ಸಾಹಸ ತಂದ ಅಪಾಯ

7

ಸಾಹಸ ತಂದ ಅಪಾಯ

Published:
Updated:

ಪ್ರವಾಸಿ ತಾಣಗಳೆಂದರೆ ನನಗೆ ತುಂಬಾ ಇಷ್ಟ. ಯಾವುದೇ ಪ್ರೇಕ್ಷಣೀಯ ಸ್ಥಳ ನೋಡಬೇಕೆನಿಸಿದಾಗ ಬೈಕ್‌ನಲ್ಲಿ ಏಕಾಂಗಿಯಾಗಿ ಪ್ರವಾಸ ಮಾಡುತ್ತೇನೆ. ನಾಲ್ಕು ವರ್ಷಗಳ ಹಿಂದೆ ’ಪ್ರಜಾವಾಣಿ’ ಪತ್ರಿಕೆಯಲ್ಲಿ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ‘ಮಡೆನೂರು ಡ್ಯಾಂ’ ಬಗ್ಗೆ ವರದಿ ಪ್ರಕಟಮಾಡಿತ್ತು. ಅರವತ್ತು ವರ್ಷಗಳಿಂದ ನೀರಿನಲ್ಲಿ ಮುಳುಗಿರುವ ಈ ಡ್ಯಾಮ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಮಾತ್ರ ಗೋಚರಿಸುವ ಬಗ್ಗೆ ಡ್ಯಾಮ್‌ ಚಿತ್ರ ಸಹಿತ ವರದಿ ಪ್ರಕಟಮಾಡಿತ್ತು.

ಮಡೆನೂರು ಡ್ಯಾಮ್‌’ನ ವರದಿ ನೋಡಿ ಈ ಸ್ಥಳಕ್ಕೆ ಭೇಟಿ ನೀಡಲೇಬೇಕೆಂದು ಛಲತೊಟ್ಟು ಒಂದು ಭಾನುವಾರ ಬೈಕನ್ನೇರಿ ಏಕಾಂಗಿಯಾಗಿ ಪ್ರಯಾಣ ಬೆಳಸಿದೆ. ಸಾಗರದಿಂದ ಸಿಗಂದೂರು ಮಾರ್ಗದಲ್ಲಿ ಸುಮಾರು ಮೂವತ್ತು ಕಿ.ಮೀ ಸಾಗಿದಾಗ ’ಹೊಳೆಬಾಗಿಲು’ ತಲುಪುವ ಮೊದಲು ಸ್ವಲ್ಪ ದೂರದ ಬಲಭಾಗದಲ್ಲಿ ಒಂದು ಕಚ್ಚಾ ಡಾಂಬರಿನ ರಸ್ತೆ ಕಾಣಿಸುತ್ತದೆ. ಇಲ್ಲಿಂದ ಸುಮಾರು ಆರೇಳು ಕಿ.ಮೀ ಸಾಗಿದರೆ ’ಹೀರೆಭಾಸ್ಕರ್‌’ ಎಂಬಲ್ಲಿ ಮಡೆನೂರು ಡ್ಯಾಮ್‌ ಇದೆ ಎಂಬುದನ್ನು ತಿಳಿದು ನನ್ನ ಬೈಕನ್ನು ಕಚ್ಚಾ ರಸ್ತೆಗೆ ತಿರುಗಿಸಿದೆ.

ಆಕೇಶಿಯಾ ಮತ್ತು ನೀಲಗಿರಿ ನಡುರೋಡಿನ ಮಧ್ಯೆ ದಾರಿಯಲ್ಲಿ ಸಾಗುತ್ತ ಬೈಕನ್ನು ಚಲಾಯಿಸುತ್ತಿದ್ದೆ. ಸ್ವಲ್ಪದೂರದಲ್ಲಿ ಕಣ್ಣು ಹಾಯಿಸಿದಾಗ ಹಿನ್ನೀರಿನ ಮಡವು ತಿಳಿನೀರಿನೊಂದಿಗೆ ಗೋಚರಿಸಿತು. ಖುಷಿಯಲ್ಲಿದ್ದ ನನಗೆ ಕೆಲವೇ ಕ್ಷಣಗಳಲ್ಲಿ ಎದೆ ಝಲ್‌ ಎನ್ನುವಂತಾಯಿತು. ಆಜಾನುಬಾಹುದ ಕಾಡೆಮ್ಮೆಯೊಂದು ತನ್ನ ಮರಿಗಳೊಂದಿಗೆ ನನ್ನ ಬೈಕ್‌ ಶಬ್ದ ಕೇಳಿ ನಡುರಸ್ತೆಯಲ್ಲಿ ಮುಖಮಾಡಿ ತಲೆಯೆತ್ತಿ ನಿಂತಿತ್ತು. ಕಾಡೆಮ್ಮೆಗಳು ತಮ್ಮ ಮರಿಗಳು ಜೊತೆಯಲ್ಲಿದ್ದಾಗ ಯಾರಾದರೂ ಬಂದರೆ ಅವರಮೇಲೆ ದಾಳಿಮಾಡುತ್ತವೆ ಎಂಬ ವಿಷಯಕೇಳಿ ತಿಳಿದಿದ್ದ ನನಗೆ ಆ ಕ್ಷಣದಲ್ಲಿ ಏನುಮಾಡಬೇಕೆಂಬುದು ದಿಕ್ಕೇ ತೋಚದಂತಾಯಿತು. ಬೈಕನ್ನು ಕಷ್ಟಪಟ್ಟು ಹಿಂತಿರುಗಿಸಿ ಕ್ಷಣವೂ ನಿಲ್ಲದೆ ಜೋರಾಗಿ ಬೈಕನ್ನು ಓಡಿಸುತ್ತ ವಾಪಾಸು ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ನನ್ನ ಉತ್ಸಾಹವೆಲ್ಲಾ ಬೆವರಿನಲ್ಲಿ ಇಳಿದುಹೋಗಿತ್ತು.

ನಡೆದ ವಿಷಯವನ್ನು ನನ್ನ ಸ್ನೇಹಿತನಿಗೆ ತಿಳಿಸಿದಾಗ, ಅಂತಹ ನಿರ್ಜನ ಪ್ರದೇಶಕ್ಕೆ ಒಬ್ಬನೇ ಹೋಗಿದ್ದು ನಿನ್ನ ತಪ್ಪು ಎಂದು ಬುದ್ಧಿ ಹೇಳಿದ. ಆದರೂ ನಾನು ಹಟಬಿಡದೆ ಆ ಸ್ಥಳವನ್ನು ನಾನು ನೋಡಲೇ ಬೇಕು ಎಂದೆ. ಮುಂದಿನವಾರ ನಾನು ಬರುತ್ತೇನೆ ಇಬ್ಬರೂ ಒಟ್ಟಿಗೆ ಹೋಗೋಣ ಎಂದು ಸ್ನೇಹಿತ ಸಲಹೆ ಮಾಡಿದಾಗ ಒಪ್ಪಿಕೊಂಡೆ.

ಆರು ದಿನಗಳು ಹೇಗೆ ಕಳೆದವೋ? ಭಾನುವಾರ ಬರುತ್ತಿದ್ದಂತೆ ಗೆಳೆಯನ ಜೊತೆ ಒಂದೇ ಬೈಕ್‌ನಲ್ಲಿ ಪುನಃ ಅದೇ ಸ್ಥಳಕ್ಕೆ ಪ್ರಯಾಣ ಬೆಳೆಸಿದೆ. ಭಯ ಭೀತಿಯಿಲ್ಲದೆ ಮಡೆನೂರು ಡ್ಯಾಮ್‌ ಪ್ರದೇಶಕ್ಕೆ ತೆರಳಿದೆವು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಹಿಂದಿನ ವಾರದ ಘಟನೆಯನ್ನು ಮರೆತು ಮನೋಲ್ಲಾಸದಿಂದ ಡ್ಯಾಮ್‌ ನ ಮೇಲೆ ಸುತ್ತಾಡಿದೆವು.

ಮಂಡಗಳಲೆ, ಸಾಗರ, ಶಿವಮೊಗ್ಗ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !