ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮ ವಿಕಸನದ ಪಯಣಕ್ಕೆ ಕಳರಿ ಮಾರ್ಗ

ಬೆಂಗಳೂರಿನಲ್ಲಿ ಕೇರಳದ ಕಲೆ
Last Updated 10 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಆ ಗುರುಕುಲದ ಹೆಬ್ಬಾಗಿಲ ಬಳಿ ಬಂದು ನಿಂತಾಗ; ಖಡ್ಗಗಳ ಝಳಪಿಸುವಿಕೆಯಿಂದ ರೂಂಯ್, ರೊಂಯ್... ಎನ್ನುವ ಸದ್ದು ಗಾಳಿಯಲ್ಲಿ ತೇಲಿ ಬರುತ್ತಿತ್ತು.

ಚಪ್ಪಡಿ ಕಲ್ಲಿನಿಂದ ಮಾಡಿದ ಐದು ಮೆಟ್ಟಿಲುಗಳ ಮೇಲೆ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟು ಕಳರಿ (ಅಖಾಡ) ಯೊಳಗೆ ಇಳಿಯುತ್ತಿದ್ದಂತೆ; ಖಡ್ಗಗಳ ಅಲುಗಿನ ಪ್ರಹಾರದ ಸಪ್ಪಳ, ಅವುಗಳ ಚಕಮಕಿಯಿಂದ ಹೊಮ್ಮುತ್ತಿದ್ದ ಕಿಡಿಗಳಿಂದ ಮೈ ಜುಮ್ಮೆನಿಸುತ್ತಿತ್ತು.

ಅಲ್ಲಿ ಕತ್ತಿ, ಗುರಾಣಿಗಳನ್ನು ಝಳಪಿಸುತ್ತಿದ್ದವರು ಹೈಸ್ಕೂಲು ಮತ್ತು ಕಾಲೇಜು ಮೆಟ್ಟಿಲು ಹತ್ತಿದ ಬಾಲೆಯರು, ಬಾಲಕರು ಮತ್ತು ಯುವಕರು. ಮಿಂಚಿನ ವೇಗದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಚಿಗರೆಗಳಂತೆ ಜಿಗಿಯುತ್ತಾ, ಓಡಾಡುತ್ತ ವಿಭಿನ್ನ ರೀತಿಯ ಶಸ್ತ್ರಗಳ ಪ್ರಹಾರ ನಡೆಸುತ್ತಿದ್ದರು. ಆ ಅನನ್ಯ ಕೌಶಲ್ಯದ ದೃಶ್ಯ ನೋಡುತ್ತಿದ್ದಾಗ, ಪ್ರಾಚೀನ ಗುರುಕುಲದೊಳಗೆ ಕಾಲಿಟ್ಟ ಅನುಭವವಾಗಿತ್ತು.

ಆದರೆ ಅದು ಆಧುನಿಕ ಕಳರಿ ಪಯಟ್ ಗುರುಕುಲದ ದೃಶ್ಯ. ಭಾರತದ ಪ್ರಾಚೀನ ಸಮರ ಕಲೆ ಕಳರಿ ಪಯಟ್‌ ಕಲಿಸುವ ಶಾಲೆ. ಬೆಂಗಳೂರಿನ ಚಿಕ್ಕಗುಬ್ಬಿಯಲ್ಲಿದೆ. ಕೇರಳದ ಗುರುವಾಯೂರಿನ ರಂಜನ್‌ ಮುಲ್ಲರತ್ ಈ ಗುರುಕುಲದ (ಕಳರಿ ಗುರುಕುಲಂ) ಮುಖ್ಯ ಪ್ರಾಚಾರ್ಯ. ಅವರ ಪತ್ನಿಯೂ ಕಳರಿ ಪಯಟ್‌ನಲ್ಲಿ ನುರಿತ್ತಿದ್ದಾರೆ.

ದೇಹ ಹುರಿಗೊಳಿಸಿಕೊಳ್ಳಲು ಜಿಮ್, ಏರೋಬಿಕ್ಸ್‌ಗೆ ಹೋಗಿ ಬೆವರು ಮತ್ತು ಹಣವನ್ನು ನೀರಿನಂತೆ ಹರಿಸುವ ಕಾಲವಿದು. ಆದರೆ, ಒಂದಷ್ಟು ಯುವಕ- ಯುವತಿಯರು ಈ ಶಾಲೆಯಲ್ಲಿ ಕಳರಿ ಪಯಟ್ ಕಲಿಯುತ್ತಿದ್ದಾರೆ. ಕೆಂಪು ನೆಲಹಾಸಿನ ಅಖಾಡದಲ್ಲಿ ಅಭ್ಯಾಸ ಮಾಡುತ್ತಿದ್ದವರ ದೇಹದ ನಮ್ಯತೆ ಹೇಗಿತ್ತೆಂದರೆ, ಬಾಗಿ–ಬಳುಕುವ ನಾಗರ ಬೆತ್ತದಷ್ಟೇ ಚುರುಕಾಗಿತ್ತು. ಮಾತ್ರವಲ್ಲ, ಮೆದುಳು ಕೂಡ ಅದಕ್ಕಿಂತ ವೇಗವಾಗಿ ಯೋಚಿಸುತ್ತಿತ್ತು. ಹೀಗೆ ಗೋಚರ ಮತ್ತು ಅಗೋಚರ ಶತ್ರುವಿನೊಂದಿಗೆ ವಿವಿಧ ಬಗೆಯ ಆಯುಧಗಳು, ಕೋಲು ಮತ್ತು ಬರಿಗೈಯಲ್ಲಿ ಹೋರಾಡುವ ಕಲೆಯನ್ನು ಕರಗತಗೊಳಿಸುವುದು ಈ ಕಲೆಯ ಉದ್ದೇಶ. ಇದರಲ್ಲಿ ಹಲವು ತಂತ್ರಗಳು, ಪಟ್ಟುಗಳು ಇವೆ. ಗಾಯಗೊಂಡವರನ್ನು ಚಿಕಿತ್ಸೆ ನೀಡುವ ವಿಧಾನವೂ ಇದೆ.

ಮಕ್ಕಳ ತರಬೇತಿ ನೋಡುತ್ತಾ, ‘ಈ ಆಧುನಿಕ ಯುಗದಲ್ಲಿ ಬರಿಗಾಲಿನಲ್ಲಿ ಮಣ್ಣಿನ ನೆಲದ ಮೇಲೆ ಮೈಯ್ಯೆಲ್ಲಾ ಧೂಳಾಗಿಸಿಕೊಳ್ಳುವ, ಬೆವರು ಹರಿಸುವ ಅಗತ್ಯವೇನಿದೆ. ಇದರ ವಿಶೇಷವೇನಿದೆ’? ಎಂದು ಕಳರಿ ಗುರು ರಂಜನ್‌ರನ್ನು ಸಹಜವಾಗಿ ಪ್ರಶ್ನಿಸಿದೆ. ಅದಕ್ಕವರು ಕಳರಿ ಪಯಟ್‌ ಇತಿಹಾಸ, ತತ್ವ, ಮನೋ-ದೈಹಿಕ ವಿಜ್ಞಾನ ಮತ್ತು ಅಂತಿಮವಾಗಿ ಚೈತನ್ಯದಲ್ಲಿ ಒಂದಾಗುವ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ‘ನಾವೆಲ್ಲರೂ ನಿತ್ಯ ಬಾಹ್ಯ ಯುದ್ಧಕ್ಕಿಂತ, ಆಂತರಿಕವಾಗಿ ಹೋರಾಡುತ್ತಿರುತ್ತೇವೆ, ಅಲ್ಲವೆ. ಇದಕ್ಕೆ ಆಧುನಿಕ ಜಂಜಾಟದಿಂದ ಉತ್ಪತ್ತಿಯಾಗುವ ಒತ್ತಡಗಳೇ ಕಾರಣ. ಇದನ್ನು ನಿಯಂತ್ರಿಸಲು ಹಾಗೂ ಮನಸ್ಸು ಮತ್ತು ದೇಹದ ನಡುವೆ ಸಮತೋಲನ ಸಾಧಿಸಲು ಕಳರಿ ಪಯಟ್‌ ಅತಿ ಉಪಯುಕ್ತ ವಿದ್ಯೆ’ ಎಂದು ವಿವರಿಸಿದರು.

ಈ ವಿದ್ಯೆಯಿಂದ ದೇಹಕ್ಕೆ ಶಕ್ತಿ (ಎನರ್ಜಿ) ಸಿಗುತ್ತದೆ, ಮನಸ್ಸನ್ನು ಹದಗೊಳಿಸಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕಳರಿ ವಿದ್ಯೆಯನ್ನು ಭಗವಾನ್‌ ಶಿವನು ಪರಶುರಾಮರಿಗೆ ಹೇಳಿಕೊಟ್ಟ. ಪರಶುರಾಮ ಕೇರಳದಲ್ಲಿ 101 ಕಡೆಗಳಲ್ಲಿ ಕಳರಿ ಶಾಲೆಗಳನ್ನು ಆರಂಭಿಸಿದನಂತೆ. ಕರಾಟೆ, ಕುಂಗ್‌ಫೂನಂತಹ ಸಮರ ಕಲೆಗಳಿಗೆ ತಾಯಿ ಬೇರೇ ಕಳರಿ ಎನ್ನಲಾಗುತ್ತದೆ. ಬೋಧಿ ಧರ್ಮ ಎಂಬ ಬೌದ್ಧ ಸನ್ಯಾಸಿ ದಕ್ಷಿಣ ಭಾರತದಿಂದ ಚೀನಾಕ್ಕೆ ಹೋಗಿ ಅಲ್ಲಿನ ಜನರಿಗೆ ಈ ವಿದ್ಯೆ ಹೇಳಿಕೊಟ್ಟ ಎಂದು ಹೇಳುತ್ತಾರೆ ಎಂಬುದು ಅವರ ಮುಂದುವರಿದ ವಿವರಣೆಯ ಭಾಗ.

ವಿವರಣೆ ನಿಲ್ಲುತ್ತಿದ್ದಂತೆ ‘ಇದರಿಂದ ವ್ಯಕ್ತಿಯ ಮನೋ ಧರ್ಮ ಹೇಗೆ ಬದಲಾಗುತ್ತದೆ’ ಎಂದು ಮತ್ತೊಂದು ಕುತೂಹಲದ ಪ್ರಶ್ನೆ ಅವರ ಮುಂದಿಟ್ಟೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಹಲವು ಒತ್ತಡಗಳ ನಡುವೆ ಏನಾದರೂ ಸಾಧಿಸಬೇಕೆಂಬ ತುಡಿತ ಇಟ್ಟುಕೊಂಡಿರುತ್ತೇವೆ ಅಲ್ಲವೆ. ಆದರೆ ಸಾಧಿಸುವ ಗುರಿಯ ಸ್ಪಷ್ಟತೆ, ಖಚಿತತೆ ಇರುವುದಿಲ್ಲ. ಇದನ್ನು ಪಡೆಯಲು ದೃಢ ಮನಸ್ಥಿತಿ ಬೇಕು. ನಿಯಮಿತ ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸಗಳಿಂದ ಮಾತ್ರ ಅದು ಸಾಧ್ಯ. ಇದೆಲ್ಲ ಕಳರಿಯಲ್ಲೂ ಇದೆ. ಇದನ್ನು ನಿತ್ಯ ಅಭ್ಯಾಸ ಮಾಡುವುದರಿಂದ ವ್ಯಕ್ತಿಯ ಜೀವನ ಶಿಸ್ತಿಗೆ ಒಳಪಡುತ್ತದೆ. ನೆನಪಿರಲಿ, ಸಾಧನೆಗೆ ಎಂದೂ ಶಾರ್ಟ್‌ ಕಟ್‌ ದಾರಿಯಿಲ್ಲ. ನಿರಂತರ ಅಭ್ಯಾಸ, ಆಹಾರ ಮತ್ತು ಪಥ್ಯ ಅತಿ ಮುಖ್ಯ’ ಎಂದು ಸುಧೀರ್ಘ ಉತ್ತರ ನೀಡಿದರು.

ಇತ್ತ ಅವರು ವಿವರಣೆ ನೀಡುತ್ತಿದ್ದರೆ, ಅಖಾಡದಲ್ಲಿ ಇಬ್ಬರು ಬಾಲಕರು ಹೂಂಕರಿಸುತ್ತಾ, ಮೆಯಪಟ್ಟು, ಅಷ್ಟವಡಿಪುನಂತಹ ಕಳರಿಯ ಪಟ್ಟುಗಳನ್ನು ಹಾಕುತ್ತಿದ್ದರು (ಪಟ್ಟು ವಿವರಣೆಗೆ ಬಾಕ್ಸ್ ನೋಡಿ). ಇನ್ನೊಂದು ಬದಿಯಲ್ಲಿ ಕಸರತ್ತು ಮುಗಿಸಿ, ವಿರಾಮದಲ್ಲಿದ್ದ ಬಾಲಕ ಧನಂಜಯನನ್ನು ಮಾತಿಗೆಳೆದೆ. ‘ಐದು ವರ್ಷಗಳಿಂದ ಕಳರಿ ಕಲಿಯುತ್ತಿದ್ದೇನೆ. ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಲು ಸಹಾಯಕವಾಗಿದೆ’ ಎಂದು ಮೈಮೇಲಿದ್ದ ಕೆಂದೂಳನ್ನು ಕೊಡವಿಕೊಳ್ಳುತ್ತಾ ಪ್ರತಿಕ್ರಿಯಿಸಿದ. ಅಭ್ಯಾಸ ಮುಗಿಸಿ ಖಡ್ಗ–ಗುರಾಣಿ ಕೆಳಗಿಟ್ಟ ಹೈಸ್ಕೂಲ್ ವಿದ್ಯಾರ್ಥಿನಿ ಚೇತನಾ, ‘ಇದನ್ನು ಕಲಿಯುವುದಕ್ಕೆ ಮೊದಲು ಓದಿನಲ್ಲಿ ಶಿಸ್ತು ಇರಲಿಲ್ಲ. ನಾನು 9 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ಓದಿನಲ್ಲಷ್ಟೇ ಅಲ್ಲ, ಜೀವನದಲ್ಲೂ ಶಿಸ್ತು, ಕ್ರಮಬದ್ಧತೆ ಬಂದಿದೆ’ ಎಂದು ಪ್ರತಿಕ್ರಿಯಿಸಿದಳು. ‘ಮಹಿಳೆಯರ ಸ್ವಯಂ ರಕ್ಷಣೆಗೆ ಇದು ತುಂಬಾ ಅನುಕೂಲ’ ಎಂದು ಹೇಳಿದಳು.

ಪುನಃ ನಮ್ಮ ಮಾತು ಮುಂದುವರಿಯಿತು. ‘ಅನೇಕ ಯುವಕರು ಸಿಕ್ಸ್‌ ಪ್ಯಾಕ್‌ಗಾಗಿ ಜಿಮ್‌ ಹಾದಿ ಹಿಡಿದಿದ್ದಾರೆ. ಅದು ಮನೋ-ದೈಹಿಕ ದೃಢತೆ ಪೂರಕವಲ್ಲವೆ’ ಎನ್ನುತ್ತಾ ಪುನಃ ಕುತೂಹಲದ ಪ್ರಶ್ನೆ ಮುಂದಿಟ್ಟೆ. ಇದನ್ನು ಕೇಳಿ ಕಳರಿ ಗುರು ಜೋರಾಗಿ ನಕ್ಕರು. ‘ಹೌದು, ಅಂಗಸೌಷ್ಟವಕ್ಕಾಗಿ ಹೀಗೆ ಮಾಡುತ್ತಾರೆ. ಇದರಿಂದ ದೇಹ ಹುರಿಗೊಳಿಸಬಹುದೇ ಹೊರತು, ಮನಸ್ಸು– ದೇಹದ ನಡುವೆ ಸಮತೋಲನ ಕಾಪಾಡಲು ಸಾಧ್ಯವಿಲ್ಲ. ಕಳರಿ ಅಥವಾ ಯೋಗದಂತಹ ವಿದ್ಯೆಗಳು ಮನುಷ್ಯನ ಮನಸ್ಸು, ದೇಹ, ಬುದ್ದಿ ಎಲ್ಲವನ್ನೂ ಸಮತೋಲನದಲ್ಲಿಡುತ್ತದೆ. ನಿರಂತರ ಅಭ್ಯಾಸದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಹಾಗಾಗಿ ಇದನ್ನು ವ್ಯಾಯಾಮ ಎಂದಷ್ಟೇ ಭಾವಿಸಬಾರದು’ ಎಂದು ವಿವರಿಸಿದರು.

‘ಇತ್ತೀಚೆಗೆ ಬಹುತೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ ಇಲ್ಲ ಎನ್ನುತ್ತಿದ್ದಾರೆ. ಆದರೆ, ಅದೇ ಮಕ್ಕಳು ಮೊಬೈಲಿನಲ್ಲಿ ಗಂಟೆಗಟ್ಟಲೆ ಆಟವಾಡುತ್ತಾರೆ. ನಾನು ಸಾಕಷ್ಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇನೆ. ಕಳರಿ ಕಲಿತ ಮಕ್ಕಳಲ್ಲಿನ ಸಾಧನೆ, ಶಿಸ್ತನ್ನು ಕಂಡು ಪೋಷಕರೇ ಸಂತೋಷ ಪಟ್ಟಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಉಲ್ಲೇಖಿಸುತ್ತಾರೆ.

ಇಷ್ಟೆಲ್ಲ ಮಾತು–ಮಂಥನ ಮುಗಿಯುವ ವೇಳೆಗೆ ಸೂರ್ಯ ಪಶ್ಚಿಮದಲ್ಲಿ ಇಳಿಯುತ್ತಿದ್ದ. ಹುಲ್ಲಿನ ಚಾವಣಿ ಬದಿಯಲ್ಲಿದ್ದ ಖಾಲಿ ಜಾಗದಿಂದ ತೂರಿ ಬಂದ ಸೂರ್ಯನ ಕಿರಣಗಳ ಧಾರೆ ಅಖಾಡದ ಕೆಮ್ಮಣಿನ ಮೇಲೆ ಬಿದ್ದಿತ್ತು. ಕಳರಿ ಪಟುಗಳ ಮಿಂಚಿನ ಸಂಚಾರದಿಂದ ಕೆಂಪನೆ ದೂಳು ಮೇಲಕ್ಕೆ ಎದ್ದಿತ್ತು. ಕಳರಿ ಕಲೆ ಕುರಿತ ಹೆಚ್ಚಿನ ಮಾಹಿತಿಗಾಗಿ ರಂಜನ್‌ ಸಂಪರ್ಕ ಸಂಖ್ಯೆ: 9945155995

ಕಳರಿ ಕಲೆಯ ಕಲಿಕೆ...

ದೇಹವನ್ನು ಕಣ್ಣಿನಷ್ಟೇ ಸೂಕ್ಷ್ಮವಾಗಿ, ಯಾವುದೇ ಪ್ರಚೋದನೆಗೆ ತಕ್ಷಣವೇ ಪ್ರತಿಕ್ರಿಯಿಸುವಂತೆ ತಾಲೀಮು ನೀಡಲಾಗುತ್ತದೆ.

ಅಷ್ಟ ವಡಿವು (ಎಂಟು ಪ್ರಾಣಿಗಳ ಭಂಗಿಗಳು): ರಕ್ಷಣೆಗಾಗಿ ಅಥವಾ ಕ್ಷಣಾರ್ಧದಲ್ಲಿ ಎರಗಲು ವರಾಹ, ಆನೆ, ಮಾರ್ಜಾಲ, ಸರ್ಪ, ಹುಂಜ, ಕುದುರೆ, ನವಿಲು ಮತ್ತು ಹುಂಜದಂತಹ ಪ್ರಾಣಿಗಳ ಸಂಕುಚಿತ ಭಂಗಿಗಳನ್ನು ಗುರುಗಳು ಬಳಸಿದರು.ಪ್ರಾಣಿಗಳ ಚಲನೆಗಳು ದೇಹದ ಮರ್ಮ ಸ್ಥಾನಗಳು ತೆರೆದುಕೊಳ್ಳುವಂತೆ ಮಾಡುತ್ತವೆ.

ಮೆಪಯಟ್ಟು ದೈಹಿಕ ಸ್ವಾಸ್ಥ್ಯಕ್ಕೆ ಮತ್ತು ದೇಹದ ಲಾಲಿತ್ಯಕ್ಕೆ ರೂಪಿಸಿರುವ 18 ವಿಭಿನ್ನ ಕಸರತ್ತುಗಳ ಸರಣಿ. ಈ ಕಸರತ್ತುಗಳ ಅಭ್ಯಾಸದಿಂದ ಅತ್ಯುತ್ತಮ ಶರೀರ ಚಟುವಟಿಕೆ, ನಮ್ಯತೆ, ದೇಹವನ್ನು ಯಾವುದೇ ರೀತಿಯಲ್ಲಿ ತಿರುಗಿಸುವ, ಬಾಗಿಸುವ ಸಾಮರ್ಥ್ಯ ಕ್ಷಣ ಮಾತ್ರದಲ್ಲಿ ಕರಗತವಾಗುತ್ತದೆ.

ಒಟ್ಟಕೊಲ್(ಡೊಂಕಾದ ಕೋಲು): ಇದು ಮರದ ಆಯುಧದ ಹೆಸರು. ಮರ್ಮ ಸ್ಥಳಗಳಿಗೇ ಪೆಟ್ಟುಕೊಡಲು ಬಳಸಲಾಗುವುದು.

ಚೊಟ್ಟಚನ್‌ ಮರ್ಮ ವಿದ್ಯೆ: ಮರ್ಮ ಸ್ಥಾನಗಳು ಎಂದರೆ ದೇಹದಲ್ಲಿನ ಶಕ್ತಿ ಕೇಂದ್ರಗಳು. ನಾಡಿ ಮತ್ತು ಚಕ್ರಗಳ ಸಹಯೋಗದಲ್ಲಿ 107 ಮರ್ಮಗಳಿವೆ. ಇದರಲ್ಲಿ 64 ಕೇಂದ್ರಗಳು ಹೆಚ್ಚು ಅಪಾಯಕಾರಿ. ಮಾರಕ ಕೇಂದ್ರಗಳಾದ ಅವುಗಳನ್ನು ಕುಲ ಮರ್ಮ ಎನ್ನಲಾಗುತ್ತದೆ. ಈ ಕೇಂದ್ರಗಳ ಮೇಲೆ ಆಕ್ರಮಣಗೊಳಿಸಿ ಶತ್ರುವನ್ನು ನಿಷ್ಕ್ರಿಯಗೊಳಿಸಬಹುದು.

****

ಸಮರ ಕಲೆಯ ಕುರಿತು ಸಾಮಾನ್ಯ ಜನರಲ್ಲಿರುವ ಪ್ರಶ್ನೆಗಳನ್ನು ಗುರೂಜಿ ರಂಜನ್‌ ಮುಲ್ಲರತ್ ಅವರಲ್ಲಿ ಕೇಳಿದಾಗ, ಪ್ರತಿಯೊಂದು ಪ್ರಶ್ನೆಗೂ ಸರಳವಾಗಿ ಇಲ್ಲಿ ಉತ್ತರಿಸಿದ್ದಾರೆ.

* ಕಳರಿ ಕೇವಲ ಕಸರತ್ತೇ?

ಇದು ಕೇವಲ ವ್ಯಾಯಾಮ ಅಥವಾ ಕಸರತ್ತು ಅಲ್ಲ. ಮನಸ್ಸು ಮತ್ತು ದೇಹದ ನಡುವೆ ಸಮತೋಲನ ಸಾಧಿಸುವ ವಿದ್ಯೆ.

* ಮರ್ಮ ಬಿಂದುಗಳೆಂದರೇನು? ಮನುಷ್ಯನ ದೇಹದಲ್ಲಿ ಎಷ್ಟಿರುತ್ತವೆ?

ಮಾನವ ದೇಹದಲ್ಲಿ 107 ಮರ್ಮ ಬಿಂದುಗಳು ಇರುತ್ತವೆ. ಅವು ಮಾನವನ ಸೂಕ್ಷ್ಮ ಶರೀರದ(subtle body) ಚಕ್ರಗಳಿಗೆ ಸಂಪರ್ಕ ಹೊಂದಿರುತ್ತವೆ. ಮರ್ಮ ಬಿಂದುಗಳು ಭೌತಿಕ ದೇಹದ ಭಾಗವಾದರೆ, ಚಕ್ರಗಳು ಸೂಕ್ಷ್ಮ ಶರೀರದಲ್ಲಿರುತ್ತವೆ.

* ಕಳರಿ ಅಭ್ಯಾಸಕ್ಕೂ ಮರ್ಮ ಬಿಂದುಗಳಿಗೆ ಏನು ಸಂಬಂಧ?

ಪ್ರಾಣಿಗಳ ಆಂಗಿಕ ಚಲನೆ ಅಭ್ಯಾಸ ಮಾಡಿದಾಗ ಆ ಕೇಂದ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ದೇಹದ ಎಲ್ಲ ನಾಡಿಗಳಲ್ಲೂ ಶಕ್ತಿಯ (ಎನರ್ಜಿ) ಸಂಚಯವಾಗುತ್ತದೆ.

* ಶಕ್ತಿಯ ಸಂಚಯ ಗೊತ್ತಾಗುವುದು ಹೇಗೆ?

ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಿದವರಿಗೆ ಇದರ ಅನುಭವ ಇರುತ್ತದೆ. ಧ್ಯಾನದ ಉತ್ತುಂಗದ ಸ್ಥಿತಿಯಲ್ಲಿ ಹೇಗೆ ವಿದ್ಯುತ್‌ ಪ್ರವಾಹ ಹರಿದ ಅನುಭವ ಆಗುತ್ತದೆಯೋ, ಅದೇ ರೀತಿಯಲ್ಲಿ ಕಳರಿ ಪಯಟ್‌ನಲ್ಲಿ ಉನ್ನತ ಸ್ಥಿತಿ ತಲುಪಿದವರಿಗೆ ಈ ರೀತಿ ಶಕ್ತಿ ಸಂಚಲನದ ಅನುಭವ ಆಗುತ್ತದೆ. ಒಂದು ಬಗೆಯ ಆನಂದ ಆವರಿಸುತ್ತದೆ.

* ಹಾಗಿದ್ದರೆ, ಅಲೌಕಿಕ ಅನುಭವಕ್ಕೂ ಕಾರಣವಾಗುತ್ತದೆಯೇ?

ಹೌದು, ನಿರಂತರ ಅಭ್ಯಾಸದಿಂದ ಶಕ್ತಿಯು ಮೂಲಾಧಾರದಿಂದ ಜಾಗೃತವಾಗಿ ಊರ್ಧ್ವಮುಖವಾಗಿ ಏರಿ ಸಹಸ್ರಾರವನ್ನು ಸೇರಿದಾಗಲೇ ಅಪರಿಮಿತ ಆನಂದದ ಅನುಭವ ಆಗುತ್ತದೆ. ಅದಕ್ಕೆ ಕಳರಿಯೂ ಒಂದು ಮಾರ್ಗ.

* ಸಮರ ಕಲೆ ಎಂದಿರಿ, ಸಮರಕ್ಕೂ ಅಲೌಕಿಕ ಅನುಭವಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?

ನಿಜ, ಹಿಂದೆ ಯುದ್ಧಗಳಲ್ಲಿ ಹೋರಾಡುವ ಯೋಧರಿಗೆ ಕಳರಿ ತರಬೇತಿ ನೀಡಲಾಗುತ್ತಿತ್ತು. ಇದರಲ್ಲಿ ಮುಖ್ಯವಾಗಿ ಎರಡು ಶಾಖೆಗಳಿವೆ. ಒಂದು ಯೋಧರಿಗಾಗಿಯೇ ತರಬೇತಿ ನೀಡುವಂತಹದ್ದು. ಇನ್ನೊಂದು ಸಾತ್ವಿಕ ಸ್ವರೂಪದ್ದು. ಸಾತ್ವಿಕ ಕಳರಿ ಇದು ಆಧ್ಯಾತ್ಮಿಕ ಮಾರ್ಗದ್ದಾಗಿದೆ. ಇದನ್ನು ಅನುಸರಿಸುವವರು ಕಳರಿ ಗುರುಗಳಾಗುತ್ತಾರೆ. ಇದು ನಮ್ಮೊಳಗಿನ ಆಧ್ಯಾತ್ಮಿಕ ಪಯಣಕ್ಕೆ ನೆರವಾಗುತ್ತದೆ.

* ಒಳಪಯಣದ ಅನುಭವ ಪಡೆಯಲು ಸಾಧ್ಯವೇ?

ಖಂಡಿತ. ನಮ್ಮ ಮತ್ತು ನಿಸರ್ಗದ ನಡುವಿನ ಬಾಂಧವ್ಯ ಅರಿತುಕೊಳ್ಳಲು, ಅದರೊಂದಿಗೆ ಒಂದಾಗಲು ಸಾಧ್ಯ. ಭೌತಿಕ ಶರೀರ ಮತ್ತು ಸೂಕ್ಷ್ಮ ಶರೀರದ ಅನುಸಂಧಾನ ನಮ್ಮ ಅರಿವಿಗೆ ಬರುತ್ತದೆ.

* ಮಹಿಳೆಯರಿಗೆ ಯಾವ ರೀತಿ ಸಹಾಯವಾಗುತ್ತದೆ?

ಇದನ್ನು ಕಲಿತರೆ ಮಹಿಳೆಯರಲ್ಲಿ ಅಪರಿಮಿತ ಆತ್ಮವಿಶ್ವಾಸ ಬೆಳೆಯುತ್ತದೆ. ಜಗತ್ತನ್ನು ದಿಟ್ಟವಾಗಿ ಎದುರಿಸಬಹುದು. ಎಂಥದ್ದೇ ಸನ್ನಿವೇಶದಲ್ಲೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯ.

* ಯಾರೆಲ್ಲ ಇದನ್ನು ಕಲಿಯಬಹುದು. ಅನುಸರಿಬೇಕಾದ ನಿಯಮಗಳೇನು?

6 ರಿಂದ 60 ವರ್ಷದ ಒಳಗಿನವರು ಕಲಿಯಬಹುದು. ಸರಳ, ಆರೋಗ್ಯಕರ ಅಭ್ಯಾಸ ಇರಬೇಕು. ಉತ್ತಮ ಆಹಾರ ಅಭ್ಯಾಸ ಮತ್ತು ಪಥ್ಯವನ್ನು ಅನುಸರಿಸಿದಾಗ ಮಾತ್ರ ಅದರ ಪ್ರಯೋಜನ ಲಭಿಸುತ್ತದೆ. ಹಲವು ಕಳರಿ ಗುರುಗಳು ಎಂಬತ್ತು– ತೊಂಬತ್ತು ವರ್ಷಗಳವರೆಗೆ ಆರೋಗ್ಯಕರ ಜೀವನ ನಡೆಸಿದ್ದಾರೆ.

ಕಳರಿ ಅಖಾಡ ಹೀಗಿರುತ್ತದೆ...

ಭೂಮಿಯನ್ನು ಆರು ಅಡಿಗಳಷ್ಟು ಆಳದಲ್ಲಿ ಚೌಕಾಕಾರದಲ್ಲಿ ಅಗೆದು (42x22 ಅಡಿ ವಿಸ್ತೀರ್ಣ) ನಿರ್ಮಿಸಲಾಗುತ್ತದೆ. ನೆಲಕ್ಕೆ ಕೆಮ್ಮಣ್ಣು ಮತ್ತು ಇಟ್ಟಿಗೆ ಬಳಸಿ ಅಖಾಡ ಮಾಡುತ್ತಾರೆ. ಮಲೆಯಾಳಿ ಭಾಷೆಯಲ್ಲಿ ಇದಕ್ಕೆ ‘ಕಳರಿ’ ಎನ್ನುತ್ತಾರೆ. ದ್ವಾರ ಪೂರ್ವಾಭಿಮುಖ. ನೈರುತ್ಯ ಮೂಲೆಯಲ್ಲಿ ಕಳರಿಯ ರಕ್ಷಕ ದೈವ ನೆಲೆಸಿರುವ ಏಳು ಮೆಟ್ಟಿಲುಗಳ ‘ಪೂತ’ ಇರುತ್ತದೆ. ಈ ಏಳೂ ಮೆಟ್ಟಿಲುಗಳು ಪ್ರತಿಯೊಬ್ಬ ವ್ಯಕ್ತಿಯೂ ಸಾಧನೆಯಿಂದ ಪಡೆಯಬಹುದಾದ ಏಳು ಸಾಮರ್ಥ್ಯಗಳನ್ನು ಪ್ರತಿನಿಧಿಸುತ್ತವೆ. ಅವುಗಳೆಂದರೆ, ಶಕ್ತಿ, ತಾಳ್ಮೆ, ಆಜ್ಞಾ ಶಕ್ತಿ, ಮುದ್ರೆ, ಕಲಿಕೆ, ಅಭಿವ್ಯಕ್ತಿ, ಶಬ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT