ಸನ್ಯಾಸಿ ಟೆಕಿ ಆಶ್ರಮದಲ್ಲಿ ಅಜಿತಾಬ್‌ ?

7
ಟೆಕಿ ನಾಪತ್ತೆ ಪ್ರಕರಣ: ಸಿಬಿಐ ತನಿಖೆ ಕೋರಿಕೆ

ಸನ್ಯಾಸಿ ಟೆಕಿ ಆಶ್ರಮದಲ್ಲಿ ಅಜಿತಾಬ್‌ ?

Published:
Updated:
Deccan Herald

ಬೆಂಗಳೂರು: ನಾಪತ್ತೆಯಾಗಿರುವ ಟೆಕಿ ಕುಮಾರ್ ಅಜಿತಾಬ್ ಉತ್ತರ ಭಾರತದ ಪ್ರಮುಖ ಸ್ವಾಮೀಜಿಯೊಬ್ಬರ ಆಶ್ರಮದಲ್ಲಿದ್ದಾರೆಯೇ...?

‘ಹೌದು, ಎನ್ನುತ್ತವೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್‌ ಮೂಲಗಳು. ಈ ಕುರಿತಂತೆ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಮುಚ್ಚಿದ ಲಕೋಟೆಯಲ್ಲಿ ಈ ಅಂಶವನ್ನು ಕಾಣಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಈ ಆಶ್ರಮವು ನವದಹೆಲಿಯ ರಾಜ್‌ ವಿದ್ಯಾಕೇಂದ್ರ ಎನ್ನಲಾಗಿದೆ. ಅಜಿತಾಬ್‌ ಸದ್ಯ ಈ ಆಶ್ರಮದ ಸ್ವಾಮೀಜಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರು ಅಲ್ಲಿಗೆ ಹೋಗಿ ಬಂದಿದ್ದಾರೆ. ಆದರೆ, ಪತ್ತೆ ಆಗಿಲ್ಲ’ ಎಂದು ಮೂಲಗಳು ವಿವರಿಸಿವೆ.

ಅರ್ಜಿ ವಿಚಾರಣೆ: ‘ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸಬೇಕು’ ಎಂದು ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ವಿ.ಶ್ರೀನಿಧಿ, 'ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಕೆಲವು ಪ್ರಮುಖ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಬೇಕಿದೆ. ಸದ್ಯ ಅವರು ಬೇರೊಂದು ಪ್ರಕರಣದಲ್ಲಿ ಕಾರ್ಯನಿರತರಾಗಿದ್ದು ಒಂದು ದಿನದ ಮಟ್ಟಿಗೆ ಕಾಲಾವಕಾಶ ನೀಡಬೇಕು' ಎಂದು ಮನವಿ ಮಾಡಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ. ‘ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೋ ಬೇಡವೋ’ ಎಂಬ ಬಗ್ಗೆ ನ್ಯಾಯಪೀಠ ಗುರುವಾರ (ಆ.9) ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಗೌತಮ್‌ ಭಾರದ್ವಾಜ್‌ ಅವರು, 'ಘಟನೆ ನಡೆದು ಎಂಟು ತಿಂಗಳಾದರೂ ಅಜಿತಾಬ್ ಆಗಲಿ ಅಥವಾ ಅವರು ಮಾರಾಟ ಮಾಡಲು ಹೋಗಿದ್ದ ಕಾರ್ ಆಗಲಿ ಪತ್ತೆಯಾಗಿಲ್ಲ. ಪೊಲೀಸರು ತಮ್ಮ ಹುಡುಕಾಟ ನಡೆಸಿದ್ದಾರೆ ನಿಜ. ಆದರೆ, ಅದು ಯಶಸ್ಸು ಕಂಡಿಲ್ಲ’ ಎಂದರು.

‘ಅರ್ಜಿದಾರರ‌ ಕುಟುಂಬ ಸದಸ್ಯರ ದುಃಖ ಹೇಳತೀರದಾಗಿದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸುವುದೇ ಸೂಕ್ತ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪ್ರತಿವಾದಿಗಳಾದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು, 'ಅಜಿತಾಬ್‌ ಅವರನ್ನು ನೀವು ಹೇಗೆ ಪತ್ತೆ ಹಚ್ಚಬಲ್ಲಿರಿ' ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರಸನ್ನ ಕುಮಾರ್, 'ಸಿಬಿಐ ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ತನಿಖಾ ಸಂಸ್ಥೆಯಾಗಿದೆ. ಪೊಲಿಸರ ತನಿಖೆ ವಿಫಲವಾದ ಪ್ರಕರಣಗಳಲ್ಲಿ ಅದನ್ನು ಸಿಬಿಐಗೆ ನೀಡಲಾಗಿರುವ ಅನೇಕ ನಿದರ್ಶನಗಳಿವೆ ಎಂದು ಕೆಲವು ಪ್ರಕರಣಗಳನ್ನು ನ್ಯಾಯಪೀಠಕ್ಕೆ ಉದಾಹರಿಸಿದರು.

ವಿ.ಶ್ರೀನಿಧಿ, 'ಪೊಲೀಸರ ತನಿಖೆ ತೃಪ್ತಿಕರವಾಗಿದೆ ಇದೆ' ಎಂದು ಸಮರ್ಥಿಸಿಕೊಂಡರು. ಅಂತೆಯೇ, ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯ ವಿವರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಏನಿದು ಪ್ರಕರಣ? 
ಕುಮಾರ್ ಅಜಿತಾಬ್ 2017ರ ಡಿಸೆಂಬರ್ 18ರ‌ ಸಂಜೆ 6.30ಕ್ಕೆ ತಮ್ಮ ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಅಜಿತಾಬ್ ತಂದೆ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ಪೊಲೀಸರು ಡಿಸೆಂಬರ್ 20 ಹಾಗೂ 29ರಂದು ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ‘ಅಜಿತಾಬ್ ಪತ್ತೆ ಮಾಡುವಲ್ಲಿ ಪೊಲೀಸರು ಯಾವುದೇ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಅಶೋಕ್ ಕುಮಾರ್ ಸಿನ್ಹಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !