ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಇಳುವರಿ ಉತ್ತುಂಗದತ್ತ...

Last Updated 20 ಜನವರಿ 2014, 19:30 IST
ಅಕ್ಷರ ಗಾತ್ರ

ನೀರಾವರಿ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದಲ್ಲಿ  ಹೆಚ್ಚಿನ ಇಳುವರಿ ಹಾಗೂ ಅಧಿಕ ಲಾಭದ ಆಸೆಯಿಂದ ಹೆಚ್ಚಿನ ನೀರಾವರಿ ಮತ್ತು ಹೆಚ್ಚಿನ ಕೆಸರು ಮಾಡುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ ಹಾಗೂ ಪೋಷಕಾಂಶಗಳು ಪೋಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಒಂದು ಕೆ.ಜಿ. ಭತ್ತವನ್ನು ಬೆಳೆಯಲು ೫ ಸಾವಿರ ಲೀಟರ್ ನೀರಿನ ಅವಶ್ಯಕತೆ ಇದೆ. ಇಂಥ ಪರಿಸ್ಥಿತಿಯಲ್ಲಿ ಕಡಿಮೆ ನೀರು ಬೇಡುವ ‘ಶ್ರೀ’ ಪದ್ಧತಿಯಲ್ಲಿ ಅಧಿಕ ಭತ್ತದ ಇಳುವರಿ ಪಡೆದಿರುವ ರೈತರ ಅನುಭವದ ನುಡಿಗಳು ಇಲ್ಲಿದೆ...

‘ಶ್ರೀ ಪದ್ಧತಿಯಲ್ಲಿ ಬೆಳೆಯುವ ಭತ್ತದ ಗದ್ದೆಯಲ್ಲಿ ನೀರು ನಿಲ್ಲದಿರುವುದರಿಂದ ಭತ್ತದ ಬೇರುಗಳು ಆಳವಾಗಿ ಮಣ್ಣಿನಲ್ಲಿ ಬೆಳೆಯುತ್ತವೆ ಮತ್ತು ತೆಂಡೆಗಳ ಸಂಖ್ಯೆ ತೆನೆ ಹಾಗೂ ತೆನೆಯಲ್ಲಿ ಕಾಳಿನ ಸಂಖ್ಯೆ ಹೆಚ್ಚಾಗಿ ಇಳುವರಿ ಹೆಚ್ಚಳವಾಗುತ್ತದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಠದದೊಡ್ಡಿ ಗ್ರಾಮದ ರೈತ ಎಂ. ಎನ್. ಪುಟ್ಟಸ್ವಾಮಿ.

ಇವರ 50 ಎಕರೆ ಜಮೀನಿನಲ್ಲಿ ಶ್ರೀ ಪದ್ಧತಿಯಲ್ಲಿ ಬೆಳೆದ ಹೈಬ್ರಿಡ್ ಕೆ.ಆರ್. ಎಚ್  ೪ ಭತ್ತ ತೆನೆಯಾಡುತ್ತಿದೆ. ತಮ್ಮ ಯಶಸ್ಸಿನ ಗುಟ್ಟನ್ನು ಅವರು ವಿವರಿಸುವುದು ಹೀಗೆ:

‘ಒಂದು ಎಕರೆಗೆ ಬೇಕಾಗುವ ಪೈರುಗಳನ್ನು ಬೆಳೆಸಲು ಸುಮಾರು ಅರ್ಧ ಗುಂಟೆ ಜಾಗ ಮತ್ತು ೨ ಕೆ.ಜಿ. ಬಿತ್ತನೆ ಬೀಜ ಬೇಕು. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪಾತಿ ನೆಲದ ಮೇಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಸುಮಾರು ಮುಕ್ಕಾಲು ಇಂಚು ಎತ್ತರ ಬರುವಂತೆ ಹರಡಬೇಕು. ಆಮೇಲೆ ಮೊಳಕೆ ಬಂದ ಬೀಜವನ್ನು ಸಮನಾಗಿ ಹರಡಬೇಕು. ಇದರ ಮೇಲೆ ಸ್ವಲ್ಪ ಮಣ್ಣು ಅಥವಾ ಕಾಂಪೋಸ್ಟ್ ಹಾಕಿ ಹುಲ್ಲಿನಿಂದ ಮುಚ್ಚಬೇಕು. ಪ್ರತಿ ದಿನ ನೀರನ್ನು ಚಿಮುಕಿಸಬೇಕು. ಮೂರು ದಿನಗಳ ನಂತರ ಭತ್ತದ ಹುಲ್ಲನ್ನು ತೆಗೆಯಬೇಕು. ಸುಮಾರು ೮ ರಿಂದ೧೦ ದಿನಗಳಲ್ಲಿ ಪೈರು ಸದೃಢವಾಗಿ ಬೆಳೆದು ನಾಟಿ ಮಾಡಲು ಬರುತ್ತದೆ’.

ವಾಡಿಕೆ ಪದ್ಧತಿಯಲ್ಲಿ ಭತ್ತ ಬೆಳೆಯಲು ಭೂಮಿ ಸಿದ್ಧತೆ ಮಾಡುವ ಹಾಗೆಯೇ ಇಲ್ಲೂ ಮಾಡಬೇಕು ಎನ್ನುವ ಪುಟ್ಟಸ್ವಾಮಿ, ಗದ್ದೆ

ತೇವವಾಗಿರಬೇಕೆ ಹೊರತು ನೀರು ನಿಂತಿರಬಾರದು ಎನ್ನುತ್ತಾರೆ. ‘ನಾಟಿಗೆ ಮುಂಚಿತವಾಗಿ ಸಮನಾಗಿ ಮಾಡಿದ ಕೆಸರು ಗದ್ದೆಯಲ್ಲಿ ಪ್ರತಿ ೨ ಮೀಟರ್ ಅಂತರದಲ್ಲಿ ಒಂದು ಅಡಿ ಅಗಲವಿರುವ ಸಣ್ಣ ಬಸಿ ಕಾಲುವೆಗಳನ್ನು ತೆಗೆಯಬೇಕು. ನಂತರ

೮ ರಿಂದ ೧೦ ದಿನಗಳ ಭತ್ತದ ಪೈರುಗಳನ್ನು ನಾಟಿ ಮಾಡಿದರೆ ಪೈರುಗಳ ಬೇರುಗಳಿಗೆ ಗಾಯವಾಗುವುದಿಲ್ಲ ಮತ್ತು ಚೆನ್ನಾಗಿ ಬೆಳೆದು ತೆಂಡೆಗಳು ಹೆಚ್ಚಾಗುತ್ತವೆ. ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ೨೫ ಸೆಂ.ಮೀ ಇರುವಂತೆ ಚೌಕಾಕಾರವಾಗಿ ನಾಟಿ ಮಾಡಬೇಕು. ಇದಕ್ಕೆ  ಮಾರ್ಕರ್‌ ಅನ್ನು ಬಳಸಿ ನಾಟಿ ಮಾಡಬಹುದು.

ವಾಡಿಕೆಯಂತೆ ನೀರನ್ನು ಗದ್ದೆಯಲ್ಲಿ ನಿಲ್ಲಿಸದೇ ಕೇವಲ ಮಣ್ಣಿನಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು ಮತ್ತು ನೀರು ಕಡಿಮೆಯಾಗಿ ಮಣ್ಣು ಬಿರುಕು ಬರದ ಹಾಗೆ ನೋಡಿಕೊಳ್ಳಬೇಕು. ನೀರನ್ನು ನಿಲ್ಲಿಸದೇ ಇರುವುದರಿಂದ ಕಳೆಗಳ ಬೆಳವಣಿಗೆ ಹೆಚ್ಚಾಗಿ ಆಗುತ್ತದೆ. ಇದಕ್ಕಾಗಿ ಕೊನೊವೀಡರ್‌ನಿಂದ ಸುಮಾರು ೨ ರಿಂದ ೩ ಸಲ ಕಳೆ ತೆಗೆಯಬೇಕಾಗುತ್ತದೆ. ನಾಟಿ ಮಾಡಿದ ಒಂದು ತಿಂಗಳಲ್ಲಿ ಮೊದಲನೆ ಕಳೆ ತೆಗೆಯಬೇಕಾಗುತ್ತದೆ. ಇದರಿಂದ ಬೇರುಗಳಿಗೆ ಜಾಸ್ತಿ ಗಾಳಿ ಮತ್ತು ಸಾರಜನಕ ಲಭ್ಯವಾಗಿ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಮತ್ತು ಕಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕಳೆಗಳನ್ನು ಅದೇ ಮಣ್ಣಿನಲ್ಲಿ ಸೇರಿಸಿದರೆ ಮಣ್ಣಿನಲ್ಲಿ ವಿವಿಧ ಸೂಕ್ಷಾಣುಗಳ ಸಂಖ್ಯೆ ಹೆಚ್ಚಿ ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ’ ಎಂಬ ವಿವರಣೆ ಅವರದ್ದು.

ಮತ್ತೊಮ್ಮೆ ರೈತ ಸತೀಶ್‌ ಹೇಳುವಂತೆ ‘ಸಾಂಪ್ರದಾಯಿಕ ಪದ್ಧತಿಯಲ್ಲಿ ಪಡೆಯುವ ಸರಾಸರಿ ಇಳುವರಿ ಪ್ರತಿ ಎಕರೆಗೆ ೧೮ ರಿಂದ ೨೨ ಕ್ವಿಂಟಲ್‌ಗಳಿಗಿಂತ ಅಧಿಕವಾಗಿ ಅಂದರೆ ೨೪ ರಿಂದ ೨೮ ಕ್ವಿಂಟಲ್‌ಗಳವರೆಗೆ ಇಳುವರಿಯನ್ನು ಪಡೆಯಬಹುದು. ಆದರೆ ಈಗ ಬೆಳೆದಿರುವ ಕೆ.ಆರ್. ಎಚ್ ೪ ಹೈಬ್ರಿಡ್ ಭತ್ತದಲ್ಲಿ ಕಳೆದ ವರ್ಷ ೩೨ ಕ್ವಿಂಟಲ್  ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಬೆಳೆ ಚೆನ್ನಾಗಿದೆ ೩೮ ಕ್ವಿಂಟಲ್ ಬಂದೇ ಬರುತ್ತದೆ ಎಂದು ಹೇಳುತ್ತಾರೆ. ಒಂದು ಗುಳಿಗೆ ಒಂದೇ ಪೈರನ್ನು ನಾಟಿ ಮಾಡುವುದರಿಂದ ಬೇಕಾಗುವ ಬಿತ್ತನೆ ಬೀಜ ಎಕರೆಗೆ ಕೇವಲ ೧ ಕೆ.ಜಿ. ಈ ಪದ್ಧತಿಯಲ್ಲಿ ಪ್ರತಿ ಗಿಡಕ್ಕೆ ೪೦ ರಿಂದ ೫೦ ಉತ್ತಮ ತೆಂಡೆಗಳು ಬರುತ್ತವೆ. ಇತರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ತೆಂಡೆಗಳ ಸಂಖ್ಯೆ 25 ಮೀರುವುದಿಲ್ಲ. ಹೆಚ್ಚಿನ ಪೌಷ್ಠಿಕಾಂಶಗಳ ಪೂರೈಕೆ, ಗೊಬ್ಬರ ಹಾಗೂ ನೀರಿನ ಕೊರತೆ ಇರುವ ಹೊಲಗಳಲ್ಲೇ ಉತ್ತಮ ಇಳುವರಿ ನೀಡುತ್ತವೆ.

ತೆಂಡೆ ಹೊಡೆಯುವ ಹಂತ, ಹೂವು ಬಿಡುವ ಹಂತ ಹಾಗೂ ಕಾಳು ಕಟ್ಟುವ ಹಂತಗಳಲ್ಲಿ ನೀರನ್ನು ಮುಕ್ಕಾಲು ಅಥವಾ ಒಂದು ಇಂಚು ನೀರನ್ನು ನಿಲ್ಲಿಸಿದರೆ ಎಕರೆಗೆ ೪೦ ಕ್ವಿಂಟಲುಗಳಿಗಿಂತ ಅಧಿಕ ಇಳುವರಿ ಪಡೆಯಬಹುದು.

ಮಾಮೂಲಿ ಪದ್ಧತಿಯಲ್ಲಿ ಎಕರೆಗೆ ೨೦ ರಿಂದ -೨೫ ಕೆ.ಜಿ. ಬಿತ್ತನೆ ಬೀಜ ಬೇಕಾದರೆ ಇಲ್ಲಿ ಸುಮಾರು ೨ ಕೆ.ಜಿ ಸಾಕಾಗುತ್ತದೆ ಎನ್ನುತ್ತಾರೆ ಅನುಭವಿ ಯುವ ಕೃಷಿಕ

ಎಂ. ಎಸ್. ಆನಂದ್. ‘ಈ ಪದ್ಧತಿಯಲ್ಲಿ ಖರ್ಚು ಕಡಿಮೆಯಾಗುವುದಲ್ಲದೇ ಇಳುವರಿಯು ಜಾಸ್ತಿಯಾಗುತ್ತದೆ. ಅಚ್ಚುಕಟ್ಟು ಪ್ರದೇಶದ ರೈತರೂ ಕಡಿಮೆ ನೀರಲ್ಲಿ ಭತ್ತವನ್ನು ಬೆಳೆದು ಬೇಸಾಯ ಮಾಡಿದರೆ ನೈಸರ್ಗಿಕ ಸಂಪನ್ಮೂಲ ಜೀವಸೆಲೆಯಾದ ನೀರನ್ನು ನೀರಾವರಿಗಾಗಿ ಇನ್ನು ಹೆಚ್ಚಿನ ಪ್ರದೇಶಕ್ಕೆ ಕೊಡಬಹುದು’ ಎನ್ನುತ್ತಾರವರು.

ಕೆ.ಆರ್. ಎಚ್ -೪ ಭತ್ತದಲ್ಲಿ ಮಾಡಿದ ಅನ್ನ ತಿನ್ನಲು ರುಚಿಯಾಗಿರುತ್ತದೆ ಮತ್ತು ಬೇಗ ಹಳಸುವುದಿಲ್ಲ ಎನ್ನುವುದು ರೈತ ಮಹಿಳೆ ಶೀಲಾ ಪುಟ್ಟಸ್ವಾಮಿ ಅವರ ಅನುಭವದ ಮಾತು.

ಪುಟ್ಟಸ್ವಾಮಿ- ಅವರ ಸಂಪರ್ಕ ಸಂಖ್ಯೆ ೮೭೧೦೮೯೫೯೧೦. ಮಾಹಿತಿಗೆ ವಿಜ್ಞಾನಿ ಡಾ. ಸಿ. ರಾಮಚಂದ್ರ ೯೪೪೯೧ ೩೭೩೬೨. ಹೈಬ್ರಿಡ್ ಭತ್ತಕ್ಕಾಗಿ ಡಾ. ಎನ್. ಶಿವಕುಮಾರ್- ೯೪೪೮೫ ೨೮೪೮೧. ಮಣ್ಣು ಮತ್ತು ನಿರ್ವಹಣೆ ಬಗ್ಗೆ ವಿಜ್ಞಾನಿ ಡಾ. ಆರ್. ಕೃಷ್ಣ ಮೂರ್ತಿ ೯೬೩೨೨ ೦೨೫೨೧.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT