ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ನೆನಪಿಗೆ ಕಥನದ ಪ್ರೀತಿ

Last Updated 1 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಐಸಿಯುನಿಂದ ಧಾವಿಸಿಬಂದ ಆ ವೈದ್ಯರು ‘ನಿಮ್ಮ ಹೆಂಡತಿಗೆ ಏನಾದರೂ ಹೇಳುವುದಿದ್ದರೆ ಹೇಳಿಬಿಡಿ’ ಎಂದು ಆ ಯುವಕನಿಗೆ ಹೇಳಿದರು. ಗಂಡನ ಕಣ್ಣಲ್ಲಿ ಕಣ್ಣಿಟ್ಟು ಕೊನೆಯುಸಿರೆಳೆಯಬೇಕು ಎಂದು ಕಾದಿದ್ದ ಆಕೆ ‘ನೀನೊಬ್ಬ ಅತ್ಯುತ್ತಮ ಗಂಡ’ ಎಂದಳು. ಹಣೆಗೆ ಹೂಮುತ್ತನ್ನಿತ್ತ ಗಂಡ, ‘ನೀನು ಅತ್ಯುತ್ತಮ ಹೆಂಡತಿ’ ಎಂದು ಹೇಳಿ, ಮುಚ್ಚಿದ ಕಣ್ಣು ತೆರೆಯುವಷ್ಟರಲ್ಲಿ ಆಕೆಯ ಗುಟುಕು ಜೀವ ಹಾರಿಹೋಗಿತ್ತು. ಬೆಸೆದುಕೊಂಡಿದ್ದ ಕೈಬೆರಳುಗಳು ಸಡಿಲಗೊಂಡವು.

‘ಅಮೆಜಾನ್‌’ನ ‘ಬೆಸ್ಟ್‌ ಸೆಲ್ಲಿಂಗ್ ಆಥರ್‌’ (ಅತ್ಯಧಿಕ ಮಾರಾಟವಾಗುವ ಪುಸ್ತಕಗಳ ಲೇಖಕ), ಪುಣೆಯ ಸಾಫ್ಟ್‌ವೇರ್‌ ಎಂಜಿನಿಯರ್‌ ಅಜಯ್‌ ಕೆ.ಪಾಂಡೆ ಲೇಖಕನಾಗಲು ನಿಮಿತ್ತವಾದ ಘಟನೆಯಿದು.

ಪತ್ನಿ ಭಾವನಾ ಪ್ರೀತಿಯ ನೆನಪಿನ ಅಮಲಿನಲ್ಲೇ ಅವರು ಬರೆದ ಪುಸ್ತಕ. ‘ಯೂ ಆರ್ ದ ಬೆಸ್ಟ್‌ ವೈಫ್‌’. ಎರಡನೆಯದು ‘ಹರ್‌ ಲಾಸ್ಟ್‌ ವಿಶ್‌’. ಈ ಎರಡೂ ಪುಸ್ತಕಗಳು ಅವರಿಗೆ ‘ಬೆಸ್ಟ್‌ ಸೆಲ್ಲಿಂಗ್ ಆಥರ್‌’ ಎಂಬ ಹೆಗ್ಗಳಿಕೆ ತಂದುಕೊಟ್ಟವು. ಕಳೆದ ವಾರಾಂತ್ಯ ಅವರ ಮೂರನೆಯ ಪುಸ್ತಕ ‘ಎ ಗರ್ಲ್‌ ಟು ರಿಮೆಂಬರ್‌’ ಸಪ್ನ ಬುಕ್‌ ಹೌಸ್‌ನ ರೆಸಿಡೆನ್ಸಿ ರಸ್ತೆ ಶಾಖೆಯಲ್ಲಿ ಬಿಡುಗಡೆಯಾಯಿತು. ಈ ವೇಳೆ ‘ಮೆಟ್ರೊ’ ಜೊತೆ ಅಜಯ್‌ ಮಾತನಾಡಿದರು.

‘ಯೂ ಆರ್‌ ದ ಬೆಸ್ಟ್‌ ವೈಫ್‌– ಎ ಟ್ರೂ ಲವ್‌ ಸ್ಟೋರಿ’ ಆತ್ಮಕತೆಯ ಶೈಲಿಯಲ್ಲಿದೆ ಅಲ್ವೇ?

ಈ ಪುಸ್ತಕದಲ್ಲಿ ನನ್ನ ಬಾಲ್ಯದಿಂದ ಯೌವ್ವನದವರೆಗಿನ ಘಟನೆಗಳನ್ನು ವಿವರಿಸಿದ್ದೇನೆ. ಆತ್ಮಕತೆಯ ಚೌಕಟ್ಟಿನಲ್ಲಿ ಬರೆದಿಲ್ಲ. ಮಧ್ಯಮ ವರ್ಗದ ಕುಟುಂಬದ ಬಡತನ, ಬಡತನದಲ್ಲೇ ಎಂಜಿನಿಯರಿಂಗ್‌ ಓದುವಾಗ ಪಟ್ಟ ಕಷ್ಟ, ಕೆಲಸ ಸಿಕ್ಕಿದ ಆರಂಭದಲ್ಲೇ ಭಾವನಾಳನ್ನು ನೋಡಿದ್ದು, ಅವಳ ಸ್ನೇಹ ಗಿಟ್ಟಿಸಿಕೊಳ್ಳಲು ನಾನು ಮಾಡಿದ ತರಲೆಗಳು, ಅವಳನ್ನು ಒಲಿಸಿಕೊಂಡ ಪರಿಯನ್ನು ವಿವರಿಸಿದ್ದೇನೆ. ಭಾವನಾ ಮತ್ತು ನಾನು ಬಹಳ ಬೇಗನೆ ಸ್ನೇಹದ ಪರಿಧಿ ದಾಟಿಬಿಟ್ಟೆವು. ಅವಳು ಕೆಳಜಾತಿಯವಳು ಎಂಬ ಕಾರಣಕ್ಕೆ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ತಂದೆ ದೂರವಾದರು. ಕೆಲವು ವರ್ಷ ಲಿವ್‌–ಇನ್‌ ರಿಲೇಷನ್‌ನಲ್ಲಿದ್ದೆವು.ಆದರೆ ಅವಳ ಸಮಾಧಾನಕ್ಕೋಸ್ಕರ ತಾಳಿ ಕಟ್ಟಿ ಸಮಾಜದ ಕಣ್ಣಿನಲ್ಲಿ ಗಂಡ ಹೆಂಡತಿಯಾದೆವು. ಇವೆಲ್ಲವೂ ‘ಯೂ ಆರ್‌ ದ ಬೆಸ್ಟ್‌ ವೈಫ್‌’ನಲ್ಲಿವೆ. ಅದು ಅವಳಿಗೆ ನಾನು ಹೇಳಿದ ಕೊನೆಯ ಮಾತು. ಅದಕ್ಕಾಗಿ ಅದೇ ಶೀರ್ಷಿಕೆ ಕೊಟ್ಟೆ.

ಬರವಣಿಗೆ, ಓದು, ಧ್ಯಾನ, ಸಂಗೀತಕ್ಕೆ ಚಿಕಿತ್ಸಕ ಶಕ್ತಿಯಿದೆ. ನಿಮ್ಮ ಅನುಭವವೇನು?

ಬರವಣಿಗೆ ನನ್ನನ್ನು ಸಾಯದಂತೆ ಉಳಿಸಿಕೊಂಡ ಮ್ಯಾಜಿಕ್‌ ಪವರ್‌. ನನ್ನನ್ನು ಆವರಿಸಿಕೊಂಡಿದ್ದ ನೋವನ್ನೆಲ್ಲಾ ಅಕ್ಷರ ರೂಪಕ್ಕಿಳಿಸದೇ ಹೋಗಿದ್ದರೆ ನಾನು ಹುಚ್ಚನಾಗಿಬಿಡುತ್ತಿದ್ದೆ. ಭಾವನಾಳನ್ನು ಕಳೆದುಕೊಂಡಾಗ ಶೂನ್ಯ ಮತ್ತು ಅಂಧಕಾರ ತುಂಬಿಕೊಂಡಿತ್ತು. ವಾಸ್ತವವಾಗಿ, ನಾನು ಅನೇಕ ವರ್ಷಗಳಿಂದ ಬರೆದಿಟ್ಟಿದ್ದ ಡೈರಿಯನ್ನೇ ಸ್ವಲ್ಪ ವಿಸ್ತರಿಸಿ ಬರೆಯುತ್ತಾ ಹೋದೆ. ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶ ನನ್ನಲ್ಲಿರಲಿಲ್ಲ. ಸ್ನೇಹಿತರು ಸಲಹೆ ನೀಡಿದ ನಂತರ ಆ ಕುರಿತು ಯೋಚಿಸಿದ್ದೆ. ಬರವಣಿಗೆ ನನಗೆ ಧ್ಯಾನವಿದ್ದಂತೆ.

‘ಯೂ ಆರ್ ದ ಬೆಸ್ಟ್‌ ವೈಫ್‌’ ಕನ್ನಡಕ್ಕೆ ಭಾಷಾಂತರವಾಗುತ್ತಿದೆ. ಆ ಕಾರಣಕ್ಕೆ ನಿಮ್ಮ ಹೊಸ ಪುಸ್ತಕವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೀರಾ?

ಕನ್ನಡಕ್ಕೆ ಭಾಷಾಂತರಿಸುತ್ತಿರುವುದು ನನ್ನ ಪುಸ್ತಕಗಳ ಪ್ರಕಾಶಕರಾದ ‘ಸೃಷ್ಟಿ ಪಬ್ಲಿಷರ್ಸ್‌’ ನಿರ್ಧಾರ. ‘ಎ ಗರ್ಲ್‌ ಟು ರಿಮೆಂಬರ್‌’ ಇಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣ ಬೆಂಗಳೂರಿನಲ್ಲಿ ನಾನು ಕಂಡ ಪುಸ್ತಕ ಪ್ರೀತಿ. ಇಲ್ಲಿನ ಓದುಗರು ಪುಸ್ತಕದ ಬಗ್ಗೆ ತಿಳಿದುಕೊಂಡು ಖರೀದಿಸುತ್ತಾರೆ. ನನ್ನ ಎರಡೂ ಪುಸ್ತಕಗಳಿಗೆ ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಪಂದನ ಸಿಕ್ಕಿತ್ತು. ಹಾಗಾಗಿ ಹೊಸ ಪುಸ್ತಕವನ್ನು ಇಲ್ಲಿ ಬಿಡುಗಡೆ ಮಾಡಲು ‘ಸೃಷ್ಟಿ’ ಮತ್ತು ನಾನು ತೀರ್ಮಾನಿಸಿದೆವು.

‘ಎ ಗರ್ಲ್‌ ಟು ರಿಮೆಂಬರ್‌’ ಫಿಕ್ಷನ್‌ ಕತೆಯನ್ನೊಳಗೊಂಡಿದೆ ಅಲ್ವೇ?

ಬರವಣಿಗೆಯನ್ನು ಬಿಟ್ಟು ಇರಲಾರದ ಸ್ಥಿತಿಗೆ ಬಂದಿದ್ದೇನೆ. ಈ ಪುಸ್ತಕಕ್ಕಾಗಿ ನಾನು ಸಾಕಷ್ಟು ಅಧ್ಯಯನಪೂರ್ಣ ಪ್ರವಾಸ ಮಾಡಿದ್ದೇನೆ. ಫಿಕ್ಷನ್‌ ಮೂಲಕ ಬರವಣಿಗೆಯ ಇನ್ನೊಂದು ಆಯಾಮಕ್ಕೆ ತೆರೆದುಕೊಂಡಿದ್ದೇನೆ. ಇನ್ನು ಮುಂದೆ ಬರವಣಿಗೆಯಲ್ಲೇ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT