ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL: ಚೆನ್ನೈ ವಿರುದ್ಧ ಆರ್‌ಸಿಬಿಗೆ ರೋಚಕ ಜಯ: ಭಾವುಕರಾದ ಕೊಹ್ಲಿ–ಅನುಷ್ಕಾ

Published 19 ಮೇ 2024, 3:07 IST
Last Updated 19 ಮೇ 2024, 3:07 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮಹತ್ವದ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತಕ್ಕೆ ಅಡಿ ಇಟ್ಟಿದೆ. ಯಾವುದೇ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ನಡೆದ ಈ ಪಂದ್ಯದ ಫಲಿತಾಂಶದ ಬಳಿಕ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅವರ ಪತ್ನಿ ನಟಿ, ಅನುಷ್ಕಾ ಶರ್ಮಾ ಆ ಅಭೂತಪೂರ್ವ ಕ್ಷಣದಲ್ಲಿ ಭಾವುಕರಾದರು.ಕಣ್ಣೀರು ಜಿನುಗಿತ್ತು.

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿಗೆ ನಾಯಕ ಫಫ್(54) ಮತ್ತು ಕೊಹ್ಲಿ(47) ಅದ್ಭುತ ಆರಂಭ ನೀಡಿದರು. ಮಳೆಯಿಂದ ಕೆಲಕಾಲ ಪಂದ್ಯಕ್ಕೆ ಅಡಚಣೆ ಆಗಿತ್ತಾದರೂ ಬಳಿಕ ಚೇತರಿಸಿಕೊಂಡು ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಇವರಿಬ್ಬರ ನಿರ್ಗಮನದ ಬಳಿಕ, ರಜತ್ ಪಾಟಿದಾರ್(41) ಮತ್ತು ಕ್ಯಾಮರೂನ್ ಗ್ರೀನ್(38) ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ಸಿಎಸ್‌ಕೆಯ ಬೌಲಿಂಗ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿಗೆ ತಂದು ನಿಲ್ಲಿಸಿತು. ಬಳಿಕ, ದಿನೇಶ್ ಕಾರ್ತಿಕ್(14) ಹಾಗೂ ಮ್ಯಾಕ್ಸ್‌ವೆಲ್ (16) ತಂಡದ ಉತ್ತಮ ಮೊತ್ತಕ್ಕೆ ನೆರವಾದರು. ಆರ್‌ಸಿಬಿ 20 ಓವರ್ ಅಂತ್ಯಕ್ಕೆ 218 ರನ್ ಗಳಿಸಿತು. ಆರ್‌ಸಿಬಿ ಪ್ಲೇ ಆಫ್ ತಲುಪಲು 18 ರನ್ ಅಂತರದ ಗೆಲುವಿನ ಅಗತ್ಯವಿತ್ತು.

ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈನ ನಾಯಕ ಮತ್ತು ಓಪನರ್ ಋತುರಾಜ್ ಗಾಯಕವಾಡ್ ಅವರಿಗೆ ಮೊದಲ ಎಸೆತದಲ್ಲೇ ಮ್ಯಾಕ್ಸ್‌ವೆಲ್ ಪೆವಿಲಿಯನ್ ಹಾದಿ ತೋರಿದರು. ಬಳಿಕ ಬಂದ ಡೆರಿಲ್ ಮಿಷೆಲ್(7) ಸಹ ಒಂದಂಕಿಗೆ ನಿರ್ಗಮಿಸಿದರು. ರಚಿನ್ ರವೀಂದ್ರ(61) ಮತ್ತು ಅಜಿಂಕ್ಯ ರಹಾನೆ(33) ಉತ್ತಮ ಬ್ಯಾಟಿಂಗ್ ನಡೆಸಿದರು. ರಹಾನೆ ಔಟಾದ ಬೆನ್ನಲ್ಲೇ ರಚಿನ್ ರವೀಂದ್ರ ರನ್ ಔಟ್‌ಗೆ ಬಲಿಯಾಗುವುದರೊಂದಿಗೆ ಚೆನ್ನೈ ಸಂಕಷ್ಟಕ್ಕೆ ಸಿಲುಕಿತು. ಶಿವಂ ದುಬೆ(7), ಸ್ಯಾಂಟ್ನರ್ ಸಹ ಆರ್‌ಸಿಬಿ ರಣತಂತ್ರದ ಎದುರು ನಿಲ್ಲಲಾಗಲಿಲ್ಲ. ಬಳಿಕ ಒಂದಾದ ಧೋನಿ(25) ಮತ್ತು ಜಡೇಜಾ(42) ಬಹುತೇಕ ತಂಡವನ್ನು ಜಯದ ಸನಿಹಕ್ಕೆ ತಂದರು. ಕೊನೆಯ ಓವರ್‌ನಲ್ಲಿ 17 ರನ್‌ಗಳ(ಪ್ಲೇಆಫ್ ಅರ್ಹತೆಗೆ) ಅಗತ್ಯವಿತ್ತು. ಮೊದಲ ಎಸೆತ ಸಿಕ್ಸರ್ ಎತ್ತಿದ ಧೋನಿ ಎರಡನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಬಳಿಕ, ಆರ್‌ಸಿಬಿಯ ಜಯದ ಆಸೆ ಚಿಗುರಿತು. ಬಳಿಕ ಬಂದ ಶಾರ್ದೂಲ್ 2 ಎಸೆತಗಳಲ್ಲಿ ಒಂದು ರನ್ ಪಡೆದರು. ಕೊನೆಯ ಓವರ್‌ನಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟ ವೇಗಿ ಯಶ್ ದಯಾಳ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಕೊನೆಯ ಎರಡು ಎಸೆತಗಳ್ಲಲಿ 10 ರನ್ ಬೇಕಿದ್ದಾಗ ಆ ಗುರಿ ಸಾಧಿಸುವಲ್ಲಿ ಜಡೇಜ ವಿಫಲರಾದರು.

ಇತ್ತ, ಪಂದ್ಯದ ಜಯ ತಮ್ಮದಾಗುತ್ತಿದ್ದಂತೆ ಆಟಗಾರರತ್ತ ಓಡಿ ಬಂದ ವಿರಾಟ್ ಕೊಹ್ಲಿ ನಾಯಕ ಫಫ್ ಅವರನ್ನು ತಬ್ಬಿ ಭಾವುಕರಾದರು. ಕಣ್ಣೀರು ತಡೆಯಲಾಗಲಿಲ್ಲ. ಪತಿಯ ಆ ಭಾವನಾತ್ಮಕ ಕ್ಷಣವನ್ನು ಕಂಡ ಅನುಷ್ಕಾ ಸಹ ಭಾವುಕರಾದರು ಹಾಕಿದರು. ಈ ಹೃದಯ ಸ್ಪರ್ಶಿ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಟೂರ್ನಿಯುದ್ದಕ್ಕೂ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಕೊಹ್ಲಿ, ತಂಡ ಸತತ 6 ಸೋಲಿನ ಬಳಿಕ ಸತತ 6 ಪಂದ್ಯ ಗೆದ್ದು ನಾಲ್ಕರ ಹಂತ ತಲುಪುವಲ್ಲಿ ,ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಒಂದು ಶತಕ ಸಹಿತ 700ಕ್ಕೂ ಅಧಿಕ ರನ್ ಸಿಡಿಸಿರುವ ಕೊಹ್ಲಿ, ಆರೇಂಜ್ ಕ್ಯಾಪ್ ಸಹ ಪಡೆದಿದ್ದಾರೆ. ಪಂದ್ಯದ ಜಯದ ಬಳಿಕ ಅವರ ಶ್ರಮದ ಸಾರ್ಥಕತೆ ಕಣ್ಣೀರಾಗಿ ಹರಿಯಿತು.

ಈ ಮೂಲಕ ಆರ್‌ಸಿಬಿ 9ನೇ ಬಾರಿಗೆ ಪ್ಲೇ ಆಫ್‌ಗೆ ತಲುಪಿದೆ. ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈಐದರಾಬಾದ್ ಈಗಾಗಲೇ ಪ್ಲೇಆಫ್ಸ್ ಟಾಪ್ 3 ಸ್ಥಾನದಲ್ಲಿದ್ದು, ಆರ್‌ಸಿಬಿ 4ನೇ ತಮಡವಾಗಿದೆ.

ಇಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ರಾಜಸ್ಥಾನ ನಡುವಿನ ಲೀಗ್ ಹಂತದ ಅಂತಿಮ ಪಂದ್ಯಗಳ ಬಳಿಕ ಕ್ವಾಲಿಫೈಯರ್ ಮತ್ತು ಎಲಿಮೀನೇಟರ್‌ನಲ್ಲಿ ಆಡುವ ತಂಡಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಆರ್‌ಸಿಬಿ ಈವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಈ ಬಾರಿ ತಂಡವು ವೀರೋಚಿತ ಆಟ ಆಡುತ್ತಿದ್ದು ಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT