ಶುಕ್ರವಾರ, ಜೂನ್ 5, 2020
27 °C

ಅಮೋದಿನಿಗಾನ ಯಾನ

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿಯ ಯುವ ಗಾಯಕಿ ಅಮೋದಿನಿ ವಿ. ಮಹಾಲೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಛೋಟಾ ಖಯಾಲ್‌, ಬಢಾ ಖಯಾಲ್‌ ಆಲಾಪ ಮಾಡುತ್ತಿದ್ದರೆ, ಕೇಳುಗರು ಮಂತ್ರಮುಗ್ಧರಾಗಿ ಸಂಗೀತದ ಸವಿಯನ್ನು ಸವಿಯುತ್ತಿರುತ್ತಾರೆ.

ಸ್ವರಗಳ ಏರಿಳಿತ, ಭಜನ್‌ ಗಾಯನಕ್ಕೆ ಸಂಗೀತಾಸಕ್ತರೂ ತಲೆದೂಗುತ್ತಾರೆ. ಗಾಯನ ಲೋಕದಲ್ಲಿ ತೇಲಾಡುತ್ತಾರೆ.

ಶಾಲೆಯಲ್ಲಿ ಆಯೋಜಿಸಿದ್ದ ಭಗವದ್ಗೀತೆ ಗಾಯನ ಸ್ಪರ್ಧೆ ಈಕೆಯ ಸಂಗೀತಕ್ಕೆ ನಾಂದಿ ಹಾಡಿದೆ. ‘ನಿನ್ನ ಧ್ವನಿ ಚೆನ್ನಾಗಿದೆ ಹಾಡನ್ನು ಮುಂದುವರೆಸು’ ಎಂದು ಟೀಚರ್ ಆಡಿದ ಪ್ರೋತ್ಸಾಹ ಮಾತುಗಳು ಗಾಯನ ಪಯಣಕ್ಕೆ ಜೀವತುಂಬಿವೆ. ತಂದೆ ವಾಸುದೇವ ಹಾಗೂ ತಾಯಿ ಮೀನಾಕ್ಷಿ ಅವರ ಪ್ರೋತ್ಸಾಹದಿಂದ ಸಂಗೀತದ ದಾರಿ ಸುಗಮವಾಗಿ ಸಾಗಿದೆ. 

ಅಮೋದಿನಿ, ಎಲ್‌ಕೆಜಿಯಿಂದಲೇ ಸಂಗೀತ ಕಲಿಕೆ ಆರಂಭಿಸಿದ್ದರು. ಈಗ ಸತತ 14 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ. ‘ಇಲ್ಲಿಯವರೆಗೆ ಕಲಿತಿರುವುದು ಬಹಳ ಅಲ್ಪ. ಕಲಿಯಬೇಕಿರುವುದು ಬಹಳ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಕಲಿಕೆ ಎನ್ನುವುದು ಮುಗಿಯುವುದೇ ಇಲ್ಲ. ಕಲಿಕೆ ನಿರಂತರವಾಗಿರುತ್ತದೆ. ಸಂಗೀತ ಕಲಿಯುವುದರಿಂದ ಓದಿಗೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ’ ಎನ್ನುತ್ತಾರೆ ಅಮೋದಿನಿ.

ಸಂಗೀತ ಗುರುಗಳಾದ ಜಯಶ್ರೀ ಭಾವಿಕಟ್ಟಿ, ಪಂಡಿತ್‌ ಅರುಣ ದೇಸಾಯಿ ಅವರ ಬಳಿ ಕಲಿಯಲು ಆರಂಭಿಸಿದರು. ನಂತರದಲ್ಲಿ ಪಂಡಿತ್‌ ನಾಗನಾಥ ಒಡೆಯರ್‌ ಬಳಿ ಸಂಗೀತ ಅಭ್ಯಾಸ ಮುಂದುವರಿಯಿತು. ಈಗ ಡಾ.ಗಂಗೂಬಾಯಿ ಹಾನಗಲ್‌ ಅವರ ಶಿಷ್ಯರಾದ ಪಂಡಿತ್‌ ಅಶೋಕ ನಾಡಗೇರ ಅವರ ಬಳಿ ಸಂಗೀತ ಕಲಿಕೆಯನ್ನು ಮುಂದುವರಿಸಿದ್ದಾರೆ.

‘ಪ್ರತಿ ನಿತ್ಯ ಮೂರರಿಂದ ನಾಲ್ಕು ತಾಸು ಅಭ್ಯಾಸ ಮಾಡುತ್ತಿದ್ದೇನೆ. ಹಾನಗಲ್‌ ಕುಟುಂಬದ ಪ್ರೋತ್ಸಾಹ ದೊಡ್ಡ ಪ್ರಮಾಣದಲ್ಲಿದೆ. ಕೂಗಳತೆಯ ದೂರದಲ್ಲಿರುವ ಡಾ.ಗಂಗೂಬಾಯಿ ಹಾನಗಲ್‌ ಅವರ ಮನೆಗೆ ಯಾರೇ ಸಂಗೀತಗಾರರು ಬಂದರೂ, ಅವರ ಮೊಮ್ಮಗ ಮನೋಜ ಹಾನಗಲ್‌ ಅವರು ನನ್ನನ್ನು ಕರೆದು ಅವರಿಗೆ ಪರಿಚಯಿಸುವ ಮೂಲಕ ಪ್ರೋತ್ಸಾಹಿಸು ತ್ತಿದ್ದಾರೆ’ ಎಂದು ಅಮೋದಿನಿ ಸ್ಮರಿಸಿಕೊಂಡರು. ಹಿರಿಯರ ಹಾರೈಕೆ, ಬದ್ಧತೆಯ ಕಲಿಕೆ ಜತೆಗೆ ಇವರ ಸಂಗೀತ ಸಾಧನೆಗೆ ಪರೀಕ್ಷೆಗಳ ಫಲಿತಾಂಶವೂ ಸಾಥ್‌ ನೀಡಿದೆ. ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳ ನಡೆಸುವ ಪ್ರಾರಂಭಿಕ, ಪ್ರವೇಶಿಕಾ ಪ್ರಥಮ, ಪ್ರವೇಶಿಕಾ ‍ಪೂರ್ಣ, ಮಧ್ಯಮ ಪ್ರಥಮ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ.

ಸಂಗೀತ ಅಭ್ಯಾಸ ಮಾಡುತ್ತಲೇ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಮೋದಿನಿ. ಸದ್ಯಕ್ಕೆ 200ಕ್ಕೂ ಹೆಚ್ಚು ವೇದಿಕೆಗಳಲ್ಲಿ ಹಾಡಿದ್ದಾರೆ. ಅದರಲ್ಲಿ ಕುಂದಗೋಳದಲ್ಲಿ ನಡೆಯುವ ಸವಾಯಿ ಗಂಧರ್ವರ ಪುಣ್ಯತಿಥಿ ಸಂಗೀತ ಉತ್ಸವ, ಭಾರತ ವಿಕಾಸ ಪರಿಷದ್‌ನ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಪ್ರಮುಖವಾದವು. ಇದರ ನಡುವೆ ಅವರ ಗಾಯನಯಾನ ನಿರಂತರವಾಗಿ ನಡೆದಿದೆ.

‘ಹಿಂದೂಸ್ತಾನಿ ಸಂಗೀತ ಕಲಿತರೆ ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಸುಲಭವಾಗಿ ಹಾಡಬಹುದು. ಎಲ್ಲ ಸಂಗೀತಕ್ಕೂ ಮೂಲವೇ ಹಿಂದೂಸ್ತಾನಿ ಸಂಗೀತ. ಅದು ತಾಯಿ ಬೇರು ಇದ್ದಂತೆ. ಎಲ್ಲದಕ್ಕೂ ಮೂಲವಾಗಿದೆ’ ಎನ್ನುವುದು ಅವರ ಅಭಿಪ್ರಾಯ.

ಸಂಗೀತ ಉಪಾಸನೆ ಬಗ್ಗೆ ಮಾತನಾಡುತ್ತಲೇ, ಗಾಯಕಿಯರ ಆರೋಗ್ಯದ ಕಾಳಜಿ ಬಗ್ಗೆಯೂ ಮಾತು ಹೊರಳಿಸಿದ ಅಮೋದಿನಿ, ‘ಗಾಯಕಿಯಾದವರು ಗಂಟಲಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ’ ಎನ್ನುತ್ತಾರೆ. ಹೀಗಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ ಹಾಗೂ ಐಸ್ ಕ್ರೀಂ ವರ್ಜಿಸಿದ್ದಾರೆ. ಬದುಕಿನಲ್ಲಿ ಸಂಗೀತಕ್ಕೆ ಆದ್ಯತೆ. ಅದಕ್ಕಾಗಿ ತಿನ್ನಬೇಕೆನಿಸಿದರೂ, ಆ ತಿನಿಸುಗಳನ್ನು ದೂರವಿಟ್ಟಿದ್ದಾರಂತೆ.

ಪ್ರಶಸ್ತಿ ಬಹುಮಾನಗಳು

ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕೇಂದ್ರ ಸರ್ಕಾರದ ಬಾಲಶ್ರೀ, ರಾಜ್ಯ ಸರ್ಕಾರದ ಹೊಯ್ಸಳ ಕೆಳದಿ ಚನ್ನಮ್ಮ, ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿಯ ಗಾನಕೋಗಿಲೆ ಡಾ.ಗಂಗೂಬಾಯಿ ಹಾನಗಲ್‌ ಸ್ಮರಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿವಿಧ ಸಂಘಟನೆಗಳು ಆಯೋಜಿಸುವ ಜಿಲ್ಲಾ, ರಾಜ್ಯಮಟ್ಟದ ಸಂಗೀತ ಗಾಯನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು