ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರುವ ಉದ್ಯಾನ..!

ಮಂಗಳವಾರ, ಏಪ್ರಿಲ್ 23, 2019
27 °C
ಆಲಮಟ್ಟಿ: ಭದ್ರತೆಯ ಹೆಸರಿನಲ್ಲಿ ಪ್ರವಾಸಿಗರಿಗೆ ಕಿರಿಕಿರಿ

ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿರುವ ಉದ್ಯಾನ..!

Published:
Updated:
Prajavani

ಆಲಮಟ್ಟಿ: ಇಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಭದ್ರತೆಗಾಗಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಕೈಗೊಳ್ಳುತ್ತಿರುವ ವಿವಿಧ ಕ್ರಮಗಳು ಪ್ರವಾಸಿಗರಿಗೆ ತೊಂದರೆ ಉಂಟು ಮಾಡುತ್ತಿವೆ.

ಭದ್ರತೆಯ ಕಾರಣ ಪೊಲೀಸರು ಆಲಮಟ್ಟಿ ಪೆಟ್ರೋಲ್‌ಪಂಪ್‌ ಹತ್ತಿರದ ರಾಕ್‌ ಉದ್ಯಾನದಿಂದ 77 ಎಕರೆ ವಿಸ್ತಾರದ ವಿವಿಧ ಉದ್ಯಾನಗಳ ಸಮುಚ್ಛಯಕ್ಕೆ ತೆರಳಲು ಪ್ರವಾಸಿ ವಾಹನ ಸಂಚಾರ ನಿಷೇಧಿಸಿರುವುದರಿಂದ ಕನಿಷ್ಠ ಒಂದು ಕಿ.ಮೀ, ನಡೆಯಬೇಕಾದ ಅನಿವಾರ್ಯತೆ ಇದೀಗ ಪ್ರವಾಸಿಗರದ್ದಾಗಿದೆ.

ಇದರಿಂದ ಉದ್ಯಾನ ವೀಕ್ಷಣೆಗೆ ಬರುವ ವಯೋವೃದ್ಧರು, ಅಂಗವಿಕಲರು, ಚಿಕ್ಕಮಕ್ಕಳು ತೀವ್ರ ಕಿರಿಕಿರಿ, ತೊಂದರೆ ಅನುಭವಿಸುತ್ತಿದ್ದಾರೆ.

ಮೊಘಲ್‌ ಉದ್ಯಾನ, ಸಂಗೀತ ಕಾರಂಜಿ, ಇಟಾಲಿಯನ್‌ ಉದ್ಯಾನ, ಫ್ರೆಂಚ್‌ ಉದ್ಯಾನ ಸೇರಿ 77 ಎಕರೆ ವಿಸ್ತಾರದ ಉದ್ಯಾನ ಸಮುಚ್ಛಯಕ್ಕೆ ಒಂದೇ ಪ್ರವೇಶ ದ್ವಾರವಿದೆ. ಮೊದಲೆಲ್ಲಾ ಈ ಎಂಟ್ರನ್ಸ್ ಪ್ಲಾಜಾ ಅಕ್ಕ ಪಕ್ಕದ ರಸ್ತೆಯಲ್ಲಿ ಸಾಲಾಗಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿತ್ತು. ಇದರಿಂದ ಪ್ರವಾಸಿಗರಿಗೆ ಈ ಉದ್ಯಾನಕ್ಕೆ ತೆರಳಲು ಸುಲಭವಾಗಿತ್ತು.

ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ನಿತ್ಯ ಆಲಮಟ್ಟಿಗೆ ಬರುತ್ತಿದ್ದರೂ; ಇದೀಗ ನಡೆದು ಬರಬೇಕಾದ ಕಾರಣ, ಒಂದು ತಿಂಗಳಿಂದ ಉದ್ಯಾನ ಸಮುಚ್ಛಯ ಪ್ರವಾಸಿಗರಿಲ್ಲದೆ ಬೀಕೋ ಎನ್ನುತ್ತಿವೆ. ಸಂಗೀತ ಕಾರಂಜಿ ನೋಡಲೆಂದೇ ರಾತ್ರಿ ಆಲಮಟ್ಟಿಗೆ ಬರುವ ಪ್ರವಾಸಿಗರೂ ಹೆಚ್ಚು. ಆದರೆ ನಡೆಯಲು ತಡವಾಗುತ್ತದೆ ಎಂದು ತಿಳಿದು, ಪ್ರವಾಸಿಗರು ಮರಳುತ್ತಿದ್ದಾರೆ.

ಎಂಟ್ರನ್ಸ್‌ಪ್ಲಾಜಾವರೆಗೆ ವಾಹನದಲ್ಲಿ ಪ್ರವಾಸಿಗರನ್ನು ಇಳಿಸಿ ಹೋಗಲು ಅನುಮತಿ ನೀಡಬೇಕು ಎಂಬುದು ಬಹುತೇಕ ಪ್ರವಾಸಿಗರ ಒತ್ತಾಯ.

ನಿತ್ಯ ನೂರು ಪ್ರವಾಸಿಗರೂ ಇಲ್ಲ..!
‘ವಾಹನ ನಿಷೇಧದ ಕಾರಣ ಉದ್ಯಾನ ಸಮುಚ್ಛಯಕ್ಕೆ ಭೇಟಿ ನೀಡುವವರ ಸಂಖ್ಯೆ ಕಳೆದ ಒಂದು ತಿಂಗಳಿಂದ ನಿತ್ಯ ನೂರು ದಾಟುತ್ತಿಲ್ಲ’ ಎಂದು ಎಂಟ್ರನ್ಸ್‌ಪ್ಲಾಜಾದ ಟಿಕೆಟ್‌ ನೀಡುವ ಗಿರಿಯಪ್ಪ ಸಿಂದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿತ್ಯವೂ ಎಂಟ್ರನ್ಸ್‌ಪ್ಲಾಜಾ ಬಳಿ ಸಂಗೀತ ಕಾರಂಜಿಯ ಸಮಯದಲ್ಲಿ ಜಾತ್ರೆಯಂತೆ ಜನ ಸೇರುತ್ತಿದ್ದರು. ಇದರಿಂದ ರಸ್ತೆ ಬದಿ ವ್ಯಾಪಾರಸ್ಥರಾದ ನಮಗೆ ಹೆಚ್ಚಿನ ವ್ಯಾಪಾರ ಆಗುತ್ತಿತ್ತು. ಈಗ ಅದು ಸಂಪೂರ್ಣ ಸ್ತಬ್ಧವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅನೇಕ ವ್ಯಾಪಾರಿಗಳು ಹೇಳಿದರು.

ಪ್ರವಾಸಿಗರ ಹೈರಾಣ
‘ಕುಟುಂಬದೊಂದಿಗೆ ಸಂಗೀತ ಕಾರಂಜಿ ವೀಕ್ಷಿಸಲು ಬಂದಿದ್ದೆ. ಆದರೆ ರಾಕ್ ಉದ್ಯಾನದ ಬಳಿಯೇ ನಮ್ಮ ಕಾರು ನಿಲ್ಲಿಸಿದ್ದರಿಂದ ಒಂದು ಕಿ.ಮೀ ನಡೆದೆವು. ಇದರಿಂದ ಹೈರಾಣಾಗಬೇಕಾಯಿತು. ತಂದೆ, ತಾಯಿ, ಚಿಕ್ಕಮಕ್ಕಳಿಗೆ ತೀವ್ರ ತೊಂದರೆಯಾಯಿತು’ ಎಂದು ಕಲಬುರ್ಗಿಯ ಬಸವರಾಜ ತೆಗ್ಗಿ ಹೇಳಿದರು.

‘ಚಿಕ್ಕಮಕ್ಕಳಿದ್ದ ಕಾರಣ ಕನಿಷ್ಠ ಎಂಟ್ರನ್ಸ್‌ಪ್ಲಾಜಾವರೆಗೆ ಕಾರ್ ಮೂಲಕ ಹೋಗಿ ಎಲ್ಲರನ್ನು ಇಳಿಸಿ ಮರಳಿ ಬರಲು ಇಲ್ಲಿಯ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ’ ಎಂದು ಜಮಖಂಡಿಯ ರಾಘವೇಂದ್ರ, ಪುಣೆಯ ಮಹೇಶ ಮಹೇಂದ್ರಕರ ದೂರಿದರು.

ವಾಹನಗಳ ಪ್ರವೇಶಕ್ಕೆ ಆಗ್ರಹ
‘ಮೊಘಲ್ ಉದ್ಯಾನದ ಬಳಿ ಪಾರ್ಕಿಂಗ್ ಬೇಡ ಎಂದರೇ, ವಾಹನದಲ್ಲಿ ಹೋಗಿ ಮರಳಿ ಕರೆತರಲು ಅವಕಾಶ ನೀಡಬೇಕು. ಇಲ್ಲವೇ ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿರುವ ಬ್ಯಾಟರಿ ಚಾಲಿತ ವಾಹನ ಇಲ್ಲವೇ ನಿಗಮದ ಬಸ್‌ಗಳನ್ನೇ, ಪೆಟ್ರೋಲ್‌ಪಂಪ್‌ನಿಂದ ಎಂಟ್ರನ್ಸ್‌ ಪ್ಲಾಜಾವರೆಗೂ ಓಡಾಟ ಆರಂಭಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಹಿರೇಮಠ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !