ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 24 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

* ರಾಮದಾಸಯ್ಯ,  ಮೈಸೂರು
ಕಳೆದ ವರ್ಷ ತೆಂಗಿನ ಮರಗಳ ನಡುವೆ ಅರಿಶಿಣ ಬಿತ್ತಿದ್ದೆವು. ಈ ವರ್ಷ ಅರಿಶಿಣದ ಜಾಗದಲ್ಲಿ ಶುಂಠಿ ಬೆಳೆಯಬಹುದೆ?
ಉ: ಖಂಡಿತವಾಗಿಯೂ ಬೆಳೆಸಬಹುದು.

* ಮಧು, ಬೆಂಗಳೂರು
ಹೆಬ್ಬೇವಿನ ನಡುವೆ ದಾಳಿಂಬೆ ಬೆಳೆಯಬಹುದೆ?
ಉ: ದಾಳಿಂಬೆಗೆ ಅಪಾರವಾದ ಸೂರ್ಯನ ಬೆಳಕು (ಬಿಸಿಲು) ಅವಶ್ಯ. ಹೆಬ್ಬೇವಿನ ಅಂತರ ತಿಳಿಸಿಲ್ಲವಾದರೂ ದಾಳಿಂಬೆ ಗಿಡಕ್ಕೆ ದಿನಕ್ಕೆ 8 ಗಂಟೆ ಬಿಸಿಲು ದೊರೆಯುವ ರೀತಿ ಬೆಳೆಯಬಹುದು.

* ಮಲ್ಲಣ್ಣ, ಬಳ್ಳಾರಿ
ಮಲ್ಲಿಗೆ ಚಿಗುರು ಒಡೆದಾಗ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ, ನಿಯಂತ್ರಣ ಹೇಗೆ?
ಉ: 10 ದಿನಕ್ಕೊಮ್ಮೆ ಒಂದು ಲೀಟರ್  ಗಂಜಲ (ಗೋಮೂತ್ರ), 10ಗ್ರಾಂ ಮೈಲುತುತ್ತವನ್ನು * ಲೀಟರ್  ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಿರಿ.

* ಗಣೇಶ, ಹಲಗೂರು
ಪರಿಸರ ವಿಕೋಪ ಅಥವಾ ಪ್ರಾಣಿ ಹಾವಳಿ ಇತ್ಯಾದಿಗಳಿಂದ ತೊಂದರೆ ಆದ ಸಂದರ್ಭಗಳಲ್ಲಿ ಪ್ರಯೋಜನ ಆಗುವ ರೀತಿ ಬಾಳೆ ಗಿಡಕ್ಕೆ ವಿಮೆ ಎಲ್ಲಿ ಮಾಡಿಸಬೇಕು.
ಉ: ನಿಮ್ಮ ಸಮೀಪದ ತೋಟಗಾರಿಕೆ ಇಲಾಖೆಯವರನ್ನು ಅಥವಾ ಯಾವುದಾದರೂ ವಿಮೆ ಕಂಪೆನಿಯವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

* ಶ್ರೀಧರ ಎನ್‌.ಎಮ್‌. ಕಾರವಾರ
ಹಂದಿ ಸಾಕಣೆ ಲಾಭದಾಯಕವೇ? ಇವುಗಳ ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಡಿ.
ಉ: 1 ಕೆ. ಜಿ ಹಂದಿ ಮಾಂಸ ಉತ್ಪಾದನೆಗೆ 16,500 ಲೀಟರ್‌ ನೀರಿನ ಬಳಕೆಯಾಗುತ್ತದೆ. ಅದೇ 1 ಕೆ.ಜಿ. ಮೂಲಂಗಿ ಬೆಳೆಯಲು 60 ಲೀಟರ್ ನೀರು ಸಾಕು!

ಯಾವುದಾದರೂ ಕಾರ್ಖಾನೆ, ಕ್ಯಾಂಟೀನ್‌, ಹೋಟೆಲ್‌, ಕಲ್ಯಾಣ ಮಂಟಪಗಳ ಉಳಿಕೆ ಆಹಾರ ಪುಕ್ಕಟೆ ದೊರೆಯುವಂತಿದ್ದರೆ ಹಂದಿ ಸಾಕಲು ಹೆಚ್ಚು ಲಾಭದಾಯಕ. ಮಾರುಕಟ್ಟೆಯಲ್ಲಿ ದೊರೆಯುವ ಉಳಿದ ಹಣ್ಣು ತರಕಾರಿಯೂ ಆದೀತು.

* ಸತ್ಯನಾರಾಯಣ, ಸಾಗರ
ನಾನು ದೊಡ್ಡ ಪ್ರಮಾಣದಲ್ಲಿ ಎರೆ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಉತ್ಪಾದಿಸಬೇಕೆಂದಿರುವೆ. ಇದಕ್ಕೆ ಸರ್ಕಾರದಿಂದ ಸಹಾಯ ದೊರೆಯುತ್ತದೆಯೇ? ಗೊಬ್ಬರ ಮಾರಾಟ ಲಾಭದಾಯಕವೇ?
ಉ: ಖಾದಿ – ಗ್ರಾಮೋದ್ಯೋಗ ಮಂಡಳಿಯವರಿಂದ ಕೃಷಿ ಇಲಾಖೆಯವರ ಮೂಲಕ ಸಹಾಯ ಧನ ದೊರೆಯುವುದು. ನನ್ನ ಅನುಭವದ ಪ್ರಕಾರ ಶ್ರದ್ಧೆ ಹಾಗೂ ತಿಳಿವಳಿಕೆಯಿಂದ ಮಾಡುವ ಎಲ್ಲ ವೃತ್ತಿಗಳೂ ಲಾಭದಾಯಕವೇ.

* ಮರಿಗೌಡ ತಿಮ್ಮೇಗೌಡ, ಬೀದರ್
ಸುಮಾರು 25 ವರ್ಷಗಳ ಮರಗಳಿರುವ ಎರಡು ಎಕರೆ ತೆಂಗಿನ ತೋಟವಿದೆ. ಈ ಮರಗಳಲ್ಲಿ ಅಲ್ಲಲ್ಲಿ ಕೆಂಪಗೆ ಮತ್ತು ಕಪ್ಪಗೆ ರಸ ಸೋರುತ್ತದೆ. ಇದರಿಂದಾಗಿ ಎರಡು ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ.ಇದಕ್ಕೆ ಏನು ಮಾಡಬೇಕು?
ಉ: ನಿಮ್ಮ ಪರಿಸರದಲ್ಲೆಲ್ಲಾ ಹೆಚ್ಚು ನೀರಾವರಿ ಪ್ರದೇಶವಿದ್ದರೆ ಹೀಗಾಗಬಹುದು. ಆದರೂ ಈ ಬಾಧೆ ಕಂಡ ಕೂಡಲೇ ಸ್ವಚ್ಛ ಮಾಡಿ ಬೋರ್ಡೊ ಅಂಟನ್ನು ಹಚ್ಚಿ. ಲಾಭವಾಗಬಹುದು.

* ಸಾಬಣ್ಣ ಮುಲ್ಲಣ್ಣ, ಕುಮಟಾ
ನಾನು ಕಾಳು ಮೆಣಸು ಬೆಳೆಯುತ್ತಿದ್ದೇನೆ. ಹೊಸದಾಗಿ ಕೆಲವು ಸಸಿಗಳನ್ನು ಹಾಕಬೇಕಾಗಿದೆ. ಶೀಘ್ರವಾಗಿ ಸಸ್ಯಾಭಿವೃದ್ಧಿ ಮಾಡಿಕೊಳ್ಳುವುದು ಹೇಗೆ?
ಉ: ದಪ್ಪನೆಯ ಬಿದಿರಿನ 15 ಅಡಿ ಉದ್ದದ ತುಂಡನ್ನು
35 ಮತ್ತು 65ರಂತೆ ಸೀಳಿದ ಮೇಲೆ ದಪ್ಪದ ಪಾಲಿನ ಹೋಳಲ್ಲಿ ತೆಂಗಿನ ನಾರಿ ಪುಡಿ, ಎರೆಗೊಬ್ಬರ, ಕೆಮ್ಮಣ್ಣುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ತುಂಬಿಸಿ. ಕರಿಮೆಣಸಿನ ಪೊದೆಯ ಸಮೀಪ 40 ಡಿಗ್ರಿ ಓರೆಯಾಗಿ ನಿಲ್ಲಿಸಿ. ಒಂದು ಆರೋಗ್ಯವಾದ ಬಳ್ಳಿಯನ್ನು ಅದರ ಉದ್ದಕ್ಕೂ ಇಟ್ಟು ಬೀಳದಂತೆ ಪ್ರತಿ ಅಡಿ ದೂರಕ್ಕೊಮ್ಮೆ ಬಾಳೆ ನಾರಿನಿಂದ ಕಟ್ಟಿ ನೀರು ಕೊಡುತ್ತಿದ್ದರೆ 2 ತಿಂಗಳಲ್ಲಿ ಬೇರು ಬಿಟ್ಟು ಹುಲುಸಾಗಿ ಬೆಳೆದ ಮೇಲೆ  2 ಗೆಣ್ಣುಯಿರುವಂತೆ ಕತ್ತರಿಸಿ ಮಳೆಗಾಲದಲ್ಲಿ ನೆಡಬಹುದು.

* ಮನು ಎಚ್‌. ಬೀದರ್
ನಾನು ಅಣಬೆ ಬೆಳೆಯಬೇಕೆಂದಿದ್ದೇನೆ. ಅದರ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿ.
ಉ: ಬೆಂಗಳೂರಿನ ಸಮೀಪ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರಿಂದ ಅಣಬೆ ಬೆಳೆಗಾರರ ವಿಳಾಸ ಪಡೆದು ಆ ರೈತರಲ್ಲಿ ಒಂದು ವಾರವಿದ್ದು ಕಲಿಯಿರಿ.

* ಬಸವನಗೌಡ ಪಾಟೀಲ್‌. ಲೋಂಡಾ, ಬೆಳಗಾವಿ
ಕಬ್ಬು ಇಳುವರಿ ಕಡಿಮೆ ಬಂದಿದೆ. ಇಳುವರಿ ಹೆಚ್ಚು ಆಗಲು ಏನು ಮಾಡಬೇಕು?
ಉ: ನಿಪ್ಪಾಣಿ ಬಳಿಯ ಸುರೇಶ್‌ ದೇಸಾಯಿಯವರನ್ನು ಸಂಪರ್ಕಿಸಿ. ನಿಮ್ಮಲ್ಲಿ ಎಕರೆಗೆ 70 ಟನ್ನಿಗಿಂತ ಹೆಚ್ಚಿಗೆ ಬೆಳೆದ ಕಬ್ಬು ಬೆಳೆಗಾರರಿದ್ದಾರೆ. ಭೇಟಿ ಮಾಡಿ.

* ರಮ್ಯಮೂರ್ತಿ​, ರಾಮನಗರ
ಬಾತುಕೋಳಿ ಮರಿ ಮಾರಾಟ ಮಾಡುವ ಖಾಸಗಿ ಫಾರಂ ವಿಳಾಸ ಫೋನ್ ನಂಬರ್ ತಿಳಿಸಿ ಹೆಸರಘಟ್ಟದಲ್ಲಿರುವ ಕುಕ್ಕಟ ಪಾಲನೆ ಕೇಂದ್ರದವರಲ್ಲಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT