ಭಾನುವಾರ, ಫೆಬ್ರವರಿ 5, 2023
21 °C

ಅಪ್ಪನಾಗುವ ಬಯಕೆಗೆ ತಡೆಯೇಕೆ?

ಡಾ.ಎಸ್‌.ಎಸ್‌.ವಾಸನ್‌ Updated:

ಅಕ್ಷರ ಗಾತ್ರ : | |

Prajavani

ಬತ್ತಿದ ಕೆರೆಯಲ್ಲಿ ಜೀವರಸ ಜಿನುಗದು. ದಂಪತಿ ಪರಸ್ಪರರಲ್ಲಿ ಕಳೆದು ಹೋಗಿ ಉನ್ಮಾದದ ಪರಾಕಾಷ್ಠೆ ತಲುಪಬೇಕೆಂದರೆ ಮಿಲನದಲ್ಲಿ ಜೀವರಸ ಜಿನುಗಬೇಕು. ಹೊಸ ಸೃಷ್ಟಿಗೆ ಇದುವೇ ಸೋಪಾನ. ಎರಡು ದೇಹಗಳು ಒಂದಾಗಿ, ಒಂದಡಿ ಇಟ್ಟು, ಪರಸ್ಪರರನ್ನು ಉದ್ರೇಕಿಸುತ್ತ, ಪರಾಕಾಷ್ಠೆಯ ತುತ್ತತುದಿಗೇರಿದಾಗಲೂ ಪಸೆಯ ಸಿಂಚನವಾಗದೇ ಹೋದಾಗ ಕ್ಷಣ ನಿರರ್ಥಕ ಭಾವ ಆವರಿಸುವುದುಂಟು.

ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಶುಷ್ಕ ಸಂಭೋಗೋದ್ರೇಕ (Dry Orgasm) ಅಥವಾ ಪರಾಕಾಷ್ಠೆಯ ಅನಿಶ್ಚಿತತೆ (orgasmic anejacu*ation) ಎನ್ನುವುದು. ಇದನ್ನು ಒಣ ಉದ್ರೇಕ, ಪಸೆಯಿಲ್ಲದ ಬೆಸುಗೆ, ನೀರಸ ಮಿಲನ… ಯಾವ ಹೆಸರಿಂದಲೂ ಕರೆಯಬಹುದು.

ಇದರಲ್ಲಿ ಸುಖಾನುಭವಕ್ಕೆ ಯಾವುದೇ ಕೊರತೆ ಕಾಣದು. ಆದರೆ ಕಟ್ಟಕಡೆಯ ಹಂತ ತಲುಪಿದ ಮೇಲೆ ಮತ್ತೂ ಅಪೂರ್ಣ ಭಾವ ಉಳಿಯುತ್ತದೆ. ಏಕೆಂದರೆ ಪ್ರಯತ್ನಗಳ ನಂತರವೂ ವೀರ್ಯಸ್ಖಲನ ಸಂಭವಿಸುವುದೇ ಇಲ್ಲ. ಕೆಲ ದಂಪತಿಗಳಿಗೆ ಇದು ವರದಾನವೂ ಹೌದು. ಆದರೆ ಅಪ್ಪನಾಗುವ ಬಯಕೆ ಹೊತ್ತವರಿಗೆ ಇದರಿಂದ ಬೇಸರದ ಛಾಯೆ ಆವರಿಸಿಕೊಳ್ಳುತ್ತದೆ.

ಇದಕ್ಕೇನು ಕಾರಣ?
ಮೂತ್ರಪಿಂಡ ಅಥವಾ ಪ್ರಾಸ್ಟೇಟ್ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಹೆಚ್ಚಿನ ಸಂಶೋಧನೆಗಳು ದೃಢಪಡಿಸಿವೆ. ಈ ಎರಡೂ ಶಸ್ತ್ರಚಿಕಿತ್ಸೆಗಳು ವೀರ್ಯವನ್ನು ಉತ್ಪಾದಿಸುವ ಶಕ್ತಿಯನ್ನು ಕಸಿಯುತ್ತವೆ. ಆದ್ದರಿಂದ ಕಟ್ಟಕಡೆಯ ಹಂತದವರೆಗೂ ವೀರ್ಯಸ್ಖಲನ ಸಾಧ್ಯವಾಗುವುದೇ ಇಲ್ಲ. ಆದರೆ ಇಲ್ಲಿ ಸುಖಾನುಭವಕ್ಕೆ ಯಾವುದೇ ತಡೆ ಇರುವುದಿಲ್ಲ.

ಈ ಶಸ್ತ್ರಚಿಕಿತ್ಸೆಗಳೇ ಅಲ್ಲದೇ ಇನ್ನೂ ಅನೇಕ ಕಾರಣಗಳನ್ನು ಗುರುತಿಸಲಾಗಿದೆ:

* ಮಧುಮೇಹ, ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಬೆನ್ನುಹುರಿ ಗಾಯದಿಂದಾಗಿ ನರಗಳಿಗೆ ಹಾನಿ

* ಅಧಿಕ ರಕ್ತದೊತ್ತಡ, ಪ್ರಾಸ್ಟೇಟ್ ಅಥವಾ ಮಾನಸಿಕ ಅಸ್ವಸ್ಥತೆಗಳಿಗೆ ನೀಡಲಾಗುವ ಚಿಕಿತ್ಸೆ–ಔಷಧಗಳು

* ನಿರ್ಬಂಧಿತ ವೀರ್ಯ ನಾಳ

* ಟೆಸ್ಟೋಸ್ಟೆರಾನ್ ಕೊರತೆ

* ಆನುವಂಶಿಕ ಸಂತಾನೋತ್ಪತ್ತಿ ಅಸ್ವಸ್ಥತೆ

ಒತ್ತಡ ಮತ್ತು ಇತರ ಮಾನಸಿಕ ಸಮಸ್ಯೆಗಳು ಸಹ ಇದಕ್ಕೆ ಕಾರಣವಾಗಬಹುದು. ಆದರೆ ಇದು ಹೆಚ್ಚಾಗಿ ತಾತ್ಕಾಲಿಕವಾಗಿರುತ್ತದೆ. ಮಿಲನ ಸಮಯದಲ್ಲಿ ಒಂದಲ್ಲ ಒಂದು ಬಾರಿಯಾದರೂ ವೀರ್ಯಸ್ಖಲನವಾಗುವ ಸಾಧ್ಯತೆ ಇದ್ದೇ ಇರುತ್ತದೆ.

ಹಿಮ್ಮುಖ ಚಲನೆಗೂ ಶುಷ್ಕ ಸಂಭೋಗೋದ್ರೇಕಕ್ಕೂ ಏನು ವ್ಯತ್ಯಾಸ?
ಹಿಮ್ಮುಖ ಚಲನೆ ಹಾಗೂ ಶುಷ್ಕ ಸಂಭೋಗೋದ್ರೇಕ ಮೇಲ್ನೋಟಕ್ಕೆ ಒಂದೇ ರೀತಿಯಾಗಿ ಕಂಡುಬಂದರೂ ಎರಡೂ ಸಂಪೂರ್ಣ ವಿರುದ್ಧ ತೊಡಕುಗಳೇ ಆಗಿವೆ. ಹಿಮ್ಮುಖ ಚಲನೆಯಲ್ಲಿ ವೀರ್ಯ ಉತ್ಪಾದನೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಮಿಲನಮಹೋತ್ಸವದ ಅಂತ್ಯದಲ್ಲಿ ವೀರ್ಯ ಹೊರಬರದೇ ಹಿಂತಿರುಗಿ ಹೋಗುತ್ತವೆ. ಇಲ್ಲಿ ಕೆಲವೊಮ್ಮೆ ಸ್ವಲ್ಪ ವೀರ್ಯವೂ ಹೊರಬಾರದೇ ಹೋಗಬಹುದು, ಕೆಲವೊಮ್ಮೆ ಅತಿ ಕಡಿಮೆ ಪ್ರಮಾಣದ ವೀರ್ಯ ಹೊರಬಂದು ನಿಂತು ಬಿಡುತ್ತದೆ. ಆದರೆ ನಂತರ ಮೂತ್ರ ವಿಸರ್ಜಿಸುವಾಗ ಮೂತ್ರದೊಂದಿಗೆ ವೀರ್ಯವೂ ಹೊರಬರುತ್ತವೆ.

ಆದರೆ ಶುಷ್ಕ ಸಂಭೋಗೋದ್ರೇಕ ಹಾಗಲ್ಲ. ಇಲ್ಲಿ ವೀರ್ಯದ ಅನುಪಸ್ಥಿತಿ ಇರುತ್ತದೆ. ವೀರ್ಯ ಹಿಂತಿರುಗಿ ಹೋದಂತೆ ಅನಿಸಿದರೂ ಅಲ್ಲಿ ವೀರ್ಯ ಚಲನೆ ಸಾಧ್ಯವಾಗಿರುವುದೇ ಇಲ್ಲ. ಸಂತೃಪ್ತಿಯ ಬೆಸುಗೆಗೆ ಯಾವುದೇ ಅಡ್ಡಿ ಇಲ್ಲವಾದ್ದರಿಂದ ಹೆಚ್ಚಿನ ಪುರುಷರು ಇದನ್ನು ಗಂಭೀರವಾಗಿ ಪರಗಣಿಸುವುದಿಲ್ಲ. ಆದರೆ ಮಕ್ಕಳನ್ನು ಪಡೆಯಬೇಕೆನ್ನುವವರು ಮಾತ್ರ ವೈದ್ಯರನ್ನು ಕಾಣುತ್ತಾರೆ.

ಈ ಸ್ಥಿತಿಯ ಮೂಲ ಕಾರಣವನ್ನು ಪತ್ತೆ ಹಚ್ಚಿ ವೈದ್ಯರು ಚಿಕಿತ್ಸೆ ಆರಂಭಿಸುತ್ತಾರೆ. ಉದಾಹರಣೆಗೆ ಔಷಧಿಗಳಿಂದ ಈ ಸಮಸ್ಯೆ ಉಂಟಾದಲ್ಲಿ, ಅಂದರೆ ಟಮ್ಸುಲೋಸಿನ್ (ಫ್ಲೋಮ್ಯಾಕ್ಸ್) ಅನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಿದ ನಂತರ ನಿಮ್ಮ ಕುಸಿದು ಹೋದ ಸಾಮರ್ಥ್ಯ ಮರಳಬಹುದು. ಮಾನಸಿಕ ಒತ್ತಡದಂತಹ ಕಾರಣಗಳಿದ್ದಲ್ಲಿ ಆಪ್ತ ಸಲಹೆಯ ಮೂಲಕ ಪರಿಹಾರ ಸೂಚಿಸಬಹುದು. ಸ್ನಾಯುಗಳು, ನರಗಳನ್ನು ಉತ್ತೇಜಿಸುವ ಔಷಧಿ–ಮಾತ್ರೆಗಳ ಮೂಲಕವೂ ಚಿಕಿತ್ಸೆ ನೀಡಬಹುದು. ಇದರಿಂದ ನೈಸರ್ಗಿಕವಾಗಿ ವೀರ್ಯ ಹೊರಹಾಕುವ ಸಾಮರ್ಥ್ಯವನ್ನು ಪುನಃ ಸ್ಥಾಪಿಕೊಳ್ಳಲು ಸಾಧ್ಯವಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು