ಆಗುವುದೆಲ್ಲ ಒಳ್ಳೆಯದಕ್ಕೇ...

7

ಆಗುವುದೆಲ್ಲ ಒಳ್ಳೆಯದಕ್ಕೇ...

Published:
Updated:
ಸಾಂದರ್ಭಿಕ ಚಿತ್ರ

ನಾ ವು ಚಿಕ್ಕವರಿದ್ದಾಗ, ನಮ್ಮ ಅಜ್ಜಯ್ಯ ಹೇಳುತ್ತಿದ್ದ ಮಾತೊಂದು ಸದಾ ನನ್ನ ಕಿವಿಯಲ್ಲಿ ಗುಂಯ್‍ಗುಡುತ್ತಿರುತ್ತದೆ. ಅವರು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಹೇಳುತ್ತಿದ್ದದ್ದು ಒಂದೇ ಮಾತು: ‘ಒಳ್ಳೆಯದು ಮಗೂ’ ಎಂದು. ಎಷ್ಟೊಂದು ಸಕಾರಾತ್ಮಕ ಚಿಂತನೆಯಲ್ಲವೇ? ಎಲ್ಲದರಲ್ಲೂ ಒಳ್ಳೆಯದನ್ನು ಕಾಣುವ ಹಾಗೂ ಎಲ್ಲದರ ಮೇಲೂ ಅವರಿಗಿದ್ದ ಒಳ್ಳೆಯ ಭರವಸೆಯೇ ಅವರ 96 ವರ್ಷಗಳ ತುಂಬು ಜೀವನದ ಗುಟ್ಟು! ಅವರು ತಾವೊಬ್ಬರೇ ಸಕಾರಾತ್ಮಕವಾಗಿ ಚಿಂತಿಸುವುದಲ್ಲದೇ ಬೇರೆಯವರನ್ನೂ ಅದರತ್ತ ಸೆಳೆಯುತ್ತಿದ್ದರು. ಅದರ ಅರಿವು ನನಗೀಗ ಆಗುತ್ತಿದೆ.

ಹೌದು, ಆಗುವುದೆಲ್ಲ ಒಳ್ಳೆಯದಕ್ಕೇ! ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆಯೂ ಒಂದು ಕಾರಣವಿದ್ದೇ ಇರುತ್ತದೆ. ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿ, ಸ್ಥಳ, ವಸ್ತು ಎಲ್ಲದಕ್ಕೂ ಒಂದು ಕಾರಣವಿದ್ದೇ ಇರುತ್ತದೆ. ಕೆಲವೊಮ್ಮೆ ಪರಿಸ್ಥಿತಿ ತೀರಾ ಕೆಟ್ಟದಾಗಿದ್ದರೂ ಅದಕ್ಕೂ ಒಂದು ಉದ್ದೇಶ ಇದ್ದೇ ಇರುತ್ತದೆ. ಆ ಸಮಯಕ್ಕೆ ಅದರ ಮಹತ್ವ ಅರಿವಾಗದಿದ್ದರೂ ಶಾಂತಮನಸ್ಸಿನಿಂದ ವಿಶ್ಲೇಷಿಸಿದರೆ, ಖಂಡಿತ ಅದರ ಮರ್ಮ ತಿಳಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ, ‘ಯಾಕಾದರೂ ಈ ಸ್ಥಿತಿ ಬಂದಿದೆಯೋ? ಇದು ಬದಲಾಗುವುದೇ ಇಲ್ಲವೇ?’ – ಎನ್ನುವಂತಹ ಘಟನೆಗಳು ನಡೆದೇ ಇರುತ್ತವೆ. ಆದರೆ ನೆನಪಿಡಿ, ಯಾವುದೂ ಸ್ಥಿರವಲ್ಲ; ಕೆಟ್ಟದ್ದಾಗಲೀ ಒಳ್ಳೆಯದಾಗಲೀ ಬದಲಾಗುತ್ತಲೇ ಇರುತ್ತವೆ.

ಕತ್ತಲೆ ಕಳೆದು ಬೆಳಕು ಹರಿಯುವಂತೆ, ಬೆಳಕು ನಂದಿ ಕತ್ತಲೆ ಕವಿಯುವಂತೆ, ಜೀವನವೆಂಬ ಬಂಡಿಯ ಚಕ್ರಗಳು ತಿರುಗುತ್ತಲೇ ಇರುತ್ತವೆ. ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವಂತೆ, ‘ಕಾಲ ಹೀಗೇ ಇರುವುದಿಲ್ಲ’! ಒಳ್ಳೆಯದಲ್ಲದ ಸ್ಥಿತಿ ಎಂದು ಯಾವುದನ್ನು ನಾವು ಅಂದುಕೊಳ್ಳುತ್ತೇವೆಯೋ, ಅವು ಬರುವುದೇ ನಮ್ಮನ್ನು ಬಲಗೊಳಿಸಲು. ಪ್ರಪಂಚದಲ್ಲಿ ಪ್ರತಿಯೊಂದು ಜೀವಿಯ ಹುಟ್ಟೂ ಲೋಕಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿರುತ್ತದೆ. ಒಳ್ಳೆಯ ಕೆಲಸವನ್ನು ಮಾಡುವ ಜನರನ್ನು ಒಳ್ಳೆಯವರೆಂದು ತೀರ್ಮಾನಿಸುವುದು ಸುಲಭ. ಕೆಟ್ಟ ಕೆಲಸಗಳನ್ನು ಮಾಡುವ ಜನರೂ ಬಹಳಷ್ಟು ಮಂದಿ ನಮ್ಮೆಲ್ಲರ ನಡುವೆಯೇ ಇದ್ದಾರೆ.

ಹಾಗಾದರೆ, ಅವರಿಂದಾಗುವ ಒಳ್ಳೆಯದೇನು? ಈ ಪ್ರಶ್ನೆ ಮೂಡುವುದು ಸಹಜ. ಕೆಟ್ಟದ್ದು ಇರುವುದರಿಂದಲೇ ಒಳ್ಳೆಯದರ ಮಹತ್ವ ತಿಳಿಯುವುದಲ್ಲವೇ? ಕೆಟ್ಟದ್ದನ್ನು ಮಾಡುವುದರಿಂದ ಒಳ್ಳೆಯದಾಗುವುದಿಲ್ಲ ಎಂಬ ಸತ್ಯದ ಅರಿವಾಗುತ್ತದಲ್ಲವೇ? ಕೆಟ್ಟದ್ದನ್ನು ಮಾಡುವವರು ಇರುವುದರಿಂದಲೇ ಒಳ್ಳೆಯ ಕಾನೂನಿನ ಉದಯವಾಗುತ್ತದಲ್ಲವೇ? ಒಮ್ಮೆ ಯೋಚಿಸಿ ನೋಡಿ. ಚಿಂತನೆ ಸಕಾರಾತ್ಮಕವಾಗಿ ಇದ್ದಲ್ಲಿ ಆಗುವುದೆಲ್ಲವೂ ಒಳ್ಳೆಯದೇ ಆಗುತ್ತದೆ. ಆಗುವ ಘಟನೆಯನ್ನು ನಾವು ಪರಾಮರ್ಶಿಸುವ ರೀತಿಯಲ್ಲಿ ಅದರ ಫಲ ತಿಳಿಯುತ್ತದೆ. ಉದಾಹರಣೆಗೆ, ಯಾವುದೋ ಊರಿಗೆ ಹೊರಟಿದ್ದೀರಿ ಎಂದುಕೊಳ್ಳೋಣ.

ಸಮಯಕ್ಕೆ ಸರಿಯಾಗಿ ಬಂದರೂ ಬಸ್ಸು ಸಿಗುವುದಿಲ್ಲ. ಆಗ ಬಸ್ಸು ತಪ್ಪಿ ಹೋಗಿದ್ದಕ್ಕೆ ಶಪಿಸುತ್ತಲೇ ಕುಳಿತು, ಮನಸ್ಸು ಕೆಡಿಸಿಕೊಳ್ಳುವುದು ಒಂದು ರೀತಿ. ಈ ಬಸ್ಸು ಹೋದರೆ ಮತ್ತೊಂದು ಅಥವಾ ಇನ್ಯಾವುದೋ ಗಾಡಿ ಸಿಗುತ್ತದೆ ಎಂದು ಚಿಂತಿಸುವುದು ಮತ್ತೊಂದು ರೀತಿ. ಯಾವ ರೀತಿ ಚಿಂತಿಸಿದರೂ ನೀವು ತಲುಪಬೇಕಾಗಿರುವ ವೇಳೆಗೇ ತಲುಪುವುದು. ವೃಥಾ ಮನಸ್ಸನ್ನೇಕೆ ಉದ್ವೇಗ ಮಾಡಿಕೊಳ್ಳಬೇಕು ಅಲ್ಲವೇ? ಬಸ್ಸು ತಪ್ಪಿದ್ದಕ್ಕೆ ಚಿಂತಿಸುವುದು ಬಿಟ್ಟು, ಯಾವುದೋ ಒಳ್ಳೆಯ ಕಾರಣಕ್ಕೇ ಹೀಗಾಗಿದೆ ಎಂದು ಯೋಚಿಸಿ ನೋಡಿ. ಖಂಡಿತ ಅದರ ಫಲಿತಾಂಶ ಸಿಕ್ಕೇ ಸಿಗುತ್ತದೆ. ಕಾರಣವಿಲ್ಲದೆ ಯಾವ ಘಟನೆಯೂ ಸಂಭವಿಸುವುದಿಲ್ಲ!

ಪ್ರತಿಯೊಂದು ಘಟನೆಯೂ ಒಳ್ಳೆಯದಕ್ಕೇ ಆಗುವುದಾದರೆ, ನಮ್ಮ ಆತ್ಮೀಯರ ‘ಸಾವು’ ಒಳ್ಳೆಯದಕ್ಕೇ ಎನ್ನುವುದನ್ನು ಒಪ್ಪಲು ಕಷ್ಟವಾಗುತ್ತದಲ್ಲವೇ? ನಮ್ಮ ಆತ್ಮೀಯರ ಅಗಲಿಕೆಯಿಂದ ಒಳ್ಳೆಯದಾಗಿದೆ ಎಂಬುದನ್ನು ಯಾರ ಮನಸ್ಸೂ ಒಪ್ಪುವುದಿಲ್ಲ. ಮನಸ್ಸು ಒಪ್ಪಿದರೂ ಅದನ್ನು ಯಾರೂ ಮಾತಿನ ಮೂಲಕ ಹೊರಹಾಕುವುದಿಲ್ಲ! ಆದರೆ ಪ್ರತಿಯೊಂದು ಸಾವಿನ ಹಿಂದೆಯೂ ಕಾರಣವಿದ್ದೇ ಇರುತ್ತದೆ. ಒಬ್ಬರು ಪೂರ್ಣಾಯಸ್ಸಿನಿಂದ ಮೃತಪಟ್ಟರೆ, ಮತ್ತೊಬ್ಬರು ಅರೆ ಆಯಸ್ಸಿನಲ್ಲೇ ಸಾವನ್ನಪ್ಪುತ್ತಾರೆ.

ಮೃತ ವ್ಯಕ್ತಿಯ ಹತ್ತಿರದವರಿಗಷ್ಟೇ ಅವರ ಅಗಲಿಕೆಯ ಅಳಲು ಹೆಚ್ಚಾಗಿರುತ್ತದೆ. ನನ್ನ ಸ್ನೇಹಿತೆಯೊಬ್ಬಳು ಚಿಕ್ಕಂದಿನಿಂದಲೂ ನಡೆದ ಹಲವು ಘಟನೆಗಳಿಂದ ನೊಂದು ತನ್ನ ತಾಯಿಯೊಂದಿಗೆ ಮಾತನಾಡುತ್ತಿರಲಿಲ್ಲ. ಯಾರು ಎಷ್ಟೇ ಪ್ರಯತ್ನಪಟ್ಟರೂ ತಾಯಿಯೊಂದಿಗೆ ಅವಳ ಸಂಬಂಧವನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಪಾಪ ಆ ತಾಯಿಯ ಗೋಳು ಹೇಳತೀರದು. ಅಚಾನಕ್ಕಾಗಿ ನನ್ನ ಸ್ನೇಹಿತೆಗೆ ಅತಿ ಆತ್ಮೀಯರಾದ ಹಾಗೂ ಆಕೆ ಹೆಚ್ಚಾಗಿ ಇಷ್ಟಪಟ್ಟಿದ್ದ ಆಕೆಯ ತಂದೆ ಆಕೆಯನ್ನಗಲಿದರು. ಆಕೆಯ ಆಕ್ರಂದನ ಮುಗಿಲು ಮುಟ್ಟಿತ್ತು. ಅತಿಯಾಗಿ ಪ್ರೀತಿಸುತ್ತಿದ್ದ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಆಕೆಗೆ ಪ್ರಪಂಚವೇ ಮುಳುಗಿ ಹೋದ ಅನುಭವ.

ಸ್ವಲ್ಪ ಸಮಯದ ನಂತರ ಆಕೆ ನಿಧಾನವಾಗಿ ತಾನು ದ್ವೇಷಿಸುತ್ತಿದ್ದ ತಾಯಿಗೆ ಹತ್ತಿರಳಾಗತೊಡಗಿದಳು. ಇದು ಒಂದೆರಡು ದಿನದಲ್ಲಿ ನಡೆದ ಪವಾಡವಲ್ಲ! ದಿನ ಕಳೆದಂತೆ ತಂದೆಯ ಸಾವಿನ ನಂತರ ಜೀವನ ಆಕೆಗೆ ಪಾಠ ಕಲಿಸಿತ್ತು. ಮಗಳ ಪ್ರೀತಿಗಾಗಿ ಕಾಯುತ್ತಿದ್ದ ತಾಯಿಯ ಜೀವ ತಂಪಾಗಿತ್ತು. ಇದೇ ರೀತಿ ಪ್ರತಿಯೊಂದು ಸಾವಿನ ಹಿಂದೆಯೂ ಒಂದು ಕಾರಣವಿದ್ದರೂ, ಅದನ್ನು ದೂರದಿಂದ ನೋಡುವವರಿಗಷ್ಟೇ ಅದರ ಒಳಾರ್ಥ ತಿಳಿಯುವುದು. ಕೆಲವೊಮ್ಮೆ ಹತ್ತಿರದವರಿಗೆ ಅರಿವಾದರೂ, ಒಂದು ಸಾವಿನಿಂದ ಒಳ್ಳೆಯದಾಗುತ್ತದೆ ಎಂಬುದನ್ನು ಯಾರ ಮನಸ್ಸೂ ಒಪ್ಪಿಕೊಳ್ಳುವುದಿಲ್ಲ!

ಎಲ್ಲರ ಜೀವನದಲ್ಲೂ ಒಂದೊಂದು ಆಸೆ ಅಥವಾ ಕನಸು ಇರುತ್ತದೆ. ನಮ್ಮ ಜೀವನ ಹೀಗೇ ಇರಬೇಕು ಎನ್ನುವ ಕನಸು. ನಮ್ಮ ಕನಸುಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಒಂದು ಆಸೆ ತೀರಿದ ಬಳಿಕ ಮತ್ತೊಂದರ ಉದಯವಾಗುತ್ತದೆ. ಒಳ್ಳೆಯ ಕನಸು ನನಸಾದಾಗ ಆಗುವ ಬದಲಾವಣೆಯನ್ನು ಒಪ್ಪಿಕೊಳ್ಳುವ ಜನ ಬದಲಾವಣೆ ಕೆಟ್ಟದಾದಾಗ ಒಪ್ಪುವುದಿಲ್ಲ. ಕೆಟ್ಟ ಬದಲಾವಣೆಯಲ್ಲೂ ಒಳ್ಳೆಯದನ್ನು ಕಾಣುವ ಮನಃಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ಬದಲಾವಣೆ ಯಾವುದಾದರೂ ಅದರಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಜೀವನದಲ್ಲಿ ಬರುವ ಬದಲಾವಣೆಯನ್ನು ಸ್ವೀಕರಿಸುವ ಮನಃಸ್ಥಿತಿಯನ್ನು ರೂಢಿಸಿಕೊಳ್ಳಬೇಕು.

ಅದಕ್ಕೆ ಸಕಾರಾತ್ಮಕ ಚಿಂತನೆಯ ಅಗತ್ಯ ಬಹಳವಿದೆ. ಚಿಂತನೆಯಲ್ಲೇ ಕೆಟ್ಟ ವಿಷಯಗಳಿದ್ದರೆ, ಆಗುವ ಘಟನೆಗಳೂ ಅದನ್ನೇ ಪುಷ್ಟೀಕರಿಸುತ್ತವೆ. ಒಳ್ಳೆಯ ಆಲೋಚನೆಗಳು ಒಳ್ಳೆಯ ಘಟನೆಗಳಿಗೆ ಒತ್ತು ಕೊಡುತ್ತವೆ ಹಾಗೂ ಅವು ಕಾರ್ಯರೂಪಕ್ಕೆ ಬರಲು ಸಹಕರಿಸುತ್ತವೆ. ಒಳ್ಳೆಯ ಆಲೋಚನೆಗಳು ಹೊರ ಹೊಮ್ಮಲು ಒಳ್ಳೆಯ ಸ್ನೇಹಿತರ ಅಗತ್ಯ ಅತ್ಯವಶ್ಯ. ಸ್ನೇಹಿತರು ಎಲ್ಲರ ಜೀವನದಲ್ಲೂ ಬಹಳಷ್ಟು ಜನ ಬಂದು ಹೋಗುತ್ತಾರೆ. ಕೆಲವರು ಮಾತ್ರ ಜೀವನಪೂರ್ತಿ ಉಳಿಯುತ್ತಾರೆ. ಅವರೇ ನಿಜವಾದ ಸ್ನೇಹಿತರು. ಆ ನಿಜವಾದ ಸ್ನೇಹಿತರೇ ನಮ್ಮಲ್ಲಿರುವ ಒಳ್ಳೆಯತನವನ್ನು ಹೊರ ಹಾಕಲು ಸಹಾಯ ಮಾಡುವವರು.

ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಒಂದೊಂದು ಉದ್ದೇಶವನ್ನು ಹೊಂದಿರುತ್ತವೆ. ಕೆಲವು ಘಟನೆಗಳು ನಮ್ಮನ್ನು ಬಲಯುತರನ್ನಾಗಿಸಿದರೆ, ಕೆಲವು ನಮ್ಮನ್ನು ಪರೀಕ್ಷಿಸಲೆಂದೇ ನಡೆಯುತ್ತವೆ. ಕಷ್ಟಕರ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಚಿಂತಿಸುವುದು ‘ನಾನೇ ಏಕೆ?’ ಈ ಪ್ರಶ್ನೆ ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಬಂದೇ ಇರುತ್ತದೆ. ಒಳ್ಳೆಯ ಘಟನೆಗಳ ಕಾರಣವನ್ನು ನೇರವಾಗಿ ಒಪ್ಪಿಕೊಳ್ಳುವ ನಾವು, ಕೆಟ್ಟ ಘಟನೆಗಳ ಅಥವಾ ಸಂದರ್ಭಗಳ ಕಾರಣವನ್ನು ಒಪ್ಪುವುದೇ ಇಲ್ಲ.

ಇದಕ್ಕೆ ಉತ್ತರ ಕೊಡುವುದು ಸಮಯ ಮಾತ್ರ! ಹಿಂದೆ ನಡೆದ ಯಾವುದಾದರೂ ಅಹಿತಕರ ಘಟನೆಯನ್ನು ನೆನಪಿಸಿಕೊಂಡು ಶಾಂತ ಮನಸ್ಸಿನಿಂದ ವಿಶ್ಲೇಷಿಸಿ ನೋಡಿ. ನಮಗೇ ಆಶ್ಚರ್ಯವಾಗುವ ರೀತಿಯ ಕಾರಣ ಅದರ ಹಿಂದಿರುತ್ತದೆ. ಅಹಿತಕರ ಘಟನೆಗಳು ನಡೆದಾಗ ಅದು ನಮಗಾಗುತ್ತಿರುವ ಶಿಕ್ಷೆ ಎಂದು ಭಾವಿಸುತ್ತೇವೆ. ಆದರೆ ಆ ಘಟನೆಗಳಿಂದ ಪಾರಾಗಿ ಜೀವನ ಮುಂದುವರಿದರೆ ಅದೊಂದು ಪರೀಕ್ಷೆಯೆಂದು ತಿಳಿಯಬೇಕು. ಆ ಘಟನೆ ನಮ್ಮ ಜೀವನದಲ್ಲಿ ಒಂದು ಪಾಠ ಎಂದು ಅರಿಯಬೇಕು. ಎಷ್ಟೇ ಕೆಟ್ಟ ಪರಿಸ್ಥಿತಿಯಾದರೂ, ನಮ್ಮ ಜೀವನ ಮುಂದುವರೆದಲ್ಲಿ ಅದರಿಂದ ಕಲಿತ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

ಅದರಿಂದ ನಾವೆಷ್ಟು ಬಲಾಢ್ಯರಾಗಿದ್ದೇವೆ ಎಂಬುದನ್ನು ಅರಿಯಬೇಕು. ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬಾರದು. ಏನಾದರೂ ಕೆಟ್ಟ ಘಟನೆ ನಡೆಯಬಹುದು ಎನ್ನುವ ಕಲ್ಪನೆಯು ವಾಸ್ತವಕ್ಕಿಂತ ಹೆಚ್ಚು ಭಯಾನಕವಾಗಿರುತ್ತದೆ. ಯಾವುದಾದರೂ ಘಟನೆ ಸಂಭವಿಸುತ್ತದೆ ಎನ್ನುವಾಗ ಇರುವ ಭಯ ಆ ಘಟನೆ ನಡೆದ ನಂತರ ಇರುವುದಿಲ್ಲ. ಪ್ರತಿಯೊಂದು ಘಟನೆಯೂ ಆಗುವುದು ಒಳ್ಳೆಯದಕ್ಕೇ. ಕೆಲವೊಂದು ಘಟನೆಗಳಿಂದ ಸಂತೋಷವಾದರೆ, ಕೆಲವೊಂದು ನೋವನ್ನು ಕೊಡುತ್ತವೆ. ಆದರೆ ಪರಿಸ್ಥಿತಿ ಯಾವುದೇ ಆಗಿರಲಿ ಅದರ ಬಗ್ಗೆ ನಾವು ಯೋಚಿಸುವ ರೀತಿ ಹಾಗೂ ತೆಗೆದುಕೊಳ್ಳುವ ನಿರ್ಧಾರ ಬಹಳ ಮಹತ್ವದ್ದಾಗಿರುತ್ತದೆ.

ಕೆಲವೊಮ್ಮೆ ಬದುಕಿನಲ್ಲಿ ಅವಕಾಶಗಳ ಬಾಗಿಲು ಮುಚ್ಚೇ ಹೋಯಿತೇನೋ ಎನ್ನುವಷ್ಟರ ಮಟ್ಟಗೆ ಖಿನ್ನತೆ ಆವರಿಸಿಬಿಡುತ್ತದೆ. ಬದುಕು ಎಲ್ಲರಿಗೂ ಸರಳವಾಗಿರುವುದಿಲ್ಲ. ಆದರೆ ಬದುಕಿನಲ್ಲಿ ಬರುವುದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅವಕಾಶ ಕೈ ತಪ್ಪಿದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಬಿಟ್ಟು, ‘ಅದು ನನಗಲ್ಲ’ ಎಂದುಕೊಂಡು ಮುಂದುವರಿಯಬೇಕು. ಹಲವು ಬಾರಿ ನಾವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳೂ ಒಳ್ಳೆಯದೇ ಆಗಿರುತ್ತವೆ! ನಾವು ಮಾಡಿದ್ದು ತಪ್ಪು ಎಂದು ತಿಳಿದಾಗ, ಸರಿ-ತಪ್ಪುಗಳ ತುಲನೆ ಮಾಡುವ ಶಕ್ತಿ ನಮಗಿದೆ ಎಂದು ತಿಳಿಯುತ್ತದೆ.

ಇದು ಒಳ್ಳೆಯದಲ್ಲವೇ? ನೀವು ನಂಬಿದವರೇ ನಿಮಗೆ ಮೋಸ ಮಾಡಿದಾಗ, ಯಾರನ್ನೂ ಸುಲಭವಾಗಿ ನಂಬಬಾರದು ಎನ್ನುವ ಪಾಠವನ್ನು ನೀವು ಕಲಿಯುತ್ತೀರಲ್ಲವೇ? ಜೀವನವೆನ್ನುವುದು ಕ್ಷಣಿಕ. ಸದಾ ಕಾಲ ಬೇಸರದಿಂದ, ವಿಷಾದದಿಂದ ಕಾಲ ಕಳೆಯಬಾರದು. ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುವವರನ್ನು ಪ್ರೀತಿಸಿ, ಗೌರವಿಸಿ. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ನಿಮ್ಮಿಂದ ದೂರವಿರುವವರನ್ನು ಬಿಡಿ. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬುದನ್ನು ನಂಬಿ. ಅವಕಾಶಗಳ ಬಾಗಿಲು ತೆರೆದಾಗ ಮುಕ್ತ ಮನಸ್ಸಿನಿಂದ ಸ್ವಾಗತಿಸಿ.

ಬದುಕಿನಲ್ಲಿ ಬದಲಾವಣೆಗಳಾದಾಗ ಅದು ಬಂದಂತೆ ಸ್ವೀಕರಿಸಿ, ಬದಲಾಗಿ. ಅದು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ. ಒಳ್ಳೆಯ ಕೆಲಸಗಳು, ಘಟನೆಗಳು ನಡೆಯದಿದ್ದಾಗ ಬೇಸರಪಡಬಾರದು. ಬದುಕಿನಲ್ಲಿ ಭರವಸೆಯಿರಲಿ. ಅದಕ್ಕಿಂತ ಒಳ್ಳೆಯ ಕ್ಷಣಗಳು ಬದುಕಿನಲ್ಲಿ ಬರುತ್ತವೆ!

 

ಬರಹ ಇಷ್ಟವಾಯಿತೆ?

 • 35

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !