ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿಗೂ ಬಂತು ಜಪಾನಿನ ಇ ಎಮ್‌

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅಂದು ಭಾನುವಾರ. ಸಾವಯವ ಕೃಷಿಕರ ಸಭೆ. ಕನಕಪುರದ ‘ಕನ್ನಡ ಕುಮಾರ’ ರ ತೋಟದಲ್ಲಿ. ಶಿಂಜಿಟಕಾರ ಮುಖ್ಯ ಅತಿಥಿ. ವಿಷಯ: ‘ಇ ಎಮ್ ಟೆಕ್ನಾಲಜಿ’. ಭಾಷಣದ ವಿಷಯ ಕುತೂಹಲ ಕೆರಳಿಸುವಂತಿತ್ತು. ಈ ಮೊದಲು ಎಲ್ಲೂ ಕೇಳಿರಲಿಲ್ಲ. ಹಾಗಾಗಿ ಸಭೆಗೆ ಹೋಗುವ ನಿರ್ಧಾರ ಮಾಡಿದ್ದು. ಹೋಗಿದ್ದು ವ್ಯರ್ಥವಾಗಲಿಲ್ಲ.

ಪ್ರಕೃತಿಗೆ ಪೂರಕವಾದ ಹಾಗೂ ಮಾರಕವಾಗಬಹುದಾದ ಹಲವು ಸೂಕ್ಷ್ಮಾಣು ಜೀವಿಗಳು ನಮ್ಮ ಕಣ್ಣಿಗೆ ಕಾಣದಂತಹ ಸ್ಥಿತಿಯಲ್ಲಿ ಇವೆ. ಗೋಚರವಾಗದಿದ್ದರೂ, ಅವುಗಳ ಕಾರ್ಯ ಗಮನಾರ್ಹ. ಕೃಷಿಯಲ್ಲಿ ಬಳಸುವ ಹುಳಿ ಬರಿಸಿದ ದ್ರವ ರೂಪಿ ಗೊಬ್ಬರಗಳಲ್ಲಿ ಈ ಸೂಕ್ಷ್ಮಾಣು ಜೀವಿಗಳಿರುವುದು ಕಂಡು ಬರುತ್ತದೆ. ಹಾಗೇ ಮುಚ್ಚಿಗೆಯ ಕೆಳ ಭಾಗದಲ್ಲಿ ಇವುಗಳ ಕ್ರಿಯೆ ನಿರಂತರ. ಇಂತಹ ವೈವಿಧ್ಯಮಯ ಜೀವಾಣುಗಳ ಹೆಸರೇ ಎಫೆಕ್ಟಿವ್ ಮೈಕ್ರೋ ಆರ್ಗಾನಿಸಮ್ಸ್ ಅಥವಾ ಇಎಮ್. 

ಜಪಾನೀಯರ ಆವಿಷ್ಕಾರ
ಪರಿಸರದ ಸಮತೋಲನ ಕಾಪಾಡುವಲ್ಲಿ ಈ ಸೂಕ್ಷ್ಮಾಣು ಜೀವಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇದರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದ ಜಪಾನಿನ ಕೃಷಿ ಪ್ರಾಧ್ಯಾಪಕರಾದ ಪ್ರೊಫೆಸರ್ ಟ್ಯೂರೊ ಹಿಗಾ ಸೂಕ್ಷ್ಮಾಣುಗಳ ಪರಸ್ಪರ ಅಸ್ತಿತ್ವವನ್ನು ತುಂಬ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವುಗಳ ಹೊಂದಾವಣಿಕೆಯಿಂದಾಗಿ ಸಾಧಾರಣ ಮಣ್ಣು ಸಮೃದ್ಧವಾಗಿ, ಜೀವಂತವಾಗುವುದು ಪತ್ತೆಯಾಯಿತು.

ಪ್ರಕೃತಿದತ್ತವಾದ ಮತ್ತು ಪರಿಸರ ಪೂರಕವಾದ ವಾತಾವರಣ ಇದ್ದಾಗ ಈ ಸೂಕ್ಷ್ಮಾಣು ಜೀವಿಗಳು ಮಣ್ಣಿನ ಗುಣಧರ್ಮ ಉತ್ತಮ ಪಡಿಸುವುದು, ಅಲ್ಲದೇ ಅದು ಮಣ್ಣಿನಲ್ಲಿ ಸೇರಿದಾಗ ಮೊದಲೇ ಇರುವ ಜೀವಾಣುಗಳನ್ನು ಸ್ಥಳಾಂತರಿಸುವುದಿಲ್ಲವೆಂದು ತಿಳಿಯಿತು. ಈಗಾಗಲೇ ಇರುವ ಸೂಕ್ಷ್ಮಾಣುಗಳೊಡನೆ ಹೊಂದಿಕೊಂಡು, ಮಣ್ಣನ್ನು ಫಲವತ್ತಾಗಿಸುವ ಇದರ ಗುಣ ಗಮನ ಸೆಳೆಯಿತು. ಸಾರಜನಕ ಸ್ಥಿರೀಕರಿಸುವ, ರಂಜಕವನ್ನು ಕರಗಿಸುವ ಜೀವಾಣುಗಳ ಜೊತೆ ಬೆರೆತು ಸೂಕ್ಷ್ಮಾಣುಗಳ ವೈವಿಧ್ಯ ಹೆಚ್ಚಿಸುವುದಲ್ಲದೆ, ಇದರಿಂದಾಗಿ ಉಪಕಾರಿ ಜೀವಾಣುಗಳ ಸಂಖ್ಯೆ ವೃದ್ಧಿಸುವುದು ಸಹ ಗಮನಕ್ಕೆ ಬಂತು. ಈ ನೂರಾರು ಸೂಕ್ಷ್ಮಾಣುಗಳಲ್ಲಿ ಪ್ರಮುಖವಾದ ಮೂರನ್ನು ಗುರುತಿಸಲಾಯಿತು.

ವಿಶೇಷವಾಗಿ ಸೂಕ್ಷ್ಮಾಣು ಜೀವಿಗಳಿಂದಾಗಿ ಆಹಾರ ಹುದುಗುವಿಕೆಯಾಗುತ್ತದೆ (ಫರ್ಮೆಂಟೇಶನ್). ಗಾಳಿಯಲ್ಲಿ ಇರುವುದಕ್ಕಿಂತ ಹೆಚ್ಚು ಸೂಕ್ಷ್ಮಾಣುಗಳು  ಮಣ್ಣು ಮತ್ತು ನೀರಿನಲ್ಲಿರುವುದು ಕಂಡು ಬಂದಿದೆ. ಇವುಗಳ ಸಂಖ್ಯೆ ಹೆಚ್ಚಿದಷ್ಟೂ, ಗಿಡಗಳಲ್ಲಿ ರೋಗ ರುಜಿನ ಕಮ್ಮಿ ಯಾಗುತ್ತದೆ.   ಹಾಲು ಮೊಸರಾಗಲು ಸಹಕರಿಸುವ ಬ್ಯಾಕ್ಟೀರಿಯಾಗಳು, ಇಡ್ಲಿ, ಬ್ರೆಡ್ ಮುಂತಾದವು ಉಬ್ಬಿಕೊಂಡು ಮೆತ್ತಗಾಗಲು ಸಹಕರಿಸುವ ಬ್ಯಾಕ್ಟೀರಿಯಾಗಳು, ನೀರಿನಲ್ಲಿ  ತೇಲಾಡುವ ಹಯಾಸಿಂಥ್ ನಂತಹ ಜಲ ಸಸ್ಯಗಳ ಬೇರಿನಲ್ಲಿ ಇರುವಂತಹವು. ಇವುಗಳಲ್ಲೂ ಎರಡು ವಿಧ.

ಒಂದು ಆಮ್ಲಜನಕ ಇದ್ದೆಡೆ (ಏರೋಬಿಕ್), ಇನ್ನೊಂದು ಆಮ್ಲಜನಕ ಇಲ್ಲದೆಡೆ (ಅನೇರೋಬಿಕ್). ಈ ಸೂಕ್ಷ್ಮಾಣು ಜೀವಿಗಳ ಮಿಶ್ರಣದ ಜೀವಿತಾವಧಿಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮಾಧ್ಯಮವಾಗಿ ವಾಹಕವೊಂದರ ಅಗತ್ಯವಿದ್ದು  ಅದನ್ನು ಸಹ ಅಭಿವೃದ್ಧಿ ಪಡಿಸಲಾಯಿತು. ಅದನ್ನೇ ಮುಂದೆ ಇಎಮ್ ಎಂದು ಕರೆಯಲಾಯಿತು. ಇಷ್ಟೆಲ್ಲ ಮಾಹಿತಿಯನ್ನು ತಮ್ಮ ಭಾಷಣದಲ್ಲಿ ವಿವರಿಸಿದ ಶಿಂಜಿ ಟಕಾರ ಮನೆ ಬಳಕೆಯಲ್ಲಿ ಇ ಎಮ್ ವಿಷಯ ಕುರಿತ ವಿಡಿಯೊ ಒಂದನ್ನು ತೋರಿಸಿದರು. ಮೂಲ ಇ ಎಮ್ ಅನ್ನು ಸ್ಟಾಕ್ ಸಲ್ಯೂಶನ್ ಎನ್ನುತ್ತಾರೆ.

ಮನೆ ಬಳಕೆಗೆ ಇದರ ತೆಳುಗೊಳಿಸಿದ ದ್ರಾವಣ ಬಳಸಬೇಕು. ಇದನ್ನು ಸೆಕೆಂಡರಿ ಇ ಎಮ್ ಎನ್ನಲಾಗುತ್ತದೆ. ಒಂದು ಲೀಟರ್‌ನಷ್ಟು ನೀರಿಗೆ 10 ಎಮ್ ಎಲ್ ಇ ಎಮ್ ಮತ್ತು 2 ಟೀ ಸ್ಪೂನ್ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸ ಬೇಕು. ಬಾಟಲಿನಲ್ಲಿ ತುಂಬಿಸಿ ಭದ್ರಪಡಿಸ ಬೇಕು. ಪ್ರತಿ ನಿತ್ಯ ಮುಚ್ಚಳ ತೆರೆದು ಮೇಲಿನ ಅನಿಲ ಹೊರ ಹೋಗುವಂತೆ ಮಾಡಿ ಮುಚ್ಚಿಡಬೇಕು. ಎಂಟು ದಿನಗಳ ನಂತರ ಮುಚ್ಚಳ ತೆಗೆದಾಗ ಹಣ್ಣಿನ ವಾಸನೆ  ಬರುತ್ತದೆ. ಆಗ ಅದು ಬಳಕೆಗೆ ಸಿದ್ಧ ಎಂದರ್ಥ.

ಈ ಸಿದ್ಧ ದ್ರಾವಣವನ್ನು ಸೆಕೆಂಡರಿ ಇಎಮ್ ಎಂದು ಕರೆಯುತ್ತಾರೆ. ಇದನ್ನು ಪುನಃ ತೆಳುಗೊಳಿಸಿದಾಗ (ಡೈಲ್ಯೂಟ್ ಮಾಡಿ) ಬಳಕೆಗೆ ಯೋಗ್ಯವಾಗುತ್ತದೆ. ಒಂದು ಲೀಟರ್ ನೀರಿಗೆ ಎರಡು ಟೇಬಲ್ ಸ್ಪೂನ್ (20 ಎಂಎಲ್) ಸೆಕೆಂಡರಿ ಇ ಎಮ್ ಬೆರೆಸಿದರೆ ಇದು ಬಳಕೆಗೆ ಸಿದ್ಧ. ಈ ದ್ರಾವಣದ ಉಪಯೋಗಗಳು ಈ ಕೆಳಗಿನಂತಿವೆ.
* ಅಡುಗೆ ಮನೆಯ ಹಸಿ ಕಸವನ್ನು ಕಾಂಪೋಸ್ಟ್ ಮಾಡುವಾಗ ಆ ಮಿಶ್ರಣವು ಬೇಗ ಕಳಿಯುವಂತೆ ಮಾಡುತ್ತದೆ.
*ಹಸಿ ಪದಾರ್ಥಗಳು ಕಳಿಸಿ ಗೊಬ್ಬರ ಮಾಡುವ ಸಂದರ್ಭದಲ್ಲಿ ಕೆಟ್ಟ ವಾಸನೆ ಬರುವುದುಂಟು. ಇದನ್ನು ತಡೆಗಟ್ಟಲು ಇ ಎಮ್ ಬಳಸಬಹುದು.
*ಮಣ್ಣಿನಲ್ಲಿ ತೇವಾಂಶ ಜಾಸ್ತಿಯಾದಾಗ ಶಿಲೀಂಧ್ರದ ಬೆಳವಣಿಗೆ ಸಹಜ. ಮಣ್ಣಿಗೆ ಈ ದ್ರಾವಣ ಸಿಂಪಡಿಸುವುದರಿಂದ ಅವುಗಳ ಬೆಳವಣಿಗೆಯನ್ನು ನಿಯಂತ್ರಿಸ ಬಹುದು. 
*ಮನೆಯ ಸಿಂಕ್ ಮತ್ತು ಮೋರಿಗಳು ಶುದ್ಧವಾಗಿರಲು ಬಳಸಬಹುದು. ಬಳಕೆ ಸುಲಭ ಮತ್ತು ಮಿತವ್ಯಯಕರ.
*ನೀರು ಹೋಗಲು ಬಳಸುವ ಪೈಪ್‌ಗಳಲ್ಲಿ ಪಾಚಿ ಕಟ್ಟಿದಾಗ ಇದನ್ನು ಬಳಸಿದರೆ ನೀರು ಸರಾಗವಾಗಿ ಹೋಗುವಂತೆ ಮಾಡ ಬಹುದು.
*ಗಿಡಗಳಿಗೆ ಸಿಂಪಡಿಸಿದಾಗ ರೋಗ ನಾಶಕದಂತೆ ಕೆಲಸ ಮಾಡುತ್ತದೆ.
*ಕೀಟ ಬಾಧೆ ಇರುವ ಗಿಡಗಳಿಗೆ ಇದನ್ನು ಔಷಧದಂತೆ ಬಳಸಬಹುದು.
*ಮಣ್ಣಿನ ಪುನರ್ ಬಳಕೆ ಮಾಡುವಾಗ ಇದರ ಸಿಂಪಡಣೆಯಿಂದಾಗಿ ಮಣ್ಣು ಜೀವಂತವಾಗುತ್ತದೆ.

ಒಮ್ಮೆ ಬಳಕೆಯಾದ ಮಣ್ಣು ಸತ್ವಹೀನ ವಾಗುತ್ತದೆ. ಇದನ್ನು ಜೀವಂತಗೊಳಿಸಲು ಇಎಮ್ ದ್ರಾವಣದಲ್ಲಿ ಅದ್ದಿದ ಒಣಗಿದ ಎಲೆಗಳನ್ನು ಪದರ ಪದರವಾಗಿ ಸೇರಿಸಿ ಒಂದು ತಿಂಗಳು ಕಳಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬಳಕೆಗೆ ಯೋಗ್ಯವಾಗುತ್ತದೆ.  ಅಕ್ಕಿ ತೊಳೆದ ನೀರಿಗೆ (ಕಲಗಚ್ಚು- ಒಂದು ಲೀಟರ್) ಎರಡು ಟೇಬಲ್ ಸ್ಪೂನ್ ಸೆಕೆಂಡರಿ ಇ ಎಮ್ ಹಾಕಿ ಎಂಟು ದಿನಗಳ ನಂತರ ಬಳಸಬಹುದು.

ವಿಧಾನ: (ಸೆಕೆಂಡರಿ ಇಎಮ್ ಮಾಡುವಂತೆಯೇ) ಇದೇ ‘ರೈಸ್ ವಾಟರ್ ಇ ಎಮ್’. ಈ  ದ್ರಾವಣ ಮನೆ ಬಳಕೆಗೆ ಸೂಕ್ತ. 
 *ಒಂದು ಸಣ್ಣ ಬಕೆಟ್ ನೀರಿಗೆ ಎರಡು ಚಮಚ ಹಾಕಿ ಬೆರೆಸಿ ನೆಲ ಒರೆಸಲು ಬಳಸಿದರೆ ಇರುವೆಗಳ ಕಾಟ ಕಮ್ಮಿಯಾಗುತ್ತದೆ. (ಇದು  ಮಾರುಕಟ್ಟೆಯಲ್ಲಿ ದೊರೆಯುವ ದ್ರಾವಣ ಬಳಸಿದಷ್ಟೇ ಪರಿಣಾಮಕಾರಿ).
*ಸಿಂಕ್ ಅಥವ ಮೋರಿಗಳಲ್ಲಿ ಪಾಚಿ ಕಟ್ಟಿದಾಗ ಈ ದ್ರಾವಣ ಶುದ್ಧೀಕರಿಸುತ್ತದೆ.
*ಒಮ್ಮೆ ಬಳಸಿದ ನೀರನ್ನು ಪುನರ್ ಬಳಕೆ ಮಾಡುವಾಗ ಈ ದ್ರಾವಣ ಬೆರೆಸಬಹುದು.
‘ಇಂಡೋನೇಷಿಯದಲ್ಲಿ ಹೆಣಗಳ ದುರ್ವಾಸನೆ ಹೋಗಲಾಡಿಸಲು ಸೆಕೆಂಡರಿ
ಇ ಎಮ್ ಸಿಂಪಡಿಸಲಾಗುತ್ತದೆ. ಕೊಯಮತ್ತೂರಿನಲ್ಲಿ ನಡೆದ ಇ ಎಮ್ ಸಮಾವೇಶದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ’ ಎನ್ನುತ್ತಾರೆ ನಿವೃತ್ತ ವಿಜ್ಞಾನಿ ವರದರಾಜನ್.

ಮೈಲಾದುಂಪಾರದಲ್ಲಿರುವ ಏಲಕ್ಕಿ ತೋಟದಲ್ಲಿ ಮೂರು ವರ್ಷಗಳಿಂದ ಇದರ ಬಳಕೆಯಾಗುತ್ತಿದೆ. ಇಳುವರಿಯಲ್ಲಿ ಹೆಚ್ಚಳ, ತ್ಯಾಜ್ಯಗಳ ದುರ್ವಾಸನೆ ದೂರವಾಗಿರುವುದು, ಮಣ್ಣಿನ ಗುಣಧರ್ಮದಲ್ಲಿ ಬದಲಾವಣೆ, ಗಿಡಗಳಿಗೆ ಬಳಸುವ ನೀರಿನಲ್ಲಿ ವಿದ್ಯುತ್ ವಾಹಕಗಳ ಪ್ರಮಾಣ ತಗ್ಗಿರುವುದು (ಒಂದಕ್ಕಿಂತ ಜಾಸ್ತಿಯಾಗಿದ್ದರೆ, ಪೋಷಕಾಂಶಗಳ ನಿರ್ವಹಣೆಗೆ ತೊಂದರೆಯಾಗುತ್ತದೆ) ದಾಖಲಾಗಿದೆ.
ಇಷ್ಟೆಲ್ಲ ಅನುಕೂಲಗಳಿರುವ ಇ ಎಮ್ ಪೂರೈಕೆ ಸಮರ್ಪಕವಾಗಿಲ್ಲ. ಇದರ ಬಳಕೆಯ ಬಗ್ಗೆ ಅರಿವಿಲ್ಲದಿರುವುದು, ಸಾಕಷ್ಟು ಪ್ರಚಾರ ಸಿಗದೇ ಇರುವುದು ಪ್ರಮುಖ ಕಾರಣಗಳಾಗಿವೆ.

ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಇಎಮ್ ತಯಾರಿಕೆ ನಡೆದಿತ್ತು. ಇತ್ತೀಚೆಗೆ ಸತ್ಯಮಂಗಲದ ಒಬ್ಬ ಸಾವಯವ ಕೃಷಿಕ ಈ ತಾಂತ್ರಿಕತೆ ಬಳಸಿ ಇ ಎಮ್ ತಯಾರಿಸುತ್ತಿದ್ದಾರಂತೆ. ಇದು ಬೆಳಕಿಗೆ ಬರಬೇಕಷ್ಟೆ. ಇ ಎಮ್ ಬಳಕೆ ಕಡಿಮೆ ಖರ್ಚಿನದು. ಬಳಕೆ ಸುಲಭ, ಪರಿಸರ ಸ್ನೇಹಿ, ಪ್ರಕೃತಿಗೆ ಪೂರಕ. ಮಣ್ಣಿನ ಮೂಲ ಗುಣಧರ್ಮಕ್ಕೆ ಧಕ್ಕೆ ತಾರದೆ ಇರುವಂತಹುದು. ಬಳಕೆಗೆ ದೊರೆಯುವಂತಾಗ ಬೇಕಷ್ಟೆ. 

ಮಧುರೈನ ತಿರುಮಂಗಲಮ್ ನಲ್ಲಿರುವ ಬಾಲ ಸುಬ್ರಮಣ್ಯ ಇ ಎಮ್ ತಯಾರಿಸುತ್ತಿದ್ದಾರೆ. ಅವರು ಇದನ್ನು ‘ಎಫಿಶಿಯೆಂಟ್ ಮೈಕ್ರೋ ಆರ್ಗಾನಿಸಮ್ಸ್’ ಎಂದು ಕರೆಯುತ್ತಾರೆ. ಇದರ ಮಾರುಕಟ್ಟೆಯ ಹೆಸರು ‘ಥಿರಾಮಿ’.
ಅವರ ಸಂಪರ್ಕ್ಕೆ: 098*20*8317. (ಬೆಳಿಗ್ಗೆ 9 ರಿಂದ ಸಂಜೆ 5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT