ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಲು ಪ್ಲಾಸ್ಟಿಕ್ ಹಾಸು

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೀಜೋತ್ಪಾದನೆ ವಿಚಾರದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತನ್ನದೇ ಆದ ಛಾಪು ಮೂಡಿಸಿದೆ. ಸೂರ್ಯಕಾಂತಿ, ಮೆಕ್ಕೆಜೋಳ, ಟೊಮೆಟೊ, ಬೆಂಡೆ, ಬದನೆ, ಹೀರೆ, ಹಾಗಲ, ಮಿಡಿಸೌತೆಕಾಯಿ, ಮೆಣಸು, ಉಳ್ಳಾಗಡ್ಡೆ, ಕುಂಬಳಕಾಯಿ, ಕಲ್ಲಂಗಡಿ, ಕರಬೂಜ... ಹೇಳುತ್ತಾ ಸಾಗಿದರೆ ಯಾದಿ ಮುಗಿಯುವುದೇ ಇಲ್ಲ.

ಟೊಮೆಟೊ ಬೀಜೋತ್ಪಾದನೆ ತಾಲ್ಲೂಕಿನಲ್ಲೆಗ ಅನೇಕ ಕಡೆ ಕಂಡು ಬರುತ್ತಿದೆ. ದೇವರಗುಡ್ಡ - ಆನವೇರಿ ಮಧ್ಯದ ಹೊಲವದು. ಕುತೂಹಲ ಕೆರಳಿಸುವ ಕೃಷಿ ಕೆಲಸಗಳು ಗಮನ ಸೆಳೆಯುವಂತಿದ್ದವು.

ಇಡೀ ಹೊಲವನ್ನೆಲ್ಲ ಮಡಿ ಮಾಡಿ ಮಡಿಗಳಿಗೆಲ್ಲ ಪ್ಲಾಸ್ಟಿಕ್  ಹೊದಿಕೆ ಹೊಚ್ಚಲಾಗಿತ್ತು. ಪ್ಲಾಸ್ಟಿಕ್  ಹೊದಿಕೆಯಲ್ಲೇ  ನಿರ್ದಿಷ್ಟ ಅಂತರದ ಸಾಲುಗಳಲ್ಲಿ ಟೊಮೆಟೊ ಸಸಿ ನಾಟಿ ಕಾರ್ಯದಲ್ಲಿ ಕೆಲವರು ತೊಡಗಿದ್ದರೆ ಇನ್ನೂ ಕೆಲವರು ಹೊಲಗಳಲ್ಲಿ ಆಗಲೇ ಸೊಂಪಾಗಿ ಬೆಳೆದಿರುವ ಟೊಮೆಟೊ ಫಸಲಿನ ದೃಶ್ಯ.


ಹತ್ತಿಪ್ಪತ್ತು ಮಂದಿ ಕೂಲಿಗಳು ಅದೇನೋ ವಿಭಿನ್ನ ಕೆಲಸದಲ್ಲಿ ತೊಡಗಿದಂತೆ ಭಾಸವಾಯಿತು. ಕುತೂಹಲದಿಂದ ಸಮೀಪ ಹೋಗಿ ನೋಡಿದಾಗಲೇ ಗೊತ್ತಾಗಿದ್ದು ಅವರೆಲ್ಲ ಅಷ್ಟು ಸಣ್ಣಗಿನ ಟೊಮೆಟೊ ಕುಸುಮವನ್ನು ಸೂಕ್ಷ್ಮಾತಿಸೂಕ್ಷ್ಮ ಸಾಧನ ಒಂದರಿಂದ ಅಷ್ಟೇ ನಾಜೂಕಿನಿಂದ ಬೇರ್ಪಡಿಸಿ ಕೃತಕ ಪರಾಗ ಸ್ಪರ್ಶ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆಂದು.

ವಿಶೇಷ ಹಾಸಿನ ಮಡಿ

ಟೊಮೆಟೊ ಉದ್ದಿಮೆಯಲ್ಲಿ ಈ ವರ್ಷ ಎಲ್ಲ ಕಡೆ ಕಂಡು ಬರುವ ಪ್ಲಾಸ್ಟಿಕ್  ಹಾಸಿನ ಮಡಿಗಳು ವಿಶೇಷವೆನಿಸುತ್ತವೆ. ಇದು ಕುತೂಹಲಭರಿತವೂ ಆಗಿದೆ. ಮಡಿ ಮಾಡುವಾಗಲೇ ಪ್ಲಾಸ್ಟಿಕ್  ಹಾಳೆ ಹೊದಿಕೆ ಹಾಕಿ ಮಡಿಗಳಿಗೆ ಹೊದಿಸಲಾಗುತ್ತದೆ. ನಾಟಿ ಮಾಡಬೇಕಾದ ಜಾಗದಲ್ಲಿ ಮಾತ್ರ ಪ್ಲಾಸ್ಟಿಕ್  ಕತ್ತರಿಸಿ ಸಸಿ ನೆಡಲಾಗುತ್ತದೆ.

ಪ್ರತಿಯೊಂದು ವೃಕ್ಷಕ್ಕೂ ನಳಿಕೆ ಜೋಡಣೆ ಮಾಡಿ ಕೊಳವೆಗಳ ಮೂಲಕ ಹನಿ ಹನಿಯಾಗಿ ನೀರುಣಿಸುವುದು ಈ ವರ್ಷ ಟೊಮೆಟೊ ಬೀಜೋತ್ಪಾದನೆಯಲ್ಲಿ  ಕಂಡುಬರುತ್ತಿರುವ ಸಾಮಾನ್ಯ ದೃಶ್ಯ.

ಈ ಪದ್ಧತಿಯಿಂದ ಶೇ 60ಕ್ಕೂ ಹೆಚ್ಚಿನ ನೀರಿನ ಮಿತ ಬಳಕೆ ಸಾಧ್ಯವಾಗಿದೆ ಎನ್ನುತ್ತಾರೆ ರೈತರು. ಪ್ಲಾಸ್ಟಿಕ್  ಹಾಸು ಇರುವುದರಿಂದ ಆವಿಯಾದ ನೀರು ಅಷ್ಟು ಸುಲಭವಾಗಿ ತಪ್ಪಿಸಿಕೊಂಡು ಆಕಾಶಕ್ಕೇರಲು ಅವಕಾಶವಿಲ್ಲ.

ಪ್ಲಾಸ್ಟಿಕ್‌ನೊಳಗೆ ಸಾಂಧ್ರಗೊಂಡು ಹನಿ ಹನಿಯಾಗಿ ಸಂಗ್ರಹವಾಗುವ ನೀರು ಮತ್ತೆ ಮಣ್ಣಿಗೆ ಸೇರ್ಪಡೆಯಾಗುವುದರಿಂದ ಮಣ್ಣು ಯಾವತ್ತೂ ತೇವಾಂಶದಿಂದ ಕೂಡಿರಲು ಸಾಧ್ಯವಾಗುತ್ತದೆ.

ಕೊಳವೆ ಮೂಲಕ ಹನಿ ಹನಿ ನೀರು ಸರಬರಾಜಿನಿಂದ ಮಣ್ಣು ಬಿರುಸಾಗದೇ ಯಾವಾಗಲೂ ಮೃದುವಾಗಿರುವುದರಿಂದ ಸಸ್ಯಗಳ ಬೆಳವಣಿಗೆಗೆ ವರದಾನವಾಗುತ್ತದೆ. ಸಸಿಗಳಿಗೆ ನೀಡಬೇಕಾಗಿರುವ ಸೂಕ್ಷ್ಮ ಪೋಷಕಾಂಶಗಳನ್ನು ನೀರಿನಲ್ಲಿ ಸೇರಿಸಿ ನಳಿಕೆಗಳ ಮೂಲಕ ಪೂರೈಸುವುದರಿಂದ ಪೋಷಕಾಂಶಗಳ ಸದ್ಬಳಕೆ ನೇರವಾಗಿ ಫಸಲಿಗೆ ತಲುಪುವುದು.

ಪ್ಲಾಸ್ಟಿಕ್  ಹಾಸು ಇರುವುದರಿಂದ ಕಳೆ, ಕಸ ಬೆಳೆಯಲು ಆಸ್ಪದವೇ ಇರುವುದಿಲ್ಲ. ಹೀಗಾಗಿ ಕಳೆ ಖರ್ಚಿಗೆ ಇಲ್ಲಿ ಸಂಪೂರ್ಣ ಕಡಿವಾಣ.
ಆದರೆ ಫಸಲು ಮುಗಿದ ನಂತರ ಪ್ಲಾಸ್ಟಿಕ್‌ಗಳನ್ನು ಎಚ್ಚರಿಕೆಯಿಂದ ಎತ್ತಿ ತೆಗೆದು ಜೋಪಾನವಾಗಿ ನಿರ್ವಹಣೆ ಮಾಡಲೇಬೇಕು.

ಇಲ್ಲದಿದ್ದರೆ ಜೈವಿಕ ಶೀಥಲೀಯವಲ್ಲದ ಅದೇ ಪ್ಲಾಸ್ಟಿಕ್  ಪರಿಸರಕ್ಕೆ ಮಹಾಮಾರಿ. ಗುತ್ತಿಗೆ ಪದ್ಧತಿಯಲ್ಲಿ ರೈತರನ್ನು ಬೀಜೋತ್ಪಾದನೆಯಲ್ಲಿ ತೊಡಗಿಸುವ ಕಂಪೆನಿಗಳು, ಮಧ್ಯವರ್ತಿಗಳು, ಏಜೆನ್ಸಿಗಳು ಇತ್ತ ಚಿತ್ತ ಹರಿಸಿ ರೈತರಿಗೆ ತಿಳಿವಳಿಕೆ ಮೂಡಿಸುವುದೂ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT