ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಲ್ಲಿ ಬೆಳೆಸಿ ಹೊಮ್ಮೀನು

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ಇದರಿಂದಾಗಿಯೋ ಎನ್ನುವಂತೆ ಪೈಪೋಟಿ ನಡೆಸುತ್ತಾ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಕಚೇರಿ ಅಥವಾ ಕೃಷಿ ಕೆಲಸಗಳನ್ನು ಮುಗಿಸಿ ನೂಕು ನುಗ್ಗಲಿನಲ್ಲಿ ಪ್ರಯಾಣ ಮಾಡಿ, ಆಟೋ, ಲಾರಿ, ಬಸ್ಸು ಮತ್ತು ಜನ ಜಂಗುಳಿಗಳನ್ನು ದಾಟಿ ಸಾಯಂಕಾಲ ಮನೆ ತಲುಪಿ, ಮುಖ ತೊಳೆದು ಒಂದು ಲೋಟ ಬೆಚ್ಚನೆಯ ಕಾಫಿ ಹೀರುತ್ತಾ ಮನೆಯಲ್ಲಿ ಕುಳಿತಾಗ ಎದುರಿನ ಪುಟ್ಟ ಗಾಜಿನ ಮನೆಯಲ್ಲಿ ಯಾವುದೇ ಜಂಜಾಟವಿಲ್ಲದೇ ಚಿಕ್ಕ ರೆಕ್ಕೆಗಳನ್ನಾಡಿಸುವ ಪುಟ್ಟ ಪುಟ್ಟ ಬಣ್ಣದ ಮೀನುಗಳು ಮನಸ್ಸಿಗೆ ಹಿತವಾದ ಅನುಭವ ನೀಡುತ್ತವೆ.
 
ಅವುಗಳ ಸ್ವಚ್ಛಂದ ವಿಹಾರ ನೋಡಿದರೆ ಮನದ ಜಂಜಾಟವೆಲ್ಲಾ ನಮಗರಿವಿಲ್ಲದಂತೆಯೇ ಇಳಿದು ಹೋಗಿ ಪ್ರಶಾಂತ ಚಿತ್ತ ಮೂಡುತ್ತದೆ. ಆ ಪುಟ್ಟ ಮೀನುಗಳನ್ನೇ ನೋಡುತ್ತಾ ಅದೆಷ್ಟೋ ಸಲ ಮೈಮರೆಯುತ್ತೇವೆ.

ಅಂತಹ ಕಿನ್ನರ ಲೋಕಕ್ಕೆ ಕರದೊಯ್ಯುವ ಬಣ್ಣ ಬಣ್ಣದ ಮೀನುಗಳಲ್ಲೊಂದಾದ ಕೆಂಪು ಹೊಮ್ಮೀನಿನ (ಗೋಲ್ಡ್ ಫಿಷ್) ಬಗ್ಗೆ ತಿಳಿಯೋಣ ಬನ್ನಿ.

ಬಣ್ಣ ಬಣ್ಣದ ಮೀನುಗಳನ್ನು ಗಾಜಿನ ತೊಟ್ಟಿ (ಅಕ್ವೇರಿಯಂ) ಗಳಲ್ಲಿ ಸಾಕುವ ಹವ್ಯಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
 
ಹೀಗಾಗಿ ಈ ಮೀನುಗಳ ಬೇಡಿಕೆ ಸಹ ದಿನದಿಂದ ದಿನಕ್ಕೆ ಏರುತ್ತಿದೆ. ನಮ್ಮ ದೇಶದ ಒಳನಾಡು ಮತ್ತು ಕಡಲ ತೀರದ ಪ್ರದೇಶಗಳಲ್ಲಿ ಬಣ್ಣದ ಮೀನುಗಳ ವಿಪುಲ ಸಂಪನ್ಮೂಲವಿದೆ. ಇವುಗಳ ಜೊತೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬಣ್ಣದ ಮೀನುಗಳನ್ನು ಸಂತಾನಾಭಿವೃದ್ಧಿ ಮಾಡಿಸಿ ಪೂರೈಸುವುದು ಅನಿವಾರ್ಯ. ಹೀಗಾಗಿ ಅದು ಈಗ ಲಾಭದಾಯಕ ಉದ್ಯಮವೂ ಹೌದು.

ಮೀನು ಮೂಲ
ಹೊಮ್ಮೀನುಗಳು ಸಿಪ್ರಿನಿಡೇ ಎಂಬ ಕುಟುಂಬಕ್ಕೆ ಸೇರಿದ್ದು, ಮೂಲತಃ ಚೀನಾ ಇವುಗಳ ತವರೂರು. ಇವು ಅಲಂಕಾರಿಕ ಮೀನುಗಳಲ್ಲೆೀ ಅತ್ಯಂತ ಆಕರ್ಷಕ. ಹೀಗಾಗಿ ವಿಶ್ವದ ಬಹು ಭಾಗದ ಮೀನುಪ್ರಿಯರ ಮನ ಗೆದ್ದಿವೆ. ಇವು ಸದೃಢ ಮತ್ತು ಬಲಶಾಲಿಗಳಾಗಿದ್ದು, ಯಾವುದೇ ರೀತಿಯ ವೈಪರೀತ್ಯಗಳನ್ನು ಕೆಲವು ಕಾಲ ತಡೆದು ಕೊಳ್ಳುವ ಗುಣ ಹೊಂದಿವೆ.
 
ಸಾಮಾನ್ಯವಾಗಿ ನಿಂತ ಅಥವಾ ಮಂದಗತಿಯಲ್ಲಿ ಹರಿಯುವ ನೀರಿನ ತಾಣಗಳು ಇವುಗಳ ವಾಸಸ್ಥಳ. ಇವು ಕೆಲವು ಸಂದರ್ಭಗಳಲ್ಲಿ ಶೂನ್ಯದಿಂದ 280 ಡಿಗ್ರಿ ಸೆಲ್ಷಿಯಸ್ ವರೆಗಿನ ತಾಪಮಾನವನ್ನು ತಾಳಿಕೊಂಡರೂ ತಂಪು ವಾತಾವರಣವನ್ನು ಇಷ್ಟ ಪಡುತ್ತವೆ.

ತಳಿಗಳು
126 ವಿವಿಧ ವರ್ಣಗಳ ಸಮ್ಮಿಶ್ರಣದ ಹೊಮ್ಮೀನುಗಳಿವೆ. ತೆಳು ಹೊಂಬಣ್ಣ, ಕೆಂಪು, ಹಳದಿ ಮಿಶ್ರಿತ ಕೆಂಪು, ಬಿಳಿ ಮಿಶ್ರಿತ ಕೆಂಪು ಹೀಗೆ ವರ್ಣ ವೈವಿಧ್ಯದಿಂದ ಕೂಡಿವೆ. ಹೊಮ್ಮೀನು, ಬೀಸಣಿಗೆಯಂತಹ ಬಾಲ ಹೊಂದಿದ ಮೀನು, ಬಾಲದಲ್ಲಿ ಚುಕ್ಕೆ ಹೊಂದಿರುವ ಮೀನು, ಕಪ್ಪು ಮೂರ್, ಮೊಟ್ಟೆಯಾಕಾರದ ಮೀನು, ದುರ್ಬೀನು ಆಕಾರದ ಕಣ್ಣಿನ ಮೀನು ಮತ್ತು ಸಿಂಹದ ತಲೆಯಾಕಾರ ಹೊಂದಿರುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ.

ಹೊಮ್ಮೀನುಗಳು ಮೊಟ್ಟೆಗಳನ್ನು ನೀರಿಗೆ ಬಿಡುಗಡೆ ಮಾಡಿ ಸಂತಾನ ಹೆಚ್ಚಿಸುವ ಜಾತಿಗೆ ಸೇರಿದವು. 15 ರಿಂದ 53 ಸೆಂ.ಮೀ ಉದ್ದ ಇರುವಾಗ ಪ್ರೌಢಾವಸ್ಥೆಗೆ ಬಂದರೂ, ಎರಡು ವರ್ಷದ ಮೀನುಗಳನ್ನು ಸಂತಾನೋತ್ಪತ್ತಿಗೆ ಉಪಯೋಗಿಸುವುದು ಸೂಕ್ತವಾಗಿದೆ. ಪ್ರೌಢಾವಸ್ಥೆಗೆ ಬಂದ ಹೆಣ್ಣು ಮತ್ತು ಗಂಡು ಹೊಮ್ಮೀನುಗಳನ್ನು ಬಹಳ ಸುಲಭವಾಗಿ ಗುರ್ತಿಸಬಹುದು.

ಗಂಡು: ಪ್ರಾಯಕ್ಕೆ ಬಂದ ಗಂಡು ಹೊಮ್ಮೀನಿನ ಈಜು ರೆಕ್ಕೆಗಳು ಒರಟಾಗಿರುತ್ತವೆ. ತಲೆಯ ಮೇಲ್ಭಾಗ, ಕಿವಿರಿನ ಮುಚ್ಚಳ ಮತ್ತು ದೇಹದ ಕೆಲವು ಭಾಗಗಳಲ್ಲಿ ಬಿಳಿಯ ಚುಕ್ಕೆಗಳಿದ್ದು, ಹೊಟ್ಟೆಯ ಭಾಗವನ್ನು ಮದುವಾಗಿ ಅದುಮಿದಾಗ ಬಿಳಿಯ ದ್ರವ (ಮಿಲ್ಪ್) ಹೊರ ಬರುತ್ತದೆ.

ಹೆಣ್ಣು: ಪ್ರಾಯಕ್ಕೆ ಬಂದ ಹೆಣ್ಣು ಹೊಮ್ಮೀನಿನ ಈಜು ರೆಕ್ಕೆಗಳು ಮೃದುವಾಗಿದ್ದು ಕಿವಿರಿನ ಮುಚ್ಚಳ, ತಲೆ ಮತ್ತು ದೇಹದ ಯಾವುದೇ ಭಾಗಗಳಲ್ಲಿ ಬಿಳಿಯ ಚುಕ್ಕೆಗಳು ಇರುವುದಿಲ್ಲ. ಹೊಟ್ಟೆಯ ಭಾಗ ದಪ್ಪವಾಗಿದ್ದು ಮೃದುವಾಗಿ ಅದುಮಿದರೆ ಸಣ್ಣ ಮೊಟ್ಟೆಗಳು ಹೊರ ಬರುತ್ತವೆ.

ಪಾಲನೆ, ತಯಾರಿ
ಪ್ರೌಢಾವಸ್ಥೆಗೆ ಬಂದ ಹೆಣ್ಣು ಮತ್ತು ಗಂಡು ಮೀನುಗಳನ್ನು ಸಂತಾನೋತ್ಪತ್ತಿ ಕ್ರಿಯೆಗೆ ಬಿಡುವ ಮುನ್ನ ಬೇರೆ ಬೇರೆ ಕೊಳಗಳಲ್ಲಿ ಪೋಷಿಸುವುದು ವಾಡಿಕೆ. ಈ ರೀತಿ ಬೇರ್ಪಡಿಸುವುದರಿಂದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.
 
ಸಾಮಾನ್ಯವಾಗಿ ಪಾಲನಾ ಕೊಳಗಳಿಗೆ ಒಂದು ಚದರ ಮೀಟರ್‌ಗೆ 20 ಗ್ರಾಂ ಸುಣ್ಣ ಹರಡಿ ಮೂರ‌್ನಾಲ್ಕು ದಿನಗಳ ನಂತರ ನೀರು ತುಂಬಿಸಬೇಕು. ಆದಾದ ಮೇಲೆ ಒಂದು ಚ.ಮೀ.ಗೆ 200 ಗ್ರಾಂ ಹಸುವಿನ ಸಗಣಿಯನ್ನು ಹಾಕಿ ಕೊಳವನ್ನು ಫಲವತ್ತು ಮಾಡಬೇಕು.

ಈ ರೀತಿ ಮಾಡಿದ ಹದಿನೈದು ದಿನಗಳ ನಂತರ ಮೀನುಗಳನ್ನು ಬಿಡುವುದರಿಂದ ಕೊಳದ ನೀರಿನಲ್ಲಿ ಉತ್ಪಾದನೆಯಾದ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಸೂಕ್ಷ್ಮಾಣು ಜೀವಿಗಳು ಹೊಮ್ಮೀನುಗಳಿಗೆ ಆಹಾರ ಒದಗಿಸುತ್ತವೆ. ಇದರ ಜೊತೆಗೆ ಸಸಾರಜನಕ ಮತ್ತು ಶರ್ಕರ ಪಿಷ್ಠಯುಕ್ತ ಪೂರಕ ಆಹಾರಗಳನ್ನು ಇವುಗಳ ದೇಹತೂಕದ ಶೇ 1-2  ಪ್ರಮಾಣದಲ್ಲಿ ನಿಗದಿತ ಸ್ಥಳಗಳಲ್ಲಿ ನೀಡುವುದು ಸೂಕ್ತ.

ಈ ಹೊಮ್ಮೀನುಗಳ ವಿಶೇಷ ಗುಣವೆಂದರೆ ಆಹಾರ ನೀಡಿದ ಐದೇ ನಿಮಿಷಗಳಲ್ಲಿ ಇಡೀ ದಿವಸಕ್ಕೆ ಸಾಕಾಗುವಷ್ಟು ಆಹಾರವನ್ನು ತಿನ್ನುತ್ತವೆ. ಈ ಗುಣದಿಂದಾಗಿ ನಾವು ನೀಡುತ್ತಿರುವ ಆಹಾರಗಳು ಹೊಮ್ಮೀನುಗಳಿಗೆ ಇಷ್ಟವಾಗಿದೆಯೇ, ಸಾಕಾಗಿದೆಯೇ ಎಂದು ತೀರ್ಮಾನಿಸಬಹುದು. ಈ ರೀತಿ ಪಾಲನೆ ಮಾಡಿ ಪರಿಪೂರ್ಣ ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿಗೆ ಸಿದ್ಧವಿರುವ ಮೀನುಗಳನ್ನು ಆಯ್ಕೆ ಮಾಡಿ ಉಪಯೋಗಿಸಬೇಕು.

ಸಂತಾನೋತ್ಪತ್ತಿಗೆ ಬಳಸುವ ಕೊಳಗಳು ಸ್ವಚ್ಛವಾಗಿದ್ದು, ಕೊಳೆ ಮುಕ್ತ ಸ್ವಚ್ಛ ನೀರನ್ನು ಹೊಂದಿರಬೇಕು. ಇಂತಹ ಕೊಳದಲ್ಲಿ ಸಂತಾನೋತ್ಪತ್ತಿಗಾಗಿ ಬಳಸುವ ನೈಲಾನ್ ಹಾಪನ್ನು (ಚೌಕಾಕಾರದ ಸೊಳ್ಳೆ ಪರದೆಯಿಂದ ಮಾಡಿದ ಪಂಜರ) ದಾರಗಳ ಸಹಾಯದಿಂದ ಕಟ್ಟಿ ತೊಟ್ಟಿಲಿನ ಆಕಾರವಿರುವಂತೆ ನೋಡಿಕೊಳ್ಳಬೇಕು. ಸಿಮೆಂಟ್ ತೊಟ್ಟಿಗಳನ್ನೂ ವಂಶಾಭಿವೃದ್ಧಿ ಕ್ರಿಯೆಗೆ ಉಪಯೋಗಿಸಬಹುದು.

ವಂಶಾಭಿವೃದ್ಧಿ
ಹೊಮ್ಮೀನು ಮೊಟ್ಟೆಗಳು ಅಂಟುಗುಣದಿಂದ ಕೂಡಿರುವುದರಿಂದ ಸಂತಾನೋತ್ಪತ್ತಿಗಾಗಿ ಬಳಸುವ ಹಾಪ ಅಥವಾ ಕೊಳಗಳಲ್ಲಿ ಜಲಸಸ್ಯಗಳ ಇರುವಿಕೆ ಅತ್ಯಗತ್ಯ. ಅದಕ್ಕೆ ಜಲಸಸ್ಯಗಳಾದ ಹೈಡ್ರಿಲ್ಲಾ, ವ್ಯಾಲ್ಸಿನೇರಿಯಾ, ಐಕಾರ್ನಿಯಗಳನ್ನು ಬಳಸಬಹುದು.

ಇವುಗಳು ಲಭ್ಯವಿಲ್ಲದೇ ಇದ್ದ ಸಂದರ್ಭದಲ್ಲಿ ಸರ್ವೆ ಮರದ ಎಲೆಗಳು, ಸಿಲ್ವರ್ ಮರದ ಎಲೆಗಳು, ಕಾಡು ಬಾಳೆ ಎಲೆಗಳು ಮುಂತಾದವುಗಳನ್ನು ಸಹ ಬಳಸಬಹುದು. ಸಾಮಾನ್ಯವಾಗಿ ಹೆಣ್ಣು ಮೀನಿನ ದೇಹ ತೂಕದ ಎರಡು ಪಟ್ಟು ಈ ಜಲಸಸ್ಯಗಳನ್ನು ಉಪಯೋಗಿಸುವುದು ವಾಡಿಕೆ.

ಆರೋಗ್ಯದಿಂದ ಕೂಡಿದ, ಪರಿಪೂರ್ಣ ಪ್ರೌಢಾವಸ್ಥೆ ಹೊಂದಿರುವ ಮೀನುಗಳನ್ನು ಆಯ್ಕೆ ಮಾಡಿ `ಪ್ರತೀ ಎರಡು ಹೆಣ್ಣಿಗೆ ಮೂರು ಗಂಡು ಮೀನು~ ಪ್ರಮಾಣದಲ್ಲಿ ಕೊಳಗಳಿಗೆ ಬಿಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಹೀಗೆ ಸಂತಾನೋತ್ಪತ್ತಿ ಹಾಪ ಅಥವಾ ಕೊಳಗಳಿಗೆ ಬಿಟ್ಟ ಸ್ವಲ್ಪ ಸಮಯದ ನಂತರ ಗಂಡು ಮೀನುಗಳು ಹೆಣ್ಣು ಮೀನುಗಳನ್ನು ಹಿಂಬಾಲಿಸಲು ಪ್ರಾರಂಭಿಸುತ್ತವೆ.
 
ಹೆಣ್ಣು ಮೀನುಗಳ ಹೊಟ್ಟೆಯ ಭಾಗಗಳಿಗೆ ಮೃದುವಾಗಿ ಒತ್ತುತ್ತವೆ. ಇದರಿಂದ ಹೆಣ್ಣು ಹೊಮ್ಮೀನು ತಂಡೋಪತಂಡವಾಗಿ ಮೊಟ್ಟೆಗಳನ್ನು ಬಿಡುತ್ತಾ ಹೋಗುತ್ತಿರುವಂತೆಯೇ ಗಂಡು ಮೀನುಗಳು ಬಿಳಿಯ ದ್ರವ (ಮಿಲ್ಟ್) ಸುರಿಸುತ್ತಾ ಮೊಟ್ಟೆಗಳನ್ನು ಫಲಿತಗೊಳಿಸುತ್ತಾ ಹೋಗುತ್ತವೆ.
 
ಸಾಮಾನ್ಯವಾಗಿ 500ರಿಂದ 600 ಗ್ರಾಂ ತೂಕದ ಹೆಣ್ಣು ಮೀನುಗಳು ಸರಾಸರಿ 450 ರಿಂದ 500 ಮೊಟ್ಟೆ ಇಡುತ್ತವೆ. ಈ ಕ್ರಿಯೆ ಪರಿಪೂರ್ಣಗೊಳ್ಳಲು 1-2 ದಿನ ಬೇಕು. ಹೀಗೆ ಸಂತಾನೋತ್ಪತ್ತಿ ಕ್ರಿಯೆ ಪೂರ್ಣಗೊಂಡ ನಂತರ ಇದರಲ್ಲಿ ಪಾಲ್ಗೊಂಡ ಮೀನುಗಳನ್ನು ಬೇರ್ಪಡಿಸಬೇಕು.

ಮೊಟ್ಟೆಗಳು ಜಲಸಸ್ಯಗಳಿಗೆ ಅಂಟಿಕೊಂಡಿರುತ್ತವೆ. ಫಲಿತ ಮೊಟ್ಟೆಗಳು ಸಾಮಾನ್ಯವಾಗಿ ಹಾಲುಮಡ್ಡಿ (ಹಳದಿ ಮಿಶ್ರಿತ ಕಂದು) ಬಣ್ಣದಿಂದ ಕೂಡಿರುತ್ತವೆ. ಆದರೆ ಫಲಿತಗೊಳ್ಳದೆ ಇರುವ ಮೊಟ್ಟೆಗಳು ಬಿಳಿಯ ಬಣ್ಣದಿಂದ ಕೂಡಿದ್ದು, ನಿಧಾನವಾಗಿ ಕರಗಲು ಪ್ರಾರಂಭಿಸುತ್ತವೆ.

ನೀರಿನ ತಾಪಮಾನಕ್ಕೆ ಅನುಗುಣವಾಗಿ ಫಲಿತ ಮೊಟ್ಟೆಗಳಿಂದ ಮರಿಗಳಾಗಿ ಹೊರಬರಲು 3 ರಿಂದ 5 ದಿನ ಬೇಕು. ಹೀಗೆ ಮೊಟ್ಟೆಗಳಿಂದ ಹೊರಬಂದ ಮರಿಗಳು ತಮ್ಮ ಜೀವನದ ಪ್ರಾರಂಭಿಕ ದಿನಗಳಲ್ಲಿ ತಿಳಿಕಪ್ಪು ಬಣ್ಣಗಳಿಂದ ಕೂಡಿದ್ದು, ಸಾಮಾನ್ಯವಾಗಿ ಮೂರರಿಂದ ನಾಲ್ಕನೆಯ ತಿಂಗಳಿನ ನಂತರ ಹೊನ್ನಿನ ವರ್ಣಗಳು ಕಾಣಲು ಪ್ರಾರಂಭವಾಗುತ್ತವೆ.

ಪ್ರಾರಂಭಿಕ ದಿನಗಳಲ್ಲಿ ಈ ಮರಿಗಳಿಗೆ ಆಹಾರ ರೂಪದಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಸೂಕ್ಷ್ಮಾಣು ಜೀವಿಗಳು ದೊರಕುವಂತೆ ಮಾಡಲು ಕೊಳಗಳನ್ನು ಫಲವತ್ತುಗೊಳಿಸಬೇಕು. ಹಾಗೆ ಮರಿಗಳಿಗೆ ಕೆಡುಕು ಮಾಡುವ ಜಲಚರ ಕ್ರಿಮಿಕೀಟಗಳು ಹಾಗೂ ರೋಗಕಾರಕ ಜಂತುಗಳನ್ನು ನಿರ್ನಾಮ ಮಾಡಬೇಕು.

ಪೂರಕ ಆಹಾರಗಳು ಸಸಾರಜನಕದಿಂದ ಕೂಡಿರಬೇಕು, ಅಗತ್ಯಕ್ಕೆ ತಕ್ಕಂತೆ ನೀಡುತ್ತಾ ಹೋಗಬೇಕು. ಈ ಪೂರಕ ಆಹಾರಗಳು ಪುಡಿ ರೂಪದಲ್ಲಿದ್ದು, ಮೀನು ಮರಿಗಳ ಬಾಯಿಯ ಗಾತ್ರಕ್ಕಿಂತ ಕಿರಿದಾಗಿರಬೇಕು.

ಹಾಗೆಯೇ ಕೊಳದ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸುವುದರಿಂದ ಸದೃಢ ಮತ್ತು ಆರೋಗ್ಯವಂತ ಬೆರಳುದ್ದದ ಗಾತ್ರದ ಮೀನು ಮರಿಗಳನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ಪಡೆಯಬಹುದು.

ಮಾಹಿತಿಗೆ...
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ವಲಯ ಕೃಷಿ ಸಂಶೋಧನಾ ಕೇಂದ್ರ ಹೊಮ್ಮೀನುಗಳ ಸಂತಾನಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿವರಗಳಿಗೆ ಎ.ವಿ. ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಹಿರಿಯಶ್ರೇಣಿ, ಮೀನುಗಾರಿಕೆ ವಿಭಾಗ (08263 228146, 228246) ಇವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT