ಕೃಷಿಗೂ ಸೈ, ವೀರಗಾಸೆಗೂ ಜೈ; ನೃತ್ಯದಲ್ಲಿ ಗಮನ ಸೆಳೆದ ಸ್ವಾಮಿ

ಹನೂರು: ಓದಿದ್ದು ಪಿಯುಸಿ, ಆಗಬೇಕೆಂದುಕೊಂಡಿದ್ದು ದೈಹಿಕ ಶಿಕ್ಷಣ ಶಿಕ್ಷಕ. ಆದರೆ, ಕೈ ಹಿಡಿದಿದ್ದು ವಂಶಪಾರಂಪರ್ಯವಾಗಿ ಕರಗತವಾಗಿದ್ದ ಜನಪದ ಕಲೆ. ಜಿಲ್ಲೆಯಲ್ಲೇ ಉತ್ತಮ ವೀರಗಾಸೆ ನೃತ್ಯಗಾರ ಎಂದು ಗುರುತಿಸಿಕೊಂಡಿರುವ ಸ್ವಾಮಿ ಅವರ ಸಂಕ್ಷಿಪ್ತ ಪರಿಚಯ ಇದು. 

ತಾಲ್ಲೂಕಿನ ಶಾಗ್ಯ ಗ್ರಾಮದ ಸ್ವಾಮಿ ಅವರನ್ನು ಕೃಷಿ ಆರ್ಥಿಕವಾಗಿ ಸಬಲರನ್ನಾಗಿಸಿದರೆ, ಅವರಲ್ಲಿರುವ ವೀರಗಾಸೆ ನೃತ್ಯ ಕಲೆ ಅವರನ್ನು ಜಿಲ್ಲೆಯ ಜನತೆ ಗುರುತಿಸುವಂತೆ ಮಾಡಿದೆ. ತಾತ ಮತ್ತು ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಅದನ್ನು ಮುಂದಿನ ತಲೆಮಾರಿಗೂ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.

ಕುತೂಹಲದಿಂದ ಪರಿಣತಿವರೆಗೆ: ‘ಮದುವೆ ಹಾಗೂ ವಿಶೇಷ ಸಮಾರಂಭಗಳಿಗೆ ತಂದೆಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕುತೂಹಲಕ್ಕಾಗಿ ಕಲಿತ ಕಲೆ ಇಂದು ನನ್ನನ್ನು ಜನರು ಗುರುತಿಸುವಂತೆ ಮಾಡಿದೆ. 8 ವರ್ಷದವನಾಗಿದ್ದಾಗಲೇ ಈ ಕಲೆಯ ಅಭ್ಯಾಸ ಪ್ರಾರಂಭವಾಯಿತು. ತಂದೆ ನೀಡಿದ ಮಾರ್ಗದರ್ಶನದಿಂದಾಗಿ ಈಗ ಒಬ್ಬಂಟಿಯಾಗಿ ಕಾರ್ಯಕ್ರಮ ನಿರ್ವಹಿಸಲು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ ಸ್ವಾಮಿ.

‘ಕೊಂಡೋತ್ಸವ, ಬಸವ ಜಯಂತಿ, ಮದುವೆ, ಗೃಹಪ್ರವೇಶ, ಉತ್ಸವ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದೇನೆ. ಅಲ್ಲದೆ, ತಮಿಳುನಾಡು ಹಾಗೂ ರಾಜ್ಯದ ನಾನಾ ಕಡೆಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಮೂಲ ವೃತ್ತಿ ಕೃಷಿಯಾದರೂ ವೀರಗಾಸೆ ನೃತ್ಯ ಕಲೆ ನನಗೆ ಆತ್ಮತೃಪ್ತಿ ತಂದಿದೆ’ ಎಂದು ವಿಶ್ವಾಸದಿಂದಲೇ ಹೇಳುತ್ತಾರೆ ಅವರು. 

‘35 ವರ್ಷಗಳಿಂದ ಇದನ್ನು ಪ್ರದರ್ಶಿಸುತ್ತಿದ್ದೇನೆ. ಮಗನಿಗೂ ಇದರ ಮೇಲೆ ಆಸಕ್ತಿ ಇದೆ. ಕಾರ್ಯಕ್ರಮಗಳಲ್ಲಿ ಜೊತೆಗೆ ಬಂದು ನೃತ್ಯ ಪ್ರದರ್ಶಿಸುತ್ತಾನೆ. ಆದರೆ, ಇದನ್ನೇ ಕಲಿಯಬೇಕು ಎಂದು ಇದುವರೆಗೂ ಒತ್ತಾಯ ಮಾಡಿಲ್ಲ. ಕಲೆಯ ಬಗ್ಗೆ ಆಸಕ್ತಿಯಿದ್ದರೆ ಅವನೇ ಮುಂದುವರಿಸುತ್ತಾನೆ’ ಎಂದು ಸ್ವಾಮಿ ಹೇಳಿದರು.

ಗ್ರಾಮೀಣ ಸೊಗಡಿಗೆ ಕುತ್ತು

ಇಂದಿನ ಆಧುನಿಕ ಯುಗದಲ್ಲೇ ಇಂಥ ದೇಶಿ ಕಲೆಗೆ ಮಹತ್ವವಿದೆಯೇ ಎಂಬ ಪ್ರಶ್ನೆಗೆ ಸ್ವಾಮಿ ಅವರು ತಮ್ಮಲ್ಲಿರುವ ಕಳವಳವನ್ನು ಹೊರಹಾಕುತ್ತಾರೆ.

‘ಈ ಹಿಂದೆ ಹಿರಿಯರು ವೃತ್ತಿ ಜತೆಗೆ ಒಂದು ಹವ್ಯಾಸ ಇರಲಿ ಎನ್ನುವ ಉದ್ದೇಶದಿಂದ ಈ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದರು. ಅವರಿಗೆ ಹವ್ಯಾಸವಾಗಿದ್ದ ಕಲೆಗಳು ಇಂದು, ಅವನ್ನು ಪ್ರದರ್ಶಿಸುವ ಜನರ ಬದುಕಿನ ಬಂಡಿಯನ್ನು ಎಳೆಯುವ ಗಾಲಿಗಳಾಗಿವೆ. ಆದರೆ, ಪರಂಪರಾಗತವಾಗಿ ಬಂದ ಜಾನಪದ ಸೊಗಡು ಇಂದು ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು. 

‘ಹಿಂದೆ ಒಂದೊಂದು ಮನೆಯಲ್ಲೂ ಇಬ್ಬಿಬ್ಬರು ಜನಪದ ಕಲಾವಿದರಿರುತ್ತಿದ್ದರು. ಅದನ್ನು ಪ್ರಾಮಾಣಿಕವಾಗಿ ಕಲಿಸುವ ಪ್ರಯತ್ನವೂ ಆಗುತ್ತಿತ್ತು. ತಾವು ಕಲಿತ ಕಲೆಗಳನ್ನು ಮುಂದಿನ ತಲೆಮಾರಿಗೂ ಧಾರೆ ಎರೆಯುವ ಮೂಲಕ ಸೊಗಡಿನ ಶ್ರೀಮಂತಿಕೆ ಮುಂದುವರಿಯುವಂತೆ ಮಾಡುತ್ತಿದ್ದರು. ಈ ಕಲೆಗಳನ್ನು ‌ಉಳಿಸಿ ಬೆಳೆಸುವುದು ಇಂದಿನ ತಲೆಮಾರಿನ ಮೇಲಿದೆ. ಆದರೆ, ಅತಿಯಾದ ಕಂಪ್ಯೂಟರ್‌ ಹಾಗೂ ಮೊಬೈಲ್‌ ಬಳಕೆಯಿಂದ ಗ್ರಾಮೀಣ ಭಾಗದ ಸೊಗಡು ದಿನೇ ದಿನೇ ಮಹತ್ವ ಕಳೆದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

ಪ್ರಮುಖ ಸುದ್ದಿಗಳು