ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ರಕ್ಷಣೆಗೆ ‘ಒಳಗಟ್ಟಿ’

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರೈತರಿಗೆ ಹಿಡಿ ಮಣ್ಣೂ ಹೊನ್ನಿದ್ದಂತೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಮಣ್ಣನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಇದ್ದಲ್ಲಿಯೇ ಅದನ್ನು ರಕ್ಷಿಸಲು ಬಹಳ ಕಾಳಜಿ ವಹಿಸುತ್ತಾರೆ. ಉತ್ತಮ ತೇವಾಂಶ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಮತ್ತು ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟಲು ಒಡ್ಡು ಒಳಗಟ್ಟಿಗಳನ್ನು ನಿರ್ಮಿಸಿಕೊಳ್ಳುತ್ತಾರೆ.

ಒಡ್ಡು ಎಂದರೆ ಹೊಲದ ಇಳಿಜಾರಿನ ಜಾಗದ ಅಂಚಿಗೆ ಮಣ್ಣನ್ನು ಎತ್ತರಕ್ಕೆ ಹಾಕುವುದು. ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಿ ಮಣ್ಣು ಕೊಚ್ಚಿ ಹೋಗುವುದಿಲ್ಲ. ಒಳಗಟ್ಟಿ ಎಂದರೆ ಕಲ್ಲಿನಿಂದ ಜೋಡಿಸುವ ವಿಧಾನ. ಸಾಮಾನ್ಯವಾಗಿ ಹೊಲದ ಕ್ಷೇತ್ರಕ್ಕನುಗುಣವಾಗಿ ಒಳಗಟ್ಟಿಗಳು ಇರುತ್ತವೆ. ಆದರೆ ರೈತರು ನಿಯಮದ ಪ್ರಕಾರ ಮಾಡದೆ ಅನುಕೂಲಕ್ಕೆ ತಕ್ಕಂತೆ ಅಜಮಾಸು ಅಳತೆಯಿಂದ ನಿರ್ಮಿಸುವುದೇ ಹೆಚ್ಚು.

ಒಳಗಟ್ಟಿ ನಿರ್ಮಾಣಕ್ಕೆ ಚಪ್ಪಟೆ ಕಲ್ಲುಗಳು ಬೇಕು. ಈ ಕಲ್ಲುಗಳನ್ನು ಬಳಸುವುದರಿಂದ ಒಳಗಟ್ಟಿ ತಾಳಿಕೆ ಬರುತ್ತದೆ ಮತ್ತು ಹೊಲದಲ್ಲಿ ಬಿದ್ದ ನೀರು ಸರಾಗವಾಗಿ ಜಾರಿ ಹೋಗಿ ಮಣ್ಣು ಇದ್ದಲ್ಲಿಯೇ ಉಳಿಯುತ್ತದೆ. ಗುಂಡು ಕಲ್ಲುಗಳಾದರೆ ನೀರಿನ ರಭಸಕ್ಕೆ ಉರುಳಿ ಹೋಗುವ ಸಾಧ್ಯತೆ ಇರುತ್ತದೆ. ಚಪ್ಪಟೆ ಕಲ್ಲುಗಳನ್ನು ಸಮಾನಾಂತರವಾಗಿ ಜೋಡಿಸಿ ಎರಡೂ ದಂಡೆಗುಂಟ ಸ್ವಲ್ಪ ಎತ್ತರದಲ್ಲಿ ಒಡ್ಡು ಹಾಕಿ ಹುಲ್ಲು ಬೆಳೆಸಿದರೆ ಎಂತಹ ಜೋರು ಮಳೆಗೂ ಜಪ್ಪೆನ್ನುವುದಿಲ್ಲ.

ಅಲ್ಪ ಜಮೀನು ಇರುವ ರೈತರು ಒಳಗಟ್ಟಿ ಕಟ್ಟಿಸಿದರೆ, ಹೆಚ್ಚು ಜಮೀನು ಹೊಂದಿದ ರೈತರು ಗುಂಡು ವರತಿಯನ್ನು ಕಟ್ಟಿಸಿ ಹೊಲದ ಬದುವಿನ ಮೂಲೆಯ ಇಳಿಜಾರಿನ ಜಾಗದಲ್ಲಿ ಐದಾರು ಅಡಿ ಆಳದ ಗುಂಡಿ ತೋಡುತ್ತಾರೆ. ಸುತ್ತಲೂ ಸಿಮೆಂಟು ಕಲ್ಲುಗಳಿಂದ ಕಟ್ಟಿ ತಳದಲ್ಲಿ ನೀರು ಹರಿದು ಹೋಗಲು ಕೊಳವೆಯಾಕಾರದ ದಾರಿ ಮಾಡಿ ಬದುವಿನ ದಂಡಿಗೆ ಕಮಾನಿನಾಕಾರದ ಬಾಗಿಲು ಮಾಡುತ್ತಾರೆ. ಮಳೆಯ ರಭಸಕ್ಕೆ ನೀರು ಈ ಚಿಕ್ಕ ಬಾಗಿಲುಗಳ ಮೂಲಕ ಗುಂಡಿಯಲ್ಲಿ ಬಿದ್ದು ಹರಿದು ಹೊರಗೆ ಹೋಗುತ್ತದೆ. ಇದು ಒಂಥರಾ ಫಿಲ್ಟರ್ ಇದ್ದಂತೆ. ಜರಡಿಯಲ್ಲಿ ಚಹಾ ಮಾತ್ರ ಸೋಸಿ ಬಂದು ಪುಡಿ ಮೇಲಿರುವಂತೆ ನೀರಷ್ಟೇ ಹರಿದು ಹೋಗಿ ಮಣ್ಣು ಗುಂಡಿಯ ದಂಡಿಗೇ ಸಂಗ್ರಹವಾಗಿರುತ್ತದೆ.

ಅನುಭವಿ ರೈತರು ಹೇಳುವಂತೆ ಒಡ್ಡು ಒಳಗಟ್ಟಿ ಇದ್ದ ಹೊಲಕ್ಕೆ ಜಡ್ಡೇ ಇಲ್ಲ. ಆ ಹೊಲ ಸದಾ ಕಾಲ ಆರೋಗ್ಯವಾಗಿಯೇ ಇರುತ್ತದೆ. ಇದರಿಂದ ಮಳೆಗಾಲದಲ್ಲಿ ನೀರುಂಡು ಮಣ್ಣಿನ ಗುಣ ಬದಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಭೂಮಿ ತೇವಾಂಶಗೊಳ್ಳುತ್ತದೆ. ಅಲ್ಲದೆ ನೀರನ್ನು ವಿವಿಧ ಕಾರ್ಯಗಳಿಗೂ ಬಳಸಿಕೊಳ್ಳಲು ಅನುಕೂಲ, ಒಡ್ಡು ಒಳಗಟ್ಟಿ ಯಾಕೆ ಬೇಕೆಂದು ನಿರ್ಲಕ್ಷಿಸಿದರೆ ಅಥವಾ ಕಟ್ಟಿಸದಿದ್ದರೆ ಹೊಲದಲ್ಲಿ ಮಣ್ಣು ನಿಲ್ಲುವುದೇ ಕಷ್ಟ.

ಪಕ್ಕದವರ ಹೊಲದಲ್ಲಿ ಬೇಕಾಬಿಟ್ಟಿಯಾಗಿ ಹರಿದು ಹೋಗಿ ಬಿಡುತ್ತದೆ. ಹಾಗೆ ಹರಿದು ಹೋದ ಮಣ್ಣನ್ನು ಯಾವ ಕಾರಣಕ್ಕೂ ಮರಳಿ ತೆಗೆದುಕೊಳ್ಳುವಂತಿಲ್ಲ. ಒಬ್ಬರದು ಬಯಸದೇ ಬಂದ ಭಾಗ್ಯ. ಮತ್ತೊಬ್ಬರದು ಇದ್ದುದ್ದನ್ನು ಕಳೆದುಕೊಂಡು ಗೋಳಾಡುವ ದೌರ್ಭಾಗ್ಯ. ಎಷ್ಟೇ ಗೊಬ್ಬರ ಸುರುವಿದರೂ ವ್ಯರ್ಥ. ಬೆಳೆ ಬರುವ ನಿರೀಕ್ಷೆಯೂ ಏರು ಪೇರು.

ಫಲವತ್ತಾದ ಕಪ್ಪು ಮಣ್ಣಿಗೆ ಹೆಸರಾದ ಬಾಗಲಕೋಟೆ ಜಿಲ್ಲೆಯ ಹುನಗುಂದದ ರೈತರ ಹೊಲಗಳ ಕಡೆಗೆ ದೃಷ್ಟಿ ಹರಿಸಿದರೆ ಇಂತಹ ಬಂದೋಬಸ್ತಾದ ಒಡ್ಡು ಒಳಗಟ್ಟಿಗಳು ಕಾಣಿಸುತ್ತವೆ. ಹೊಲದ ಮಣ್ಣು ರಕ್ಷಣೆಗೆ, ಉತ್ತಮ ಬೆಳೆಯ ಇಳುವರಿಗೆ ರೈತರು ಕಂಡುಕೊಂಡ ಈ ವಿಧಾನ ಅತ್ಯಂತ ಪ್ರಯೋಜನಕರವಾಗಿದ್ದು, ಇದನ್ನು ಎಲ್ಲ ರೈತರೂ ಬಳಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT