ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ತಳಿ, ಸಸಿ ಮಡಿ...

ಬತ್ತದಿರಲಿ ಭತ್ತದ ಕಣಜ – 4
Last Updated 16 ಜೂನ್ 2014, 19:30 IST
ಅಕ್ಷರ ಗಾತ್ರ

ಭತ್ತದ ಅಧಿಕ ಇಳುವರಿಗೆ ಉತ್ತಮ ಬೀಜಗಳ ಆಯ್ಕೆ ಮುಖ್ಯ. ನಾಲ್ಕು ಲೀಟರ್ ನೀರಿಗೆ ಒಂದು ಕೆ.ಜಿ ಉಪ್ಪನ್ನು ಕರಗಿಸಿ ಬಿತ್ತನೆ ಬೀಜ ನೆನೆಸಬೇಕು. ಅರ್ಧ ಬಲಿತಿರುವ ಮತ್ತು ಜೊಳ್ಳಾದ ಬೀಜಗಳು ಮೇಲೆ ತೇಲುತ್ತವೆ. ಇವುಗಳನ್ನು ತೆಗೆದು ಕೆಳಗಡೆ ಗಟ್ಟಿಯಾಗಿರುವ ಬೀಜಗಳನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಬಿತ್ತನೆಗೆ ಉಪಯೋಗಿಸಬೇಕು.

ಸಸಿ ಮಡಿ ಮಾಡುವ ಪ್ರದೇಶದಲ್ಲಿ ನೆರಳು ಇರಬಾರದು. ಒಂದು ಎಕರೆಗೆ ಬೇಕಾಗುವ ಸಸಿಗಳನ್ನು ತಯಾರಿಸಲು ಸುಮಾರು 3 ಗುಂಟೆ ಪ್ರದೇಶ ಬೇಕಾಗುತ್ತದೆ.  ಸಸಿ ಮಡಿಗೆ ಬೇಕಾಗುವಷ್ಟು ಭೂಮಿಯನ್ನು ಅಳತೆ ಮಾಡಿಕೊಂಡು ಒಂದೆರಡು ಸಲ ಉಳುಮೆ ಮಾಡಬೇಕು. ಗದ್ದೆಯಲ್ಲಿ ನೀರು ನಿಲ್ಲಿಸಿ, ಪುನಃ ಒಂದೆರಡು ಬಾರಿ ಉಳುಮೆ ಮಾಡಿ ಹಲುಬೆ ಇಲ್ಲವೇ ಕುಂಟೆಯ ಸಹಾಯದಿಂದ ಮಣ್ಣನ್ನು ಚೆನ್ನಾಗಿ ಕೆಸರು ಮಾಡಿ ನಂತರ ಸಮ ಮಾಡಿ ಕಳೆ ತೆಗೆಯಬೇಕು. ನೀರು ಹಾಯಿಸಲು ಅನುವು ಮಾಡಿ ಹೆಚ್ಚಾದ ನೀರನ್ನು ಹೊರ ತೆಗೆಯಲು ಕಾಲುವೆ ಮಾಡಬೇಕು. 25 ಅಡಿ ಉದ್ದ, 4 ಅಡಿ ಅಗಲದ ಹಾಗೂ 10 ರಿಂದ 15 ಸೆಂ.ಮೀ ಎತ್ತರದ 30 ಸಸಿ ಮಡಿಗಳನ್ನು ಸಿದ್ಧಪಡಿಸಬೇಕು. ಪ್ರತಿ ಒಂದರಿಂದ ಒಂದೂವರೆ ಮೀಟರ್ ಅಂತರದಲ್ಲಿ ಅರ್ಧ ಮೀಟರ್ ಅಗಲದ ಕಾಲುವೆ ತಯಾರಿಸಬೇಕು. ಕಾಲುವೆ ತಯಾರಿಸುವಾಗ ಹೊರಬಂದ ಮಣ್ಣನ್ನು ಎರಡೂ ಪಕ್ಕದಲ್ಲಿ ಇರುವ ಭೂಮಿಯ ಮೇಲೆ ಹಾಕುತ್ತಾ ಮಟ್ಟವಾಗುವಂತೆ ಮಾಡಿದರೆ, ಅವಶ್ಯವಿರುವಷ್ಟು ಎತ್ತರದ ಮಡಿಗಳು ಸಿದ್ಧವಾಗುತ್ತವೆ.  ನೀರಿನ ನಿರ್ವಹಣೆಗೆ ಈ ಕಾಲುವೆಗಳು ಉಪಯೋಗ ಆಗುವುದಲ್ಲದೇ ಮಡಿಯಲ್ಲಿ ಬೀಜವನ್ನು ಬಿತ್ತುವಾಗ, ಕಳೆಗಳನ್ನು ತೆಗೆಯುವಾಗ, ಕೀಟ/ರೋಗಗಳ ಹತೋಟಿಗೆ ಔಷಧಿ ಸಿಂಪಡಿಸುವಾಗ ಮಡಿಗಳ ಸುತ್ತಲೂ ಓಡಾಡಲೂ ಈ ಕಾಲುವೆ ಪ್ರಯೋಜನಕಾರಿ ಎನಿಸುತ್ತವೆ.

ಸಸಿ ಮಡಿಗಳನ್ನು ಸಿದ್ಧಪಡಿಸಿದ ನಂತರ ಪ್ರತಿ 100 ಚದರ ಮೀಟರ್ ಪ್ರದೇಶಕ್ಕೆ 200 ರಿಂದ 250 ಕಿ.ಗ್ರಾಂ ಚೆನ್ನಾಗಿ ಕಳಿತ ಕೊಟ್ಟಿಗೆ

ಗೊಬ್ಬರ ಎಲ್ಲೆಡೆ ಸಮನಾಗಿ ಬೀಳುವಂತೆ ಚೆಲ್ಲಿ ಹಲುಬೆ ಅಥವಾ ಕುಂಟೆಯನ್ನು ಹೊಡೆಯಬೇಕು. ಬೀಜಗಳನ್ನು ಬಿತ್ತುವ ಮುಂಚೆ, ಮಡಿಗಳ ಮೇಲೆ ನಿಂತಿರುವ ನೀರನ್ನು ಬಸಿದು ತೆಗೆಯಬೇಕು. ಬಿತ್ತನೆ ಬೀಜಗಳನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ 36 ರಿಂದ 48 ಗಂಟೆ ಕಾಲ ಬೆಚ್ಚಗಿರುವ ಪ್ರದೇಶದಲ್ಲಿಟ್ಟರೆ ಮೊಳಕೆ ಬರುತ್ತವೆ. ಮೊಳಕೆ ಬಂದ ಬೀಜಗಳನ್ನು ಪ್ರತಿ ಚದರ ಮೀಟರ್‌ಗೆ 50 ರಿಂದ 70 ಗ್ರಾಂನಂತೆ ಬಿತ್ತಬೇಕು. ಸಸಿ ಮಡಿಗಳನ್ನು ಕೆಲವು ದಿನಗಳವರೆಗೆ ಒಣಗದಂತೆ ಎಚ್ಚರ ವಹಿಸಬೇಕು ಮತ್ತು ಸೂಕ್ತ ಪ್ರಮಾಣದಲ್ಲಿ ನೀರನ್ನು ಒದಗಿಸಬೇಕು. ಸಸಿಗಳು 2ರಿಂದ 3ಸೆಂ.ಮೀ ಎತ್ತರ ಬೆಳೆದಾಗ ತೆಳ್ಳಗೆ ನೀರು ಹಾಯಿಸಬೇಕು. ಸಸಿಗಳನ್ನು ನಾಟಿ ಮಾಡಲು ಉಪಯೋಗಿಸುವ 6 ದಿನಗಳ ಮುಂಚೆ ಅವಶ್ಯ ಇರುವ ಗೊಬ್ಬರಗಳನ್ನು ಕೊಡಬೇಕು. ಬಿತ್ತನೆಯಾದ 20 ರಿಂದ 25 ದಿನಗಳಲ್ಲಿ ಪೈರುಗಳು ನಾಟಿಗೆ ಸಿದ್ಧವಾಗುತ್ತವೆ.

ಒಣ ಸಸಿ ಮಡಿ
ನೀರಿನ ಸೌಕರ್ಯ ಸಾಕಷ್ಟು ಇರದ ಪ್ರದೇಶಗಳಲ್ಲಿ ಸಸಿಗಳನ್ನು ಒಣಮಡಿಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಪದ್ಧತಿಯಲ್ಲಿ ಬಿತ್ತನೆ ಬೀಜವನ್ನು ಮೊಳಕೆ ಕಟ್ಟುವ ಮತ್ತು ಮಣ್ಣನ್ನು ಕೆಸರು ಮಾಡುವ ಅಗತ್ಯವಿರುವುದಿಲ್ಲ, ಇಲ್ಲೂ ಒಂದು ಎಕರೆ ಪ್ರದೇಶದಲ್ಲಿ ನಾಟಿ ಮಾಡಲು ಬೇಕಾಗುವಷ್ಟು ಸಸಿ ಬೆಳೆಸಲು ಸುಮಾರು 3 ಗುಂಟೆ ಪ್ರದೇಶ ಬೇಕಾಗುತ್ತದೆ. ಸಸಿ ಮಡಿ ಮಾಡಲು ಆಯ್ಕೆ ಮಾಡಿದ ಭೂಮಿಯನ್ನು 2 ರಿಂದ 3 ಸಾರಿ ಚೆನ್ನಾಗಿ ಉಳುಮೆ ಮಾಡಿ, ಹೆಂಟೆ ಒಡೆದು, ಹಲುಬೆ ಇಲ್ಲವೇ ಕುಂಟೆ ಹಾಯಿಸಿ ನೆಲವನ್ನು ಮಟ್ಟವಾಗಿಸಬೇಕು. ಮೇಲೆ ತಿಳಿಸಿರುವ ಅಳತೆಯಂತೆಯೇ ಮಡಿ ತಯಾರಿ ಕಾಲುವೆ ನಿರ್ಮಾಣ ಮಾಡಬೇಕು. ಮಡಿಗಳನ್ನು ತಯಾರಿಸಿದ ಮೇಲೆ ಪ್ರತಿ ಸಸಿಮಡಿಗೂ 20 ರಿಂದ 25 ಕಿ.ಗ್ರಾಂನಷ್ಟು ಕಳಿತ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಮಿಶ್ರಮಾಡಬೇಕು.

ಅರ್ಧಂಬರ್ಧ ಸುಟ್ಟ ಭತ್ತದ ಹುಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಪೈರುಗಳನ್ನು ಮಣ್ಣಿನಿಂದ ತೆಗೆಯಲು ಅನುಕೂಲವಾಗುತ್ತದೆ. ಬೀಜೋಪಚಾರ ಮಾಡಿದ ಬೀಜಗಳನ್ನು 10 ಸೆಂ.ಮೀ ಗೆ ಒಂದರಂತೆ ಬಿತ್ತಬೇಕು. ಪ್ರತಿ ಚದರ ಮೀಟರ್ ಕ್ಷೇತ್ರಕ್ಕೆ 50 ರಿಂದ 70 ಗ್ರಾಂ ಬೀಜಗಳು ಬರುವಂತೆ ಸಮನಾಗಿ ಬಿತ್ತಬೇಕು. ಹುಡಿ ಮಣ್ಣು ಮತ್ತು ಹುಡಿಯಾಗಿರುವ ಗೊಬ್ಬರದ ಮಿಶ್ರಣವನ್ನು ಉದುರಿಸಿ ಬೀಜಗಳನ್ನು ಸರಿಯಾಗಿ ಮುಚ್ಚಬೇಕು. ನೀರ್ಗಾಲುವೆಗಳಲ್ಲಿ ನೀರನ್ನು ಬಿಟ್ಟು ಮಡಿಗಳು ನೀರನ್ನು ಹೀರಿಕೊಂಡು ಸಂಪೂರ್ಣವಾಗಿ ನೆನೆಯುವಂತೆ ಮಾಡಬೇಕು. 15 ರಿಂದ 21 ದಿನಗಳಲ್ಲಿ ಪೈರುಗಳು ನಾಟಿಗೆ ಸಿದ್ಧವಾಗುತ್ತದೆ.

ಡ್ಯಾಪೋಗ್ ಸಸಿ ಮಡಿ
ಈ ವಿಧಾನದಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಬಳಸಿ, ಹೊರಾಂಗಣದಲ್ಲಿ ಅಥವಾ ಭಾಗಶಃ ಬಿಸಿಲು ಬೀಳುವ ವಾತಾವರಣದಲ್ಲಿ, ಕಲ್ಲು ಹಾಸು, ಸಿಮೆಂಟು ನೆಲಗಳಲ್ಲೂ ಸಸಿಮಡಿ ತಯಾರಿಸಬಹುದು. ಒಂದು ಮೀಟರ್ ಅಗಲ ಮತ್ತು ಹತ್ತು ಸೆಂ.ಮೀ ಎತ್ತರದ ಒಣ ಸಸಿ ಮಡಿ ತಯಾರಿಸಿ ಅವುಗಳ ಮೇಲ್ಪದರವನ್ನು ಮಟ್ಟ ಮಾಡಬೇಕು. ಅದರ ಮೇಲೆ ಪ್ಲಾಸ್ಟಿಕ್ ಹಾಳೆ ಹರಡಿ, ಎರಡು ಸೆಂ.ಮೀ ದಪ್ಪ ಬರುವಂತೆ ಹುಡಿಯಾದ ಕೊಟ್ಟಿಗೆ ಗೊಬ್ಬರ ಮತ್ತು ಕಲ್ಲುಗಳಿಲ್ಲದ ಹುಡಿ ಮಣ್ಣನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹರಡಬೇಕು. ಬೀಜೋತ್ಪಾದನೆ ಮಾಡಿದ ಬಿತ್ತನೆ ಬೀಜಗಳನ್ನು, ಪ್ಲಾಸ್ಟಿಕ್ ಹಾಳೆಯ ಮೇಲೆ ಮಣ್ಣು ಮತ್ತು ಗೊಬ್ಬರದ ಮಿಶ್ರಣದ ಮೇಲೆ, ಪ್ರತಿ ಚ.ಮೀ ಪ್ರದೇಶಕ್ಕೆ ಒಂದು ಕೆ.ಜಿ ಬೀಜವನ್ನು ಬಿತ್ತಬೇಕು. ಬೀಜಗಳನ್ನು ಹರಡಿ ಕೈಯಿಂದ ಮೆದುವಾಗಿ ತಟ್ಟಬೇಕು. ಹಕ್ಕಿಗಳ ತೊಂದರೆ ತಡೆಗಟ್ಟುವುದಕ್ಕೆ ಹಾಗೂ ತೇವಾಂಶ ಕಾಪಾಡಲು ಇದರ ಮೇಲೆ ತೆಳುವಾಗಿ ಭತ್ತದ ಹುಡಿ ಅಥವಾ ದಿಂಡು ತೆಗೆದ ಬಾಳೆ ಎಲೆಗಳನ್ನು ಹೊದಿಕೆ ಹಾಕಬೇಕು. ಪ್ರತಿದಿನ ಎರಡು ಮೂರು ಬಾರಿ ತಪ್ಪದೆ ತೆಳುವಾಗಿ ನೀರು ಒದಗಿಸಬೇಕು. ಈ ವಿಧಾನದಲ್ಲಿ 18 ರಿಂದ 20 ದಿನಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತದೆ. ಇಲ್ಲಿರುವ ಅನುಕೂಲವೆಂದರೆ ನಾಟಿಯ ಸಮಯದಲ್ಲಿ ಸಸಿ ಮಡಿಗಳನ್ನು ಚಾಪೆಯಂತೆ ಸುತ್ತಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬಹುದು. ನಾಟಿ ಯಂತ್ರದ ಅಳತೆಗೆ ಸರಿಯಾಗಿ ಸಸಿಮಡಿಯಲ್ಲಿ ಚಾಕುವಿನಿಂದ ಕತ್ತರಿಸಿ, ಯಂತ್ರಕ್ಕೂ ಸಹ ಅಳವಡಿಸಬಹುದು.

ಚಳಿಗಾಲದಲ್ಲಿ ನಿರ್ವಹಣೆ
ಮೊಳಕೆ ಕಟ್ಟಿ ಬಿತ್ತನೆ ಮಾಡಿದ ಸಸಿ ಮಡಿಗಳ ಮೇಲೆ ಪಾರದರ್ಶಕ ಪ್ಲಾಸ್ಟಿಕ್ ಹಾಳೆಯನ್ನು ಸುಮಾರು ಹದಿನೈದು ದಿನಗಳವರೆಗೆ ಹೊದಿಸುವುದರಿಂದ ಚಳಿಗಾಲದಲ್ಲಿ ಬೆಳವಣಿಗೆ ಕುಂಠಿತವಾಗುವುದನ್ನು ತಡೆಗಟ್ಟಬಹುದು. ಪ್ಲಾಸ್ಟಿಕ್ ಹಾಳೆಯನ್ನು ಸುಮಾರು 45 ಸೆಂ.ಮೀ ಎತ್ತರದಲ್ಲಿ ಹೊದಿಸಿ, ಗಾಳಿ ತೂರದ ಹಾಗೆ ರಕ್ಷಿಸಬೇಕು. ­15 ದಿನಗಳ ನಂತರ ಈ ಹಾಳೆ ತೆಗೆದು, ಪೈರುಗಳನ್ನು ನೈಸರ್ಗಿಕ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯಲು ಯೋಗ್ಯವಾಗುವಂತೆ ಅನುವು ಮಾಡಿ ಕೊಡಬೇಕು. ಸಂಪರ್ಕಕ್ಕೆ: 9632202521)
–ಡಾ. ಆರ್. ಕೃಷ್ಣಮೂರ್ತಿ, ಸಹ ಪ್ರಾಧ್ಯಾಪಕ, ಮಣ್ಣು ಮತ್ತು ನೀರು ನಿರ್ವಹಣಾ ಇಲಾಖೆ, ಮಂಡ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT