ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಂಧಕ್ಕಾಗಿ ‘ಇನಾಕ್ಯುಲೇಶನ್’

Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟ ಪ್ರದೇಶದ ಕಾಫಿ, ಅಡಿಕೆ, ಏಲಕ್ಕಿ, ಕೊಕೊ, ತೋಟಗಳಲ್ಲಿ ಏಳೆಂಟು ವರ್ಷಗಳ ಹಿಂದೆ ಅಗರ್ ಮರಗಳನ್ನು ಬೇಸಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ಕೃಷಿಕರು, ಈ ಮರಗಳಿಂದ ಸುಗಂಧಭರಿತ ಭಾಗ ಪಡೆಯುವ ಸಲುವಾಗಿ ಚುಚ್ಚು ಮದ್ದಿನ ಮೂಲಕ ಕೃತಕ ಶಿಲೀಂಧ್ರ ಸೋಂಕಿಗೆ (ಇನಾಕ್ಯುಲೇಶನ್) ಒಳಪಡಿಸುವ ಕೆಲಸಕ್ಕೆ ಚಾಲನೆ ದೊರೆತಿದೆ. ಈ ಕಾರ್ಯ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.

ಈಚೆಗೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ವನದುರ್ಗಿ ತೋಟದಲ್ಲಿ ಅಗರ್ ಮರಗಳಿಗೆ ಕೃತಕ ಶಿಲೀಂಧ್ರದ ಚುಚ್ಚು ಮದ್ದು ನೀಡುವ ಕಾರ್ಯಕ್ರಮ ನಡೆಯಿತು. ಸಾಮಾನ್ಯವಾಗಿ ಮನುಷ್ಯರಿಗೆ, ದನ ಕರುಗಳಿಗೆ ಚುಚ್ಚು ಮದ್ದು ನೀಡುವುದನ್ನು ಕಂಡಿದ್ದೆವು. ಮರಗಳಿಗೂ ಚುಚ್ಚು ಮದ್ದು ನೀಡುವುದೆಂದರೆ ವಿಶೇಷ. ಇದು ಕೃಷಿಕರಿಗೆ ಹೊಸ ವಿಚಾರ. ಕಣ್ಣಾರೆ ಕಾಣಬೇಕೆಂಬ ಕುತೂಹಲ. ಅದಕ್ಕೆಂದೇ ನೂರಾರು ಮೈಲು ದೂರದಿಂದ ವನದುರ್ಗಿ ತೋಟಕ್ಕೆ ಕೃಷಿಕರ ದಂಡೇ ಬಂದಿತ್ತು. ಅದಕ್ಕೆಂದೇ ತೋಟದ ಮಧ್ಯದಲ್ಲೊಂದು ಪುಟ್ಟ ವೇದಿಕೆಯೂ ಸಿದ್ಧಗೊಂಡಿತ್ತು. ಸಾವಿರಾರು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಐವತ್ತು ಜನ ಕೃಷಿಕರ ತಂಡಗಳನ್ನಾಗಿ ಮಾಡಿ ‘ಇನಾಕ್ಯುಲೇಶನ್’ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಅಂದು ಸುಮಾರು 25 ಅಗರ್ ಮರಗಳಿಗೆ ‘ಇನಾಕ್ಯುಲೇಶನ್’ ಮಾಡಲಾಯಿತು.  ಅದಕ್ಕೆಂದೇ ಇಂಗ್ಲೆಂಡ್‌ನಿಂದ ಏಷಿಯಾ ಪ್ಲಾಂಟೇಶನ್ ಕ್ಯಾಪಿಟಲ್ ಸಂಸ್ಥೆಯ ‘ಇನಾಕ್ಯುಲೇಶನ್’ ತಜ್ಞರನ್ನೇ ಬರಮಾಡಿಕೊಂಡಿತ್ತು ದಿ ವನದುರ್ಗಿ ಅಗರ್‌ವುಡ್ ಇಂಡಿಯಾ ಸಂಸ್ಥೆ.

‘ಇನಾಕ್ಯುಲೇಶನ್’ ವಿಶೇಷ
ಸುವಾಸನೆಯುಳ್ಳ ಅಗರ್ ಭಾಗ ಪಡೆಯುವ ಸಲುವಾಗಿ, ಏಳು ವರ್ಷಕ್ಕಿಂತ ಹೆಚ್ಚಿರುವ ಅಗರ್ ಮರಗಳಿಗೆ ಪೆನ್ಸಿಲ್ ಗಾತ್ರದ ರಂಧ್ರಗಳನ್ನು ಕೊರೆದು, ಚುಚ್ಚುಮದ್ದು ನೀಡುವ ಸಿರಿಂಜ್‌ಗಳಲ್ಲಿ ಕೃತಕ ಶಿಲೀಂಧ್ರಗಳನ್ನು ಕಾಂಡದ ಒಳ ಭಾಗಕ್ಕೆ ನಿಧಾನವಾಗಿ ಹರಿಯ ಬಿಡಲಾಗುತ್ತದೆ. ಕಾಂಡದ ಒಳ ಹೋದ ಶಿಲೀಂಧ್ರಗಳು ಯಥೇಚ್ಛವಾಗಿ ಬೆಳೆದು ಮರದ ಕಾಂಡದೊಳಗೆ ಕಂದು ಬಣ್ಣದ ಸುಗಂಧ ಭರಿತ ರೆಸಿನ್ ಬೆಳವಣಿಗೆ ಹೊಂದುತ್ತದೆ. ಆ ಭಾಗದ ಹೆಸರೇ ‘ಅಗರ್’. ಈ ರೀತಿಯ ಸುಗಂಧ ಭರಿತ ಕಾಂಡ ಸಾಕಷ್ಟು ಬೆಳವಣಿಗೆ ಹೊಂದಿದಂತೆಲ್ಲ ಮರದ ಆಯಸ್ಸು ಮುಗಿಯುತ್ತದೆ.

ಈ ಬೆಳವಣಿಗೆ ಹದಿನೈದರಿಂದ ಹದಿನೆಂಟು ತಿಂಗಳು. ಅದೇ ಹೆಚ್ಚು ನೆರಳಿರುವಲ್ಲಿ ಕಾಲಮಿತಿ ಇಲ್ಲದೇ ಮೂರ್ನಾಲ್ಕು ವರ್ಷಗಳಾದರೂ ಆದೀತು. ಹೆಚ್ಚು ಬೆಳವಣಿಗೆ ಹೊಂದಿದಷ್ಟೂ ಅಗರ್‌ನ ಗುಣಮಟ್ಟ ಹೆಚ್ಚುತ್ತದೆ. ಈ ಬಲಿತ ಕಾಂಡವನ್ನು ರೆಸಿನೆಸ್ ವುಡ್ ಸೋಂಕು ಪೀಡಿತ ಮರ ಎಂದೆಲ್ಲಾ ಕರೆಯಲಾಗುತ್ತದೆ. ಶಿಲೀಂಧ್ರಗಳು ಬಲಿತ ಕಾಂಡದ ಪೂರ್ಣ ಭಾಗ ತಲುಪುವ ಸಲುವಾಗಿ ಮರದ ಬುಡದ ಭಾಗದಲ್ಲಿ ನಾಲ್ಕು ಚುಚ್ಚು ಮದ್ದು ನೀಡಿದರೆ, ಮೂರು ಅಡಿ ಎತ್ತರಕ್ಕೆ ಮೂರು/ಎರಡು/ಒಂದು ಎತ್ತರ ಹೋದಂತೆಲ್ಲಾ ಚುಚ್ಚು ಮದ್ದಿನ ಪ್ರಮಾಣ ತಗ್ಗಿಸಬೇಕು. ಇದರಿಂದ ಕಾಂಡದಲ್ಲಿ ರೆಸಿನ್ ಬೆಳವಣಿಗೆ ಹೊಂದಲು ಸಹಾಯಕ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕರಾದ ಧರ್ಮೇಂದ್ರ ಕುಮಾರ್ ಹೆಗ್ಡೆ.

ಕೃಷಿಕರ ಮಾತು
ಕೃಷಿಕರು ಸದಾಕಾಲ ಪ್ರಯೋಗಶೀಲರಾಗಿರಬೇಕು. ನಮ್ಮ ಕಾಫೀ ತೋಟದಲ್ಲಿ ಸುಮಾರು 500 ಅಗರ್ ಗಿಡಗಳನ್ನು ಬೆಳೆಸಿದ್ದೇನೆ. ಅಗರ್ ಕಾಡು ಜಾತಿಯ ಮರವಾಗಿದ್ದು, ತೋಟದ ಮುಖ್ಯ ಬೆಳೆಗಳಿಗೆ ತೊಂದರೆ ನೀಡದು. ಪರಿಸರ ರಕ್ಷಣೆಗೂ ಸದಾಕಾಲ ಹಸಿರಾಗಿರುವ ಅಗರ್ ಮರಗಳು ಅನುಕೂಲವಾಗಿವೆ. ಅಗರ್ ಬೆಳೆಯಲು ಹೆಚ್ಚಿನ ಕಾಳಜಿ ಅಗತ್ಯವಿಲ್ಲ, ಖರ್ಚು ಕಡಿಮೆ. ಗಿಡದ ಬುಡದಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಕರ್ನಾಟಕದ ಮಲೆನಾಡು ಭಾಗದಲ್ಲಿ ಗುಣಮಟ್ಟದ ಅಗರ್ ಪಡೆಯಬಹುದೆಂದು ಅಗರ್ ತಜ್ಞರ ನಿರೀಕ್ಷೆಯಾಗಿದೆ.

ಮರಗಳಿಗೆ ‘ಇನಾಕ್ಯುಲೇಶನ್’ ಕಾರ್ಯ ಕೃಷಿಕರಿಗೇ ಹೊಸತು. ಹೇಗಾದೀತು ಎಂಬ ಕುತೂಹಲದಿಂದ ತೊಂಬತ್ತು ಕಿಲೋ ಮೀಟರ್ ದೂರದಿಂದ ಇಲ್ಲಿಗೆ ಬಂದಿದ್ದೇನೆ. ಈ ಕಾರ್ಯಕ್ರಮದಿಂದ ಹತ್ತಾರು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು. ಹೆಚ್ಚು ಮಳೆಯಾಗುವ ಶೃಂಗೇರಿ ಭಾಗದ ವನದುರ್ಗಿ ತೋಟದಲ್ಲಿ ಬೆಳೆದು ನಿಂತಿರುವ ಅಗರ್ ಮರಗಳನ್ನು ಕಂಡರೆ, ಅಗರ್ ಕೃಷಿ ಮಾಡುವಲ್ಲಿ ನಾವು ತಡ ಮಾಡಿದ್ದೇವೆ ಅನ್ನಿಸುತ್ತಿದೆ. ವನದುರ್ಗಿ ತೋಟದ ಸುಮಾರು 25 ಅಗರ್ ಮರಗಳಿಗೆ ‘ಇನಾಕ್ಯುಲೇಶನ್’  ಮಾಡಿದ್ದನ್ನು ಕಾಣುವ ಭಾಗ್ಯ ದೊರೆಯಿತು ಎಂದವರು ಮೂಡಿಗೆರೆ ತಾಲ್ಲೂಕು ಪಟ್ಟದೂರು ಗ್ರಾಮದ ನಾರಾಯಣಗೌಡ್ರು.

ಚಳಿಗಾಲ ಸೂಕ್ತ
‘ಇನಾಕ್ಯುಲೇಶನ್’ ಕಾರ್ಯವನ್ನು ಚಳಿಗಾಲದಲ್ಲಿ (ಅಕ್ಟೋಬರ್-ನವೆಂಬರ್) ಆರಂಭಿಸಿದರೆ ಉತ್ತಮ. ಅದು ಮುಂಜಾನೆ 10 ರಿಂದ 12 ಗಂಟೆಯ ಅವಧಿಯಲ್ಲಿ. ಹೆಚ್ಚು ಬಿಸಿಲಿನ ತಾಪ ಇರುವಾಗ ಈ ಕೆಲಸ ಸಲ್ಲದು. ‘ಇನಾಕ್ಯುಲೇಶನ್’ ಮಾಡುವಾಗ ದ್ರವ ರೂಪದಲ್ಲಿರುವ ಶಿಲೀಂಧ್ರ ಮರದ ಹೊರ ಚೆಲ್ಲದಂತೆ ಎಚ್ಚರ ವಹಿಸಬೇಕು. ‘ಇನಾಕ್ಯುಲೇಶನ್’ ಮಾಡುವ ಎರಡು ವರ್ಷದ ಮೊದಲು ಹಾಗೂ ಸಸಿ ನಾಟಿ ಮಾಡಿದ ಎರಡು ವರ್ಷದವರೆಗೆ ಕೊನೆಗಳನ್ನು ಸವರುವಂತಿಲ್ಲ. ಅಗರ್ ಮರಗಳನ್ನು ಹೆಚ್ಚಿನ ನೆರಳಿನಡಿ ಯಲ್ಲೇ ಬೆಳೆಸುವುದರಿಂದ ಹೆಚ್ಚು ಗುಣಮಟ್ಟ ಉಳ್ಳ ಸುಗಂಧಭರಿತ ಅಗರ್ ಭಾಗವನ್ನು ಪಡೆದು ಹೆಚ್ಚಿನ ಲಾಭಗಳಿಸಬಹುದು. ‘ಇನಾಕ್ಯುಲೇಶನ್’  ಮಾಡುವುದರಲ್ಲಿಯೇ ನಾಲ್ಕಾರು ಹೊಸ ಹೊಸ ತಂತ್ರಜ್ಞಾನಗಳಿದ್ದು, ‘ಇನಾಕ್ಯುಲೇಶನ್’ ಕಿಟ್‌್‌ಗಳ ವ್ಯಾಪಾರವೂ ಭರದಲ್ಲಿ ಸಾಗಿದೆ ಎನ್ನುತ್ತಾರೆ ಅಗರ್ ‘ಇನಾಕ್ಯುಲೇಶನ್’ ತಜ್ಞರಾದ ಇಂಗ್ಲೆಂಡ್ ದೇಶದ ಸಿರಿಚಾಯ್ ಚಾವೋಬಾಂಗ್ರಕ್.

ಅಗರ್ ಮರದ ಪರಿಚಯ
ಅಕ್ವೇಲೇರಿಯಾ ಕ್ರಾಸಾನಾ ಕಾಸಿಯಾನಾ ಕುಟುಂಬಕ್ಕೆ ಸೇರಿರುವ ಆಗರ್ ಕಾಡು ಜಾತಿಯ ಮರ. ಸೌತ್ ಈಸ್ಟ್ ಏಷ್ಯಾದ ನಿತ್ಯ ಹರಿದ್ವರ್ಣ ಮಲೆ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಮಲೇಷಿಯಾ, ಥೈಲ್ಯಾಂಡ್, ಜಪಾನ್, ದೇಶಗಳಲ್ಲದೇ ವಿಶ್ವದ ಸುಮಾರು 80 ದೇಶಗಳಲ್ಲಿ ಅಗರ್ ಬೆಳೆಯಲಾಗುತ್ತಿದೆ. ಅಂತೆಯೇ ಕರ್ನಾಟಕದಲ್ಲಿಯೇ ಆರು ಸಾವಿರಕ್ಕೂ ಹೆಚ್ಚು ಬೆಳೆಗಾರರು ಸುಮಾರು 2 ಲಕ್ಷಕ್ಕೂ ಹೆಚ್ಚು ಅಗರ್ ಗಿಡಗಳ ನಾಟಿ ಮಾಡಲಾಗಿದೆ. ಈ ಮರದ ಕಾಂಡಗಳಿಗೆ ಸ್ವಾಭಾವಿಕವಾಗಿ ಅಥವಾ ಕೃತಕವಾಗಿ ಗಾಯಗಳಾದಾಗ ಆ ಭಾಗದಲ್ಲಿ ಶಿಲೀಂಧ್ರಗಳು ಒಳಸೇರಿ ಅಗರ್ ಕಾಂಡವನ್ನು ಸುಗಂಧಭರಿತ ಭಾಗವನ್ನಾಗಿ ಪರಿವರ್ತಿಸುತ್ತವೆ. ಈ ರೀತಿ ಸೋಂಕು ತಗುಲಿದ ಮರಗಳು ತನ್ನ ಶಕ್ತಿ ಕಳೆದುಕೊಂಡು ಸಾಯುವ ಹಂತ ತಲುಪುತ್ತವೆ. ಆಗ ಮರಗಳನ್ನು ಕಡಿದು ಸುಗಂಧವುಳ್ಳ ಅಗರ್ ಭಾಗವನ್ನು ಬೇರ್ಪಡಿಸಿ ಜಾಗತಿಕ ಮಾರುಕಟ್ಟೆಗೆ ನೀಡಲಾಗುತ್ತದೆ.

ಅಗರ್ ಬಳಕೆ
ಮಧ್ಯ ಪ್ರಾಚ್ಯ ದೇಶಗಳಲ್ಲಿ ಹಾಗು ಮುಖ್ಯವಾಗಿ ಸೌದಿ ಅರೇಬಿಯಾ, ಯೂರೋಪ್ ದೇಶಗಳಲ್ಲಿ ಅಗರ್ ತೈಲವನ್ನು ನಿತ್ಯ ಬಳಕೆಯ ಸುಗಂಧ ದ್ರವ್ಯವಾಗಿ, ಕಾಂಡದ ಭಾಗಗಳನ್ನು ಆಭರಣವಾಗಿ, ಹತ್ತಾರು ಕಾಯಿಲೆಗಳಿಗೆ ಔಷಧಿಯಾಗಿ, ಕಾಮಪ್ರಚೋದಕ ಧೂಮವಾಗಿ, ಆರಾಧನೆಯ ಅಗರ್ ಬತ್ತಿಯಾಗಿ, ಜಗತ್ತಿನಲ್ಲೇ ಹೆಚ್ಚು ಬೇಡಿಕೆಯ ವಸ್ತುವಾಗಿ ಮಾರಾಟದಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT