ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಅಕ್ಕಿ ನವರ

Last Updated 21 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

`ನಮ್ಮ ಭಾಗದ ರೈತರಂತೆ ನಾನೂ ಸಹ ಭತ್ತ ಬೆಳೆಯುತ್ತಿದ್ದೇನೆ. ಆದರೆ ನನಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಏಕೆಂದರೆ ಈ ಭತ್ತದ ಅಕ್ಕಿಗೆ ಬಹಳ ಬೇಡಿಕೆ. ನಾನು ಬೆಳೆದ ಅಕ್ಕಿ ಗ್ರಾಹಕರಿಗೆ ಇಷ್ಟರಲ್ಲೆೀ ಕೈಸೇರಲಿದೆ~ ಎಂದು ಹೇಳುವ ಚಿದಾನಂದಪ್ಪ ಅಂಗಡಿ, ಇಳುವರಿ ಬರುವ ಮುನ್ನವೇ ಮಾರುಕಟ್ಟೆ ರೂಪಿಸಿಕೊಂಡ ಜಾಣ ರೈತ.

ಅವರು ಬೆಳೆಯುತ್ತಿರುವುದು `ನವರ~ ಎಂಬ ದೇಸಿ ತಳಿ ಭತ್ತ. ಇದು ಔಷಧೀಯ ಗುಣ ಹೊಂದಿದೆ. ಹೀಗಾಗಿ ಇತ್ತೀಚೆಗೆ ಅಧಿಕ ಬೇಡಿಕೆ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಹಲವು ರೈತರು ಈ ಸಾಂಪ್ರದಾಯಿಕ ಭತ್ತ ಬೆಳೆಯುತ್ತಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಹೊಸಳ್ಳಿ ಕ್ಯಾಂಪ್‌ನ ರೈತ ಚಿದಾನಂದಪ್ಪ ಕಳೆದ ವರ್ಷವೂ ಈ ತಳಿ ಬೆಳೆದ್ದ್ದಿದರು. ಉತ್ತಮ ದರ ಹಾಗೂ ಗ್ರಾಹಕರಿಂದ ದೊರೆತ ಉತ್ತೇಜನದಿಂದಾಗಿ ಮುಂದೆ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಮನಸ್ಸು ಮಾಡಿದ್ದಾರೆ.

ನೂರು ದಿನಗಳ ಅವಧಿಯ  `ನವರ~  ವರ್ಷದ ಎಲ್ಲ ಕಾಲದಲ್ಲೂ ಬೆಳೆಯುವಂತಹದ್ದು. ಮೂಲತಃ ಇದು ಕೇರಳದ ತಳಿ. ಆಯುರ್ವೇದದಲ್ಲಿ ಈ ಅಕ್ಕಿಯನ್ನು `ಚೈತನ್ಯದಾಯಕ, ದುರ್ಬಲ ದೇಹಕ್ಕೆ ಔಷಧಿ~ ಎಂದೆಲ್ಲ ಬಣ್ಣಿಸಲಾಗಿದೆ. ಇದರಲ್ಲಿನ ಔಷಧೀಯ ಗುಣ ಅರಿತುಕೊಂಡಿರುವ ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಕೇಂದ್ರವು, ರೈತರಲ್ಲಿ ಈ ತಳಿ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದೆ. `ನವರ~ದಲ್ಲಿ ಕಪ್ಪು ಮತ್ತು ಬಿಳಿ ಸಿಪ್ಪೆಯ ಎರಡು ತಳಿಗಳಿವೆ. ಕಪ್ಪು ಸಿಪ್ಪೆಯ ನವರದ ಅಕ್ಕಿ ಕೆಂಪಾಗಿರುತ್ತವೆ. ಸಸಿಗಳು ಬೇಗ ಬೆಳೆಯುವುದರಿಂದ 20 ದಿನದೊಳಗೆ ಗದ್ದೆಯಲ್ಲಿ ನಾಟಿ ಮಾಡಬೇಕು. ಉಳಿದ ತಳಿಗಳಿಗೆ ಹೋಲಿಸಿದರೆ ಹೊಡೆ (ತೆನೆ)ಗಳ ಸಂಖ್ಯೆ ಕಡಿಮೆ.

`ಮೊದಲ ಬಾರಿಗೆ ಸಾವಯವ ವಿಧಾನದಲ್ಲಿ ಬೆಳೆದಿದ್ದರಿಂದ ಎಕರೆಗೆ 6 ಕ್ವಿಂಟಾಲ್ ಇಳುವರಿ ಬಂತು. 65 ರೂಪಾಯಿಗೆ ಒಂದು ಕಿಲೊದಂತೆ ಮಾರಿದ್ದರಿಂದ 6 ಕ್ವಿಂಟಲ್‌ಗೆ 39 ಸಾವಿರ ರೂಪಾಯಿ ಆದಾಯ ದೊರೆಯಿತು. ಇಳುವರಿ ಕಡಿಮೆ ಇದ್ದರೂ ಹೆಚ್ಚು ದರ ಸಿಕ್ಕಿದ ಕಾರಣ ನನಗೆ ಲಾಭವೇ ಆಯಿತು~ ಎನ್ನುತ್ತಾರೆ ಚಿದಾನಂದಪ್ಪ.

ಸ್ಥಳೀಯ ಭತ್ತದ ತಳಿ ವೈವಿಧ್ಯ ಸಂರಕ್ಷಣೆಗೆ ಯತ್ನಿಸುತ್ತಿರುವ ಸಿಂಧನೂರು ತಾಲೂಕಿನ ಕಲ್ಲೂರು ಗ್ರಾಮದ ಜಂಬನಗೌಡ ಅವರಿಂದ ಪ್ರೇರಣೆ ಪಡೆದ ಚಿದಾನಂದಪ್ಪ 2 ವರ್ಷದ ಹಿಂದೆ  ಮೈಸೂರು ಮಲ್ಲಿಗೆ  ತಳಿ ಬೆಳೆದಿದ್ದರು. ಕಳೆದ ವರ್ಷ ಸಾವಯವ ಕೃಷಿಯಲ್ಲಿ ಔಷಧಿ ತಳಿ  `ನವರ~  ಬೆಳೆಯಲು ನಿರ್ಧರಿಸಿದರು. ಅವರ ಹೊಲದಲ್ಲಿ ಹತ್ತಾರು ವರ್ಷಗಳಿಂದ ನೀರು ನಿಂತು ಜೌಗು ರೂಪ ಪಡೆದಿತ್ತು. ಅದಕ್ಕಾಗಿ ನೀರು ಹೊರ ಹೋಗಲು ಬಸಿಗಾಲುವೆ ಮಾಡಿದರು. ಹಸಿರೆಲೆ ಗೊಬ್ಬರಕ್ಕಾಗಿ ಡಾವಿಂಚಿ, ಪೀಳಿ ಪಿಸರೆ ಸಸ್ಯ ಹಾಗೂ ಅಜೋಲಾ ಕೂಡಾ ಹಾಕಿದ್ದಾರೆ.

ಪ್ರಯೋಗ
 `ಈ ಅಕ್ಕಿಯ ಅನ್ನ ಉಂಡರೆ ಕೀಲುನೋವು ಗುಣಮುಖವಾಗುತ್ತದೆ ಎಂಬ ಮಾಹಿತಿ ಗೊತ್ತಾಗಿತ್ತು.  ನವರದ ಅನ್ನ ಉಂಡ ಕೆಪಿಸಿ ಕಾಲೋನಿಯ ಮಹಿಳೆಯೊಬ್ಬರಿಗೆ ಕೀಲುನೋವು ಕಡಿಮೆ ಆಗಿದೆ ಎಂಬ ಸುದ್ದಿ ತಿಳಿಯಿತು. ಹೀಗಾಗಿ ಅಕ್ಕಿಯನ್ನು ಕಾಯಿಲೆಯಿಂದ ಬಳಲುತ್ತಿದ್ದ ಕೆಲ ಪರಿಚಯಸ್ಥರಿಗೆ ನೀಡಿದೆ. ಫಲಿತಾಂಶ ಅಚ್ಚರಿ ತಂದಿತು.

ಹೀಗಾಗಿ ಮುಂದಿನ ಹಂಗಾಮಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ನಿರ್ಧಾರ ಮಾಡಿದ್ದೇನೆ~ ಎನ್ನುತ್ತಾರೆ ಚಿದಾನಂದಪ್ಪ. ಅದಕ್ಕಾಗಿ ಜೀವಾಮೃತ, ಹಸಿರೆಲೆ ಗೊಬ್ಬರ, ಅಜೋಲಾ ಸಂಗ್ರಹ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.

ಮಾರುಕಟ್ಟೆ
ಭತ್ತ ಮಾರಾಟದ ಬದಲಿಗೆ ಅದನ್ನು ಅಕ್ಕಿ ಮಾಡಿ ಮಾರುವ ಚಿದಾನಂದಪ್ಪ ಅವರ ಪ್ರಯತ್ನ ಸಾಕಷ್ಟು ಪರಿಶ್ರಮದ ನಂತರ ಸಫಲವಾಗಿದೆ.

`ಸಿಂಧನೂರು, ಗಂಗಾವತಿಯ ಡೈಮಂಡ್ ಸೋನಾ ಅಕ್ಕಿ ಪ್ರಸಿದ್ಧಿ ಪಡೆದಿದೆ.ಇದನ್ನು ಬಳಸುವವರಿಗೆ ನವರ  ಅಕ್ಕಿಯ ವೈಶಿಷ್ಟ್ಯ ಹಾಗೂ ಔಷಧಿಯ ಗುಣದ ಕುರಿತು ಮಾಹಿತಿ ಕೊಟ್ಟೆ. ಆದರೂ ಖರೀದಿಗೆ ಯಾರೂ ಮುಂದೆ ಬರಲಿಲ್ಲ. ಅದಕ್ಕಾಗಿ ನಾನು ಸಾವಯವ ಕೃಷಿ ಪರಿವಾರದ ಸಭೆಗಳನ್ನು ಆಯ್ಕೆ ಮಾಡಿಕೊಂಡೆ. ಅಕ್ಕಿ ಒಯ್ದು ಕೆಲವರಿಗೆ ಇದನ್ನು ಕೊಟ್ಟೆ. ಅವರಿಗೂ ಪರಿಣಾಮ ಗೊತ್ತಾಯಿತು. ಸಾವಯವ ಪರಿವಾರದ ಸ್ನೇಹಿತರಿಂದ ಸಹಜ ಸಮದ್ಧ  ಬಳಗದವರ ಪರಿಚಯ ಆಯಿತು. ಅವರು ಎಲ್ಲ ಅಕ್ಕಿ ತಾವೇ ಖರೀದಿ ಮಾಡುತ್ತೇವೆ ಎಂದರು. ಕೇವಲ 3 ಕ್ವಿಂಟಲ್ ಅಕ್ಕಿ ಮಾತ್ರ ಅವರಿಗೆ ಮಾರಿದೆ.  ಹೈಬ್ರಿಡ್ ಅಕ್ಕಿಗಿಂತ ಎರಡು ಪಟ್ಟು ಬೆಲೆ ಸಿಕ್ಕಿದೆ. ಪೌಷ್ಟಿಕಾಂಶವಿಲ್ಲದ ಅಕ್ಕಿ ತಿನ್ನುವುದಕ್ಕಿಂತ ರುಚಿಯಾದ ಈ ಅಕ್ಕಿ ಒಳ್ಳೆಯದು ಎಂದು ಬೆಂಗಳೂರಿನ ಗ್ರಾಹಕರು ದೂರವಾಣಿ ಕರೆ ಮಾಡಿ ಹೇಳಿದ್ದಾರೆ.  ಬೇಡಿಕೆ ಇರುವ ಈ ತಳಿಯನ್ನು ಹೆಚ್ಚು ಖರ್ಚಿಲ್ಲದೆ ಸಾವಯವ ವಿಧಾನದಲ್ಲಿ ಬೆಳೆದಿದ್ದೆನೆ. ಮಾರುಕಟ್ಟೆ ಸಮಸ್ಯೆ ಈಗ ಇಲ್ಲ. ಗ್ರಾಹಕರು ಹುಡುಕಿಕೊಂಡು ಬರುತ್ತಿದ್ದಾರೆ~ ಎಂಬ ಆತ್ಮವಿಶ್ವಾಸದ ಮಾತು ಚಿದಾನಂದಪ್ಪ ಅವರದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT