ವಧು ವಾಟ್ಸ್ಆ್ಯಪ್ ಜಾಸ್ತಿ ಬಳಸುತ್ತಾಳೆ ಎಂದು ಮದುವೆ ನಿರಾಕರಿಸಿದರು! 

ಅಮ್ರೋಹ್:  ಹುಡುಗಿ ವಾಟ್ಸ್ಆ್ಯಪ್ ನಲ್ಲಿಯೇ ಮುಳುಗಿರುತ್ತಾಳೆ. ಹಾಗಾಗಿ ಈ ಮದುವೆ ಬೇಡ ಎಂದು ಉತ್ತರ ಪ್ರದೇಶದ ಕುಟುಂಬವೊಂದು ತಮ್ಮ ಮಗನ ವಿವಾಹ ರದ್ದು ಮಾಡಿದೆ.
ಕಳೆದ ಬುಧವಾರ ವಿವಾಹ ನಡೆಯಬೇಕಾಗಿತ್ತು. ಅದೇ ದಿನ ಕರೆ ಮಾಡಿದ ವರನ ಕುಟುಂಬದವರು ತಮಗೆ ಈ ಮದುವೆ ಬೇಡ ಎಂದು ಹೇಳಿರುವುದಾಗಿ ವಧುವಿನ ಅಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಅವರೇನು ಹೇಳುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ನನ್ನ ಮಗಳು ಮದುವೆಗೆ ಎಲ್ಲ ರೀತಿಯ ತಯಾರಿ ಮಾಡಿದ್ದಳು, ನಾವು ವರನ ದಿಬ್ಬಣಕ್ಕಾಗಿ ಕಾಯುತ್ತಿದ್ದು, ಮನೆಯಲ್ಲಿ ಅತಿಥಿಗಳು ಇದ್ದರು. ಅಷ್ಟೊತ್ತಿಗೆ ವರನ ಅಪ್ಪ ಫೋನ್ ಮಾಡಿ, ನಮಗೆ ಈ ಮದುವೆ ಬೇಡ ಎಂದು ಹೇಳಿರುವುದಾಗಿ ವಧುವಿನ ಅಪ್ಪನ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವರನ ಅಪ್ಪ ₹70 ಲಕ್ಷ ವರದಕ್ಷಿಣೆ ಕೇಳಿದ್ದರು. ನಮಗೆ ಅದು ಕೊಡಲು ಆಗಲಿಲ್ಲ. ವಧು ವಾಟ್ಸ್ಆ್ಯಪ್ ಜಾಸ್ತಿ ಬಳಸುತ್ತಿರುತ್ತಾಳೆ. ಹಾಗಾಗಿ ನಮಗೆ ಮದುವೆ ಬೇಡ ಎಂದು ವರನ ಕುಟುಂಬ ಹೇಳಿರುವುಗಾಗಿ ವಧುವಿನ ಅಪ್ಪ ನೌಗವಾನ್ ಸಾದತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದಿದ್ದಾರೆ ಅಮ್ರೋಹ್ ಎಸ್‍ಪಿ ವಿಪಿನ್ ಟಡಾ.

ವರ ಮತ್ತು ವರನ ಅಪ್ಪನ ವಿರುದ್ಧ ಐಪಿಸಿ ಸೆಕ್ಷನ್ 498ರ ಅಡಿಯಲ್ಲಿ ಕೇಸು ದಾಖಲಿಸಿದ್ದು ತನಿಖೆ ಮುಂದುವರಿದಿದೆ.
 

ಪ್ರಮುಖ ಸುದ್ದಿಗಳು