ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕೆಂಡ್ ಸಂಚಾರಿ ಜೇನು ಕೃಷಿಕ

ಜೇನು ಕೃಷಿ ಪರಿಸರ ಸ್ನೇಹಿ ಹಸಿರು ಆದಾಯ ಮೂಲ!
Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ

‘ಜೇನ್ನೊಣ ಮಾಡೋ ಕೆಲಸಕ್ಕ ತನಗೇನು ಲಾಭ ಅಂತ ಲೆಕ್ಕ ಹಾಕೋದಿಲ್ಲ; ಇನ್ನ ನಾ ಹೆಂಗ ನನ್ನ ಕೂಲಿ ಲೆಕ್ಕಿಸ್ಲಿ.. ಎಲ್ಲಾರಿಗೂ ಕೊಡಾಂವಾ ಮ್ಯಾಲೆ ಅದಾನಲ್ಲ..’– ಜೇನು ಕೃಷಿಕ ಜಗದೀಶ ಬಾಳಿಕಾಯಿ ಅವರ ಮನದ ಮಾತು.

ಅವರು ವೃತ್ತಿಯಿಂದ ಬಸ್ ಕಂಡಕ್ಟರ್. ಓದಿದ್ದು ಬಿ.ಕಾಂ. ಪದವಿ. ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗದವರು. ಹವ್ಯಾಸಕ್ಕೆ ಮೈಗೂಡಿಸಿಕೊಂಡಿದ್ದು ಸಂಚಾರಿ ಜೇನು ಕೃಷಿ! ಅವರದ್ದು ‘ವೀಕೆಂಡ್ ಜೇನು ಕೃಷಿ’. ವಾರದ ರಜೆಯ ಸದುಪಯೋಗ ಅನ್ನಿ. ಲಾಭ ಲೆಕ್ಕಿಸದೇ ಪರಿಸರಕ್ಕೆ ತನ್ನಿಂದಾದ ಕೊಡುಗೆ ಎಂಬ ಸುಮನಸ್ಸು.

ಆಸಕ್ತಿ ಹುಟ್ಟಿಸಿದ ಕೌತುಕ

ಜಗದೀಶ, 8ನೇ ತರಗತಿಯಲ್ಲಿದ್ದಾಗ ರಾಮದುರ್ಗದ ಮೇಗುಂಡೇ ಶ್ವರಕೊಳ್ಳ ಮತ್ತು ಸೂರೆವ್ವನಕೊಳ್ಳಕ್ಕೆ ಪಿಕ್‌ನಿಕ್‌ಗೆ ಹೋಗಿದ್ದರು. ಅಲ್ಲಿ ಕಲ್ಲು ಚಪ್ಪಡಿಯಲ್ಲಿ ಗೂಡು ಕಟ್ಟಿದ್ದ ತುಡುವೆ ಜೇನು ಬಿಡಿಸುವ ಸಾಹಸಕ್ಕಿಳಿದು, ಜೇನ್ನೊಣಗಳಿಂದ ಕಚ್ಚಿಸಿಕೊಂಡರು. ಇದನ್ನು ಗಮನಿಸಿದ, ಮೇಷ್ಟ್ರೊಬ್ಬರು ‘ಗೊತ್ತಿಲ್ಲದ ವಿಷಯ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು; ಕೆಟ್ಟ ಕುತೂಹಲ ಅಪಾಯಕಾರಿ’ ಎಂದು ಗದರಿದರು. ತಾನು ಮಾಡಿದ ಸಣ್ಣ ತಪ್ಪಿನಿಂದ, ಎಷ್ಟೆಲ್ಲ ಗೆಳೆಯರಿಗೆ ಜೇನುಗಳು ಏಕಾಏಕಿ ಕಡಿದು, ಅನಾಹುತವಾಗಬಹುದಿತ್ತು ಎಂಬ ಅರಿವಾಯಿತು ಅವರಿಗೆ. ಬಾಲಕ ಜಗದೀಶ ಇದನ್ನೇ ಸವಾಲಾಗಿ ಸ್ವೀಕರಿಸಿ, ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡರು. 2002ರಲ್ಲಿ ಧಾರವಾಡಕ್ಕೆ ಬಂದ ಬಳಿಕ ಜೇನು ಕೃಷಿ ಬಗ್ಗೆ ಕಲಿಯುವ ಆಸಕ್ತಿ ಇಮ್ಮಡಿಸಿತು. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೀಟಶಾಸ್ತ್ರದ ವಿಜ್ಞಾನಿಯಾಗಿದ್ದ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆಯ ಡಾ.ಶಾಂತವೀರಯ್ಯ ಅವರ ಪರಿಚಯವಾಯಿತು. ಅವರ ಮಾರ್ಗದರ್ಶನದಲ್ಲಿ ಜೇನು ಕೃಷಿ ಕಲಿಕೆ ಮುಂದುವರಿಸಿದರು. ಮುಂದೆ ಧಾರವಾಡ ತಾಲ್ಲೂಕು ಅಳ್ನಾವರದ ಮಧುವನದ ಜೇನು ಕೃಷಿ ತರಬೇತುದಾರ ಜೇನು ವೆಂಕಟೇಶ (94817 27324/ 96064 33827) ಬಳಿ ಹಾಗೂ ಬೆಂಗಳೂರಿನ ಜಿಕೆವಿಕೆಯಲ್ಲಿ ಜಗದೀಶ ಅವರಿಂದಲೂ ತರಬೇತಿ ಪಡೆದರು.

ಸ್ವಂತ ಕೃಷಿ ಜಮೀನಿಲ್ಲ. ಮುಂದೇನು?

ಜಗದೀಶ ರಾಮದುರ್ಗದಲ್ಲಿ ಐದಾರು ಕೃಷಿಕ ಮಿತ್ರರಿಗೆ ತಮ್ಮ ತೋಟಪಟ್ಟಿ-ಹೊಲಗಳಲ್ಲಿ ಜೇನು ಪೆಟ್ಟಿಗೆ ಇಟ್ಟುಕೊಳ್ಳಲು ಮನವಿ ಮಾಡಿದರು. ‘ನಿಮ್ಮಿಂದ ಒಂದು ರೂಪಾಯಿಯೂ ನನಗೆ ಬೇಡ’ ಎಂದು ತಿಳಿಸಿದರು. ಮುಂದೆ ಸ್ವಂತದ ಭವಿಷ್ಯ ನಿಧಿ (ಪ್ರಾವಿಡೆಂಟ್‌ ಫಂಡ್‌) ಮೇಲೆ 1 ಲಕ್ಷ ರೂಪಾಯಿ ಸಾಲ ಪಡೆದರು. ಬಾಳೆ, ಚಿಕ್ಕು, ಪಪ್ಪಾಯಿ, ತೆಂಗಿನ ತೋಟ ಹಾಗೂ ಸೂರ್ಯಪಾನ ಬೆಳೆದ ಗೆಳೆಯರ ಹೊಲದಲ್ಲಿ 25 ಜೇನು ಪೆಟ್ಟಿಗೆಗಳನ್ನಿಟ್ಟು, ‘ಸಂಚಾರಿ ಜೇನು ಕೃಷಿ’ ಆರಂಭಿಸಿದರು. ಜೇನು ದುಂಬಿಗಳಿಂದ ಪರಾಗಸ್ಪರ್ಶ ಹೆಚ್ಚಿ, ಇಳುವರಿ ಅಧಿಕಗೊಳ್ಳುವ ಭರವಸೆ ರೈತ ಮಿತ್ರರಿಗೆ ನೀಡಿ, ಮನವೊಲಿಸುತ್ತಾ. ತಕ್ಕಮಟ್ಟಿಗೆ ಈಗ ಯಶಸ್ವಿಯೂ ಆಗಿದ್ದಾರೆ.

‘ಎಪಿಸ್ ಸೆರೆನಾ ಇಂಡಿಕಾ’ ಪ್ರಜಾತಿಯ ಈ ಜೇನು ದುಂಬಿ ತುಂಬ ಚಿಕ್ಕದು. ಪ್ರತಿ ಜೇನು ಹುಟ್ಟಿನಲ್ಲಿ 3.175 ಕೆ.ಜಿಯಷ್ಟು ಜೇನು ತುಪ್ಪ ಮಾತ್ರ ಸಂಗ್ರಹಿಸಬಲ್ಲವು. ಜೇನು ಕೃಷಿಯಲ್ಲಿ ಇದೇ ಜೇನು ಕುಟುಂಬವನ್ನೇ ಬಳಸುವುದು. ಮನೆ ಅಂಗಳದಲ್ಲಿ ಈ ಜೇನು ಪೆಟ್ಟಿಗೆ ಇಟ್ಟು ನಮ್ಮ ಮನೆಗೆ ಬೇಕಾದಷ್ಟು ಜೇನುತುಪ್ಪ ಮತ್ತು ಮನೆ ಅಂಗಳದ ಸಸ್ಯವಟಿ ಪರಾಗಸ್ಪರ್ಶದಿಂದ ಸಮೃದ್ಧವಾಗಿಸಲು ಸಹಕಾರಿ.

ಆಶ್ರಮದಲ್ಲಿ ಜೇನು ಪೆಟ್ಟಿಗೆ

ಧಾರವಾಡ ಬಳಿ ಮನಗುಂಡಿಯ, ಶ್ರೀಗುರು ಬಸವ ಮಹಾಮನೆ, ಚನ್ನಯ್ಯನಗಿರಿಯ ಬಸವಾನಂದ ಸ್ವಾಮೀಜಿ ನಡೆಸುವ ನಿಸರ್ಗ ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ವಿಪಾಕಗಳಿಗೆ ಜೇನು ತುಪ್ಪವನ್ನು ಔಷಧಿಯಾಗಿ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಜಗದೀಶ ಅವರಿಗೆ ಆಶ್ರಮದ ತೋಟದಲ್ಲೇ ಜೇನು ಕೃಷಿ ಮುಂದುವರೆಸುವಂತೆ ಸ್ವಾಮೀಜಿ ಆಶ್ರಯ ನೀಡಿದರು. ಅಂದಾಜು ₹2 ಲಕ್ಷದವರೆಗೆ ಸ್ವಾಮೀಜಿ ಸ್ವತಃ ಆಸಕ್ತಿವಹಿಸಿ ವಿನಿಯೋಗಿಸಿದರು. ಸದ್ಯ 25 ಪೆಟ್ಟಿಗೆಗಳಲ್ಲೂ ಜೇನು ಕುಟುಂಬಗಳು ನಳನಳಿಸುತ್ತಿವೆ. ‘ಇನ್ನೂ 25 ಪೆಟ್ಟಿಗೆಗಳನ್ನು ಶ್ರೀಗಳು ಬೆಳೆಸಿದ ಗಿಡಮೂಲಿಕೆ ವನದಲ್ಲಿ ಸ್ಥಾಪಿಸುವ ಸಿದ್ಧತೆ ಕೂಡ ನಡೆದಿದೆ’ ಎನ್ನುತ್ತಾರೆ ಜಗದೀಶ.

ಒಂದು ಜೇನು ಪೆಟ್ಟಿಗೆಯಿಂದ, ಸುಗ್ಗಿಯ ಕಾಲದಲ್ಲಿ (ನವೆಂಬರ್, ಡಿಸೆಂಬರ್ ಹಾಗೂ ಜನವರಿ) 4 ರಿಂದ 5 ಕೆ.ಜಿ ಜೇನು ಪಡೆಯಬಹುದು ಎನ್ನುವ ಜಗದೀಶ, ಜನವರಿ ತಿಂಗಳು ಮುಗಿದ ಬಳಿಕ, ಕೇವಲ ಗೋಡಂಬಿ, ನುಗ್ಗೆ, ಸಿಂಗಪುರ ಚೆರ‍್ರಿ ಮತ್ತು ಗ್ಲಿಸಿರಿಡಿಯಾ ಹೂವು ಆಶ್ರಯಿಸಿ ಜೇನು ದುಂಬಿ ಜೇನು ತುಪ್ಪ ಸಂಗ್ರಹಿಸಬೇಕಿದೆ. ಈ ಗಿಡಗಳು ದೊರಕದಿದ್ದಲ್ಲಿ, ಜೇನು ಕುಟುಂಬ ನಿಲ್ಲುವುದು ಕಷ್ಟ ಎಂದು ಅಭಿಪ್ರಾಯಪಡುತ್ತಾರೆ.

ನೇಚರ್‌ ಫಸ್ಟ್‌ ಇಕೋ ವಿಲೇಜ್‌ನಲ್ಲಿ..

ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್‍ನಲ್ಲಿ 25ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳು ಜೇನು ಸಂಗ್ರಹಿಸುವಲ್ಲಿ ತುಂಬ ಸಕ್ರಿಯವಾಗಿವೆ. ಇಲ್ಲಿ ವರ್ಷಪೂರ್ತಿ ಹೂವು, ಹಣ್ಣು ಹೊದ್ದು ನಿಲ್ಲುವ ಹಲವು ಪ್ರಬೇಧದ ಮರಗಳಿವೆ. ಇಲ್ಲಿ ‘ಮಡ್ ಪಡ್ಲಿಂಗ್’ಗೂ ಅವಕಾಶವಿದೆ. ಜೊತೆಗೆ ನೀರಿನಾಸರೆ ಅವುಗಳಿಗೆ ದಕ್ಕಿದೆ ಎನ್ನುತ್ತಾರೆ ಜಗದೀಶ.

ಜೇನು ತುಪ್ಪದಲ್ಲಿ ಶೇ18 ರಷ್ಟು ನೀರಿನಾಂಶ ಇರುವ ಹಿನ್ನೆಲೆ, ಜೇನು ಹುಟ್ಟಿನಿಂದ ಸಂಗ್ರಹಿಸಿದ ಬಳಿಕ ನೀರಿನಾಂಶ ಬೇರ್ಪಡಿಸದಿದ್ದರೆ ಎರಡು ವಾರ ಕಳೆಯುವುದರೊಳಗೆ ಜೇನು ತುಪ್ಪ ಹುಳಿಯೊಡೆಯುತ್ತದೆ. ತುಪ್ಪ ಸಂಸ್ಕರಣೆಗೆ ವಿಶೇಷ ಯಂತ್ರವಿದ್ದು, ₹1.5 ಲಕ್ಷದಿಂದ ₹2 ಲಕ್ಷದವರೆಗೆ ಬೆಲೆ ಇದೆ. ಮೇಲಾಗಿ, ಪುಣೆ ಮತ್ತು ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಸರ್ಕಾರ ಮುತುವರ್ಜಿವಹಿಸಿ ಜೇನು ಮಾರಾಟ ಮಳಿಗೆ ಸ್ಥಾಪಿಸಿದೆ. ನಮ್ಮ ರಾಜ್ಯದಲ್ಲೂ ಹೀಗೆ ಜಿಲ್ಲೆಗೆ ಒಂದರಂತೆ ಮಳಿಗೆ ರೂಪುಗೊಂಡರೆ, ಜೇನು ಕೃಷಿ ಲಾಭದಾಯಕ ಮತ್ತು ಆಕರ್ಷಣೀಯವಾಗಿಸಬಹುದು. ಆಗ ಜೇನು ಕೃಷಿ ಪರಿಸರ ಸ್ನೇಹಿ ಹಸಿರು ಆದಾಯ ಮೂಲ!

ಯುವಜನ ಹವ್ಯಾಸವಾಗಿ, ಪರ್ಯಾಯ ಉದ್ಯೋಗ ಅಥವಾ ಆದಾಯ ಮೂಲವಾಗಿ, ಜೇನು ಕೃಷಿಯಲ್ಲಿ ತೊಡಗಿಸಿಕೊಂಡರೆ ಪರಿಸರ ಸೇವೆ ಗೈದಂತೆ ಎನ್ನುವ ಅವರು, ‘ನನಗೇನು ಲಾಭ?’ ಎನ್ನುವು
ದಕ್ಕಿಂತ, ನಿಸರ್ಗದಲ್ಲಿ ಪರಾಗಸ್ಪರ್ಶಕ್ಕೆ ಅನುವಾದ ನೆಮ್ಮದಿಗಳಿಸುವ ಮಾರ್ಗವಿದು ಎಂದುಕೊಳ್ಳೋಣ. ಲಾಭ ಹಂತಹಂತವಾಗಿ ದಕ್ಕುತ್ತದೆ ಎಂಬುದು ಜಗದೀಶರ ನಿಲುವು. (ಜಗದೀಶ ಸಂಪರ್ಕ: 90600 59006 / ಸಂಜೆ 7 ರಿಂದ 9 ಗಂಟೆ).

ಏನಿದು ‘ಎಪಿ ಕಲ್ಚರ್’?
1951ರಲ್ಲಿ ಲಾಂಗ್‍ಸ್ಟ್ರಾಥ್ ಕೃತಕ ಜೇನು ಹುಟ್ಟು ರೂಪಿಸಿದ. ಹೆಸರಾಂತ ಜೀವಶಾಸ್ತ್ರಜ್ಞ ಕಾರ್ಲ್ ವಾನ್ ಫ್ರಿಷ್, ಕೆಲಸಗಾರ ಜೇನು ದುಂಬಿಗಳು ಮಕರಂದ ಅಥವಾ ಆಹಾರವಿರುವ ಜಾಗೆಯನ್ನು ಸಹವರ್ತಿಗಳಿಗೆ ತೋರುವಾಗ ಮಾಡುವ ನೃತ್ಯ `ವ್ಯಾಗಲ್ ಡಾನ್ಸ್’ ನಿರೂಪಿಸಿದರು. ಇದನ್ನೇ `ದುಂಬಿ ಭಾಷೆ’ ಎಂದು ಜಗತ್ತು ಒಪ್ಪಿದೆ. ಈ ನೃತ್ಯದ ಪಟ್ಟುಗಳು ಆಹಾರ ಸ್ಥಳದ ದೂರನ್ನಾಧರಿಸಿ ಮಂದ್ರ, ಮಧ್ಯಮ, ತಾರಕ ಮತ್ತು ಗಮ್ಯವಾಗಿರುತ್ತದೆ ಎಂದೂ ಸಂಶೋಧನೆಗಳು ಸಾಬೀತು ಪಡಿಸಿವೆ. ಕಾರ್ಲ್ ವಾನ್ ಫ್ರಿಷ್ ಪ್ರಥಮ ಬಾರಿಗೆ ಜೇನು ಸಂಗ್ರಹಿಸುವ ಪ್ರಾಥಮಿಕ ಹಂತದ ಒರಟಾದ ಮಾದರಿಯನ್ನೂ ಸೃಷ್ಟಿಸಿ ಗಮನ ಸೆಳೆದಿದ್ದರು! ಹಾಗಾಗಿ, ಈತ ಜೇನು ಕೃಷಿ ಪಿತಾಮಹ! `ಎಕಾನಾಮಿಕ್ ಜೂವೋಲಜಿ’ ಅಧ್ಯಯನ ಶಾಖೆಯ ಮೊದಲ ಸಂಶೋಧಕ! ಒಂದು ಪೌಂಡ್‍ನಷ್ಟು ಮಕರಂದ/ಜೇನು ತುಪ್ಪ ಸಂಗ್ರಹಿಸಲು ಒಂದು ಕೆಲಸಗಾರ ಜೇನು ದುಂಬಿ ಇಡೀ ನಮ್ಮ ಭೂಗೋಳದ ಒಟ್ಟು ಸುತ್ತಳತೆಯ ಎರಡು ಪಟ್ಟು ದೂರ ಕ್ರಮಿಸುತ್ತದೆ!

1 ಗ್ರಾಂ ಜೇನು ತುಪ್ಪದಲ್ಲಿ ಏನಿದೆ?
ಲೆವುಲೋಸ್ 38.9%, ಡೆಕ್ಸ್ಟರೋಸ್ 21.28%, ಮಾಲ್ಟೋಸ್ ಆಂಡ್ ಶುಗರ್ಸ್ 8.81%, ಎನ್‍ಜೈಮ್ಸ್ ಆಂಡ್ ಪಿಗ್‍ಮೆಂಟ್ಸ್ 2.21%, ಆಶ್ 1.01%, ಕ್ರಿಸ್ಟಲ್ ವಾಟರ್ 17.20%. `ಗ್ರ್ಯಾನುಲೇಟೆಡ್’ ಹಾಗೂ `ಫರ್ಮೆಂಟೆಡ್’ ಜೇನು ತುಪ್ಪವನ್ನು ನೂರಾರು ವರ್ಷಗಳ ಕಾಲ ಕೆಡದಂತೆ ಕಾಪಿಡಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT