ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ್ತಾನ್‌ಗೋಯಿ: ಲಕ್ನೋದಿಂದ ಮುಂಬೈಗೆ ಬಂದಿಳಿದ ಕಲೆ

Last Updated 14 ಮೇ 2022, 19:30 IST
ಅಕ್ಷರ ಗಾತ್ರ

ದಾಸ್ತಾನ್‌ಗೋಯಿಗಳು ಮನರಂಜನೆಗೆ ಸೀಮಿತವಲ್ಲ. ಅವುಗಳಲ್ಲಿ ಸಾಮಾಜಿಕ, ರಾಜಕೀಯ ವಿಷಯಗಳೂ ಇವೆ. ಮೊಘಲರ ಕಾಲದಲ್ಲಿ ಅರಳಿದ ಕುಸುಮ ಇಂದಿಗೂ ಘಮಲನ್ನು ಪಸರಿಸುತ್ತಲೇ ಇದೆ. ಅತೀ ಕಡಿಮೆ ಸವಲತ್ತು ಮತ್ತು ವೆಚ್ಚದಲ್ಲಿ ಕಡಿಮೆ ಪ್ರೇಕ್ಷಕರಿಗೂ ತೋರಿಸಬಹುದಾದ ಈ ಕಲೆ ಕನ್ನಡಕ್ಕೂ ಬರಬಹುದೇ...

‘ದಾ ಸ್ತಾನ್‌ಗೋಯಿ’ ಉರ್ದು ಪ್ರಕಾರದ ಕಥನರೂಪಿ ಅಭಿನಯದ ನಾಟಕ. ಉತ್ತರ ಭಾರತದ ದಿಲ್ಲಿ, ಲಖನೌ ಮುಂತಾದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ. ‘ದಾಸ್ತಾನ್’ ಅಂದರೆ ‘ಕಥೆ’, ‘ಗೋಯಿ’ ಅಂದರೆ ‘ಹೇಳುವುದು’. ದಾಸ್ತಾನ್‌ಗೋಯಿ ಅಂದರೆ ದೀರ್ಘವಾದ ಕಥೆಯನ್ನು ಸಾದರಪಡಿಸುವುದು. ಕಥೆ ನಿಲ್ಲುತ್ತದೆ, ಮುಗಿಯುತ್ತದೆ. ಆದರೆ, ದಾಸ್ತಾನ್‌ಗೋಯಿ ಮಾತ್ರ ಆರಂಭಗೊಂಡದ್ದು ನಿಲ್ಲುವುದೇ ಇಲ್ಲ. ಇದಕ್ಕೆ ಅಲ್ಪವಿರಾಮವಿದೆ, ಪೂರ್ಣವಿರಾಮವಿಲ್ಲ.

ಈ ಕಲಾಪ್ರಕಾರ ಪರ್ಶಿಯಾದಿಂದ ಭಾರತಕ್ಕೆ ಬಂತು. ಮೊಘಲರ ಕಾಲದಲ್ಲಿ ಅರಳಿ ತನ್ನ ಪರಿಮಳವನ್ನು ಪಸರಿಸಿತು. ಅಕ್ಬರನ ಕಾಲಕ್ಕೆ ಇನ್ನೂ ಉತ್ತುಂಗಕ್ಕೇರಿತು. ಇದನ್ನು ರಾಜರ ದರ್ಬಾರಿನಲ್ಲಿ ಮುಖ್ಯವಾಗಿ ಪ್ರಸ್ತುತಪಡಿಸಲಾಗುತ್ತಿತ್ತು. ದಾಸ್ತಾನ್‌ಗೋಯಿ ಪುರುಷರು ಪ್ರಸ್ತುತಪಡಿಸುವ ಕಲೆ. ಮಹಿಳೆಯರಿಗೆ ನಿಷೇಧವಿತ್ತು. ಉರ್ದುವಿನಲ್ಲಿ ಅಲೀಫ್ ಲೈಲಾ, ಹಾತೀಮತಾಯಿ ತರಹದ ದಾಸ್ತಾನ್‌ಗಳು ಸಾದರಗೊಳ್ಳುತ್ತಿದ್ದವು. ‘ಅಮೀರ್ ಹಮ್ಜಾ’ನ ಶೌರ್ಯ ಬಿಂಬಿಸುವ ‘ದಾಸ್ತಾನ್-ಎ-ಅಮೀರ್ ಹಮ್ಜಾ’ ಹಿಂದೆಯೂ ಪ್ರಸಿದ್ಧವಾಗಿತ್ತು. ಈಗಲೂ ಇದೆ.

ಎಂಟು-ಒಂಬತ್ತನೆಯ ಶತಮಾನದಲ್ಲಿ ಇರಾನ್‌ನಲ್ಲಿ ಜನ್ಮತಳೆದ ದಾಸ್ತಾನ್‌ಗೋಯಿ ಮೊಘಲರ ಕಾಲದಲ್ಲಿ ಭಾರತಕ್ಕೆ ಬಂತು ಮತ್ತು ಗಟ್ಟಿಯಾಗಿ ಬೇರೂರಿತು. ಆದರೆ, 19ನೆಯ ಶತಮಾನವು ಇದಕ್ಕೆ ಪೂರಕವಾಗಿತ್ತು. ಲಖನೌ ಪರಿಸರದಲ್ಲಿ ಈ ಕಲೆಗೆ ಹೊಸ ಆಯಾಮ ದೊರಕಿತು. ಇರಾನ್‌ನಿಂದ ಬಂದ ಈ ದಾಸ್ತಾನ್‌ದಲ್ಲಿ ಕೇವಲ ‘ರಜ್ಮ್’ (ಯುದ್ಧವರ್ಣನೆ) ಮತ್ತು ‘ಬಜ್ಮ್’ (ಮೈಫಿಲ್) ಎಂಬ ಎರಡು ಘಟಕಗಳಿದ್ದವು. ಅದರಲ್ಲಿ ‘ಅಯ್ಯಾರಿ’ (ಚಾಲಾಕು, ಚತುರತೆ) ಮತ್ತು ‘ತಿಲಿಸ್ಮ್’ (ಜಾದೂ) ಇವುಗಳನ್ನು ಸೇರಿಸಲಾಯಿತು. ಹೀಗಾಗಿ ‘ದಾಸ್ತಾನ್‌ ಎ ಅಮೀರ್‌ ಹಮ್ಜ್’ಕ್ಕೆ ಜೀವ ಬಂತು.

‘ದಾಸ್ತಾನ್‌ಗೋಯಿ’ ಪ್ರಸ್ತುತಪಡಿಸುವವರನ್ನು ದಾಸ್ತಾಂಗೋ ಎನ್ನುವರು. ಫಾರ್ಸಿಯಲ್ಲಿ ಬಚ್ಚಿಟ್ಟು ಕೂತಿದ್ದ ವಿದೇಶಿ ಕಥೆಗಳಿದ್ದವು. ಸಾಮಾನ್ಯರಿಗೆ ಕಗ್ಗಂಟಾದವುಗಳು. ಈ ದಾಸ್ತಾನ್‌ಗೋಯಿಗಳು ಲಖನೌನಲ್ಲಿ ‘ಅಯ್ಯಾರಿ’ ಮತ್ತು ‘ತಿಲಿಸ್ಮ್’ ಮೂಲಕ ಉರ್ದುವಿನ ಹಿಂದೂಸ್ತಾನಿ ಶೈಲಿ, ಗಾದೆಗಳ ಭಾಷಿಕ ಪ್ರಯೋಗದಿಂದ ಜನಸಾಮಾನ್ಯರನ್ನು ಮಂತ್ರಮುಗ್ಧರನ್ನಾಗಿಸಿದ್ದವು.

ಲಖನೌನಲ್ಲಿ ಆ ಕಾಲದಲ್ಲಿ ಮುಹಮ್ಮದ್ ಹುಸೇನ್ ಜಾಹ್‌, ಅಹ್ಮದ್ ಹುಸೇನ್ ಕಮರ್, ಮೀರ್ ಅಹ್ಮದ್ ಅಲಿ, ಅಂಬಾಪ್ರಸಾದ್‌ ರಸಾ, ತಶದ್ದ್ಯುಕ್ ಹುಸೇನ್ ಮತ್ತು ಹಕೀಮ್ ಅಸಗರ್ ಅಲೀಖಾನ್- ಹೀಗೆ ಇಡೀ ದೇಶದಲ್ಲಿ ಹೆಸರುವಾಸಿ ದಾಸ್ತಾಂಗೋಗಳು ಇದ್ದರು. ಕೆಲವು ಕಥಾನಕಗಳು ಅದೆಷ್ಟು ಮೈನವಿರೇಳುವಷ್ಟು ಗಟ್ಟಿಯೆಂದರೆ ಪ್ರೇಕ್ಷಕ ಅದರ ಒಂದು ಅನುಭವದ ಭಾಗವಾಗಿ ಪರಿವರ್ತಿತಗೊಳ್ಳುತ್ತಾನೆ. ದಾಸ್ತಾನ್‌ಗೋಯಿ ಮೌಖಿಕ ಪರಂಪರೆಯ ಕಲೆ. ಲಿಖಿತವಾದುದಲ್ಲ. ಅದು ಕೇಳುಗ, ನೋಡುಗನ ಪ್ರಕಾರ. ಆದರೆ, ಕೋಲ್ಕತ್ತದ ಮುನ್ಶಿ ನವಲಕಿಶೋರರು ದಾಸ್ತಾನ್‌-ಎ-ಅಮೀರ್-ಹಮ್ಜಾವನ್ನು ಉರ್ದುವಿನಲ್ಲಿ ಮುದ್ರಿಸಲು ಮುಂದಾದರು. ಆಗ ಒಂದು ಖಂಡದಲ್ಲಿ ಮಾತ್ರ ದಾಸ್ತಾನ್‌ಗೋಯಿ ಲಭ್ಯವಿತ್ತು. ಕೋಲ್ಕತ್ತ ಫೋರ್ಟ್‌ ವಿಲಿಯಮ್ ಕಾಲೇಜಿನಿಂದ 1855ರಲ್ಲಿ ಪ್ರಕಾಶನಗೊಂಡಿತು.

1881ರಲ್ಲಿ ನವಲಕಿಶೋರ್‌ ಪ್ರೆಸ್‍ನಲ್ಲಿ ದಾಸ್ತಾನ್-ಎ-ಅಮೀರ್ ಹಮ್ಜಾ ಮುದ್ರಣದ ಪ್ರಕ್ರಿಯೆ ಆರಂಭಗೊಂಡಿತು. ಅಂದಿನಿಂದ 1910ರ ತನಕ 46 ಖಂಡಗಳಲ್ಲಿ ಮುದ್ರಣಗೊಂಡಿತು. ಪ್ರತೀ ಖಂಡದಲ್ಲಿ 1000 ಪುಟಗಳಿದ್ದವು. ನವಲಕಿಶೋರ್‌ ಪ್ರೆಸ್‍ನ ಒಟ್ಟು 46000 ಪುಟಗಳ ಪ್ರಪಂಚದ ಅತಿ ದೊಡ್ಡ ದಾಸ್ತಾನ್‌ಗೋಯಿ ಇದಾಗಿದೆ. ಇದರೊಳಗಿನ ಅಮೀರ್ ಹಮ್ಜಾ ಅತ್ಯಂತ ಜನಪ್ರಿಯ ಕಥೆ. ತಿಲಿಸ್ಮೆ ಹೋಶ್ ರುಬಾ-ಏಳು ಖಂಡಗಳಷ್ಟು ವಿಸ್ತಾರವಾಗಿದೆ. ದಾಸ್ತಾನ್‌ಗೋಯಿ ಮಧ್ಯದಲ್ಲಿ ಕೊಂಚ ಕಾಲ ವಿರಮಿಸಿತ್ತು. ನಂತರ ಅದರ ಪುನರುಜ್ಜೀವನಕ್ಕೆ ಕಾರಣವಾದವರು ಮಹಮೂದ್ ಫಾರೂಖಿ.

ಸಮಕಾಲೀನ ಸಂದರ್ಭದಲ್ಲಿ ವಿಷಯಾಧಾರಿತ ದಾಸ್ತಾನ್‌ಗೋಯಿಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಮನರಂಜನೆಗೆ ಸೀಮಿತವಾಗದೇ ಸಾಮಾಜಿಕ, ರಾಜಕೀಯ ವಿಷಯ ವಸ್ತುಗಳನ್ನು ಇದು ಅಳವಡಿಸಿಕೊಂಡಿದೆ. ರಾತ್ರಿಯಿಡಿ ನಡೆಯುತ್ತಿದ್ದ ಪ್ರಸಂಗಗಳು ಈಗ ಕೆಲವು ಗಂಟೆಗಳಿಗೆ ಸೀಮಿತವಾಗಿವೆ. ರಾಜಾ ವಿಕ್ರಮನ ಪ್ರೇಮಕಥೆಯಲ್ಲದೇ ವಿನಾಯಕ ಸೇನ್‌ ಅವರ ಬಂಧನದ ಕುರಿತ ವಿವರವುಳ್ಳ ‘ದಾಸ್ತಾನ್‌-ಎ-ಸೆಡಿಶನ್’, ವಿಭಜನೆಯ ಕಥೆ ಹೇಳುವ ‘ದಾಸ್ತಾನ್‌-ಎ-ತಕಸೀಮ-ಎ-ಹಿಂದ್‌’, ಪದ್ಮಶ್ರೀ ವಿಜಯದಾನ ದೇಥಾ ಅವರ ಕಥೆ ಆಧರಿಸಿದ ‘ದಾಸ್ತಾನ್‌-ಎ-ಚೌಬುಲಿ’ ಜನಪ್ರಿಯವಾದವುಗಳು.

***

ಮರಾಠಿಗೆ ಮೊತ್ತಮೊದಲು ದಾಸ್ತಾನ್‌ಗೋಯಿ ತಂದವರು ಪ್ರಸಿದ್ಧ ರಂಗನಟ, ನಿರ್ದೇಶಕ ಅಕ್ಷಯ್ ಶಿಂಪಿ ಅವರು. ಮರಾಠಿ ಜಾನಪದ ಪರಂಪರೆ ಮತ್ತು ದಾಸ್ತಾನ್‌ಗೋಯಿಯ ಉರ್ದು ಕಲಾಪ್ರಕಾರಗಳ ಮಿಶ್ರಣದ ‘ಫ್ಯೂಜನ್’ ಇದಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರದ ಸಾಮ್ಯತೆಗಳನ್ನು ಚರ್ಚಿಸುವಾಗ ಮರಾಠಿ ಪರಂಪರೆಯ ಓವಿ, ಸಾಕಿ, ದಿಂಡಿ ಮತ್ತು ವೃತ್ತಛಂದದೊಳಗಿನ ರಚನೆಗಳು, ಜನಪದ ಕಥೆಗಳು ಹೇರಳವಾಗಿರುವುದನ್ನು ಗಮನಿಸಬಹುದು. ಮರಾಠಿಯಲ್ಲಿ ಶಾಯರಿಗಳ ಬದಲಿಗೆ ವಿಷಯಾಧಾರಿತ ಜಾನಪದ ಕಾವ್ಯ, ನವಕವಿತೆಗಳಿವೆ. ನಮ್ಮಲ್ಲಿರುವ ಅಜ್ಜಿ ಕಥೆಯೂ ದಾಸ್ತಾನ್‌ಗೋಯಿಯೇ.
ಅಕ್ಷಯ್ ಶಿಂಪಿ ಮೊದಲು ಲಖನೌನ ದಾಸ್ತಾನ್‌ಗೋಯಿಯ ಉರ್ದು ತಂಡದಲ್ಲಿದ್ದು ತದನಂತರ ಆ ಅನುಭವದ ಹಿನ್ನೆಲೆಯಲ್ಲಿ ಮರಾಠಿಯಲ್ಲಿ ಇದನ್ನು ಪ್ರಯೋಗಿಸಲು ಚಿಂತಿಸಿದರು. ಅಕ್ಷಯ್ ತನ್ನ ಸಹ ಕಲಾವಿದೆ ಧನಶ್ರೀ ಖಂಡಕರ್‌ ಜೊತೆ ‘ದಾಸ್ತಾನ್‌-ಎ-ಬಡೀ-ಬಾಂಕಾ’ ಪ್ರಸ್ತುತಪಡಿಸತೊಡಗಿದರು. ಈ ನಾಟಕವನ್ನು ಕೊಲ್ಲಾಪುರದ ಬಾಲಜಿ ಪೆಂಡಾರಕರ್‌ ಸಾಂಸ್ಕೃತಿಕ ಕೇಂದ್ರದಲ್ಲಿ ನಾನು ನೋಡಿದೆ. ಮುಂಬೈ ಮಾಯಾನಗರಿ ಕಥೆಯನ್ನು ಎರಡು ಗಂಟೆ ಅವಧಿಯಲ್ಲಿ ಹೇಳುತ್ತ ಪ್ರೇಕ್ಷಕನನ್ನು ಕದಲದಂತೆ ಕೂರಿಸುತ್ತದೆ ಈ ದಾಸ್ತಾನ್‌ಗೋಯಿ.

ಬೈಠಕಿಯಲ್ಲಿ ಕತೆ ಸಾಗುತ್ತದೆ. ಓವಿ, ಕವಿತೆ, ಸಂವಾದ, ಗಜಲ್ ಇತ್ಯಾದಿಗಳ ಸಾದರೀಕರಣದ ಮಿಶ್ರಣದಲ್ಲಿ ಢಾಳವಾಗಿ ಎದ್ದು ಕಾಣುವ ಆಂಶವೆಂದರೆ ಅಕ್ಷಯ್ ಮತ್ತು ಧನಶ್ರೀ ಅವರ ಜಬರದಸ್ತ್ ಟೈಮಿಂಗ್‍ಸೆನ್ಸ್. ಅದಕ್ಕೆ ಪ್ರೇಕ್ಷಕನ ವಾವ್ಹ್‌ ಎಂಬ ಪ್ರತಿಕ್ರಿಯಾತ್ಮಕ ಉದ್ಗಾರದ ಸ್ಫೂರ್ತಿ. ಒಂದು ರಂಗದ ಮಧ್ಯ ಶುಭ್ರ ಹಾಸಿಗೆಯ ಮಂಚ. ಇಬ್ಬರೂ ಪಾತ್ರಧಾರಿಗಳು ಶುಭ್ರ ಬಿಳಿ ವಸ್ತ್ರದಲ್ಲಿ. ಮುಂಬೈ ಕಥೆ ಹೇಳುವುದೆಂದರೆ ಸವಾಲಿನದ್ದೇ. ‘ಮುಂಬಯಿ ನಗರಿ ಬಡೀ ಬಾಂಕಾ ಅಶೀ ರಾವಣಾಚಿ ದುಸರೀ ಲಂಕಾ’ ಎಂದು ಶಾಹೀರ್ ಪಠ್ಠೆ ಬಾಪುರಾವ್‌ ಅವರೇ ಬಣ್ಣಿಸಿದ್ದಾರೆ.

ಎರಡೂ ಪಾತ್ರಗಳಲ್ಲಿ ಪ್ರೇಕ್ಷಕನೂ ಪ್ರತಿಕ್ರಿಯಿಸುತ್ತ ಏಕೀಭವಿಸುವನು. ಅವನಿಂದ ವಾವ್ಹ್‌, ಚಪ್ಪಾಳೆ ಸದ್ದು. ಗಂಟಲು ಆರಿದಾಗ ದಾಸ್ತಾಂಗೋಗಳಿಬ್ಬರು ಎದುರಿರುವ ಚೆಂಬುನಿಂದ ನೀರು ಕುಡಿಯುತ್ತಾರೆ. ನೇಪಥ್ಯದ ಆರ್ಭಟವಿಲ್ಲದ ಆಟ. ಅಭಿನಯವೇ ಇದರ ಜೀವಾಳ. ನಟನೆಯೇ ಶಕ್ತಿ. ಸಂವಾದ, ಹಾಡು, ಚಿಟಿಕೆ, ಚಪ್ಪಾಳೆ ಬಾರಿಸಿ ತಾಳ ಹಿಡಿಯುವುದು ಇದರ ಸೊಬಗು. ಅಕ್ಷಯ್, ಧನಶ್ರೀಯವರ ಒಂದು ನಮೂನೆಯ ಜುಗಲ್‌ಬಂದಿ. ಮುಂಬಯಿ ವೇಗದಲ್ಲಿ ಬದಲುಗೊಳ್ಳತ್ತಲೇ ಇರುತ್ತದೆ. ಇದು ದೇಶದ ಮೂಲೆಗಳಿಂದ ಬಂದ ವಿವಿಧ ಭಾಷಿಕರು, ಆಪೀಸಿನಲ್ಲಿ ಕ್ಷುದ್ರ ಹುಳು, ಮನೆಯಲ್ಲಿ ಸೂರ್ಯನೆನಿಸುವ ‘ಕಲೊಜಸ್’ ಅಂದರೆ ಮುಂಬೈಕರ್, ಲೋಕಲ್ ಗಾಡಿ, ಎತ್ತರದ ಕಟ್ಟಡ, ಜೋಪಡಿ, ಚಾಳು, ಆಫೀಸು, ಸೈರನ್ ಕೂಗದೇ ನಿಂತ ಗಿರಣಿಗಳ ಪ್ರಶಾಂತ ಗಿರಣಿಗಾಂವ್‌ ಮುಂಬೈ.

‘ಏ ದಿಲ್ ಹೈ ಮುಶ್ಕಿಲ್ ಜೀನಾ ಯಹಾಂ...ಯೇ ಬಾಂಬೇ ಹೈ ಮೇರಿ ಜಾನ್‌!’ ಈ ಹಾಡು ದಾಸ್ತಾಂಗೊಗಳ ಧ್ವನಿಯಲ್ಲಿ ಕೇಳಿ ಬರುತ್ತಿದ್ದಂತೆಯೇ ಪ್ರೇಕ್ಷಕ ಚಪ್ಪಾಳೆ ತಟ್ಟುತ್ತಾ ಅದರಲ್ಲಿ ತಲ್ಲೀನನಾಗುವನು. ಭಾವು ಪಾಧ್ಯೆ, ಮರ್ಡೇಕರ, ವಿಂದಾ ಕರಂದೀಕರ, ನಾರಾಯಣ ಸುರ್ವೆ, ಅರುಣ ಸಾಧು, ಅಣ್ಣಾ ಭಾವು ಸಾಠೆ, ಮಂಟೋ, ತನ್ವೀರ್ ಸಿದ್ದಿಕಿ-ಸರ್ವ ದಿಗ್ಗಜರೊಟ್ಟಿಗೆ ಅಕ್ಷಯನ ಕವಿತೆಯೂ ಈ ರಂಗದಲ್ಲಿ ತೆರೆದುಕೊಳ್ಳುತ್ತದೆ. ಮುಂಬಯಿಯ ಯಾತನೆ, ದಣಿವು, ಗೊಂದಲ, ಸ್ಪರ್ಧೆ, ಶಾಂತತೆ, ಅಪರಿಹಾರ್ಯತೆ, ಅಗತಿತನ-ಎಲ್ಲ ಭಾವನೆಗಳನ್ನು ಪೋಣಿಸಿ ಎರಡು ಗಂಟೆಗಳಲ್ಲಿ ಅದೇ ಕಾವು ಕಾಯ್ದುಕೊಂಡು ದಾಸ್ತಾನ್‌ ಹೇಳುವುದು ಸುಲಭದ ಮಾತಲ್ಲ. ಅತೀ ಕಡಿಮೆ ಸವಲತ್ತು ಮತ್ತು ವೆಚ್ಚದಲ್ಲಿ ಕಡಿಮೆ ಪ್ರೇಕ್ಷಕರಿಗೂ ತೋರಿಸಬಹುದಾದ ಈ ‘ಇಂಟಿಮೇಟ್ ಪ್ಲೇ’ ದಾಸ್ತಾನ್‌ಗೋಯಿ ಕನ್ನಡಕ್ಕೂ ಬರಲಿ ಎಂಬುದೇ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT