ಸೈಲೋ ಚೀಲದಲ್ಲಿ ರಸಮೇವು

7

ಸೈಲೋ ಚೀಲದಲ್ಲಿ ರಸಮೇವು

Published:
Updated:

ಚಾಮರಾಜನಗರ ತಾಲ್ಲೂಕಿನ ಬೆಟ್ಟದಪುರದ ಕುಮಾರ್ ಆಸಕ್ತ ಹೈನುಗಾರ. ನಾಲ್ಕು ಮಿಶ್ರತಳಿ ಹಸುಗಳನ್ನು ಸಾಕಿದ್ದಾರೆ. ನಿತ್ಯ ಸರಾಸರಿ 25 ಲೀಟರ್ ಹಾಲು ಕರೆಯುತ್ತಾರೆ. ರಾಸುಗಳ ಪೋಷಣೆಯಲ್ಲಿ ವಿಶೇಷ ಆಸಕ್ತಿ. ಮಳೆಗಾಲದಲ್ಲಿ ಹಸಿರು ಮೇವಿಗೆ ಕೊರತೆಯಿಲ್ಲ. ಆದರೆ ಬೇಸಿಗೆಯಲ್ಲಿ ಮೇವಿಗೆ ಪರದಾಡುವ ಪರಿಸ್ಥಿತಿ. ಇತ್ತೀಚೆಗೆ ರಸಮೇವು ತಯಾರಿಸುವ ಬಗ್ಗೆ ಕೇಳಿದ್ದರು. ಆದರೆ, ಅದನ್ನು ತಯಾರಿಸಲು ಬೇಕಾದ ಜಾಗ, ತೊಟ್ಟಿ, ಬಂಡವಾಳ ಯಾವುದೂ ಹೊಂದಾಣಿಕೆಯಾಗದಿದ್ದರಿಂದ ಸುಮ್ಮನಾಗಿದ್ದರು.

ಇತ್ತೀಚೆಗೆ ಸುಜಲ ಜಲಾನಯನ ಯೋಜನೆಯಡಿಯಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ಬೆಟ್ಟದಪುರದ ಗುರುಲಿಂಗಪ್ಪನವರ ಹೊಲದಲ್ಲಿ ‘ಸೈಲೋ ಚೀಲಗಳಲ್ಲಿ ರಸಮೇವು ತಯಾರಿಕೆ’ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು. ಪ್ರಾತ್ಯಕ್ಷಿಕೆ ನೋಡಿದ ಕುಮಾರ್‌ಗೆ ಸುಲಭದ ವಿಧಾನದಲ್ಲಿ ರಸಮೇವು ತಯಾರಿಸುವ ಆಸೆ ಗರಿಗೆದರಿತು. ತಕ್ಷಣ ಕಾರ್ಯತತ್ಪರರಾದರು. ರಸಮೇವು ತಯಾರಿಸಲು ಶುರುಮಾಡಿದರು. ಈಗಾಗಲೇ ನಾಲ್ಕು ಬಾರಿ ಸೈಲೋ ಚೀಲಗಳಲ್ಲಿ ರಸಮೇವು ತಯಾರಿಸಿಕೊಂಡಿದ್ದಾರೆ. ‘ಇದು ತುಂಬಾ ಸರಳ ಸರ್, ಎಲ್ಲಾ ರೈತರೂ ಮಾಡ್ಕೊಬಹುದು. ನನಗೆ ಅನುಕೂಲವಾಗಿದೆ’ ಎನ್ನುತ್ತಾರೆ ಕುಮಾರ್.

ಏನಿದು ಸೈಲೋ ಚೀಲದಲ್ಲಿ ರಸಮೇವು?
ಬೇಸಿಗೆ, ಬರಗಾಲ ಅಥವಾ ಮೇವಿನ ಕೊರತೆಯ ಸಂದರ್ಭದಲ್ಲಿ ಹೈನುಗಾರರಿಗೆ ನೆರವಾಗುವ ಪಶು ಆಹಾರವೇ ರಸಮೇವು. ಇದು ಪೌಷ್ಟಿಕಾಂಶಗಳು ನಷ್ಟವಾಗದಂತೆ ಹಸಿರು ಮೇವಿನಷ್ಟೇ ಪೌಷ್ಟಿಕಾಂಶ ನೀಡುವ ಮೇವು. ಇದನ್ನು ದಪ್ಪ ಪ್ಲಾಸ್ಟಿಕ್ ಮತ್ತು ತೆಳು ಪ್ಲಾಸ್ಟಿಕ್ ಪದವಿರುವ ಚೀಲಗಳಲ್ಲಿ ತಯಾರಿಸುತ್ತಾರೆ. ರಸಮೇವಿಗೆ ಇಂಗ್ಲಿಷ್‌ನಲ್ಲಿ ಸೈಲೇಜ್ ಎನ್ನುತ್ತಾರೆ. ಚೀಲದಲ್ಲಿ ತಯಾರಿಸುವುದರಿಂದ ‘ಸೈಲೋ ಚೀಲದ ರಸಮೇವು’ ಎಂದಾಗಿದೆ.

ಅಧಿಕ ರಾಸುಗಳನ್ನು ಹೊಂದಿರುವ ಮಧ್ಯಮ ಹಾಗೂ ದೊಡ್ಡ ಡೇರಿ ಫಾರಂಗಳಲ್ಲಿ ರಸಮೇವು ತಯಾರಿಸಿಕೊಳ್ಳುತ್ತಾರೆ. ಇದಕ್ಕಾಗಿ ಭೂಮಿಯ ತಳದಲ್ಲಿ ದೊಡ್ಡ ತೊಟ್ಟಿ ಅಥವಾ ಬಾವಿಯ ಆಕಾರದ ಸೈಲೋಗಳನ್ನು ರಚಿಸಿಕೊಂಡಿರುತ್ತಾರೆ. ಇದಕ್ಕೆ ಕೊಂಚ ಜಾಗ, ಬಂಡವಾಳ, ಶ್ರಮ, ಎಲ್ಲವೂ ಬೇಕು. ಈ ಕಾರಣದಿಂದಲೋ ಏನೋ ಸಣ್ಣ ಹಿಡುವಳಿದಾರರು ಈ ತಂತ್ರಾಜ್ಞಾನದಿಂದ ದೂರವೇ ಇದ್ದಾರೆ.

ಈಗ ಪರಿಸ್ಥಿತಿ ಬದಲಾಗಿದೆ. ಅತಿ ಸಣ್ಣ ರೈತನೂ ರಸಮೇವಿನ ಲಾಭ ಪಡೆಯಬಹುದು. ಸುಲಭವಾಗಿ ದೊರಕುವ ಪಾಲಿಥಿನ್ ಸೈಲೋ ಚೀಲಗಳಿಂದ ಇದು ಸಾಧ್ಯವಾಗಿದೆ. ಗುಣಮಟ್ಟದ ರಸಮೇವನ್ನು ಅಗ್ಗವಾಗಿ ತಯಾರಿಸಿಕೊಂಡು, ಮೇವಿನ ಅಭಾವದ ಪರಿಸ್ಥಿತಿಯಲ್ಲಿಯೂ ಉತ್ಕೃಷ್ಟ ಮೇವನ್ನು ರಾಸುಗಳಿಗೆ ಉಣಬಡಿಸಬಹುದು. ಹಾಲಿನ ಉತ್ಪಾದನೆ ಹೆಚ್ಚಿಸಿ, ರಾಸುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.

ರಸಮೇವಿಗೆ ಸೂಕ್ತ ಬೆಳೆ
ಮೇವಿನ ಮೆಕ್ಕೆ(ಗೋವಿನ) ಜೋಳ, ಜೋಳ ಮತ್ತು ಸಜ್ಜೆ.. ಇವು ರಸಮೇವು ತಯಾರಿಕೆಗೆ ಸೂಕ್ತ ಬೆಳೆಗಳು. ತೆನೆಯ ಕಾಳು ಹಾಲು ಕಟ್ಟಿದ ಹಂತ ಅತ್ಯಂತ ಸೂಕ್ತ. ಹಾಗೆಯೇ ಹೈಬ್ರಿಡ್ ನೇಪಿಯರ್ ಹುಲ್ಲನ್ನೂ ಬಳಸಬಹುದು. ರಸಮೇವಿಗೆ ಬಳಸುವ ಬೆಳೆ ಅರ್ಧ ಹೂವಾಡಿರಬೇಕು.

ರಸಮೇವು ತಯಾರಿಕೆಗೆ ಮೆಕ್ಕೆಜೋಳ ನಂಬರ್ ಒನ್. ಎ.ಟಿ.ಎಮ್, ವಿಜಯ್, ಜೆ-1006 ನಂತಹ ಮೆಕ್ಕೆಜೋಳದ ಮೇವಿನ ತಳಿಗಳು ಲಭ್ಯವಿವೆ. ಮೇವು ಕಟಾವಿನ ಸಮಯದಲ್ಲಿ ಅದರ ತೇವಾಂಶ ಶೇ 65 ರಿಂದ 70 ಇರಬೇಕು. ಮಳೆಯಲ್ಲಿ ಅಥವ ಜೆಟ್ ನೀರಿನಲ್ಲಿ ತೋಯ್ದ ಮೇವನ್ನು ಕತ್ತರಿಸುವುದು ಬೇಡ. ಮೇವು ಕತ್ತರಿಸುವ ಯಂತ್ರದ ಮೂಲಕ ಮೇವನ್ನು ಒಂದರಿಂದ ಒಂದೂವರೆ ಇಂಚಿನಷ್ಟು ಉದ್ದ ಕತ್ತರಿಸಿಕೊಳ್ಳಬೇಕು.

ರಸಮೇವು ಮಾಡುವ ವಿಧಾನ
ವಿವಿಧ ಪ್ರಮಾಣದ ಮೇವು ಹಿಡಿಸುವ ಚೀಲಗಳು ಮಾರುಕಟ್ಟೆಯಲ್ಲಿ ಲಭ್ಯವವಿದೆ. (100, 200, 500, 750, 1000 ಕೆ.ಜಿ ಹಿಡಿಯುವ ಚೀಲಗಳು). ಚೀಲಗಳ ಬೆಲೆ ಗಾತ್ರದ ಅನುಗುಣವಾಗಿ ₹ 350 ರಿಂದ ₹ 750ರವರೆಗೂ ಬೆಲೆ ಇದೆ. ಮೇವಿನ ಅವಶ್ಯಕತೆಗೆ ತಕ್ಕಂತೆ ಚೀಲದ ಗಾತ್ರವನ್ನು ನಿರ್ಧರಿಸಿಕೊಳ್ಳಬಹದು.

ಒಂದು ಚೀಲಕ್ಕೆ ಸುಮಾರು ಒಂದು ಚದರ ಮೀಟರ್ ಸ್ಥಳ ಬೇಕು. ರಸಮೇವು ಶೇಖರಿಸುವ ಸ್ಥಳವನ್ನು ಮೊದಲೇ ನಿರ್ಧರಿಸಿಕೊಳ್ಳುವುದು ಉತ್ತಮ. ಏಕೆಂದರೆ, ಒಮ್ಮೆ ಚೀಲವನ್ನು ತುಂಬಿದ ಮೇಲೆ ಸ್ಥಳಾಂತರಿಸುವುದು ಕಷ್ಟ. ನೆನಪಿರಲಿ, ಚೀಲ ಇಡುವ ಸ್ಥಳ ಸಮತಟ್ಟಾಗಿರಲಿ. ಸಾಧ್ಯವಾದರೆ ಟಾರ್ಪಲಿನ್ ಅಥವ ನುಣುಪಾದ ಹಲಗೆಯ ಮೇಲೆ ಚೀಲವನ್ನು ಇರಿಸುವುದು ಲೇಸು.

ಸೈಲೋ ಚೀಲದಲ್ಲಿ ಎರಡು ಪದರಗಳಿರುತ್ತವೆ. ಹೊರಗಿನ ದಪ್ಪ ಪಾಲಿಥೀನ್ (ಟಾರ್ಪಲ್ ತರಹ) ಪದರ ಮತ್ತು ಒಳಗಿನ ದಪ್ಪನೆಯ ಪ್ಲಾಸ್ಟಿಕ್ ಪದರ. ಇವೆರಡನ್ನೂ ಬಾಯಿ ತೆರೆದ ನಂತರ ಒಟ್ಟಿಗೆ ಹೊರಕ್ಕೆ ಚಾಪೆಯನ್ನು ಸುತ್ತಿದಂತೆ ಮಡಚಿಕೊಳ್ಳಬೇಕು. ನಾಲ್ಕೂ ಮೂಲೆಯಲ್ಲಿ ಒಂದಿಬ್ಬರು ಚೀಲವನ್ನು ಹಿಡಿದಿಟ್ಟುಕೊಳ್ಳಬೇಕು. ಒಬ್ಬರು ಕತ್ತರಿಸಿದ ಮೇವನ್ನು ಪುಟ್ಟಿಯಲ್ಲಿ ತುಂಬಿಕೊಂಡು ಚೀಲಕ್ಕೆ ನಿಧಾನವಾಗಿ ತುಂಬುತ್ತಿರಲು. ಶಕ್ತಿಯುತವಾಗಿರುವ ಮತ್ತೊಬ್ಬರು ಚೀಲದಲ್ಲಿ ನಿಂತು ಮೇವನ್ನು ಒಂದು ಕಡೆಯಿಂದ ಚೆನ್ನಾಗಿ ತುಳಿದು ದಮ್ಮಸ್ಸು ಮಾಡಬೇಕು. ಎಷ್ಟು ಚೆನ್ನಾಗಿ ಅಂದರೆ ಚೀಲದಲ್ಲಿ ಗಾಳಿ ಇಲ್ಲದಂತೆ ನಿರ್ವಾತ ವಾತಾವರಣ ಸೃಷ್ಟಿಯಾಗಬೇಕು.

ಉತ್ತಮ ರಸಮೇವು ತಯಾರಿಕೆಯಲ್ಲಿ ಗಾಳಿಯೇ ಶತ್ರು. ಚೆನ್ನಾಗಿ ಗಾಳಿಯಾಡದಂತೆ(ಏರ್ ಟೈಟ್) ಮಾಡಿದರೆ ಗುಣಮಟ್ಟದ ರಸಮೇವು ತಯಾರಿಸಬಹುದು. ಈ ಹಂತದಲ್ಲಿ ಮೊಸರು, ಬೆಲ್ಲವನ್ನು ಕೆಲವರು ಹಾಕುತ್ತಾರೆ. ‘ಸರಿಯಾದ ಹಂತದಲ್ಲಿ ಮೇವು ಕತ್ತರಿಸಿದರೆ ಇಂಥ ಅಂಶಗಳ ಅವಶ್ಯಕತೆ ಇಲ್ಲ’ ಎನ್ನುತ್ತಾರೆ ಪಶು ಆಹಾರತಜ್ಞರು.

ಹೀಗೆ ತುಂಬುತ್ತಿರುವಾಗ ಮಡಚಿದ ಚೀಲವನ್ನು ನಿಧಾನಕ್ಕೆ ಮೇಲೆತ್ತಿಕೊಳ್ಳುತ್ತಿರಬೇಕು. ಚೀಲದಲ್ಲಿ ಮಡಿಕೆಗಳು ಬರದಂತೆ ನೋಡಿಕೊಳ್ಳಬೇಕು. ತುಂಬಿದ ಚೀಲ ಬಡಿದರೆ ಡಬ್ ಡಬ್ ಎಂದು ಶಬ್ದ ಹೊಮ್ಮಬೇಕು. ಚೀಲ ತುಂಬಿದ ಮೇಲೆ ಮೊದಲು ಒಳಗಿನ ಪ್ಲಾಸ್ಟಿಕ್ ಚೀಲದ ಮೂತಿಯನ್ನು ಕಟ್ಟಿ ನಂತರ ಹೊರಗಿನ ಚೀಲದ ಮೂತಿಯನ್ನು ಗಾಳಿಯಾಡದಂತೆ ಕಟ್ಟಬೇಕು. ಚೀಲ ತೂತಾಗದಂತೆ ಜಾಗ್ರತೆವಹಿಸಬೇಕು. ಇಲಿಗಳ ಉಪಟಳವಿದ್ದಲ್ಲಿ ಚೀಲದ ಕೆಳಗಿನ ಒಂದಡಿ ಎತ್ತರಕ್ಕೆ ಬೇವಿನ ಎಣ್ಣೆ ಸಿಂಪಡಿಸಬಹುದೆಂಬ ಪರಿಹಾರವನ್ನು ರೈತರೇ ಕಂಡುಕೊಂಡಿದ್ದಾರೆ.

ಎಂಟು ವಾರದ ನಂತರ ಬಳಕೆ
ಹೀಗೆ ಶೇಖರಿಸಿಟ್ಟ ರಸಮೇವನ್ನು ಆರರಿಂದ ಎಂಟು ವಾರಗಳ ನಂತರ ತೆಗೆದು ಬಳಸಿಕೊಳ್ಳಬಹುದು. ಉತ್ತಮವಾಗಿ ತಯಾರಾದ ರಸಮೇವು ಹಳದಿ ಬಣ್ಣವಿರುತ್ತದೆ, ಬೇಲದ ಹಣ್ಣಿನ ಸುವಾಸನೆ ಸೂಸುತ್ತದೆ. ಕಪ್ಪಾಗಿ ಬೂಸು ಹಿಡಿದಿದ್ದರೆ ರಸಮೇವು ಹಾಳಾಗಿದೆ ಎಂದರ್ಥ.

ರಸಮೇವು ತಯಾರಾದ ನಂತರ ಚೀಲವನ್ನು ತೆಗೆಯದಿದ್ದರೆ, ಹಲವು ತಿಂಗಳುಗಳ ಕಾಲ ಕಾಪಿಡಬಹುದು. ಆದರೆ ಒಮ್ಮೆ ಚೀಲವನ್ನು ತೆಗೆದರೆ ಪ್ರತಿನಿತ್ಯ ಕನಿಷ್ಠ ಐದಾರು ಇಂಚಿನಷ್ಟು ರಸಮೇವನ್ನು ತೆಗೆಯುತ್ತಾ ಖಾಲಿಮಾಡಬೇಕು. ಚೀಲದಿಂದ ರಸಮೇವು ತೆಗೆದನಂತರ ಅದರ ಬಾಯಿಯನ್ನು ಕಟ್ಟಿಡಬೇಕು.

ಮೊಟ್ಟ ಮೊದಲಿಗೆ ರಸಮೇವನ್ನು ರಾಸುಗಳು ತಿನ್ನಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. ರುಚಿ ಸಿಕ್ಕಾಗ ಕೆಲವೇ ನಿಮಿಷಗಳಲ್ಲಿ ಮೇವಿನ ಬುಟ್ಟಿ ಖಾಲಿ ಮಾಡಿಬಿಡುತ್ತವೆ. ಒಂದು ವಯಸ್ಕ ರಾಸುವಿಗೆ ಪ್ರತಿ ದಿನ 8 ರಿಂದ 10 ಕೆಜಿ ರಸಮೇವನ್ನು ಪ್ರತಿದಿನ ನೀಡಬಹುದು.

ಸಣ್ಣ ರೈತನಿಗೆ ಹೇಗೆ ಲಾಭ?
ಹಾಲು ಕರೆಯುವ ಒಂದೆರಡು ಹಸುಗಳನ್ನು ಇಟ್ಟುಕೊಂಡ ಹಾಗೂ ನೀರಾವರಿ ಸೌಲಭ್ಯವಿಲ್ಲದ ಸಣ್ಣ ಹಿಡುವಳಿದಾರರಿಗೆ ಬೇಸಿಗೆಕಾಲದಲ್ಲಿ ಈ ರಸಮೇವು ತುಂಬಾ ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ರಸಮೇವು ಮಾಡಿಕೊಳ್ಳಬೇಕು. ಅದಕ್ಕಾಗಿ ಐದರಿಂದ ಆರು ಗುಂಟೆಗಳ ಸ್ಥಳವನ್ನು ಮೀಸಲಿಟ್ಟು, ಮೆಕ್ಕೆಜೋಳ ಅಥವಾ ಜೋಳವನ್ನು ಬೆಳೆದುಕೊಳ್ಳಬೇಕು. ಒಂದೇ ಕಡೆ ಜಾಗ ಸಿಗದಿದ್ದರೂ ಅಕ್ಕಡಿ ಸಾಲುಗಳಲ್ಲಿಯಾದರು ಬೆಳೆದುಕೊಳ್ಳಬೇಕು. ಇದರಿಂದ ರೈತರಿಗೆ ಕನಿಷ್ಠ ಎರಡು ಟನ್ ಅಂದರೆ 2 ಸಾವಿರ ಕೆಜಿಯಷ್ಟು ಮೇವು ಲಭ್ಯವಾಗುತ್ತದೆ. ಇದನ್ನು 500 ಕೆಜಿ ಹಿಡಿಸುವ ಸೈಲೋ ಚೀಲಗಳಲ್ಲಿ ತುಂಬಿ ರಸಮೇವು ತಯಾರಿಸಿಕೊಳ್ಳಬಹುದು. ಇದನ್ನು ಬೇಸಿಗೆಯಲ್ಲಿ ದಿನಕ್ಕೆ ಎರಡು ರಾಸುಗಳಿಗೆ 20 ಕೆಜಿಯಂತೆ ಮೂರು ತಿಂಗಳ ಕಾಲ ನೀಡಬಹುದು.

ರಾಜ್ಯದಾದ್ಯಂತ ಪ್ರಾತ್ಯಕ್ಷಿಕೆ
ಈಗಾಗಲೇ ಚಾಮರಾಜನಗರ, ದಾವಣಗೆರೆ, ಗದಗ, ಕೊಪ್ಪಳ, ವಿಜಯಪುರ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ರಸಮೇವು ಪ್ರಾತ್ಯಕ್ಷಿಕೆ ನಡೆಸಲಾಗಿದೆ. ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ ಯೋಜನೆಯ ಸಂಯೋಜಕರಾದ ಡಾ. ವೀರಣ್ಣ. ‘ಸಣ್ಣ ಹಿಡುವಳಿ ಹಾಗೂ ದೊಡ್ಡ ಹಿಡುವಳಿಯ ರೈತರಿಗೆ ಇದು ಅನುಕೂಲಕರ’ ಎನ್ನುವುದು ಡಾ. ರಮೇಶ್ ಜಗಾಪುರ ಅವರ ಅಭಿಪ್ರಾಯ.

ಮೇವು ಕತ್ತರಿಸುವ ಯಂತ್ರ ಅಗತ್ಯ
ರಸಮೇವು ಪದ್ಧತಿ ಯಶಸ್ಸಿಗೆ ಮೇವು ಕತ್ತರಿಸುವ ಯಂತ್ರ ಸಹಕಾರಿ. ಉತ್ತರ ಭಾರತದಲ್ಲಿ ಅತಿ ಸಣ್ಣ ರೈತನ ಅಂಗಳದಲ್ಲಿಯೂ ಕೈಚಾಲಿತ ಮೇವು ಕತ್ತರಿಸುವ ಯಂತ್ರವಿರುತ್ತದೆ. ಆ ಭಾಗದಲ್ಲಿ ಈ ಯಂತ್ರ ಬಳಸುವುದು ಸಂಪ್ರದಾಯದಂತಾಗಿದೆ. ಇಲ್ಲಿಯೂ ಆ ಪದ್ಧತಿಯು ಆಚರಣೆಗೆ ಬರಬೇಕು. ಮೇವನ್ನು ಕತ್ತರಿಸದೆ ಕೊಡುವುದರಿಂದ ನಮ್ಮಲ್ಲಿ ಸುಮಾರು ಶೇ 30ರಿಂದ 40ರಷ್ಟು ಮೇವು ಪೋಲಾಗುತ್ತಿದೆ. ಪ್ರತಿ ರೈತರೂ ಒಂದು ಮೇವು ಕತ್ತರಿಸುವ ಯಂತ್ರವನ್ನು ಇಟ್ಟುಕೊಳ್ಳಬೇಕು. ಕನಿಷ್ಟ ಸಮುದಾಯದ ಮಟ್ಟದಲ್ಲಾದರೂ ಇಟ್ಟುಕೊಂಡರೆ ಒಳ್ಳೆಯದು. ಕೃಷಿ ಯಂತ್ರ ಬಾಡಿಗೆ ಕೇಂದ್ರಗಳಲ್ಲಿ ಈ ಯಂತ್ರಗಳು ಸಿಗುವಂತಾಗಬೇಕು. ಇದರಿಂದ ಗ್ರಾಮೀಣ ಪಶುಪೋಷಣಾ ಪದ್ಧತಿಗಳಲ್ಲಿ ಗಣನೀಯ ಬದಲಾವಣೆ ತರುವ ಶಕ್ತಿ ಅಡಗಿದೆ. 

ಸೈಲೋ ಚೀಲದಲ್ಲಿ ರಸಮೇವು ಕುರಿತ ಹೆಚ್ಚಿನ ಮಾಹಿತಿಗೆ 9449520151, 8073515489 ಸಂಪರ್ಕಿಸಬಹುದು. 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !