಂದು ಸಸಿಗೆ ಮೂರು ರೂಪಾಯಿ. ಒಂದು ಟ್ರೇನಲ್ಲಿ ನೂರು ಗಿಡಗಳಿರುತ್ತವೆ. ಅದಕ್ಕೆ ₹300 ವೆಚ್ಚವಾಗುತ್ತದೆ. . ನಾಲ್ಕಾರು ಮಹಿಳೆಯರು ಸೇರಿ, ಒಂದು ಟ್ರೇ ಖರೀದಿಸುತ್ತಾರೆ. ನಮಗೆ ಮಾರಾಟವೂ ಸರಳ’ ಎಂದು ಅವರು ವ್ಯಾಪಾರದ ಗುಟ್ಟನ್ನು ಹೇಳಿದರು. ಇವರ ಜೊತೆಗಿದ್ದ ನಾಲ್ಕಾರು ಹುಡುಗಿಯರು, ಸಸಿ ಬೆಳೆಸುವ ಜೊತೆಗೆ ವಿವಿಧ ಜಾತಿಯ ಸೊಪ್ಪನ್ನು ಬೆಳೆಸಿದ್ದಾರೆ. ದುಡಿಮೆ ಹಾಗೂ ಉಳುಮೆ ಒಟ್ಟಿಗೆ ಮಾಡಬೇಕೆಂಬ ಕಡ್ಡಾಯ ಶಿಕ್ಷಣವು ಮಕ್ಕಳು ಸೃಜಶೀಲವಾಗಿ ಯೋಚಿಸುವಂತೆ ಮಾಡಿದೆ. v

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !