ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ಬದಲು `ಬಜೆ'

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಕ್ಕಳಿಗೆ ಮಾತು ಬರಿಸುವುದೂ ಸೇರಿದಂತೆ ಆಯುರ್ವೇದ ಔಷಧದಲ್ಲಿ ಬಹು ಪ್ರಮುಖ ಸ್ಥಾನ ಪಡೆದಿರುವ ಬಜೆ ಕೇವಲ ತುಮಕೂರು ಭಾಗಕ್ಕೆ ಸೀಮಿತವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಾಮನಗರ ಜಿಲ್ಲೆಯ ಅಣೆದೊಡ್ಡಿ ನಂದೀಶ್. ಬತ್ತ ಬೆಳೆದು ಯಶಸ್ಸು ಕಂಡಿರದಿದ್ದ ಅವರಿಗೆ ಈಗ ಬಜೆ ವರದಾನವಾಗಿದೆ. ಹೆಚ್ಚಿನ ಖರ್ಚು ಇಲ್ಲದೇ, ರಾಸಾಯನಿಕ ಗೊಬ್ಬರಗಳನ್ನು ಬಳಸದೆಯೇ, ಕೀಟ, ರೋಗ ಬಾಧೆಯ ಕಾಟವೂ ಇಲ್ಲದೇ ಬಜೆಯನ್ನು ಬೆಳೆಯುತ್ತಿದ್ದಾರೆ ಅವರು.

`ಕೆಸುವು' ಅಥವಾ `ಆಂಥೂರಿಯಂ' ಗಿಡಗಳ ಕುಟುಂಬವಾದ `ಅಕೊರೇಸಿಯೇ'ಗೆ ಸೇರಿದ ಬಜೆಯ ಶಾಸ್ತ್ರೀಯ ಹೆಸರು `ಅಕೊರಸ್ ಕ್ಯಲಾಮಸ್. ನೋಡಲು ಜೋಳದ ಗಿಡದಂತೆ ಕಂಡರೂ ಕಡು ಹಸಿರು ಬಣ್ಣದಿಂದ ಹೊಳೆಯುವ ತುಸು ದಪ್ಪದ ಎಲೆಗಳಿವೆ. ಬೇರು, ಕಾಂಡ ಮತ್ತು ಎಲೆಯ ಭಾಗದಲ್ಲಿ ಶುಂಠಿಯಂತೆ ತೀಕ್ಷ್ಣ ಸುವಾಸನೆ. ಇದರಲ್ಲಿ ಬೇರು ಮತ್ತು ಕಾಂಡದ ಭಾಗ ಮಾತ್ರ ಔಷಧಿಗೆ ಬಳಕೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಕೆರೆಗಳ ಪಕ್ಕ ಮನೆಮದ್ದಿಗೆಂದು ಸಣ್ಣ ಪ್ರಮಾಣದಲ್ಲಿ ಬೆಳೆಯುವುದಿದೆ. ನಂದೀಶ್ ಅವರ ಗದ್ದೆಯ ಪಕ್ಕದ ರೈತರೊಬ್ಬರು ತುಮಕೂರಿನಿಂದ ಈ ಗಿಡಗಳನ್ನು ತಂದು ಅರ್ಧ ಎಕರೆಗೆ ಹಾಕಿದ್ದರು. ಆದರೆ ಅದು ಫಲಕಾರಿಯಾಗಲಿಲ್ಲ. ಆದರೆ ಈಗ ನಂದೀಶ್ ಅವರು ಎರಡು ಎಕರೆಯಷ್ಟು ಜಮೀನಿನಲ್ಲಿ ಇದನ್ನು ಬೆಳೆದಿದ್ದಾರೆ.
ಬೆಳೆಯುವುದು ಹೇಗೆ?

ಬಜೆ ಬೆಳೆಯಬೇಕಾದರೆ ಬತ್ತದ ಗದ್ದೆಯಂತೆ ನೀರು ನಿಲ್ಲುವ ಜೌಗು ಪ್ರದೇಶ ಬೇಕು. ಗದ್ದೆಯನ್ನು ಬತ್ತ ನಾಟಿ ಮಾಡಲು ತಯಾರಿಸುವಂತೆ ಉತ್ತು ಮಟ್ಟ ಮಾಡಿ ಎರಡು ಎಕರೆಗೆ ಹದಿನೈದು ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರ ಹಾಕಿದ್ದಾರೆ. ಯುಗಾದಿ ಹಬ್ಬದ ಹೊತ್ತಿಗೆ ಮೊಳದಷ್ಟು ಅಗಲದ ಪಾತಿಯಲ್ಲಿ ಗೇಣುದ್ದಕ್ಕೊಂದು ಗಿಡ ನೆಡಬೇಕು. ಅವು ಮುಳುಗುವಷ್ಟು ನೀರು ನಿಲ್ಲಿಸಬೇಕು. ಒಂದು ತಿಂಗಳೊಳಗೆ  ಅಡಿಯಷ್ಟು ಎತ್ತರದ ಗಿಡಗಳು ಬೆಳೆದಿರುತ್ತವೆ. ಆಗ ಒಮ್ಮೆ ಕಳೆ ಕೀಳುತ್ತಾರೆ. ಇನ್ನೊಂದು ತಿಂಗಳು ಬಿಟ್ಟು ಮತ್ತೊಮ್ಮೆ ಕಳೆ ಕೀಳುತ್ತಾರೆ. ಇಷ್ಟು ಬಿಟ್ಟರೆ ಬೇರೆ ಖರ್ಚಿಲ್ಲ ಎನ್ನುವುದು ಅವರ ಮಾತು.

ಒಂಬತ್ತು ತಿಂಗಳ ನಂತರ ಅಗೆದು ಬೇರು ಕಿತ್ತು ಒಣಗಿಸುವುದೇ ಸ್ವಲ್ಪ ಶ್ರಮದ ಕೆಲಸ. ಹದಿನೈದು ಆಳುಗಳು ಒಂದು ತಿಂಗಳು ಕೆಲಸ ಮಾಡಬೇಕು.ಕೀಳುವ ಸಮಯದಲ್ಲಿ ನೀರು ಹರಿಯುವುದನ್ನು ನಿಲ್ಲಿಸಿ ಒಣಗಲು ಬಿಡುತ್ತಾರೆ. ಮೊದಲು ಸತ್ತೆ (ಎಲೆಯ ಭಾಗ) ಕುಯ್ಯುತ್ತಾರೆ. ಬುಡದ ಭಾಗವನ್ನು ಕತ್ತರಿಸಿ ಪುನಃ ನಾಟಿ ಮಾಡಲು ಬಳಸುತ್ತಾರೆ. ನೆಲವನ್ನು ಗುದ್ದಲಿಯಿಂದ ಅಗೆದು ಕಾಂಡ ಮತ್ತು ಬೇರನ್ನು ತೆಗೆಯುತ್ತಾರೆ. ಅದನ್ನು ನಾಲ್ಕು ಇಂಚಿನಷ್ಟು ಉದ್ದಕ್ಕೆ ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಮೆಷ್‌ನಿಂದ ಮಾಡಿದ ಡ್ರಮ್ ಒಳಗೆ ಹಾಕಿ ತಿರುಗಿಸುತ್ತಾರೆ. ಆಗ ಅದಕ್ಕೆ ಅಂಟಿಕೊಂಡಿರುವ ಮಣ್ಣು, ಸಣ್ಣ ಬೇರು, ಪಾಚಿ ಉದುರಿ ಹೋಗಿ ಸ್ವಚ್ಛವಾದ ಬಿಳಿ ಬೇರು ಸಿಗುತ್ತದೆ. ಅದನ್ನು ಚೀಲದಲ್ಲಿ ತುಂಬಿ ಮಾರಾಟಕ್ಕೆ ಕಳುಹಿಸುತ್ತಾರೆ.

ಒಂದು ಎಕರೆಗೆ ಕಡಿಮೆ ಅಂದ್ರೂ ಮೂರು ಟನ್ ಇಳುವರಿ ಸಿಗುತ್ತದೆ. ಈಗ ಟನ್ನಿಗೆ ಎಪ್ಪತ್ತು ಸಾವಿರ ರೂಪಾಯಿ ಧಾರಣೆ ಇದೆ. ಖರ್ಚು ಕಳೆದರೆ ಎರಡು ಎಕರೆಗೆ  ಮೂರು ಲಕ್ಷ ರೂಪಾಯಿ ಲಾಭ ಗ್ಯಾರಂಟಿ ಅನ್ನುವ ಲೆಕ್ಕಾಚಾರ ನಂದೀಶ ಅವರದ್ದು.

ಬತ್ತ ಬೆಳೆದರೆ ಕೀಟ ಮತ್ತು ರೋಗದ ಬಾಧೆಯಿಂದಾಗಿ ಇಷ್ಟು ಸಂಪಾದನೆ ಮಾಡಲು ಸಾಧ್ಯವೇ ಇಲ್ಲ ಅನ್ನುವ ಅವರಿಗೆ ಸದ್ಯಕ್ಕೆ ಮಾರುಕಟ್ಟೆಗಾಗಿ ತುಮಕೂರಿಗೆ ಹೋಗುವುದು ಅನಿವಾರ್ಯವಾಗಿದೆ. ಔಷಧೀಯ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಇದೆಯಾದರೂ ಇವರ ಸಾಧನೆ ಅವರ ಗಮನಕ್ಕೆ ಇನ್ನೂ ಬಂದಿಲ್ಲ. ಬೈರಮಂಗಲ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಇವರ ಭೂಮಿಗೆ ದೂರದಿಂದ ನೀರು ಹರಿದು ಬರುವುದರಿಂದ ಕಲ್ಮಶಗಳು ಕಡಿಮೆ ಇವೆ ಎನ್ನುತ್ತಾರೆ. ಕಲುಷಿತ ನೀರಿನಿಂದ ಬತ್ತ ಬೆಳೆಯಲು ಸಾಧ್ಯವಾಗದೆ ಕೃಷಿಯಿಂದ ವಿಮುಖರಾದ ಇಲ್ಲಿಯ ರೈತರಿಗೆ ನಂದೀಶ್‌ರವರ ಸಾಧನೆ ಆಶಾಕಿರಣ. ಬಜೆ ಬೆಳೆಯಲು ಈ ನೀರು  ಶುದ್ಧೀಕರಿಸುವತ್ತಲೂ ಗಮನಹರಿಸಬೇಕಿದೆ. ಹಾಗೊಂದು ವೇಳೆ ಸಾಧ್ಯವಾದರೆ ಇಲ್ಲಿಯ ರೈತರಿಗೆ ಒಂದು ಪರ್ಯಾಯ ಬೆಳೆ ಸಿಕ್ಕಿದಂತಾಗುತ್ತದೆ.

ಮಾಹಿತಿಗೆ: 9845407434.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT