ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೂ ಬೇಕು ಅಜೋಲ

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಈಗೀಗ ಅಜೋಲ ಕೃಷಿಯಲ್ಲಿ ಮಹತ್ವದ ಸ್ಥಾನ ಗಳಿಸಿಕೊಳ್ಳುತ್ತಿದೆ. ಇದನ್ನು ಪ್ರತ್ಯೇಕವಾಗಿ ಬೆಳೆದು ಹಲವಾರು ವಿಧಗಳಲ್ಲಿ ಲಾಭ ಗಳಿಸಿಕೊಳ್ಳುವುದು ಬಹುತೇಕ ರೈತರಿಗೆ ತಿಳಿದಿದೆ. ಆದರೆ ಇದೇ ಅಜೋಲವನ್ನು ಭತ್ತದ ಗದ್ದೆಯಲ್ಲಿ ಬೆಳೆದರೆ ಭತ್ತದ ಇಳುವರಿ ಹೆಚ್ಚಿಸಬಹುದು ಎಂಬ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ.

ಭತ್ತದ ಮಡಿಯನ್ನು ತಯಾರಿಸುವ ಸಮಯದಲ್ಲಿಯೇ ಅಜೋಲ ಬೆಳೆಯನ್ನೂ ಬೆಳೆಯಬೇಕಾಗುತ್ತದೆ. ಇದರ ಎಲೆಗಳ ಕೆಳಭಾಗದಲ್ಲಿ ಬದುಕುವ ಅನಬಿನ ಎಂಬ ಬ್ಯಾಕ್ಟೀರಿಯಾ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವ ಗುಣ ಹೊಂದಿರುವುದರಿಂದ ಒಂದು ಎಕರೆಯಲ್ಲಿ ಭತ್ತದ ಜೊತೆಗೆ ಇದನ್ನು ಬೆಳೆದರೆ ಸುಮಾರು 20 ಕೆ.ಜಿ ಸಾರಜನಕದ ಜೊತೆಗೆ ಸುಮಾರು 15–20 ಟನ್ ಸಾವಯವ ಪದಾರ್ಥವನ್ನು ಭೂಮಿಗೆ ಒದಗಿಸಿದಂತಾಗುತ್ತದೆ. ಇದರಿಂದ ಬೆಳೆಗೆ ಬೇಕಾದ ಇತರ ಸಸ್ಯಪೋಷಕಾಂಶಗಳನ್ನು ಒದಗಿಸುವ ಜೊತೆ ಕಳೆ ನಿಯಂತ್ರಣವನ್ನೂ ಮಾಡಬಹುದು.

ಏಕರೂಪದ ಬೆಳೆ ಪದ್ಧತಿಯಿಂದಾಗಿ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹಾಗೂ ಕೃಷಿಯಲ್ಲಿ ಸಾವಯವ ಪದಾರ್ಥಗಳ ಬಳಕೆಯಲ್ಲಿ ರೈತರು ತೋರಿಸುತ್ತಿರುವ ನಿರುತ್ಸಾಹದಿಂದಾಗಿ ಬಹುತೇಕ ಭತ್ತ ಬೆಳೆಯುವ ಪ್ರದೇಶದ ಮಣ್ಣಿನ ಆರೋಗ್ಯ ಹಾಳಾಗಿದೆ. ಮಣ್ಣಿನ ಪುನಶ್ಚೇತನಕ್ಕಾಗಿ ರೈತರು ಹೆಚ್ಚು ಹೆಚ್ಚು ಸಾವಯವ ಪದಾರ್ಥವನ್ನು ಬಳಸುವುದು ಅನಿವಾರ್ಯ. ಬೇರೆಲ್ಲಾ ಸಾವಯವ ಪದಾರ್ಥಗಳ ಮೂಲಗಳಿಗೆ ಹೋಲಿಸಿದರೆ ಭತ್ತದ ಗದ್ದೆಯಲ್ಲಿ ಉತ್ತಮವಾಗಿ ಬೆಳೆಯಬಲ್ಲ ಹಾಗೂ ಸಾರಜನಕವನ್ನು ಸ್ಥಿರೀಕರಿಸುವ ಶಕ್ತಿ ಹೊಂದಿರುವ ಅಜೋಲವನ್ನು ಬೆಳೆಸಿದರೆ ಉತ್ತಮ. ಇದರಿಂದ ಭೂಮಿಗೆ ಹಸಿರೆಲೆ ಗೊಬ್ಬರದ ರೂಪದಲ್ಲಿ ಒದಗಿಸುವುದು ಹೆಚ್ಚು ಉಪಯುಕ್ತ ಹಾಗೂ ಸುಲಭದ ಕೆಲಸ.

ಅಜೋಲ ಬೆಳೆಯುವುದು ಹೀಗೆ...
ಅಜೋಲದ ದ್ರವ್ಯರಾಶಿ ಹೆಚ್ಚಾದಷ್ಟು ಭತ್ತದ ಬೆಳೆಗೆ ಉಪಯುಕ್ತ. ಆದ್ದರಿಂದ ಅಜೋಲ ಬೆಳವಣಿಗೆ ಹೆಚ್ಚಾಗಬೇಕಾದರೆ ಭತ್ತದ ಗದ್ದೆಗೆ ನಾವು ಬೀಜ ರೂಪದಲ್ಲಿ ಒದಗಿಸುವ ಅಜೋಲದ ದ್ರವ್ಯರಾಶಿಯು ಹೆಚ್ಚು ಇರಬೇಕು. ಆದ್ದರಿಂದ ರೈತರು ನಾಟಿ ಮಾಡುವ ಮೊದಲೇ, ಅಂದರೆ ಸಸಿ ಮಡಿ ತಯಾರಿಸುವ ಸಮಯದಲ್ಲಿಯೇ ಇದರ ಮಡಿಯನ್ನು ತಯಾರಿಸಿಕೊಂಡು ಸುಮಾರು ಒಂದು ಎಕರೆಗೆ ಬೇಕಾದ 200–300 ಕೆ.ಜಿ ಯಷ್ಟು ಅಜೋಲ ತಯಾರಿಸಿಕೊಂಡಿರಬೇಕು.

ಮಡಿ ತಯಾರಿಸುವ ವಿಧಾನ:- ಭತ್ತದ ಸಸಿಮಡಿ ತಯಾರಿಸುವ ಜಾಗದ ಪಕ್ಕದಲ್ಲಿಯೇ ಸುಮಾರು 100 ಚದರ ಅಡಿಯ ಒಂದು ಸಮತಟ್ಟಾದ ಹಾಗೂ ನೀರಿನ ಲಭ್ಯತೆಯಿರುವ ಒಂದು ಪ್ರದೇಶವನ್ನು ಗುರುತಿಸಿ ಇದರ ಸುತ್ತ ನೀರು ನಿಲ್ಲಲು ಸೂಕ್ತವಾಗುವಂತೆ ಸುಮಾರು ಅರ್ಧ ಅಡಿ ಎತ್ತರದ ಬದುವನ್ನು ನಿರ್ಮಿಸಬೇಕು. 

ಈ ಒಂದು ಮಡಿಯ ತುಂಬ 150 ಕೆ.ಜಿ ಕೊಟ್ಟಿಗೆ ಗೊಬ್ಬರ ಜೊತೆಗೆ 2 ಕೆ.ಜಿ ಸೂಪರ್ ಫಾಸ್ಪೇಟ್ ಅನ್ನು ಸಮನಾಗಿ ಹರಡಬೇಕು. ತದನಂತರ ಈ ಮಡಿಯಲ್ಲಿ ನಾಲ್ಕು ಇಂಚು ನೀರು ನಿಲ್ಲಿಸಿ, ನೀರಿನ ಮೇಲೆ ಸುಮಾರು 3 ಕೆ.ಜಿ ಅಜೋಲವನ್ನು ಸಮನಾಗಿ ಹರಡಬೇಕು. ಇದರೊಂದಿಗೆ 4–5 ಗ್ರಾಂ ಪ್ಯೂರಡಾನ್ ಹರಳನ್ನು ಅಜೋಲ ಮಡಿಗೆ ಸೇರಿಸುವುದು ಉತ್ತಮ. ಈ ರೀತಿ ಸಿದ್ಧಪಡಿಸಿದ ಅಜೋಲ ಮಡಿಯಲ್ಲಿ ಸುಮಾರು

4 ಇಂಚು ನೀರಿರುವಂತೆ 20 ದಿನಗಳವರೆಗೆ ನೀರಿನ ಮಟ್ಟ ಕಾಪಾಡಿಕೊಂಡರೆ, ನಾಟಿ ಹೊತ್ತಿಗೆ ನಮಗೆ ಬೇಕಾದ ಸುಮಾರು 300–400 ಕೆ.ಜಿ ಅಜೋಲ ದೊರೆಯುತ್ತದೆ. 

ಅಜೋಲವನ್ನು ಭತ್ತದೊಂದಿಗೆ ಬೆಳೆಯುವುದರಿಂದ ಭತ್ತಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ರೈತರು ತಾವು ಈಗಾಗಲೇ ಅಜೋಲ ಮಡಿಯಲ್ಲಿ ಬೆಳೆಸಿಕೊಂಡಿರುವ ಅಜೋಲವನ್ನು ನಾಟಿ ಮಾಡಿದ ಹತ್ತು ದಿನಗಳ ನಂತರ, ಭತ್ತದ ಗದ್ದೆಯ ತುಂಬ ಸಮನಾಗಿ ಹರಡಬೇಕು ಹಾಗೂ ನೀರನ್ನು ಕಟ್ಟಿ ನಿಲ್ಲಿಸಬೇಕು.

ಹೀಗೆ ಬೀಜರೂಪದಲ್ಲಿ ಹಾಕಿದ ಅಜೋಲ ಸುಮಾರು 20 ರಿಂದ 30 ದಿನಗಳಲ್ಲಿ ಭತ್ತದ ಸಸ್ಯಗಳಿಂದ ದೊರೆಯುವ ನೆರಳಿನ ಆಸರೆಯಲ್ಲಿ ಪೂರ್ತಿ ಒಂದು ಎಕರೆ ಪ್ರದೇಶಕ್ಕೂ ಹರಡಿ ಕೊಳ್ಳುತ್ತದೆ ಹಾಗೂ ಇದರ ದ್ರವ್ಯರಾಶಿಯು ಸುಮಾರು 5–10 ಟನ್‌ಗಳಷ್ಟಾಗಿರುತ್ತದೆ. 
ಈ ರೀತಿ ಹುಲುಸಾಗಿ ಬೆಳೆದ ಅಜೋಲವನ್ನು, ಭತ್ತದ ಮೊದಲನೆಯ ಕಳೆ ತೆಗೆಯುವ ಸಮಯದಲ್ಲಿ ಮಣ್ಣಿಗೆ ಸೇರಿಸಬಹುದು.

ಇಲ್ಲವಾದರೆ ಅದು ತಾನೇ ತಾನಾಗಿ ಕಳೆತು ಗೊಬ್ಬರವಾಗಿ, ನಿಧಾನವಾಗಿ ಬೆಳೆಗೆ ಸಾರಜನಕವನ್ನು ಒದಗಿಸುತ್ತದೆ. ಹೀಗೆ ಭೂಮಿಗೆ ಸೇರಿಸಿದ ನಂತರ, ಅಳಿದುಳಿದ ಅಜೋಲ ಬೆಳವಣಿಗೆ ಹೊಂದಿ ಮುಂದಿನ 20 ದಿನಗಳಲ್ಲಿ 5 ರಿಂದ 0 ಟನ್‌ಗಳಷ್ಟು ಅಜೋಲ ಒದಗಿಸುತ್ತದೆ. 

ಹೀಗೆ ಒಂದು ಭತ್ತದ ಬೆಳೆಯ ಅವಧಿಯಲ್ಲಿ ಸುಮಾರು 2 ರಿಂದ 6 ಅಜೋಲ್ಲ ಬೆಳೆಯನ್ನು ಬೆಳೆಯುವುದರಿಂದ ಭತ್ತದ ಗದ್ದೆಗೆ ಸುಮಾರು 20–30 ಟನ್ ಸಾವಯವ ಪದಾರ್ಥ ಒದಗಿಸಿದಂತಾಗುತ್ತದೆ ಹಾಗೂ ಹೀಗೆ ಮಾಡುವುದರಿಂದ ಭತ್ತದ ಇಳುವರಿ ಶೇ 20 ರಿಂದ 40 ರಷ್ಟು ವೃದ್ಧಿಯಾಗುತ್ತದೆ. ರೈತರು ಸಹ ಇಂತಹ ಸುಲಭದ ಕೆಲಸವನ್ನು ಕೈಗೊಂಡು ಅಧಿಕ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT