ಸೋಮವಾರ, ಸೆಪ್ಟೆಂಬರ್ 27, 2021
28 °C
APPAREL WORKERS

ಗಾರ್ಮೆಂಟ್ಸ್‌ ಕಾರ್ಮಿಕರ ಅತಂತ್ರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ಧ ಉಡುಪು ತಯಾರಿಕೆ ಮತ್ತು ರಫ್ತು ಉದ್ಯಮದಲ್ಲಿ ಬೆಂಗಳೂರು ಜಾಗತಿಕ ಭೂಪಟದಲ್ಲಿ ತನ್ನದೇ ವಿಶಿಷ್ಟ ಸ್ಥಾನಗಳಿಸಿದೆ. ಇಲ್ಲಿ ಇರುವಷ್ಟು ಕಾರ್ಖಾನೆಗಳು (ಗಾರ್ಮೆಂಟ್ಸ್)  ದೇಶದಲ್ಲಿ ಬೇರೆ ಎಲ್ಲಿಯೂ ಇಲ್ಲ. ಗಾರ್ಮೆಂಟ್ಸ್‌ನಲ್ಲಿ  ದುಡಿಯುವ ಮೂಲಕ ಅನ್ನದ ದಾರಿ ಕಂಡುಕೊಂಡ ಮತ್ತು ಸ್ವತಂತ್ರ ಬದುಕು ಕಟ್ಟಿಕೊಂಡ ಸಾವಿರಾರು ಮಹಿಳೆಯರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.ಸಾಕಷ್ಟು ಕಾರ್ಮಿಕ ದಿನಾಚರಣೆ ಬಂದು ಹೋದರು ಕಾರ್ಮಿಕರ ಯಾತನೆ ತಪ್ಪಿಲ್ಲ. ಅವರ ವೇತನ, ಸೌಲಭ್ಯ ಮತ್ತು ಆಡಳಿತ ವರ್ಗಗಳ ಧೊರಣೆ ಬಗ್ಗೆ ಬೆಳಕು ಚೆಲ್ಲುವ ವರದಿ ಇಲ್ಲಿದೆ.

ಕಾರ್ಮಿಕರ ದಿನಾಚರಣೆಯಾದ ಮೇ 1ರಂದು ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಬೆಂಗಳೂರಿನಲ್ಲಿ ದೊಡ್ಡ ರ‍್ಯಾಲಿ ನಡೆಸಿದರು. ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹1,862 ಕೋಟಿ ಪಾವತಿಸುವಂತೆ ಒತ್ತಾಯಿಸಿ ಅವರು ಬೀದಿಗಿಳಿದಿದ್ದರು. 

ಕಠೀರವ ಸ್ಟುಡಿಯೊದಿಂದ ಹೊರಟ ಮೆರವಣಿಗೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು.ಸಿದ್ದ ಉಡುಪು ಕಾರ್ಖಾನೆ ಮತ್ತು ಉದ್ಯಮದ ಬಹುದೊಡ್ಡ ತಾಣವಾದ ಪೀಣ್ಯದ ಟಿವಿಎಸ್‌ ವೃತ್ತದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಆಕರ್ಷಕವಾದ ಉಡುಪುಗಳನ್ನು ತಯಾರಿಸುವ ಮಹಿಳಾ ಕಾರ್ಮಿಕರ ಬದುಕಿನ ಮತ್ತೊಂದು ಮಗ್ಗಲು ಅಲ್ಲಿ ತೆರೆದುಕೊಂಡಿತು. ಕನಿಷ್ಠ ವೇತನ, ಅವಧಿ ಮೀರಿದ ದುಡಿಮೆ ಸೇರಿದಂತೆ ಮಹಿಳಾ ಕಾರ್ಮಿಕರ ಬವಣೆಗಳು ಅನಾವರಣಗೊಂಡವು. 

ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳೆಯರಲ್ಲಿ ಹೆಚ್ಚಿನವರು 18ರಿಂದ 45ರ ವಯೋಮಾನದವರು.  ದಿನಕ್ಕೆ ಎಂಟರಿಂದ ಹತ್ತು ತಾಸು ಮೈಮುರಿದು ದುಡಿಯುವ ಇವರಿಗೆ ತಿಂಗಳಿಗೆ ದೊರೆಯುವುದು ಅಬ್ಬಬ್ಬಾ ಎಂದರೆ ಸಿಗುವುದು ₹8 ಸಾವಿರದಿಂದ ₹10 ಸಾವಿರ. ಇದು ಹತ್ತರಿಂದ ಹದಿನೈದು ವರ್ಷ ಅನುಭವವಿರುವ ಕಾರ್ಮಿಕರ ಸಂಬಳ. 

‘ಹುಷಾರಿಲ್ಲದಿದ್ದರೂ ರಜೆ ದೊರೆಯುವುದಿಲ್ಲ. ಯಾವುದೇ ಪರಿಸ್ಥಿತಿ ಇರಲಿ.ಟಾರ್ಗೆಟ್‌ ರೀಚ್‌ ಮಾಡುವ ಧಾವಂತ. ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೂ ಹೆಚ್ಚಿನ ವೇತನ ಸಿಗುವುದಿಲ್ಲ‘ ಎಂದು ಸುಜಾತಾ ಎಂಬುವರು ಕಾರ್ಮಿಕರ ಸ್ಥಿತಿಯನ್ನು ಬಿಡಿಸಿಟ್ಟರು.

‘ಕಾರ್ಮಿಕರ ಯೂನಿಯನ್‌ಗಳು ಕೆಲಸಗಾರರ ಪರ ಧ್ವನಿ ಎತ್ತಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಯೂನಿಯನ್‌ ಸೇರಿದ ಕಾರ್ಮಿಕರ ಮೇಲೆ ಸದಾ ಕೆಲಸ ಕಳೆದುಕೊಳ್ಳುವ ತೂಗುಗತ್ತಿ ನೇತಾಡುತ್ತಿರುತ್ತದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ವ್ಯವಸ್ಥಿತವಾಗಿ ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತದೆ. ನಮಗೆ ಯಾವ ಸುರಕ್ಷತೆಯೂ ಇಲ್ಲ’ ಎಂದು ಬೊಮ್ಮನಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು