ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೂ ಬಂದ ರಾಂಬಟನ್

ಹೊಸ ಹೆಜ್ಜೆ -16
Last Updated 8 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸ್ಯಾಪಿಂಡೇಸಿಯಾ ಕುಟುಂಬಕ್ಕೆ ಸೇರಿದ ಹಣ್ಣು ರಾಂಬಟನ್. ಮೂಲತಃ ಮಲೇಶಿಯಾ ಮತ್ತು ಇಂಡೋನೇಷ್ಯಾದ ಬೆಳೆಯಾದ ಇದನ್ನು ಈಚೆಗೆ ಕೇರಳದಲ್ಲೂ ಕಾಣಬಹುದು. ಅಲ್ಲಿನ ಕೃಷಿಕರು ಇದನ್ನು ಬೆಳೆದು ಯಶ ಕಂಡಿದ್ದಾರೆ.

ಈ ವಿದೇಶಿ ಹಣ್ಣೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ರೈತರ ತೋಟದಲ್ಲೀಗ ಈ ಹಣ್ಣು ಅಲಂಕರಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಮೂಡಬಿದ್ರಿಯ ಕೃಷಿಕರೊಬ್ಬರು ನೆಟ್ಟ ಈ ಗಿಡದಲ್ಲಿ ಯಶಸ್ವಿ ಫಸಲು ಕಂಡವರಲ್ಲಿ  ಕಾರ್ಕಳ ತಾಲ್ಲೂಕಿನ ಹೊಸಮಾರುವಿನಲ್ಲಿರುವ ಲೀಲಾ ಫಾರ್ಮ್‌ನ ಮಾಲೀಕರಾದ ಶಿವಾನಂದ ಶೆಣೈ ಅವರೂ ಒಬ್ಬರು.

ಈ ಹಣ್ಣು ನೋಡಲು ಲಿಚಿ ಹಣ್ಣನ್ನು ಹೋಲುತ್ತದೆ. ಆದರೆ ಈ ಹಣ್ಣಿನ ಮೇಲುಗಡೆ ಕೂದಲುಗಳು ಇರುತ್ತವೆ. ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ಇದರ ಕೊಯ್ಲು ನಡೆದು ಮಾರುಕಟ್ಟೆಗೆ ಬರುತ್ತದೆ. ಒಂದು ಕೆ.ಜಿ.ಗೆ ಸುಮಾರು ನೂರರಿಂದ ನೂರೈವತ್ತು ರೂಪಾಯಿಗಳು ರೈತರಿಗೆ ದೊರೆಯುತ್ತದೆ. ಗಿಡ ನೆಟ್ಟ ಮೂರು ವರ್ಷಗಳ ನಂತರ ಫಸಲು ನೀಡಲು ಪ್ರಾರಂಭಿಸುತ್ತದೆ.

ಈ ಗಿಡದ ಜೀವಿತಾವಧಿ ಸುಮಾರು 100 ರಿಂದ 150 ವರ್ಷ. ಕೀಟಗಳ ಬಾಧೆ ಕಡಿಮೆ ಇರುವುದರಿಂದ ಕೀಟನಾಶಕಗಳ ಬಳಕೆ ಇಲ್ಲದೇ ಬೆಳೆಯ ಬಹುದಾದ ಬೆಳೆ ಇದಾಗಿದೆ. ಇದರ ಹೂವಿನ ಪರಿಮಳವೂ ಜೇನು ಮುಂತಾದ ಕೀಟಗಳನ್ನು ಆಕರ್ಷಿಸುತ್ತದೆ. ಬೆಚ್ಚನೆ ಹವಾಮಾನವನ್ನು ಬಯಸುವ ಈ ಹಣ್ಣನ್ನು ಥೈಲ್ಯಾಂಡ್‌ನಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ನಮ್ಮ ದೇಶ ಥೈಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳುತ್ತದೆ.

ಇದರ ಹಣ್ಣಿನಿಂದ ಜ್ಯೂಸ್, ಜಾಮ್ ಮತ್ತು ಜೆಲ್ಲಿಯನ್ನು ಸಹ ತಯಾರಿಸಬಹುದು. ಇದಲ್ಲದೇ ಇದರ ಬೀಜದಿಂದ ಎಣ್ಣೆ ತೆಗೆದು ಅಡುಗೆ ಮತ್ತು ಸೋಪ್ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಪ್ರತಿಯೊಂದು ಭಾಗವೂ, ಅಂದರೆ ಕೊಂಬೆ, ತೊಗಟೆ, ಎಲೆ ಎಲ್ಲವೂ ಔಷಧಿಯ ಗುಣದಿಂದ ಕೂಡಿದೆ.

ಗಿಡವು 12 ರಿಂದ 20 ಮೀಟರ್ ಎತ್ತರಕ್ಕೆ ಬೆಳೆದು ಕೆಂಪು ಬಣ್ಣದ ಹಣ್ಣುಗಳನ್ನು ಗೊಂಚಲು ಗೊಂಚಲಾಗಿ ಬಿಡುತ್ತದೆ. ಅದರ ಸಿಪ್ಪೆಯನ್ನು ಸುಲಿದಾಗ ಅದರೊಳಗಿರುವ ತಿರುಳು ಅತ್ಯಂತ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ.

ಕಾರ್ಬೋಹೈಡ್ರೇಟ್ಸ್, ನಾರಿನಂಶ, ಕೊಬ್ಬು, ವಿಟಮಿನ್ ಬಿ1, ಬಿ2, ಬಿ3, ವಿಟಮಿನ್ ಸಿ, ಮಿನರಲ್ಸ್, ಮ್ಯಾಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಜಿಂಕ್ ಹೀಗೆ ಎಲ್ಲಾ ಪೋಷಕಾಂಶಗಳ ಆಗರವಾಗಿರುವ ರಾಂಬಟನ್ ಗಿಡವನ್ನು ತೋಟದಲ್ಲಿಯೂ  ಬೆಳೆಸಬಹುದು.

ಇಂಡೋನೇಷ್ಯಾದ ಭಾಷೆಯಲ್ಲಿ ರಾಂಬಟನ್ ಎಂದರೆ  ಕೂದಲು. ಆದ್ದರಿಂದ ಈ ಹಣ್ಣಿಗೆ ರಾಂಬಟನ್ ಎಂದು ಕರೆಯುತ್ತಾರೆ. ಆರೋಗ್ಯಕ್ಕೆ ಪೂರಕವಾದ ಈ ಹಣ್ಣಿನ ಬೆಳೆ ಲಾಭದಾಯಕ ಬೆಳೆಯೂ ಆಗಿದೆ.

ಶಿವಾನಂದ ಅವರ ಸಂಪರ್ಕ ಸಂಖ್ಯೆ 9901980644

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT