ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹಬ್ಬ

ಕಾಫಿ ಬೆಳೆಗಾರರ
Last Updated 25 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಕೃಷಿಯಲ್ಲಿನ ಹೊಸ ವಿಧಾನ ವಿಚಾರಗಳ ವಿನಿಮಯ ವೇದಿಕೆಯಾದ  ‘ಹಳ್ಳಿ ಹಬ್ಬ’, ಡಿಸೆಂಬರ್ ಒಂದರಂದು ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಗ್ರಾಮದಲ್ಲಿ ನಡೆಯುತ್ತಿದೆ. ಒಂದು ದಿನದ ಈ ಕಾರ್ಯಕ್ರಮದಲ್ಲಿ ಬೆಳೆಗಾರರಿಂದ, ಬೆಳೆಗಾರರಿಗೆ ನೇರ ವಿಚಾರ ವಿನಿಮಯ, ನೇರ ಪ್ರಶ್ನೋತ್ತರ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ನಡೆಯಲಿದೆ. ಇಲ್ಲಿ ಭಾಷಣದ ಅಬ್ಬರವಿಲ್ಲ. ಕೃಷಿ ಅನುಭವದ ಮಾತುಕತೆಗಷ್ಟೇ ಅವಕಾಶ. ಹೊಸತನ್ನು ಬಯಸುವ ಕೃಷಿ ಆಸಕ್ತರಿಗೆ ಸ್ವಾಗತವಿದೆ.

ದಿನೇ ದಿನೇ ಹೊಸ ವಿಚಾರಗಳನ್ನು ಹುಡುಕಿ ಅಲೆಯುವ ಕಾಫಿ ಬೆಳೆಗಾರ, ದೇಶ ವಿದೇಶ ಅಲೆದು ಪ್ರಗತಿಪರ ಕೃಷಿ ವಿಚಾರ ಅರಿತು ಕೃಷಿಯಲ್ಲಿ ತೊಡಗಿಸಿಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಹೊಸ ಹೊಸ ಕೃಷಿ ಅಭಿವೃದ್ಧಿ ವಿಚಾರಗಳು ನಮ್ಮ ತೋಟಕ್ಕಷ್ಟೇ ಸೀಮಿತವಾಯಿತಲ್ಲಾ ಎಂಬ ಕೊರಗು ಬಹು ವರ್ಷಗಳಿಂದ ಬೆಳೆಗಾರರ ಮನಸ್ಸಿನಲ್ಲಿತ್ತು. ಅದಕ್ಕೆಲ್ಲಾ ಈಗ ವಿಶೇಷ ವೇದಿಕೆಯಾಗಿ ‘ಹಳ್ಳಿಹಬ್ಬ’ ಆಚರಣೆಯಲ್ಲಿದೆ. ಈ ಹಬ್ಬಕ್ಕೀಗ ಆರು ವರ್ಷ.

ಎರಡು ವರ್ಷಗಳಿಗೊಮ್ಮೆ ಬೆಳೆಗಾರರ ಹುಮ್ಮಸ್ಸಿನಿಂದಲೇ ನಡೆಯುತ್ತಿರುವ ಹಬ್ಬ ಇದು. ಹೊಸ ತಂತ್ರಜ್ಞಾನ, ಹೊಸ ಹೊಸ ಯಾಂತ್ರಗಳು, ಸುಲಭ ರೂಪದ ಕೃಷಿ, ಕಾರ್ಮಿಕರ ಕೊರತೆ ನಡುವೆ ತೋಟಗಳ ಆರೈಕೆ... ಹೀಗೆ ಇದು ಬೆಳೆಗಾರರಿಂದ ಬೆಳೆಗಾರರಿಗೆ ಮಾಹಿತಿಯ ಹೊಸ ಯೋಚನೆಯ ವೇದಿಕೆಯಾಗಿದೆ.

ಇದಕ್ಕೆ ಹಳ್ಳಿಗಾಡಿನ ಸಾಂಸ್ಕೃತಿಕ ಮೆರುಗೂ ಸೇರಿರುತ್ತದೆ. ಇದು ಒಂದೇ ಬೆಳೆಗೆ ಸೀಮಿತವಾಗಿರದೆ, ಮಲೆನಾಡು ಭಾಗಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಬೆಳೆಗಾರರ ವಿವಿಧ ಬೆಳೆಗಳ ವಿಚಾರ ಕೇಂದ್ರವಾಗಿದೆ.  ಉತ್ತಮ ಕಾಫಿ ಬೆಳೆಗಾರರನ್ನು ಗುರುತಿಸಿ ಪ್ರಶಸ್ತಿ ನೀಡುವುದು ‘ಹಳ್ಳಿಹಬ್ಬ’ದ ಇನ್ನೊಂದು ವಿಶೇಷ.

ಗ್ರಾಮದಲ್ಲಿನ ಸುಂದರವಾದ ಬಯಲು ಗುಡ್ಡದಲ್ಲಿ ಬೃಹತ್ ವೇದಿಕೆ ಅಡಿ ಸಾವಿರಾರು ಬೆಳೆಗಾರರು ತಮ್ಮ ತೋಟಗಳ ವಿವಿಧ ನಮೂನೆಯ ಕೃಷಿ ಆಶಯಗಳನ್ನು ವಿವರಿಸಲಿದ್ದಾರೆ. ಇದರ  ಜೊತೆಗೆ ಹೊಸ ರುಚಿಯ ಮಾಹಿತಿಗೂ ಬರವಿಲ್ಲ. ‘ನಿರ್ಣಯ ನಮ್ಮದು ನಿರ್ಧಾರ ನಿಮ್ಮದು’ ಘೋಷಣೆ ಈ ಕಾರ್ಯಕ್ರಮದ ವಿಶೇಷತೆ.

ಆದಾಯಕ್ಕಿಂತ ಖರ್ಚು ಹೆಚ್ಚಿರುವ ಈ ದಿನಗಳಲ್ಲಿ ಸುಲಭ ಕೃಷಿ ನಿರ್ವಹಣೆ ವಿಚಾರಗಳಾದ ಕಾಫಿ ಕೃಷಿಯಲ್ಲಿ ಸರಳೀಕರಣ ಮತ್ತು ಯಾಂತ್ರೀಕರಣ, ಕಡಿಮೆ ಖರ್ಚಿನಲ್ಲಿ ಕಾಫಿ ಕೃಷಿ, ತೋಟಗಳಲ್ಲಿ ಯಾಂತ್ರೀಕರಣಕ್ಕೆ ಸಿದ್ಧತೆ, ಕಾಳು ಮೆಣಸು ಕೃಷಿಯಲ್ಲಿನ ಅನುಭವಗಳು ಮತ್ತು ಮಾರುಕಟ್ಟೆ ಅವಲೋಕನ, ಪರಿಣಾಮಕಾರಿ ಮೆಣಸು ಕೃಷಿ, ಯುವಕರಿಗೆ ತರಬೇತಿ ಅನುಭವ, ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಾಳುಮೆಣಸು ಕೃಷಿ, ಸ್ವಾವಲಂಬಿ ಕೃಷಿಯಲ್ಲಿ ಯುವಕರ ಪಾತ್ರ... ಇವು ಕಾರ್ಯಕ್ರಮದಲ್ಲಿ ಚರ್ಚೆಯಾಗುವ ಪ್ರಮುಖ ವಿಚಾರಗಳು ಎನ್ನುತ್ತಾರೆ ಕಾರ್ಯಕ್ರಮದ ಸಂಚಾಲಕರಾದ ದಿನೇಶ ದೇವವೃಂದ.ಹೆಚ್ಚಿನ ಮಾಹಿತಿಗೆ  8277062933 - 9483811333.

-ಅಚ್ಚನಹಳ್ಳಿ ಸುಚೇತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT