ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬಿಸಿಲಲ್ಲಿ ನಾಟಿ ತೊಗರಿ ಕೃಷಿ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ವಿವಿಧೆಡೆ ಶುದ್ಧ ಬೆಳೆಯಾಗಿ ತೊಗರಿಯನ್ನು ಬೇಸಾಯ ಕೈಗೊಳ್ಳುವುದೇ ಅತಿ ವಿರಳ. ಶೇಂಗಾ, ಸೂರ್ಯಕಾಂತಿ, ಜೋಳ, ಸಾವೆ, ನವಣೆಯಂತಹ ಬೆಳೆಗಳಲ್ಲಿ ತೊಗರಿಯನ್ನು 10ರಿಂದ 12 ಸಾಲಿಗೊಂದರಂತೆ ಮಿಶ್ರ ಬೆಳೆಯಾಗಿ ಬಿತ್ತಿ ಬೆಳೆಯುವುದೇ ವಾಡಿಕೆ. ಹೀಗೆ ಬಿತ್ತಿದರೆ ಎಕರೆಗೆ ನಾಲ್ಕರಿಂದ ಐದು ಕೆ.ಜಿ. ಬೀಜ ಬಿತ್ತನೆಗೆ ಬಳಕೆಯಾಗುತ್ತದೆ. ಗಿಡದಿಂದ ಗಿಡಕ್ಕೆ ಅಂತರ ಬಿಡದೆ ಒತ್ತೊತ್ತಾಗಿ ಬಿತ್ತಿ ಗಿಡಗಳು ಗರಿಷ್ಠ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳುವುದು ಸಾಂಪ್ರದಾಯಿಕ ಕೃಷಿಯ ವಾಡಿಕೆ.

ಕೆಲವರ್ಷಗಳ ಹಿಂದೆ ತೊಗರಿ ಕಣಜವೆಂದೇ ಹೆಸರಾಗಿರುವ ಗುಲ್ಬರ್ಗದಲ್ಲಿ ಜುಲೈ ಕಳೆದರೂ ಮಳೆ ಕೈಕೊಟ್ಟಾಗ ಆಗಸ್ಟ್ ಎರಡನೇ ವಾರದಲ್ಲಿ ಬಿತ್ತನೆಯಾದ ತೊಗರಿ ಇಳುವರಿ ಅರ್ಧಕ್ಕೆ ತಗ್ಗಿತ್ತು. ಅವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ ಎಂಬಂತೆ ರಾಣಿಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಡೀನ್ ಡಾ. ವಿ. ಆಯ್. ಬೆಣಗಿ ಮತ್ತು ತಜ್ಞ ವಿಜ್ಞಾನಿಗಳ ಬಳಗ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾದರು. ಅದರ ಪ್ರತಿಫಲವೇ ನಾಟಿ ಪದ್ಧತಿಯ ತೊಗರಿ ಕೃಷಿ.

‘ಬೇಗ ಬಿತ್ತನೆ ಕೈಗೊಳ್ಳುವುದು ಯಶಸ್ವಿ ಕೃಷಿಯ ಮೂಲ ಮಂತ್ರ. ಮೇ ಎರಡನೇ ವಾರದಲ್ಲಿ ಬಿತ್ತನೆಯಾದರೆ ಗರಿಷ್ಠ ಇಳುವರಿ ಸಾಧ್ಯ. ಮೇ ತಿಂಗಳಿನಲ್ಲಿ ಬಿತ್ತನೆ ಕೈಗೊಂಡಲ್ಲಿ ನವೆಂಬರ್, ಡಿಸೆಂಬರ್ ಹೊತ್ತಿಗೆ ಬೆಳೆ ಪ್ರೌಢಾವಸ್ಥೆಗೆ ಬರುತ್ತದೆ. ಈ ಅವಧಿಯಲ್ಲಿ ಹಗಲಿನ ಅವಧಿ ದೀರ್ಘವಾಗಿರುವುದರಿಂದ ಫಸಲು ಪಡೆಯುವ ಸೂರ್ಯ ಪ್ರಕಾಶವೂ ಅಧಿಕವಾಗಿರುತ್ತದೆ. ಸಸ್ಯಗಳ ಆಹಾರ ತಯಾರಿಕೆಗೆ ಮೂಲ ಅಂಶವಾಗಿರುವ ದ್ಯುತಿ ಸಂಶ್ಲೇಷಣೆ ಕ್ರಿಯೆಯೂ ಇದರಿಂದ ಚುರುಕುಗೊಳ್ಳಲು ಕಾರಣವಾಗಿ ಮೊಗ್ಗು, ಹೂ, ಹೀಚು, ಕಾಯಿಗಳ ಸಂಖ್ಯೆಯೂ ತಂತಾನೆ ಇಮ್ಮಡಿಯಾಗುತ್ತದೆ.

ಇದು ನೇರವಾಗಿ ಇಳುವರಿ ಅಧಿಕಗೊಳ್ಳಲು ಕಾರಣವಾಗುತ್ತದೆ’ ಎನ್ನುತ್ತಾರೆ ಡಾ.ಬೆಣಗಿ. ‘ಎಕರೆಗೆ ಬೇಕಾಗುವ ಬೀಜ ಅರ್ಧ ಕೆ.ಜಿ. ಮಾತ್ರ. ಮೇ ಮೊದಲ ವಾರದಲ್ಲೆ ತೊಗರಿ ನಾಟಿ ಮಾಡುವ ಹೊಲದ ಮಣ್ಣು, ತಿಪ್ಪೆಗೊಬ್ಬರ ಮತ್ತು ಉಸುಕುಗಳನ್ನು ಸಮ ಪ್ರಮಾಣದಲ್ಲಿ ಕೂಡಿಸಿ ಪಾಲಿಥೀನ್ ಚೀಲಗಳಲ್ಲಿ ತುಂಬಬೇಕು.

ಎರಡನೇ ವಾರದಲ್ಲಿ ಒಂದೊಂದು ಬೀಜ ಹಾಕಿ ಪ್ರತಿ ದಿನ ಹಗುರಾಗಿ ನೀರು ಸಿಂಪಡಿಸುತ್ತಿದ್ದರೆ ಒಂದು ತಿಂಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಹದ ನೋಡಿಕೊಂಡು ಸಿದ್ಧಪಡಿಸಿಕೊಂಡ ಹೊಲದಲ್ಲಿ ಸಾಲಿನಿಂದ ಸಾಲಿಗೆ ಐದು ಅಡಿ ಗಿಡದಿಂದ ಗಿಡಕ್ಕೆ ಮೂರು ಅಡಿ ಅಂತರಕ್ಕೊಂದರಂತೆ ಸಸಿ ನಾಟಿ ಮಾಡಬೇಕು. 6/4 ಅಡಿ ಅಂತರದಲ್ಲೂ ನಾಟಿ ಕೈಗೊಳ್ಳಬೇಕು ಎಂದು ಮಾಹಿತಿ ನೀಡುತ್ತಾರೆ ಡಾ.ಬೆಣಗಿ.

ಸಕಾಲಕ್ಕೆ ಮಳೆ ಬೀಳದೆ ಇದ್ದ ಪಕ್ಷದಲ್ಲಿ ಪಾಲಿಥಿನ್ ಚೀಲಗಳಲ್ಲಿನ ಸಸಿಗಳ ತುದಿಗಳನ್ನು ಚಿವುಟಿ ಆಗಸ್ಟ್‌ವರೆಗೂ ನಾಟಿಗೆ ಬಳಸಿಕೊಳ್ಳಬಹುದು. ನಾಟಿ ಮಾಡುವ ಮುನ್ನ ಒಂದು ಚೀಲ ಡಿಎಪಿ, 6–8 ಕೆ.ಜಿ ಜಿಂಕ್ ಸಲ್ಫೇಟ್ ಸೇರಿಸಿ ನಾಟಿ ಗುಣಿಯಲ್ಲಿ ಬೆರೆಸಿ ನಾಟಿ ಮಾಡುವುದು ಹೆಚ್ಚು ಫಲಪ್ರದ. ಅನುಕೂಲಕ್ಕೆ ತಕ್ಕಂತೆ ಮಳೆ ಬಿದ್ದರೆ ಎಕರೆಗೆ ಕನಿಷ್ಠ 8 ರಿಂದ 10 ಕ್ವಿಂಟಲ್ ಇಳುವರಿ ಸಾಧ್ಯ.

ಗಿಡದಿಂದ ಗಿಡಕ್ಕೆ ಸಾಲಿನಿಂದ ಸಾಲಿಗೆ ಸಾಕಷ್ಟು ಅಂತರವಿರುವುದರಿಂದ ಗಾಳಿ, ಬೆಳಕು, ಸೂರ್ಯನ ಪ್ರಕಾಶ ವಿಪುಲವಾಗಿ ಬೆಳೆ ಮೇಲೆ ಬೀಳಲು ಅವಕಾಶವಾಗುತ್ತದೆ. ಅಂತರ ಬೇಸಾಯವನ್ನು ಮಾಡುವುದು ಸುಲಭವಾಗುವುದ ರಿಂದ ಕಳೆ ಚಿಂತೆ ಇಲ್ಲವೇ ಇಲ್ಲ. ಒಂದೊಂದು ಗಿಡವೂ ಪುಂಕಾನುಪುಂಕ ಕವಲೊಡೆಯುವುದರಿಂದ ಇಳುವರಿ ತಂತಾನೆ ಅಧಿಕವಾಗಲು ಕಾರಣವಾಗುತ್ತದೆ.

ಸಿಡಿ, ಬಂಜೆ ರೋಗ ನಿರೋಧಕ
ತೊಗರಿಯನ್ನು ಬಹುವಾಗಿ ಬಾಧಿಸುವ ರೋಗಗಳೆಂದರೆ ಸಿಡಿ ರೋಗ ಮತ್ತು ಬಂಜೆ ರೋಗ. ಇದ್ದಕ್ಕಿದ್ದಂತೆ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಸೊರಗಿ ಒಣಗಿ ಹೋಗುವುದು ಸಿಡಿ ರೋಗದ ಲಕ್ಷಣ. ಮಣ್ಣಿನಲ್ಲಿರುವ ಫುಜೇರಿಯಂ ಎಂಬ ಶಿಲೀಂಧ್ರ ಇದಕ್ಕೆ ಕಾರಣ. ಬೇರಿನ ಮೂಲಕ ಪ್ರವೇಶ ಪಡೆದ ಶಿಲೀಂಧ್ರ ಉಂಟು ಮಾಡುವ ವಿಷಾಣುಗಳು ಆಹಾರ ಮುಚ್ಚಿ ಬಿಡುವುದರಿಂದ ನೀರಲ್ಲೆ ನಿಂತ ಸಸ್ಯಕ್ಕೂ ನೀರು ಮತ್ತು ಆಹಾರ ಪೂರೈಕೆಯಾಗದಿರುವುದರಿಂದ ಇದ್ದಕ್ಕಿದ್ದಂತೆ ಸೊರಗಿ ಒಣಗಿ ನಿಲ್ಲುತ್ತವೆ.

ಆಳೆತ್ತರಕ್ಕೆ ಬೆಳೆದು ನಿಂತಿದ್ದರೂ ಕೆಲವು ಗಿಡಗಳಲ್ಲಿ ಮೊಗ್ಗು, ಹೂವು, ಹೀಚು, ಕಾಯಿಗಳೇ ಇಲ್ಲದ ತೊಗರಿ ಗಿಡಗಳು ಕೆಲವು ಕಡೆ ಕಾಣಸಿಗುತ್ತವೆ. ಇದು ಬಂಜೆ ರೋಗದ ಬಾಧೆ. ಇದೊಂದು ವೈರಾಣು ರೋಗವಾಗಿದ್ದು, ಇರೋಫಿಡ್ ನುಸಿಯಿಂದ ಹರಡುತ್ತದೆ. ಸೃರಿಲಿಟಿ ಮೊಜಾಯಿಕ್ ಡಿಸೀಸ್ ಎಂದೂ ಇದರ ಹೆಸರು. ತಂಪು ವಾತಾವರಣದ ಪ್ರದೇಶದಲ್ಲಿ ಇರೋಫಿಡ್ ನುಸಿಯ ಹಾವಳಿ ಹೆಚ್ಚು.

ಮಹಾರಾಷ್ಟ್ರದ ಬದ್ನಾಪೂರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಿಎಸ್‌ಎಂಆರ್ ತಳಿ ತೊಗರಿಯಲ್ಲಿ ಬಂಜೆ ಬಾಧೆಯನ್ನು ಮಟ್ಟ ಹಾಕಬಲ್ಲ ರೋಗ ನಿರೋಧಕ ಶಕ್ತಿ ಇದ್ದರೆ ಆಯ್.ಸಿ.ಪಿ.ಎಲ್. 87119 ತಳಿಗೆ ಬಂಜೆ ಹಾಗೂ ಸಿಡಿ ರೋಗ ಎರಡನ್ನೂ ನಿರೋಧಿಸುವ ರೋಗ ನಿರೋಧಕ ಶಕ್ತಿ ಇವೆ.

ನಾಟಿ ಕೃಷಿಯ ವೈಶಿಷ್ಟ್ಯಗಳು
ಸಾಲಿನಿಂದ ಸಾಲಿಗೆ ಸಾಕಷ್ಟು ಅಂತರವಿರುವುದರಿಂದ ಸವತೆ, ಮೆಂತ್ಯ, ಮೂಲಂಗಿ, ಅಲಸಂದೆಗಳಂತಹ ಅಲ್ಪಾವಧಿ ಬೆಳೆಗಳನ್ನು ಲಾಭದಾಯಕವಾಗಿ ಮಿಶ್ರ ಬೆಳೆಯಾಗಿ ಬೆಳಯಬಹುದಾಗಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಪಾಲಿಥಿನ್ ಚೀಲಗಳಲ್ಲಿ ಸಸಿ ಬೆಳೆಸಿಕೊಂಡು ಅನುಕೂಲ ಸಿಕ್ಕಾಗ ನಾಟಿ ಮಾಡಬಹುದು. ಅಂದರೆ ಸಾಧ್ಯವಾದಷ್ಟು ಬೇಗ ಬಿತ್ತನೆ ಕೈಗೊಳ್ಳಬಹುದು.

ಮುಂಗಾರು ಹಂಗಾಮಿನ ಬೇಗ ಬಿತ್ತನೆಯಿಂದ ಇಳುವರಿಯೂ ಗಣನೀಯವಾಗಿ ಅಧಿಕಗೊಳ್ಳುವುದು. ರೂಢಿಯಲ್ಲಿರುವ ಮಾಮೂಲಿ ವಿಧಾನದಲ್ಲಿ ಎಕರೆಗೆ ಮೂರರಿಂದ ಮೂರೂವರೆ ಕ್ವಿಂಟಲ್ ಇಳುವರಿ ಮಾತ್ರ ಸಾಧ್ಯ. ಆದರೆ ನಾಟಿ ವಿಧಾನದಲ್ಲಿ ಎಕರೆಗೆ ಕನಿಷ್ಠ 10 ಕ್ವಿಂಟಲ್ ಇಳುವರಿ ಇರುವುದು ಇದರ ಹೆಚ್ಚುಗಾರಿಕೆ.

ಕ್ರಿಮಿ ಕೀಟಗಳ ಹಾವಳಿಯೂ ಈ ಅವಧಿಯಲ್ಲಿ ಕಮ್ಮಿ. ತೊಗರಿ ಹೊಟ್ಟು ಪಶುಗಳಿಗೆ ಉತ್ತಮ ಪೋಷಕಾಂಶವುಳ್ಳ ಆಹಾರ. ಬೇರಿನಲ್ಲಿರುವ ಗಂಟುಗಳಿಂದ ಸಾರಜನಕದ ಸ್ಥಿರೀಕರಣ ಉಂಟಾಗಿ ಮಣ್ಣು ನೈಸರ್ಗಿಕವಾಗಿ ಫಲವತ್ತಾಗುತ್ತದೆ. ತೊಗರಿ ಗಿಡಗಳು ನೆಲಕ್ಕೆ ಉದುರಿಸುವ ಎಲೆ ದಂಟು ದೇಟುಗಳು ಮಣ್ಣಿನಲ್ಲಿ ವಿಘಟನೆಯಾಗುವುದರಿಂದ ಮಣ್ಣಿನ ಫಲವತ್ತತೆ  ವೃದ್ಧಿಗೊಳ್ಳುತ್ತದೆ. ಮಾಹಿತಿಗೆ 9448867705
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT