ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ತಂದ ಕೃಷಿ

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಅಂದು...
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹುಲಿಗುಡ್ಡದ ಗ್ರಾಮದ ಸುಮಾರು ನಾಲ್ಕು ಎಕರೆ ಜಮೀನು ಬಣಗುಡುತ್ತಿತ್ತು. ಈ ಜಮೀನಿಗೆ ಹೆಚ್ಚಿನ ಬೆಲೆ ಬರುವ ನಿರೀಕ್ಷೆಯಲ್ಲಿದ್ದರು ಮಾಲೀಕರು. ‘ಕೃಷಿ ಎಂದರೆ ಬರೀ ನಷ್ಟ, ಜೊತೆಗೆ ಕೂಲಿಯಾಳು ಕೊರತೆ. ಯಾರಿಗೆ ಬೇಕು ಇಲ್ಲಿ ಉಳುವ ಉಸಾಬರಿ...’ ಎಂದುಕೊಂಡಿದ್ದರವರು.

ಇಂದು...
ಒಂದೆಡೆ ಸೂರ್ಯಕಾಂತಿ, ಮೆಕ್ಕೆಜೋಳ, ಬೆಂಡೆ, ಚವಳೆ, ಮೆಂತ್ಯ, ಪಾಲಾಕ್, ಮೂಲಂಗಿ, ಸಬ್ಬಕ್ಕಿ, ಶೇಂಗಾ. ಇನ್ನೊಂದೆಡೆ ಮಾವು, ಸಪೋಟ, ತೆಂಗು, ಬಾಳೆ, ಪೇರಲ, ನೇರಳೆ, ನುಗ್ಗೆ, ನೆಲ್ಲಿ, ಸಾಗವಾನಿ, ಹೊಂಗೆ ಹಾಗೂ ಔಷಧಿ ಸಸ್ಯಗಳು ನಳನಳಿಸುತ್ತಿವೆ. ಜಮೀನು ಮಾರಾಟಕ್ಕಿಂತ ಹೆಚ್ಚಿನ ಲಾಭ ಕುಟುಂಬದ ಕೈ ಸೇರುತ್ತಿದೆ.

ಈ ಜಮೀನು ರಾಚಪ್ಪ ಚೆನ್ನಪ್ಪ ಆಲವಿಯ ಕುಟುಂಬದ್ದು. ಇವರ ಮೂಲ ಕಸುಬು ಜಿಲೇಬಿ ಮಾರುವುದು. ನಾನಾ ಕಾರಣಗಳಿಂದ ಕೃಷಿಯೇ ಬೇಡವೆಂದು ಕುಳಿತಿದ್ದ ಆಲವಿಯವರು, ಹೇಗೋ ಜಮೀನು ಲಿಂಗಸುಗೂರಿಗೆ ಹತ್ತಿರವಿದೆ, ಇದಕ್ಕೆ ಒಳ್ಳೆಯ ಬೆಲೆ ಬಂದೇ ಬರುತ್ತದೆ ಎಂದು ಮಾರಲು ನಿರ್ಧರಿಸಿದ್ದರು.

ಆದರೆ ಈ ಜಮೀನು ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಕಣ್ಣಿಗೆ ಬಿತ್ತು. ಇದನ್ನು ಸಮಗ್ರ ಕೃಷಿ ಪದ್ಧತಿ ತಾಕು ಆಗಿ ಮಾರ್ಪಾಡು ಮಾಡಬಹುದು ಎಂದು ಅಧಿಕಾರಿಗಳು ಆಲೋಚಿಸಿ ರಾಚಪ್ಪ ಅವರ ಜೊತೆ ಚರ್ಚಿಸಿದರು. ಕೃಷಿ ಕಡೆ ಬೆನ್ನು ಮಾಡಿದ್ದ ರಾಚಪ್ಪ ಅವರಿಗೆ ರಾಷ್ಟ್ರೀಯ ವಿಕಾಸ ಯೋಜನೆಯ ಸಮಗ್ರ ಕೃಷಿ ಪದ್ಧತಿ ಯೋಜನೆ  ಕುರಿತು ವಿವರಿಸಲಾಯಿತು. ಈ ಯೋಜನೆ ಅಡಿಯಲ್ಲಿ  ಏರ್ಪಡಿಸಿದ ತರಬೇತಿ ಹಾಗೂ ಅನುಭವ ಪಡೆದ ರೈತರ ಭೇಟಿಯೂ ನಡೆಯಿತು.

ಸ್ವಲ್ಪ ಶ್ರಮ ಪಟ್ಟರೆ ಕೃಷಿ ಒಂದು ಲಾಭದಾಯಕ ಕಸುಬು ಎಂದು ರಾಚಪ್ಪ ಅವರಿಗೆ ಅರಿವು ಆದದ್ದೇ ತಡ, ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಮುಂದಾದರು. ಇದರಿಂದಾಗಿ ಕಳೆದ ವರ್ಷ ಅವರು ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳದ ಜೊತೆಗೆ  ವಿವಿಧ ಬೆಳೆಗಳನ್ನು ಬೆಳೆದರು.

ಮಿಶ್ರ ಬೆಳೆ
ಒಂದು ಬೋದಿನ ಮಗ್ಗುಲಿನಲ್ಲಿ  ಮೆಕ್ಕೆಜೋಳ ಬೆಳೆದು ಅದರ ಜೊತೆಯಲ್ಲಿಯೇ ಮೆಂತ್ಯ ಬೆಳೆದಿದ್ದಾರೆ.  ಇದರಿಂದ ಲಾಭ ಮಾತ್ರವಲ್ಲದೇ ಕಳೆ ಹಾವಳಿಯೂ ಕಡಿಮೆಯಾಗಿದೆ ಎನ್ನುತ್ತಾರೆ ರಾಚಪ್ಪ ಅವರ ತಾಯಿ ಅನುಸೂಯ. ಶೇಂಗಾ ಬೆಳೆ ಬೋದಿನ ಮೇಲೆ ಮೂಲಂಗಿ ಬೆಳೆದೂ ಇವರಿಗೆ ಸಾವಿರಾರು ರೂಪಾಯಿಗಳ ಆದಾಯ ದೊರಕಿದೆ.  ಇದರ ಜೊತೆಜೊತೆಗೆ ವಿವಿಧ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ.

ಇವರು ಬೆಳೆವ ತರಕಾರಿಗೀಗ ಎಲ್ಲಿಲ್ಲದ ಬೇಡಿಕೆ. ಇವರ ಜಮೀನು ಲಿಂಗಸಗೂರು ಪಟ್ಟಣಕ್ಕೆ ಸಮೀಪ ಇರುವುದರಿಂದ ಮುಂಜಾನೆ ವಾಯುವಿಹಾರಕ್ಕೆ ಬರುವ ಜನ ಸಾವಯವ ಪದ್ಧತಿಯಲ್ಲಿ ಬೆಳೆದ ತಾಜಾ ತರಕಾರಿಯನ್ನು ಖರೀದಿಸುತ್ತಿದ್ದಾರೆ.

‘ಬಾಗಿಲ ಬಳಿಯಲ್ಲಿಯೇ ಎಲ್ಲವೂ ವ್ಯಾಪಾರ ಆಗಿಬಿಡುತ್ತದೆ. ಸಂತೆಗೆ ಹೋಗಿ ಮಾರಾಟ ಮಾಡುವ ಅವಶ್ಯಕತೆಯೇ ಇಲ್ಲ’ ಎಂದು ಸಂತಸದಿಂದ ನುಡಿಯುತ್ತಾರೆ ಪತ್ನಿ ಅಂಬಿಕಾ. ಕೃಷಿಗೆ ಪೂರಕವಾಗಿ ಎರೆಹುಳು ಗೊಬ್ಬರ ಹಾಗೂ ಜಾನುವಾರುಗಳಿಗೆ ಪೌಷ್ಟಿಕ ಆಹಾರವಾಗಿ ಅಜೋಲ್ಲಾ ಬೆಳೆದಿದ್ದಾರೆ.

ಬಾವಿಯಲ್ಲಿ ಮೀನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಜಮೀನಿನಲ್ಲಿನ ತ್ಯಾಜ್ಯವನ್ನು ಸುಡುವುದು ವಾಡಿಕೆ. ಆದರೆ ಅದನ್ನೂ ಸದ್ಬಳಕೆ ಮಾಡಿಕೊಂಡು ಎರೆಹುಳು ಗೊಬ್ಬರ  ತಯಾರಿಸಿದ್ದಾರೆ. ಎರೆಹುಳುಗಳ ಮಾರಾಟವನ್ನೂ ಮಾಡುತ್ತಾರೆ. ಇವರ ಜಮೀನಿನ ಸುತ್ತಮುತ್ತಲಲ್ಲಿ ಗುಡಿ ಹಾಗೂ ಮಠಗಳು ಬಹಳಷ್ಟಿವೆ. ಆದ್ದರಿಂದ ಹೂವುಗಳಿಗೆ ಬಹಳ ಬೇಡಿಕೆ. ಇದರ ಲಾಭವನ್ನು ಅರಿತು ಈ ವರ್ಷ ಗೈಲಾರ್ಡಿಯಾ, ಚೆಂಡು ಹೂವು, ಕಾಕಡ, ಮಲ್ಲಿಗೆ ಮುಂತಾದ ಹೂತೋಟ ಇಲ್ಲಿ ಸೃಷ್ಟಿಯಾಗಿದೆ. ಈಗಾಗಲೇ ಗೈಲಾರ್ಡಿಯಾ ಹೂವು ನೀಡುತ್ತಿದೆ. ಹಬ್ಬ ಹರಿದಿನಗಳಲ್ಲಿ ಚೆಂಡು ಹೂವಿಗೆ ಭಾರಿ ಬೇಡಿಕೆ ಇರುವುದನ್ನು ಕಂಡು ಅರ್ಧ ಎಕರೆ ಪ್ರದೇಶದಲ್ಲಿ ಈ ಹೂವಿನ ಸಸಿಗಳನ್ನು ನಾಟಿ ಮಾಡಿದ್ದಾರೆ.

ಆರ್ಥಿಕ ನೆರವು
ಯೋಜನೆಯ ಸಹಾಯಧನದಲ್ಲಿ ಒಂದು ಆಕಳು ಖರೀದಿಸಿದ್ದು, ಪ್ರತಿ ನಿತ್ಯ ೫ ರಿಂದ ೬ ಲೀಟರ್ ಹಾಲು ಪಡೆಯುತ್ತಿದ್ದಾರೆ. ಆಕಳ ಮೇವಿಗಾಗಿ  ಅಜೋಲ್ಲಾ, ಮೆಕ್ಕೆಜೋಳ (ಸೌತ್ ಆಫ್ರಿಕನ್ ಟಾಲ್) ಹಾಗೂ ನೇಪಿಯರ್ ಹುಲ್ಲನ್ನು ಬೆಳೆದಿದ್ದಾರೆ.

‘ಮೊದಲೆಲ್ಲ ಜಾತ್ರೆ ಸಂತೆ ಅಡ್ಡಾಡಿ ಜಿಲೇಬಿ ಮಾರುವ ಕಷ್ಟ ಹೇಳತೀರದು. ಹೊಟ್ಟೆ ಪಾಡಿಗೆ ಮಳೆ, ಬಿಸಿಲು, ಚಳಿ ಲೆಕ್ಕಿಸದೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಅದು. ಈಗ ಜಮೀನಿನಲ್ಲಿ ನಿರಂತರ ಕೆಲಸ ಇರುವುದರಿಂದ ಹಾಗೂ ಆದಾಯ ದೊರೆಯುತ್ತಿರು ವುದರಿಂದ ಈಗ ಜಿಲೇಬಿ ಮಾರಾಟ ಮಾಡುತ್ತಿಲ್ಲ. ಇದರಲ್ಲೇ ಸಮೃದ್ಧಿ ಕಂಡುಕೊಂಡಿದ್ದೇವೆ’ ಎನ್ನುತ್ತಾರೆ ರಾಚಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT