ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮನೆಯಂಗಳದಲ್ಲಿ ನಗುವ ಹಸಿರು

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಸ್ವಂತ ಮನೆ... ಆ ಬಗ್ಗೆ ಎಲ್ಲರಿಗೂ ಒಂದು ಕನಸು ಇದ್ದೇ ಇರುತ್ತದೆ. ಮನೆಯ ನಿರ್ಮಾಣ ಪೂರ್ಣಗೊಳ್ಳುವವರೆಗೂ ಆ ಕನಸು ಹೊಸ ಹೊಸ ರೂಪ ಪಡೆಯುತ್ತಲೇ ಇರುತ್ತದೆ. ಹಾಗಾಗಿಯೇ ಅಂಥ ಮನೆಯನ್ನು ಅದರ ಮಾಲೀಕರು `ಕನಸಿನ ಮನೆ~ ಎಂದೇ ಕರೆಯುತ್ತಾರೆ.

ಮನೆಯೊಂದು ಮಾತ್ರ ಹೀಗೆ ಇದ್ದರೆ ಸಾಕೆ? ಅದಕ್ಕೊಂದು ಉದ್ಯಾನವನವೋ,  ಪುಟ್ಟ ಕೈತೋಟವೋ ಇರುವುದು ಬೇಡವೇ? ಮನೆಗಿಂತ ಮುಖ್ಯವಾಗಿ ಮನೆಯ ಅಂಗಳದಲ್ಲಿನ ಹಸಿರು ತೋಟದ ಬಗ್ಗೆ, ತರು ಲತೆಗಳ ಕುರಿತು ಕನಸು ಕಂಡವರು ಲಲಿತಾ...

ಮನೆಯಂಗಳದಲ್ಲಿ ವೈವಿಧ್ಯಮಯ ಸಸ್ಯಗಳನ್ನು ಬೆಳೆಸಿ, ಸುಂದರ ಉದ್ಯಾನ ನಿರ್ಮಿಸಿಕೊಂಡಿರುವ, ಹಸಿರೇ ಉಸಿರುವ ಎನ್ನುವ ಆರ್.ಲಲಿತಾಬಾಯಿ ಗುಜರ್ ಮೈಸೂರು ದಸರಾ ಫಲಪುಷ್ಪ ಸ್ಪರ್ಧೆಯಲ್ಲಿ 5ಕ್ಕೂ ಹೆಚ್ಚು ಬಾರಿ `ಬೆಸ್ಟ್ ಗಾರ್ಡನ್~ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

`ಮನೆ ಚಿಕ್ಕದೋ-ದೊಡ್ಡದೋ ಪುಟ್ಟದಾದರೂ ಅಂಗಳ-ಕೈತೋಟ ಇರಲಿ. ಅಲ್ಲೊಂದು ಹಸಿರು ವನ ನಗುನಗತಲಿರಲಿ~ ಎನ್ನುವುದು ಅವರ ಹಸಿರು ಪ್ರೀತಿಯ ಮಾತು.

ಮೈಸೂರಿನ ಯಾದವಗಿರಿಯಲ್ಲಿನ ಮನೆ `ದಿವ್ಯಶ್ರೀ~ ಹಿಂಭಾಗ ಅರಳಿ, ಹುಣಸೆ, ಬೋಗನ್‌ವಿಲ್ಲಾ, ಜೇಡ್, ಕರ‌್ಲಿ ಫೈಕಸ್ ಮರಗಳನ್ನು ಬೆಳೆಸಿದ್ದಾರೆ. ಎಲ್ಲವೂ 10ರಿಂದ 25 ವರ್ಷದವು. ಆದರೆ, ಇವುಗಳ ಎತ್ತರ ಕೇವಲ 1ರಿಂದ 3 ಅಡಿ! ಇವು `ಬೋನ್ಸಾಯ್‌`ಗಳು. ಹಾಗೆಂದರೆ ಕುಬ್ಜಗೊಳಿಸಿದ ಸಸ್ಯ ಅಥವಾ ವೃಕ್ಷ ಎಂದರ್ಥ.

ಸಸ್ಯಗಳ ತಾಯಿ ಬೇರನ್ನು ಕತ್ತರಿಸಿ, ರೆಂಬೆಗಳಿಗೆ ತಂತಿ ಕಟ್ಟಿ, ನಿರ್ದಿಷ್ಟ ಆಕಾರಕ್ಕೆ ತಿರುಗಿಸಿ, ಅವುಗಳನ್ನು ಎತ್ತರ ಬೆಳೆಯದಂತೆ ಮಾಡುವಂತಹುದೇ ಈ ಸಸ್ಯ ಕಲೆ.  

ನಿಂಬೆ, ಗಜನಿಂಬೆ, ಕಿತ್ತಳೆ, ಮೂಸಂಬಿ, ಮಾವು, ನೆಲ್ಲಿ, ಸಪೋಟ, ಅಂಜೂರ, ಮಲ್ಲಿಗೆ, ಸಿಂಗಪುರದ ಸಂಪಿಗೆ, ಆರ್ಕಿಡ್, ಏರಿಯಲ್ ಪ್ಲಾಂಟ್, ಆ್ಯಂಥೋರಿಯಂ, ಫೈಕಸ್, ಲಕ್ಕಿ ಫೈಕಸ್, ಬಿಗೋನಿಯಾ, ಫರ್ನ್, ವಾಟರ್ ಲಿಲ್ಲಿ... ಅಲ್ಲಿವೆ. 500 ಕುಂದಗಳಲ್ಲಿ 100ಕ್ಕೂ ಹೆಚ್ಚಿನ ಜಾತಿಯ ಸಸ್ಯರಾಶಿ ನಳನಳಿಸುತ್ತಿದೆ.

50x80 ಅಡಿ ಉದ್ದಗಲದ ನಿವೇಶನದ ಮನೆ ಹಿಂಭಾಗದ ಜಾಗ ಒಂದು ಪರಿಪೂರ್ಣ ಉದ್ಯಾನವನವೇ ಆಗಿದೆ. ಒಪ್ಪವಾಗಿ ಜೋಡಿಸಿರುವ ಪಾಟ್‌ಗಳು, ಅಗತ್ಯವಿರುವೆಗೆ ಕಾಲುಹಾದಿ. ಮಧ್ಯಭಾಗದಲ್ಲಿರುವ ಪುಟ್ಟ ಕಾರಂಜಿ. ಅದರ ಸುತ್ತ ಕೊಕ್ಕರೆ, ಬಾತುಕೋಳಿಗಳ ಕಾಂಕ್ರೀಟ್ ಪ್ರತಿಮೆಗಳು...

ಮನೆಯ ಮತ್ತೊಂದು ಪಾರ್ಶ್ವದಲ್ಲಿ ವಾಲ್ ಗಾರ್ಡನ್. ಇಲ್ಲಿ 17ಕ್ಕೂ ಹೆಚ್ಚು ಬಗೆ ಆರ್ಕಿಡ್‌ಗಳು. ಸಮಪ್ರಮಾಣದಲ್ಲಿ ಬಿಸಿಲು-ನೀರು ಒದಗಿಸಬೇಕಿರುವುದರಿಂದ ಸೂಕ್ತ ರೀತಿಯ ಛಾವಣಿಯೂ ಇದೆ.

ಲಲಿತಾಬಾಯಿ ಅವರ ಪತಿ ದಿ. ಡಾ. ಸಿ.ರಂಗೋಜಿ ರಾವ್ ಸೇನೆಯಲ್ಲಿ ವೈದ್ಯರಾಗಿದ್ದವರು. ಮೈಸೂರಿಗೆ ಬರುವ ಮುನ್ನ ರಾಯಚೂರಿನಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದರು. ಆ ಬಿರುಬಿಸಿಲ ನಾಡು ಮತ್ತು ಕಲ್ಲು ಭೂಮಿಯಲ್ಲೂ ಲಲಿತಾ ಬಾಯಿ ಬಗೆಬಗೆಯ ಗುಲಾಬಿ ಬೆಳೆದು ಹಸಿರು ಪ್ರೀತಿ ಉಳಿಸಿಕೊಂಡಿದ್ದರು. ಅಲ್ಲೂ ಸ್ಪರ್ಧೆಯಲ್ಲಿ ಭಾಗವಹಿಸಿ 10ಕ್ಕೂ ಹೆಚ್ಚು ಬಾರಿ `ಬೆಸ್ಟ್ ಗಾರ್ಡನ್~ ಪ್ರಶಸ್ತಿ ಪಡೆದಿದ್ದರು.

ಈಗ ರಾಯಚೂರು, ಗೋಣಿಕೊಪ್ಪ, ಹೈದರಾಬಾದ್, ಉತ್ತರಖಂಡ, ಪುಣೆ, ಸಿಂಗಪುರ ಮುಂತಾದೆಡೆಯಿಂದ ಸಸಿ ಮತ್ತು ಬೀಜಗಳನ್ನು ತರಿಸಿ `ದಿವ್ಯಶ್ರೀ~ ಅಂಗಳವನ್ನು ಅಲಂಕರಿಸಿದ್ದಾರೆ.

`ನಿತ್ಯ ಮುಂಜಾವಿನಲ್ಲಿ ಮನಸ್ಸು ಮುದಗೊಳ್ಳಬೇಕಾದರೆ ಮನೆಯ ಅಂಗಳದಲ್ಲಿ ಹಸಿರು ಬೆಳೆಸಿ. ಶುದ್ಧ ಗಾಳಿ, ಹಸಿರಿನ ನೋಟದಿಂದ ನಿಮಗೆ ದಿನವಿಡೀ ಉತ್ಸಾಹವಿರುತ್ತದೆ~ ಎನ್ನುವುದು ಲಲಿತಾಬಾಯಿ ಅವರ ಕಿವಿಮಾತು.

ನಗರಗಳ ಕಿಷ್ಕಿಂದೆಯಂಥ ಬಡಾವಣೆಗಳಲ್ಲಿ ಮನೆಯೆಂಬ ಕಾಂಕ್ರೀಟ್ ಗೋಡೆಗಳ ನಡುವಿನಿಂದ ಹೊರಬಂದಾಗ ಹಸಿರಿನ ಹಿತವಾದ ಪಿಸುಮಾತು ಆಲಿಸುವುದೇ ಚೆಂದ ಅಲ್ಲವೇ?

ಗಿಡಗಳನ್ನು ವರ್ಷಕ್ಕೊಮ್ಮೆ ರೀ-ಪ್ಲಾಂಟ್ ಮಾಡುವುದು, ನವಿಲು, ಸೈಕಲ್, ವೀಣೆ-ತಬಲ ಹೀಗೆ ವಿವಿಧ ಆಕಾರ, ಹೊಸ ಥೀಮ್‌ಗಳಿಂದ ಉದ್ಯಾನವನ್ನು ಪ್ರತಿವರ್ಷ ವಿನ್ಯಾಸಗೊಳಿಸುವ ಮೂಲಕ ಹಸಿರಿನಲ್ಲಿಯೂ ಸೃಜನಶೀಲತೆ ಇಣುಕುವಂತೆ ಮಾಡುವುದು ಲಲಿತಾ ಅವರಿಗೆ ಇಷ್ಟದ ಕೆಲಸ. ಇದೆಲ್ಲದರ ನಿರ್ವಹಣೆಗೆ ಸಹಾಯಕ ರಮೇಶ್ ಇದ್ದಾರೆ.

ಲಲಿತಾ ಅವರ ಮಕ್ಕಳಲ್ಲಿ ಒಬ್ಬರು ಐರ್ಲೆಂಡ್, ಮತ್ತೊಬ್ಬರು ರಾಯಚೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿದ್ದರೂ ಮನೆ ಮುಂದಿನ ಹಸಿರುವನ ಬೇಸರ ನೀಗಿಸುತ್ತದೆ ಎನ್ನುತ್ತಾರೆ ಲಲಿತಾಬಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT