ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟೆತ್ತಿನ ಕೃಷಿಗೆ ಜೈ...

Last Updated 28 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಈ ಹಿಂದೆ ಉತ್ತರ ಕರ್ನಾಟಕದಲ್ಲಿ `ಒಂಟೆತ್ತಿನ ಒಕ್ಕಲತನಾ ಅಲ್ಲಂತ, ಕುಂಟ ಹುಡುಗಿ ಜೋಡಿ ಒಗತಾನ ವಲ್ಲಂತ (ಮದುವೆ ಬೇಡ)~ ಎಂಬ ಆಡು ಮಾತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅದರಂತೆ ಕೇವಲ ಪ್ರಾಸಕ್ಕಾಗಿ ಜೋಡಿಸಿದ ಇಂಥ ಮಾತುಗಳೂ ಮರೆಯಾಗುತ್ತಿವೆ.

ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ಕೃಷಿಕ ತನ್ನ ವ್ಯವಸಾಯವನ್ನು ಸುಗಮವಾಗಿ ಸಾಗಿಸುವುದರ ಜತೆಗೆ ಪ್ರತಿ ಹಂತದಲ್ಲಿಯೂ ಉಳಿತಾಯ ಮಾಡಲು ಏನೆಲ್ಲ ಪ್ರಯೋಗಕ್ಕೆ ಮುಂದಾಗಿದ್ದಾನೆ.

ಅಂಥ ಪ್ರಯೋಗವನ್ನು ಬಾಗಲಕೋಟೆ ಜಿಲ್ಲೆ ಮುಧೋಳದ ರೈತರಾದ ವೀರಣ್ಣ ತೋಳಮಟ್ಟಿ, ಜಾಹ್ನವಿ ರವೀಶ, ಕೃಷಿ ಸಲಕರಣೆಗಳ ತಯಾರಕ ವಿಠ್ಠಲ ಬಡಿಗೇರ ಮಾಡುತ್ತಿದ್ದಾರೆ. ಒಂಟೆತ್ತಿನ ಕೃಷಿಯಲ್ಲಿ ಲಾಭದೊಂದಿಗೆ ಸರಳ ವಿಧಾನವನ್ನೂ ಕಂಡುಕೊಂಡಿದ್ದಾರೆ.

ಕಡಿಮೆ ಜಮೀನು, ಖರ್ಚು ಜಾಸ್ತಿ ಎಂದು ಕೃಷಿಯನ್ನೇ ಕೈ ಬಿಡಬೇಕೆಂದಿದ್ದ ವೀರಣ್ಣ ತೋಳಮಟ್ಟಿ ಈ ಪ್ರಯೋಗಕ್ಕೆ ಮುಂದಾಗಿ, ವಿಠ್ಠಲ ಬಡಿಗೇರರ ಸಹಾಯದಿಂದ ಕೃಷಿ ಸಾಮಗ್ರಿ ತಯಾರಿಸಿಕೊಂಡು ಯಶಸ್ವಿಯಾಗಿದ್ದಾರೆ.
 
ಕೃಷಿಯಲ್ಲಿ ಹತ್ತು ಹಲವು ಪ್ರಯೋಗಗಳನ್ನು ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೈತ ಮಹಿಳೆ ಜಾಹ್ನವಿ ರವೀಶ ಅವರು ತಮ್ಮ ಹೊಲದ್ಲ್ಲಲೂ ಈ ಪ್ರಯೋಗ ಮಾಡಿದ್ದಾರೆ. ಇದನ್ನು ಎಲ್ಲರೂ ಬಳಸುವಂತಾಗಬೇಕು ಎಂಬ ಇಚ್ಛೆಯಿಂದ ರೈತರಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಮುಧೋಳ ಮಾತ್ರವಲ್ಲದೆ, ಬೀಳಗಿ, ಜಮಖಂಡಿ ತಾಲ್ಲೂಕುಗಳ ರೈತರೂ ಈ ಪದ್ಧತಿಗೆ ಮಾರು ಹೋಗಿದ್ದಾರೆ.

ಜೋಡೆತ್ತಿನ ಬದಲು ಒಂದೇ ಎತ್ತಿನ ಕೃಷಿಯಿಂದ ವರ್ಷಕ್ಕೆ ಕನಿಷ್ಠ 10 ಸಾವಿರ ರೂಪಾಯಿಯಷ್ಟು ಬಾಡಿಗೆ ಉಳಿಯುತ್ತದೆ, ಇನ್ನೊಂದು ಎತ್ತು ಖರೀದಿಸುವ ಮತ್ತು ಸಾಕುವ ಖರ್ಚು ಕಡಿಮೆಯಾಗುತ್ತದೆ. ಹೀಗೆ ಎರಡು ರೀತಿಯ ಲಾಭ ಗಳಿಸಬಹುದು ಎಂದು ಜಾಹ್ನವಿ ಹೇಳುತ್ತಾರೆ.

ಕಬ್ಬಿನ ಹೊಲದಲ್ಲಿ ಎರಡು ಎತ್ತಿನಿಂದ ಯಡೆ ಹೊಡೆಯುವುದು ಬೆಳೆ ಸಣ್ಣದಿದ್ದಾಗ ಮಾತ್ರ ಸಾಧ್ಯ. ಬೆಳೆ ದೊಡ್ಡದಾದಂತೆ ಎರಡು ಎತ್ತುಗಳು ಬೆಳೆಯಲ್ಲಿ ಹೋದರೆ ನೊಗಕ್ಕಿಂತ ಕಬ್ಬು ಎತ್ತರವಾಗಿರುತ್ತದೆ. ಮುರಿದುಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

 ಆದರೆ ಒಂದೆತ್ತಿನಿಂದ ಉಳುಮೆ ಮಾಡಿದರೆ ಅನೇಕ ಅನುಕೂಲ ಇದೆ. ಎತ್ತು ಎರಡು ಸಾಲುಗಳ ಮಧ್ಯದಲ್ಲಿ ಹೋಗುವದರಿಂದ ಬೆಳೆ ನೆಲಕ್ಕೆ ಬೀಳುವುದಿಲ್ಲ. ಬಿತ್ತಲು, ಗಳೆ ಹೊಡೆಯಲು, ಸಾಲು ಕೊರೆಯಲು, ದಿಂಡು ಹೊಡೆಯಲು, ಬೋದ ಏರಿಸಲು, ಯಡೆ ಹೊಡೆಯಲು, ರೆಂಟೆ ಹೊಡೆಯಲು ಸೇರಿದಂತೆ ಕೃಷಿಯ ಎಲ್ಲ ಕೆಲಸಕ್ಕೂ ಒಂದೇ ಎತ್ತು ಸಾಕು. ಬೆಳೆಗಳಲ್ಲಿನ ಕಸ ತೆಗೆಯಲು ಈ ವಿಧಾನ ಹೇಳಿ ಮಾಡಿಸಿದಂತಿದ್ದು, ಆಳುಗಳ ಖರ್ಚು ಕಡಿಮೆಯಾಗುತ್ತದೆ. 

ಇನ್ನು ಒಂಟೆತ್ತಿನ ಕೃಷಿಗಾಗಿ ಅದಕ್ಕೆಂದೇ ತಯಾರಿಸಲಾದ ಸಲಕರಣೆಗಳು ಬೇಕು. ಇವನ್ನು ಮಹಾಲಿಂಗಪುರದ ವಿಠ್ಠಲ ಬಡಿಗೇರ ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸ್ದ್ದಿದಾರೆ. ಇದರಲ್ಲಿ ಎಲ್ಲ ಕೆಲಸಕ್ಕೂ ಒಂದೇ ದಿಂಡು ಇದ್ದರೆ ಸಾಕು. ಅದಕ್ಕೇ ಈಸು, ನೊಗ ಎಲ್ಲವನ್ನು ಮುಂಚೆಯೇ ಅಳವಡಿಸಲಾಗಿರುತ್ತದೆ.

ಆಯಾ  ಕೆಲಸಕ್ಕೆ ಬಳಕೆಯಾಗುವಂತೆ ಕುಡಗಳನ್ನು ಬದಲಾಯಿಸಲು ನಟ್ ಬೋಲ್ಟ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದನ್ನು ಬಳಸುವ ಕೃಷಿಕರೇ ಹೇಳುವಂತೆ ಇದೊಂದು ಮಿನಿ ಟ್ರಾಕ್ಟರ್ ಇದ್ದಂತೆ. ಸಣ್ಣ ರೈತರಿಗಂತೂ ವರದಾನ.

ಸಲಕರಣೆಗಳ ಮಾಹಿತಿ ಹಾಗೂ ಬಳಕೆ ವಿಧಾನಕ್ಕಾಗಿ 78290 92025, 94481 43986 ಸಂಖ್ಯೆಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT