ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೋಸ್ಟ್‌ ತಯಾರಿಗೆ ವೈಜ್ಞಾನಿಕ ವಿಧಾನ

Last Updated 21 ಮಾರ್ಚ್ 2016, 19:48 IST
ಅಕ್ಷರ ಗಾತ್ರ

ಕಾಂಪೋಸ್ಟ್‌ ತಯಾರಿ ಒಂದು ಕಲೆ. ಪಾಕಶಾಲೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರು ಮಾಡಲು ಯಾವ ಯಾವ ಪದಾರ್ಥಗಳನ್ನು ಎಷ್ಟೆಷ್ಟು ಹಾಕಬೇಕು ಎಂಬುದು ತಿಳಿಯದೇ ಇದ್ದರೆ ಪದಾರ್ಥ ಕೆಟ್ಟು ಹೋಗುತ್ತದೆ. ಆದರೆ ಕಾಂಪೋಸ್ಟ್ ತಯಾರಿಯಲ್ಲಿ ಮಾತ್ರ ರೈತರು ತೋರುವ ಉದಾಸೀನತೆ ಮತ್ತು ತಿಳಿವಳಿಕೆ ಕೊರತೆ ಅವರ ಫಲವತ್ತಾದ ಜಮೀನನ್ನು ಬರಡು ಮಾಡುತ್ತದೆ.

ಕಾಂಪೋಸ್ಟ್‌ ಮಾಡುವುದು ಎಂದರೆ ಮನಸ್ಸಿಗೆ ಬಂದಂತೆ ಗುಂಡಿ ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರದಿಂದ ಹಿಡಿದು ಪರಿಸರದಲ್ಲಿ ದೊರೆಯುವ ಕಳೆ, ಕಸ, ಕಡ್ಡಿ, ಬೂದಿ ಮುಂತಾದವುಗಳನ್ನು ಹಲವು ದಿನ ತುಂಬಿ ಒಂದೆರಡಡಿ ಎತ್ತರಕ್ಕೆ ಬೆಳೆದ ನಂತರ ಮುಚ್ಚಿಯೋ ಅಥವಾ ಮಣ್ಣು ಮೆತ್ತಿ ಕೆಲವು ತಿಂಗಳು ಬಿಡುವುದು. ಕಾಂಪೋಸ್ಟ್‌ ಗುಂಡಿಯಲ್ಲಿ ತೇವಾಂಶ ಎಷ್ಟಿರಬೇಕು, ಸೆಗಣಿ ಮತ್ತಿತರ ತ್ಯಾಜ್ಯವಸ್ತು, ಹಸಿರೆಲೆ ಪ್ರಮಾಣ ಎಷ್ಟಿರಬೇಕು ಎಂಬ ನಿಯಮಗಳಿಲ್ಲ.

ಕಾಂಪೋಸ್ಟ್‌ ಗುಂಡಿಯಲ್ಲಿ ಉತ್ಪತ್ತಿಯಾಗುವ ಶಾಖ ಗೊತ್ತಾಗುವುದಿಲ್ಲ. ಇಂತಹ ಗುಂಡಿಗಳಲ್ಲಿ ಹಾಕಿದ ಗೊಬ್ಬರ ತ್ಯಾಜ್ಯವಸ್ತು ಹೆಚ್ಚಿನ ಶಾಖಕ್ಕೆ ತುತ್ತಾಗಿ ಅಲ್ಲಿರುವ ಜೀವಾಣುಗಳೆಲ್ಲ ಸತ್ತು ಗಸೆಯಾಗುತ್ತವೆ. ಮೇಲ್ಪದರದಲ್ಲಿ ಸರಿಯಾದ ಪ್ರಮಾಣದ ತೇವಾಂಶ ಇಲ್ಲದೆ, ಶಾಖವೂ ಸಾಲದೆ, ಕಳಿಯದೆ ಹಾಗೇ ಉಳಿಯುತ್ತದೆ. ಹಾಲು ಮೊಸರಾಗುವ ಪ್ರಕ್ರಿಯೆ ರೀತಿಯೇ ಕಾಂಪೋಸ್ಟ್‌ ಸೂಕ್ಷ್ಮ ಜೀವಿಗಳಿಂದ ನಡೆಯುವ ಕ್ರಿಯೆ.

ಈ ನಿಟ್ಟಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಸಾವಯವ ಗೊಬ್ಬರವನ್ನು ರೈತರ ತೋಟದಲ್ಲೇ ತಯಾರಿಸಿಕೊಳ್ಳಬಹುದು. ಗುಣಮಟ್ಟದ ಪ್ರಾಣಿಜನ್ಯ ಗೊಬ್ಬರ ಕೊರತೆ, ಸಮಯದ ಅಭಾವ, ಕಾರ್ಮಿಕರ ಸಮಸ್ಯೆ, ತಾಂತ್ರಿಕತೆಯ ಅರಿವಿನ ಕೊರತೆ ಹಲವು ರೈತರನ್ನು ಕಾಡುವ ಸಾಮಾನ್ಯ ಸವಾಲುಗಳು.

ರೈತರ ತೋಟದಲ್ಲೇ ದೊರೆಯುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಕಾಂಪೋಸ್ಟ್‌ ತಯಾರು ಮಾಡಬಹುದು. ಕಾಫಿ, ಮೆಣಸು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಅಗತ್ಯಕ್ಕಿಂತ ಭಾರಿ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಭೂಮಿ ದುರಸ್ತಿ ಮಾಡಲಾಗದಷ್ಟು ಹಾನಿ ಮಾಡಿಕೊಂಡವರಿದ್ದಾರೆ. ಇದಕ್ಕೆಲ್ಲ  ಇರುವ ಒಂದೇ ಉಪಾಯವೆಂದರೆ ಸಾವಯವ ಗೊಬ್ಬರ ಬಳಸಿ ಮುಂದಿನ ಪೀಳಿಗೆಗೆ ಭೂಮಿ ಉಳಿಸುವುದು.

ಹಸಿರು ಆರ್ಗಾನಿಕ್ಸ್‌ ಅಭಿಯಾನ: ಕಾಂಪೋಸ್ಟ್‌ ತಯಾರಿಯಲ್ಲಿ 20 ವರ್ಷಗಳ ಅನುಭವ ಇರುವ ಮೂಡಿಗೆರೆ ಸಮೀಪದ ಹಸಿರು ಆರ್ಗಾನಿಕ್ಸ್‌ ಕಂಪೆನಿ ರೈತರಿಗೆ ಮಾಹಿತಿ ನೀಡುತ್ತಿದೆ. ಕಾಂಪೋಸ್ಟ್‌ಗೆ ಬೇಕಾದ ಉತ್ತಮ ಗುಣಮಟ್ಟದ, ಪರೀಕ್ಷಿಸಿದ ಸೆಗಣಿ ಗೊಬ್ಬರ, ಕುರಿ ಗೊಬ್ಬರ, ತೆಂಗಿನ ನಾರು, ಕಾಡುಮಣ್ಣು, ಟ್ರೈಕೋಡರ್ಮಾ ಇವುಗಳನ್ನು ಒದಗಿಸುತ್ತದೆ. ಆದರೆ ಕಾಂಪೋಸ್ಟ್ ತಯಾರಿ ಸ್ಥಳ ಸಮತಟ್ಟಾಗಿದ್ದು, ನೆರಳಿರಬೇಕು. 60 ಅಡಿ ಉದ್ದ, 3 ರಿಂದ 4 ಅಡಿ ಎತ್ತರ ಮತ್ತು 3 ಅಡಿ ಜಾಗ ಬೇಕು.

ಹಸಿರು ಆರ್ಗಾನಿಕ್ಸ್‌ ತಯಾರಿಸುವ ಒಂದು ಕಾಂಪೋಸ್ಟ್‌ ಬೆಡ್‌ನಿಂದ 50 ಕೆ.ಜಿ. ಚೀಲದಂತೆ 400–500 ಚೀಲ ಗೊಬ್ಬರ ಪಡೆಯಬಹುದು. ಬೇರೆಡೆ ದೊರೆಯುವ ಚೀಲಗಳು 40 ಕೆ.ಜಿ ಇರುತ್ತವೆ. ಒಂದು ಚೀಲದ ಬೆಲೆ ಸದ್ಯ ಮಾರುಕಟ್ಟೆಯಲ್ಲಿ ₹600 ಇದೆ. 450 ಚೀಲಗಳ ಬೆಲೆ ₹ 2.70 ಲಕ್ಷ. ರೈತರೇ ತೋಟದಲ್ಲಿ ಗೊಬ್ಬರ ತಯಾರಿಸಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಅಲ್ಲದೇ ಗುಣಮಟ್ಟ ಇರುತ್ತದೆ.

ಕಾಂಪೋಸ್ಟ್ ಬೆಡ್‌ ತಿರುಗಿಸಲು ಮತ್ತು ಟ್ರೈಕೋಡರ್ಮಾ ಹಾಕಲು ಕಂಪೆನಿಯ ಸಿಬ್ಬಂದಿ ರೈತರಿಗೆ ನೆನಪಿಸುತ್ತಾರೆ. ಒಟ್ಟಾರೆ ತಯಾರಿಯಿಂದ ಹಿಡಿದು ಗಿಡಗಳಿಗೆ ಚೆಲ್ಲುವವರೆಗೆ ಸಿಬ್ಬಂದಿ ರೈತರ ಸಂಪರ್ಕದಲ್ಲಿರುತ್ತಾರೆ. ಅಲ್ಲದೆ ಕಾಂಪೋಸ್ಟ್ ಕಳಿತು ತಯಾರಾದ ನಂತರ ಅದರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗುತ್ತದೆ. ಮಾದರಿ ದೃಢೀಕರಣ ನೀಡಲಾಗುತ್ತದೆ.

ರೈತರು ತಮ್ಮದೇ ತೋಟದಲ್ಲಿ ತಯಾರಾದ ಸಾವಯವ ಗೊಬ್ಬರವನ್ನು ಕಾಫಿ, ಮೆಣಸು, ಅಡಿಕೆ, ಶುಂಠಿ, ಏಲಕ್ಕಿ, ಹೂತೋಟ, ಹಣ್ಣಿನ ಬೆಳೆ ಮುಂತಾದವುಗಳಿಗೆ ಬಳಸಬಹುದು. ಮತ್ತು ಎರಡು ವರ್ಷಗಳ ಕಾಲ ಇಟ್ಟುಕೊಳ್ಳಬಹುದು.

ಮಾರುಕಟ್ಟೆಗಳಲ್ಲಿ ದೊರೆಯುವ ಸಾವಯವ ಗೊಬ್ಬರಕ್ಕೆ ಏನೇನು ಬಳಸಿರುತ್ತಾರೆ ಎಂಬುದು ತಿಳಿಯುವುದಿಲ್ಲ. ಪ್ಲಾಸ್ಟಿಕ್‌, ಆಸ್ಪತ್ರೆ ತ್ಯಾಜ್ಯ, ಕಬ್ಬಿನ ತ್ಯಾಜ್ಯ, ಕಾಕಂಬಿಯಂತಹ ಪದಾರ್ಥಗಳು ರಾಸಾಯನಿಕಯುಕ್ತವಾಗಿರುತ್ತವೆ. ಇವು ಮಣ್ಣನ್ನು ಇನ್ನಷ್ಟು ಹಾನಿ ಮಾಡುತ್ತವೆ. ಆದರೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ಗೊಬ್ಬರ ಮಾಡಿದರೆ ಬೆಳೆಗೆ ಬೇಕಾದ ಪೂರ್ಣ ಪೋಷಕಾಂಶ ದೊರೆಯುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟಿ, ಭೂಮಿಯ ಉತ್ಪಾದಕತೆ ಹೆಚ್ಚುತ್ತದೆ.

ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಪೌಷ್ಟಿಕಾಂಶ ಕಡಿಮೆಯಾದರೆ ತೇವಾಂಶ ದೊರೆಯುವುದಿಲ್ಲ. ಮಣ್ಣಿನ ಸಾಂದ್ರತೆ ಹೆಚ್ಚಾಗಿ ಮಣ್ಣು ಗಟ್ಟಿಯಾಗುತ್ತದೆ. ಆಗ ಭೂಮಿ ರೋಗ ರುಜಿನ ನಿಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತದೆ.

ಕೇವಲ ಸೆಗಣಿ ಅಥವಾ ಹಿಕ್ಕೆಯನ್ನು ನೇರವಾಗಿ ಭೂಮಿಗೆ ಹಾಕಿದಾಗ ದೊರಕುವ ಪೌಷ್ಟಿಕಾಂಶ ಸರಿಯಾದ ಪ್ರಮಾಣದಲ್ಲಿ ಕಾಂಪೋಸ್ಟ್‌ನ ಪೌಷ್ಟಿಕಾಂಶಕ್ಕಿಂತ ಕಡಿಮೆ. ರೈತರಿಗೆ ಕೃಷಿ ವೆಚ್ಚ ಹೆಚ್ಚಾಗಲು ಹೊರಗಿನಿಂದ ಸಾವಯವ ಗೊಬ್ಬರ ತರುವುದು. ಆದರೆ ಇಂದು ಕಾಫಿ ತೋಟಗಳಲ್ಲಂತೂ ಟನ್‌ಗಟ್ಟಲೆ ಹಸಿರೆಲೆ ಗೊಬ್ಬರ ದೊರೆಯುತ್ತದೆ. ಇವನ್ನೆಲ್ಲ ರೈತರು ಬಳಸದೆ ಹಾಳು ಮಾಡುತ್ತಾರೆ.

ಕಾಂಪೋಸ್ಟ್ ಮಾಡುವಾಗ ಶ್ರಮವಹಿಸಬೇಕು. ಸಾಮಗ್ರಿಗಳ ಸಂಗ್ರಹ ಮಾಡಿಕೊಳ್ಳಬೇಕು. ಗೊಬ್ಬರ ಕಳಿತು, ಕೊಳೆತು ‘ಹ್ಯೂಮಸ್‌’ ಆಗಬೇಕಾದರೆ ಗಮನ ನೀಡಬೇಕು. ಜೈವಿಕ ಕ್ರಿಯೆಗೆ ಅಗತ್ಯವಾದ  ಇಂಗಾಲ, ಆಮ್ಲಜನಕದ ಪ್ರಮಾಣ ಸಮತೋಲನ ಮಾಡಬೇಕು.  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 08363 220473, 9148206300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT