ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ನೀರು; ಹೆಚ್ಚು ಫಸಲು

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದ ಅಂತರ್ಜಲ ಕುಸಿದಿದೆ. ಇದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಬರದಿಂದ ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ಸಿಗುವ ನೀರು ಬೇಸಾಯಕ್ಕೆ ಸಾಲದಾಗಿದೆ. ಕೊಳವೆ ಬಾವಿಯನ್ನು ಇನ್ನಷ್ಟು ಆಳ ಕೊರೆಸಿದರೂ ಹೆಚ್ಚು ಪ್ರಯೋಜನವಾಗುತ್ತಿಲ್ಲ.

ಇದೇ ರೀತಿಯ ಸಂಕಷ್ಟ ಎದುರಾದರೂ ಕೊಳವೆ ಬಾವಿಯಲ್ಲಿ ಸಿಕ್ಕ ಸ್ವಲ್ಪ ನೀರನ್ನು  ಜಾಣತನದಿಂದ ಬಳಸಿಕೊಂಡು ಬೇಸಾಯ ಮಾಡಿ ಜೀವನ ನಿರ್ವಹಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸಿದ್ದರಾಮಪ್ಪ ಕೊಳಜಿ. `ಹೆಚ್ಚು ನೀರು ಬೇಕಾಗುವ ಬೆಳೆಗಳನ್ನು ಬೆಳೆಯುವ ಬದಲು ಕಡಿಮೆ ನೀರಿನಲ್ಲಿ ಬಿತ್ತನೆ ಬೀಜ ಉತ್ಪಾದನೆ ಮಾಡುವುದು ಲಾಭದಾಯಕ. ಕೇವಲ 20 ಗುಂಟೆ ಜಮೀನಿನಲ್ಲಿ ಬೀಜೋತ್ಪಾದನೆ ಮಾಡಿ ಸುಮಾರು ಒಂದೂವರೆ ಲಕ್ಷ ರೂಪಾಯಿಯವರೆಗೆ ಲಾಭ ಪಡೆಯಬಹುದು' ಎನ್ನುತ್ತಾರೆ ಕೊಳಜಿ.

ಇವರ ಬಳಿ 13 ಎಕರೆ ಭೂಮಿ ಇದೆ. ಈ ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ಶೇಂಗಾ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. 2 ವರ್ಷಗಳಲ್ಲಿ ಮಳೆ ಸರಿಯಾಗಿ ಬಾರದ ಕಾರಣ ಅಂರ್ತಜಲ ಕುಸಿದು ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಯಿತು. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಕಾರಣ ಬೀಜೋತ್ಪಾದನೆ ಮಾಡಲು ಮುಂದಾಗಿ ಈಗ ಯಶ ಪಡೆದಿದ್ದಾರೆ.

ವಿವಿಧ ತರಕಾರಿ
ವಿದೇಶಿ ಬೀಜ ಕಂಪೆನಿಯೊಂದರ ಮಾರ್ಗದರ್ಶನದಲ್ಲಿ ಮೆಣಸಿನ ಕಾಯಿ, ಹೀರೆಕಾಯಿ, ಸೌತೆ, ಹಾಗಲಕಾಯಿ, ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಅವರು ಬೆಳೆಯುತ್ತಾರೆ. ಗ್ರಾಮದ ಇತರ ರೈತರಿಗೂ ಬೀಜಗಳನ್ನು ಬೇಳೆಯಲು ಉತ್ತೇಜನ ನೀಡುತ್ತಿದ್ದಾರೆ. ಸದ್ಯ ಚಿಕ್ಕಮ್ಯಾಗೇರಿಯಲ್ಲಿ ಹಲವಾರು ರೈತರು 20 ಗುಂಟೆ ಹೊಲದಲ್ಲಿ ಬೀಜೋತ್ಪಾದನೆ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಬೀಜ ಕಂಪೆನಿಗಳು ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೂಲಿ ಆಳುಗಳಿಗೆ ಬೇಕಾಗುವ ಹಣವನ್ನು ಮುಂಗಡವಾಗಿ ನೀಡುತ್ತವೆ. ಕಂಪೆನಿಯ ತಜ್ಞರ ಮಾರ್ಗದರ್ಶನದಲ್ಲಿ ರೈತರು ಬೀಜೋತ್ಪಾದನೆ ಮಾಡುತ್ತಾರೆ.

ಸಿದ್ದರಾಮಪ್ಪ ಕೊಳಜಿ ಸುಮಾರು ಇಪ್ಪತ್ತು ಗುಂಟೆ ಭೂಮಿಯಲ್ಲಿ ಟೊಮೆಟೊ ಬೀಜೋತ್ಪಾದನೆ ಮಾಡಿದ್ದಾರೆ. ಟೊಮೆಟೊ ತಳಿಯ ಮೂಲ ಬೀಜ (ಗಂಡು ಮತ್ತು ಹೆಣ್ಣು)ಗಳನ್ನು ಕಂಪೆನಿ ಪೂರೈಸಿದೆ. 20 ಗುಂಟೆಯಲ್ಲಿ 2500 ಟೊಮೆಟೊ ಗಿಡಗಳಿವೆ. ಟೊಮೆಟೊ ಗಿಡಗಳು ಹೂ ಬಿಡಲು ಆರಂಭವಾದ ನಂತರ ಗಂಡು ಹೂವಿನ ಮೊಗ್ಗುಗಳನ್ನು ಸುಲಿದು ಅದರೊಳಗಿನ ಪರಾಗ ರೇಣುಗಳನ್ನು ಶೇಖರಿಸಿ ಅವನ್ನು ಹೆಣ್ಣು ಹೂವಿಗೆ ಸೇರಿಸುತ್ತಾರೆ. ಈ ಕೃತಕ ಪರಾಗ ಸ್ಪರ್ಶ ಮಾಡಲು ಸ್ಥಳೀಯ ಕೂಲಿಯಾಳುಗಳಿಗೆ ಸೂಕ್ತ ತರಬೇತಿ ನೀಡಿದ್ದಾರೆ.

ಕೃತಕ ಪರಾಗಸ್ಪರ್ಶದಿಂದ ಟೊಮೆಟೊಕಾಯಿಗಳು ಸದೃಢವಾಗಿ ಬೆಳೆಯುತ್ತವೆ. ಹಣ್ಣಾದ ನಂತರ ಕೊಯ್ಲು ಮಾಡಿ ಅವುಗಳನ್ನು ಬೀಜ ತೆಗೆದು ತೊಳೆದು ಬೀಜ ಕಂಪನಿಯವರು ನೀಡಿರುವ ರಾಸಾಯನಿಕ ಸಿಂಪಡಿಸಿ ಒಣಗಿಸುತ್ತಾರೆ. ಇಪ್ಪತ್ತು ಗುಂಟೆ ಹೊಲದಲ್ಲಿ 25 ರಿಂದ 30 ಕೆಜಿಯಷ್ಟು ಬೀಜ ಉತ್ಪಾದಿಸಬಹುದು. ಈ ಬೀಜಗಳ ತಳಿಗಳಿಗೆ ತಕ್ಕಂತೆ ಕಿಲೋಗೆ ಮೂರು ಸಾವಿರದಿಂದ ಏಳು ಸಾವಿರ ರೂಪಾಯಿ ಬೆಲೆ ಇದೆ. ಬೀಜ ಕಂಪೆನಿಯ ರೈತರಿಂದ ನೇರವಾಗಿ ಬೀಜ ಖರೀದಿಸುತ್ತದೆ. ಸಂಪರ್ಕಕ್ಕೆ- 9740773939
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT