ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರ ಒಂದೇ ಕೆಲಸ ಹಲವು

Last Updated 17 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕಾರ್ಮಿಕರ ಕೊರತೆಯಿಂದಾಗಿ ತೋಟ, ಹೊಲ-ಗದ್ದೆಗಳ ಕೆಲಸಗಳಾದ ಗೊಬ್ಬರ ಸಾಗಣೆ, ಔಷಧಿ ಸಿಂಪಡಣೆ, ಉತ್ಪನ್ನಗಳನ್ನು ಕ್ರೋಡೀಕರಿಸುವುದು, ಹೈನುಗಾರಿಕೆಯ ಕೆಲಸಗಳು ಇತ್ಯಾದಿಗಳನ್ನು ಒಬ್ಬರೇ ನಿಭಾಯಿಸುವುದು ಬಹಳ ಕಷ್ಟ. ರೈತಾಪಿ ಜನರನ್ನು ಈ ಸಂಕಷ್ಟದಿಂದ ಪಾರು ಮಾಡಲು ಪರಿಹಾರವಾಗಿ ರೂಪುಗೊಂಡಿದೆ ‘ಆಗ್ರೋಕಾರ್ಟ್‌’ ಯಂತ್ರ.

ತೋಟದಲ್ಲಿ ಇರುವ ಏರುತಗ್ಗು, ಚಿಕ್ಕಪುಟ್ಟ ಕಾಲುವೆ, ಹೊಂಡ-ಗುಂಡಿಗಳನ್ನು ದಾಟುತ್ತಾ ಎಲ್ಲೆಂದರಲ್ಲಿ ಸಲೀಸಾಗಿ ಸಾಗುವ ಈ ಯಂತ್ರಕ್ಕೆ ಯಾವುದೇ ಚಕ್ರಗಳಿಲ್ಲ. ಇದು ರಬ್ಬರ್ ಬೆಲ್ಟ್ ಮುಖಾಂತರ ಸಲೀಸಾಗಿ ಕಿರಿದಾದ ಕಾಲುವೆ, ಬಸಿಗಾಲುವೆ, ತೋಟದೊಳಗೆ ಅಡ್ಡಾದಿಡ್ಡಿ ಬಿದ್ದ ಅಡಿಕೆ ಮರಗಳು, ಬಾಳೆ ಇತ್ಯಾದಿಗಳ ಮೇಲೇರಿ ಸಾಗುತ್ತದೆ. ಅಡಿಕೆ, ರಬ್ಬರ್, ತೆಂಗಿನ ತೋಟದಲ್ಲಿರುವ ಏರಿಳಿತಗಳನ್ನು ಸರಕು ಸಮೇತ ಸಲೀಸಾಗಿ ಸಾಗಬಲ್ಲದು.

ಸುಮಾರು ಐನೂರು ಕೆ.ಜಿ. ಭಾರವನ್ನು ಸಾಗಿಸುವ ಈ ಯಂತ್ರವು ಪೆಟ್ರೋಲ್ ಮುಖಾಂತರ ಚಲಿಸುತ್ತದೆ. ಟಯರ್‌ಗಳ ಬದಲು ರಬ್ಬರ್ ಟ್ರಾಕ್ ಇರುವುದೇ ಈ ಆಗ್ರೋಕಾರ್ಟ್‌ನ ವಿಶೇಷ. ರಬ್ಬರ್ ಬೆಲ್ಟ್‌ಮೂಲಕ ಚಲಿಸುವ ಈ ಯಂತ್ರವು ಎರಡೂವರೆ ಅಡಿ ಅಗಲದ ಕಿರಿದಾದ ಸ್ಥಳಗಳಲ್ಲಿಯೂ ಸಾಮಗ್ರಿಗಳನ್ನು ಹೇರಿಕೊಂಡು ಸಾಗಬಲ್ಲದು. ಮಣ್ಣು ಅಗೆಯುವ ಇಟಾಚಿಯಂತ್ರವು ಚಲಿಸಲು ಕಬ್ಬಿಣದ ಪ್ಲೇಟ್ ಜೋಡಿಸಿದ ಚೈನ್ ಹೊಂದಿದ್ದರೆ, ಈ ಯಂತ್ರವು ರಬ್ಬರ್ ಟ್ರಾಕ್‌ನ ಮುಖಾಂತರ ಚಲಿಸುವುದರಿಂದ ಚಲಿಸುವಾಗ ಯಾವುದೇ ಮಣ್ಣು ಬರಲಾರದು. ಅಲ್ಲದೇ, ತೋಟ, ಅಂಗಳ, ಕಾಂಕ್ರೀಟ್ ಕಟ್ಟಡಗಳ ಒಳಭಾಗದಲ್ಲಿ, ಅಷ್ಟೇ ಏಕೆ ಟೈಲ್ಸ್‌ ಹಾಕಿದ ನೆಲದಲ್ಲಿಯೂ ಚಲಾಯಿಸಿ ಎಲ್ಲಾ ಕೆಲಸ-ಕಾರ್ಯಗಳಲ್ಲಿಯೂ ಬಳಸಿಕೊಳ್ಳಬಹುದು.

ಆರೂವರೆ ಹೆಚ್.ಪಿ. ಸಾಮರ್ಥ್ಯದ ಎಂಜಿನ್ ಹೊಂದಿರುವ ಈ ಯಂತ್ರವು ಒಂದು ಲೀಟರ್ ಪೆಟ್ರೋಲ್‌ನಲ್ಲಿ ಸುಮಾರು ಎರಡು ಗಂಟೆ ಅವಧಿ ಕೆಲಸ ಮಾಡಬಲ್ಲದು. ಈ ಯಂತ್ರವು ಎರಡು ರಬ್ಬರ್ ಟ್ರಾಕ್‌ಗಳ ಮೇಲೊಂದು ಕಬ್ಬಿಣದ ಚಾಸಿಸ್, ಲೋಡ್ ಹಾಕಲು - ಮೂರೂವರೆ ಅಡಿ ಉದ್ದ, ಎರಡೂವರೆ ಅಡಿ ಅಗಲ ಹಾಗೂ ಒಂದೂವರೆ ಅಡಿ ಎತ್ತರದ ಕಬ್ಬಿಣದ ಶೀಟ್‌ನ ಬಕೆಟ್ ಹೊಂದಿದ್ದು ಆಧುನಿಕ ರೀತಿಯ ಕೈಗಾಡಿಯನ್ನು ಹೋಲುವಂತಿದೆ. ಬಕೆಟ್‌ನ ತಳಭಾಗದ ಲಾಕ್ ತೆಗೆದು ಮೇಲೆತ್ತಿದರೆ ಮುಂದಕ್ಕೆ ಪಲ್ಟಿಯಾಗಿ ಸರಕನ್ನು ಸುಲಭವಾಗಿ ಖಾಲಿಮಾಡುವ ವ್ಯವಸ್ಥೆ ಹೊಂದಿದ್ದು ಬಹಳ ಉಪಕಾರಿಯಾಗಿದೆ. ಅಡಿಕೆ, ತೆಂಗು ಇತ್ಯಾದಿ ಸರಕುಗಳನ್ನು ಈ ಯಂತ್ರದಲ್ಲಿ ತುಂಬುವಾಗ ಬಕೆಟನ್ನು ದೊಡ್ಡ ಮಾಡುವ ಅನುಕೂಲವೂ ಇದೆ. ಬಕೆಟ್‌ನ ಹಿಂಭಾಗದಲ್ಲಿ ಆರು ಅಶ್ವಶಕ್ತಿಯ ಪೆಟ್ರೋಲ್ ಚಾಲಿತ ಎಂಜಿನ್ ಹಾಗೂ ಗೇರ್‌ಬಾಕ್ಸ್ ಅಳವಡಿಸಿರುತ್ತಾರೆ. ‘ಮುಂದೆ ಹೋಗಲು, ಹಿಂಚಲನೆಗಾಗಿ ಗೇರ್‌ ಇದ್ದು ಪವರ್ ಟಿಲ್ಲರ್‌ನಂತೆ ಹ್ಯಾಂಡಲ್‌ಗಳನ್ನು ಹೊಂದಿದೆ. ಕ್ಲಚ್‌ಗಳನ್ನು ಒತ್ತಿಕೊಂಡು ಎಡ ಅಥವಾ ಬಲಕ್ಕೆ ತಿರುಗಬಲ್ಲದು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಕೋಡಿಬೈಲು ಸತ್ಯನಾರಾಯಣ.

ಮೂರು ವರ್ಷಗಳ ಹಿಂದೆ ಚೀನಾಕ್ಕೆ ಭೇಟಿಕೊಟ್ಟಾಗ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ಈ ಯಂತ್ರಕ್ಕೆ ಹಾಗೂ ಇದರ ಕಾರ್ಯವೈಖರಿಗೆ ಮನಸೋತು ಮೂರು ಯಂತ್ರಗಳನ್ನು ಸ್ವದೇಶಕ್ಕೆ ತಂದರು. ಹೀಗೆ ತಂದ ಯಂತ್ರವನ್ನು ತಮ್ಮ ತೋಟದಲ್ಲಿ ಹಲವು ರೀತಿಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡರು. ಚಿಂತನಶೀಲ ವ್ಯಕ್ತಿತ್ವದ ಸತ್ಯನಾರಾಯಣರು ಈ ಯಂತ್ರಕ್ಕೆ ಹಲವು ರೀತಿಯ ಬಿಡಿಭಾಗಗಳನ್ನು ಸೇರಿಸುತ್ತಾ ಬೇರೆಬೇರೆ ರೀತಿಯ ಕೆಲಸ ಕಾರ್ಯಗಳಿಗೆ ಉಪಯೋಗವಾಗುವಂತೆ ತಯಾರು ಮಾಡಿರುವರು ಮತ್ತು ಈಗಲೂ ಇನ್ನೂ ಈ ಯಂತ್ರದ ಹೊಸ ಉಪಯೋಗದ ಅನ್ವೇಷಣೆಯಲ್ಲೂ ತೊಡಗಿಸಿಕೊಂಡಿರುವರು. ಆದ್ದರಿಂದ ಇಂದು ಇದು ಹಲವು ಕೃಷಿಕರಿಗೆ ಮತ್ತು ಕೃಷಿಯೇತರರಿಗೂ ವಿವಿಧ ರೀತಿಯಲ್ಲಿ ಉಪಕಾರಿಯಾಗಿದೆ.

ಇನ್ನಷ್ಟು ಪ್ರಯೋಜನಗಳು
ಸುಮಾರು ಎಂಟರಿಂದ ಹತ್ತು ಮಂದಿ ಮಾಡುವ ಕೆಲಸವನ್ನು ಈ ಯಂತ್ರವೊಂದರಿಂದ ಆರಾಮವಾಗಿ ಮಾಡಬಹುದು. ಯಂತ್ರಕ್ಕೆ ಚಲಿಸಲು ತೋಟದೊಳಗೆ ವಿಶೇಷ ವ್ಯವಸ್ಥೆ ಬೇಕಾಗಿಲ್ಲ. ಯಂತ್ರ ಹೋದಲ್ಲಿಯೇ ದಾರಿ ಅನ್ನಬಹುದು. ಮರಳು ರಾಶಿಯಲ್ಲಿ ಅಥವಾ ಕೆಸರಿನಲ್ಲಿ ಹೂತುಹೋಗಲಾರದು. ಅಡಿಕೆ ಅಥವಾ ತೆಂಗಿನಮರದ ಬುಡದವರೆಗೂ ಯಂತ್ರ ಸಾಗುವುದರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಮರದಿಂದ ಯಂತ್ರದೊಳಗೆ ತುಂಬಿಸಿ ಸಾಗಿಸಬಹುದು. ಮೆಟ್ಟಿಲುಗಳನ್ನು ಇದು ಸಲೀಸಾಗಿ ಏರಬಲ್ಲದು.

ತೋಟಗಳಿಗೆ ಔಷಧಿ ಸಿಂಪಡಿಸಲು ಅನುಕೂಲವಾಗುವಂತೆ ಇದಕ್ಕೆ ಹೊಸರೀತಿಯಲ್ಲಿ ಪಂಪನ್ನೂ ಅಳವಡಿಸಲಾಗುತ್ತದೆ. ಮಣ್ಣು, ಮರಳು, ಇತ್ಯಾದಿಗಳನ್ನು ರಾಶಿಮಾಡಲು ಹಾಗೂ ಹರಡಲು, ಕೊಟ್ಟಿಗೆ ಸ್ವಚ್ಛಮಾಡಲು, ಗೊಬ್ಬರ ಸಾಗಿಸಲು, ಉಳುಮೆಮಾಡಲು, ಕಾಫಿ, ಅಡಿಕೆ ಮುಂತಾದ ಕೃಷಿ ಉತ್ಪನ್ನಗಳನ್ನು ಹರಡಲು, ರಾಶಿಮಾಡಲು ಇತ್ಯಾದಿ ಹಲವಾರು ಕೆಲಸಗಳಿಗೆ ಉಪಯೋಗವಾಗುವಂತೆ ಹೊಸ ಹೊಸ ಆವಿಷ್ಕಾರ ಮಾಡುತ್ತಾ ಈ ಯಂತ್ರವನ್ನು ಮೌಲ್ಯವರ್ಧಿತವಾಗಿ ರೂಪಿಸಿದ್ದಾರೆ.

ಆಗ್ರೋಕಾರ್ಟ್ ಅನ್ನು ಚಲಾಯಿಸುವುದು ಬಹಳ ಸುಲಭ. ರಟ್ಟೆಬಲ ಬೇಡ. ಗೇರ್‌ಸಹಿತ ಇರುವ ಈ ಕಾರ್ಟ್‌ನಲ್ಲಿ ಮುಗ್ಗರಿಸಿ ಬೀಳುವ ಭಯವಿಲ್ಲ. ಪ್ರಸ್ತುತ ಕೃಷಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟ ರೈತರಿಗಿದು ಬಹಳ ಸಹಾಯವಾಗಬಲ್ಲದು.

‘ನಾನು ಸುಧಾರಿಸಿದ ಯಂತ್ರಕ್ಕೆ ನಾನೇ ಮೊದಲ ಗ್ರಾಹಕ. ನನಗೆ ತೃಪ್ತಿಯಾದರೆ ಮಾತ್ರ ಮಾರಾಟ ಮಾಡುವ ಬಗ್ಗೆ ಯೋಚಿಸುತ್ತೇನೆ’ ಎನ್ನುವ ಇವರು ಕೃಷಿಯಾಂತ್ರೀಕರಣದಲ್ಲಿ ಬಹಳ ಆಸಕ್ತಿಹೊಂದಿದ್ದು ಕಳೆಕೊಚ್ಚುವ ಯಂತ್ರವನ್ನು ಬಹೂಪಯೋಗಿ ಯಂತ್ರವಾಗಿ ರೂಪಿಸಿ ರೈತರಿಗೆ ಪರಿಚಯಿಸಿ, ರೈತರು ಇಂದು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಇದಲ್ಲದೇ ಪವರ್ ಸ್ಪ್ರೇಯರ್, ರೋಟರಿ ಟಿಲ್ಲರ್ ಇತ್ಯಾದಿ ಯಂತ್ರಗಳನ್ನು ಸ್ಥಳೀಯವಾಗಿ ಪರಿಚಯಿಸಿದ ಹೆಮ್ಮೆ ಇವರಿಗಿದೆ. ಈ ಆಗ್ರೋಕಾರ್ಟ್‌ನ ಮೂಲಬೆಲೆ ₹1.40ಲಕ್ಷ. ಕಾಫಿಬೋರ್ಡ್‌ನಿಂದ ಮಾನ್ಯತೆ ಪಡೆದಿರುವ ಈ ಯಂತ್ರಕ್ಕೆ ಸರ್ಕಾರ ಸಹಾಯಧನ ನೀಡಲಿದೆ.

ಹೆಚ್ಚಿನ ಮಾಹಿತಿಗಾಗಿ: 9379333321

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT