ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ– ಗಿರಿಭುಜಸ್ಥಾನ

Published 6 ಜುಲೈ 2024, 21:17 IST
Last Updated 6 ಜುಲೈ 2024, 21:17 IST
ಅಕ್ಷರ ಗಾತ್ರ

ಗಿರಿಭುಜಸ್ಥಾನ

ಗಿರಿಭುಜಸ್ಥಾನ (ನಾ), ಬೆಟ್ಟದ ಭುಜದಂತಹ ಪ್ರದೇಶ, ಪರ್ವತದ ಮೇಲುಭಾಗ.

(ಗಿರಿ + ಭುಜ + ಸ್ಥಾನ)

ಲಕ್ಷ್ಮಣನು ಚಿತ್ರಕೂಟ ಪರ್ವತದ ಮೇಲುಭಾಗದಲ್ಲಿ ವಜ್ರರೋಮ ಮಹರ್ಷಿಗಳ ಕೃಪೆಯಿಂದ ಮತ್ತು ಅವರ ಶಿಷ್ಯರ ಸಹಾಯದಿಂದ ಪರ್ಣಶಾಲೆಯನ್ನು ಕಟ್ಟಿದನು. ಅದು ದೂರ ವಿಸ್ತಾರ ದೃಶ್ಯದ ಅಧ್ಯಕ್ಷತಾ ಸ್ಥಾನವಾಗಿತ್ತು. ಅಂತಹ ಎತ್ತರದ ಬೆಟ್ಟದ ಭುಜದಂತಹ ಪ್ರದೇಶವನ್ನು ಕುವೆಂಪು ಅವರು ‘ಗಿರಿಭುಜಸ್ಥಾನ’ ಎಂದು ವಿಶೇಷಾರ್ಥಪದ ಸೃಷ್ಟಿಸಿ ಪ್ರಯೋಗಿಸಿದ್ದಾರೆ.

ಕಟ್ಟಿದನು ಸೌಮಿತ್ರಿ

ಮಲೆಯ ಬಿರುಮಳೆಗಾಳಿಗಳಿಗೆ ಮಲೆತುಳಿವಂತೆ,

ಪರ್ಣಶಾಲೆಯನೊಂದನೆತ್ತರದೊಳಾ ಗಿರಿಯ

ದರ್ಶನಸ್ಥಾನಮುಂ ದೂರವಿಸ್ತಾರದಾ

ದೃಶ್ಯದಾಸ್ಥಾನದಧ್ಯಕ್ಷತಾ ಸ್ಥಾನಮುಂ

ತಾನೆನಿಪ ಗಿರಿಭುಜಸ್ಥಾನದಲಿ. 

ಗುರುಗಾತ್ರ

ಗುರುಗಾತ್ರ (ನಾ). ದೊಡ್ಡದಾಗಿರುವಿಕೆ; ದೊಡ್ಡ ಆಕಾರವುಳ್ಳದು

(ಗುರು + ಗಾತ್ರ)

ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಬಂದು ಗಿರಿನಿತಂಬದಲ್ಲಿ ಜಟಾಯುವಿನ ನಖಾಘಾತಕ್ಕೆ, ಕೆದರಿ ಚೆಲ್ಲಿದ ರಾವಣನ ವಿಮಾನದ ಮಣಿಗಳನ್ನು ಕಾಣುವರು. ಅನಂತರ ಓಡಿ ನೋಡಲು ಅವರಿಗೆ ದೊಡ್ಡ ಆಕಾರದ ನಾಲ್ಕೈದಾರು ಗರಿಗಳು ಕಾಣುವವು. ಅಲ್ಲಿ ಜಟಾಯು ರೆಕ್ಕೆ ಕತ್ತರಿಸಿ ಬಿದ್ದು ಮಡುಗಟ್ಟಿದ ರಕ್ತದ ಕೆಸರಿನಲ್ಲಿ ಆಯುಷ್ಯ ಮುಗಿದ ಸ್ಥಿತಿಯಲ್ಲಿರುತ್ತದೆ.

ಕವಿಯು ಅದರ ರೆಕ್ಕೆಯನ್ನು ‘ಗುರುಗಾತ್ರ’ ಎಂಬ ಪದದಿಂದ ವರ್ಣಿಸುತ್ತ ಜಟಾಯುವಿನ ಅಪಾರ ದೇಹದ ಕಲ್ಪನೆಯನ್ನು ಓದುಗರಿಗೆ ಉಂಟಾಗುವಂತೆ ಮಾಡಿದ್ದಾರೆ.

ಓಡಿದರ್; ನೋಡಿದರ್;

ಕಂಡರು ಜಟಾಯು ಪದಗದೆಯ ಘಾತಕೆ ಕೆಡೆದ

ಪುಷ್ಪಕದ ಕನಕ ಲಘುಘಂಟಿಕಾ ಸ್ತಬಕಮಂ,

ಮತ್ತಂತೆ ಗುರುಗಾತ್ರದೊಂದೆರಳ್ ಮೂರ್ ನಾಲ್ಕು

ಐದಾರು ಗರಿಗಳಂ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT