ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ಬೆಳಕಿನಲ್ಲೂ ಚಿತ್ರ

chowakttu
Last Updated 11 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನಾಯಿಮರಿಯನ್ನು ಹೋಲುವ ಗೊಂಬೆಯೊಂದಿಗೆ ಮುದ್ದಾದ ಮಗುವಿನ ‘ಖಾಸಗಿ’ಯಾದ ಈ ಸುಂದರ ಕ್ಷಣವೊಂದನ್ನು ಇತ್ತೀಚೆಗೊಂದು ಮಧ್ಯಾಹ್ನ ಕಬ್ಬನ್ ಪಾರ್ಕ್‌ನ ಹಸಿರು ಹುಲ್ಲು ಹಾಸಿನಮೇಲೆ ಕ್ಯಾಮೆರಾದಲ್ಲಿ ಸೆರೆಹಿಡಿದವರು ಜಯನಗರದ 9ನೇ ಬ್ಲಾಕ್ ನಿವಾಸಿ, ಐ.ಬಿ.ಎಂ ಇಂಡಿಯಾ ಸಂಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಇನ್ವೆಸ್ಟಿಗೇಟರ್ ಆಗಿರುವ ರಾಘವೇಂದ್ರ ಪ್ರಸಾದ್.

ಎಚ್. ಪಿ. ವೈವಿಧ್ಯ ಆಯಾಮದ ಫೋಟೋ ಜರ್ನಲಿಸಂ, ಕ್ಯಾಂಡಿಡ್, ಭಾವಪೂರ್ಣ ಅಭಿವ್ಯಕ್ತಿಯ ಮಕ್ಕಳ ಪೋರ್ಟ್‌ರೇಟ್, ಇತ್ಯಾದಿ ಛಾಯಾಗ್ರಹಣ ವಿಭಾಗಗಳಲ್ಲಿ ಹವ್ಯಾಸವನ್ನು ಹಿಂದಿನ ಫಿಲ್ಂ ಕಾಲದಿಂದಲೂ ಬೆಳೆಸಿಕೊಂಡಿರುವ ಅವರು, ಇಲ್ಲಿ ಬಳಸಿದ ಕ್ಯಾಮೆರಾ, ನಿಕಾನ್ ಡಿ 3100 ಜೊತೆಗೆ 70 -300 ಎಂ.ಎಂ. ಜೂಂ ಲೆನ್ಸ್ . ಅವರ ಕ್ಯಾಮೆರಾದ ಎಕ್ಸ್ಪೋಶರ್ ವಿವರ ಇಂತಿವೆ: 155 ಎಂ.ಎಂ. ಫೋಕಲ್ ಲೆಂಗ್ತ್ ನಲ್ಲಿ ಅಪರ್ಚರ್ ಎಫ್ 5.6 ಶಟರ್ ವೇಗ 1/ 500 ಸೆಕೆಂಡ್, ಐ.ಎಸ್.ಒ. 220 , ಫ್ಲಾಶ್ ಮತ್ತು ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳ ವಿಶ್ಲೇಷಣೆ ಇಂತಿದೆ:ಅಪರ ಮಧ್ಯಾಹ್ನದ ಸೂರ್ಯನ ಬೆಳಕಿನ ಸಂದರ್ಭಕ್ಕೆ ಪೂರಕವಾದ ಕ್ಯಾಮೆರಾ ಎಕಪೋಶರ್ ನ ತಾಂತ್ರಿಕ ಅಳವಡಿಕೆಗಳೆಲ್ಲವೂ ದೃಶ್ಯ ದಾಖಲೆಯ ದೃಷ್ಟಿಯಿಂದ ಇಲ್ಲಿ ಸಮರ್ಪಕವಾಗಿವೆ. ದೊಡ್ಡಳತೆಯ ಅಪಾರ್ಚರ್ ಮತ್ತು ಉತ್ತಮ ಜೂಂ ಫೋಕಲ್ ಲೆಂಗ್ತ್ ದೆಸೆಯಿಂದ ಮುಖ್ಯವಸ್ತು ಸ್ಫುಟವಾಗಿ ಫೋಕಸ್‌ಗೊಂಡು ಹಿನ್ನೆಲೆಯು ಮಂದವಾಗಿ ಮೂಡಿರುವುದು ಪರಿಣಾಮಕಾರಿಯಾಗಿದೆ.

ಆದರೆ ಮೇಲಿನಿಂದ ಬೀಳುತ್ತಿರುವ ನೇರವಾದ ಪ್ರಧಾನ ಬೆಳಕು ( ಕೀ ಲೈಟ್) ಪ್ರಖರವಾಗಿರುವುದರಿಂದ (ಹಾರ್ಷ್), ಮಗುವಿನ ಕಣ್ಣು, ಗಲ್ಲ ಇತ್ಯಾದಿ ಭಾಗಗಳು ಕಡು ನೆರಳಿನಿಂದ (ಡಾರ್ಕ್ ಶೇಡ್) ಕೂಡಿದ್ದು, ಆ ಭಾಗಗಳನ್ನು ಕೊಂಚವಾದರೂ ಕಾಣಿಸುವಂತೆ ಮೂಡಿಸಲು ಬೆಳಕು ಇತರ ಭಾಗಗಳಿಂದ , ಮುಖ್ಯವಾಗಿ ಹುಲ್ಲುಹಾಸಿನಿಂದ ಪ್ರತಿಫಲನವಾಗಿ (ರಿಫ್ಲೆಕ್ಲೆಡ್ ಲೈಟ್) ಬಾರದಿರುವುದರಿಂದ, ಚಿತ್ರ ಅತಿ ಹೆಚ್ಚಿನ ಕಾಂತಿ ವೈದೃಶ್ಯವನ್ನು (ಕಾಂಟ್ರಾಸ್ಟ್) ಹೊಂದುವಂತಾಗಿದೆ. ಹಾಗಾಗಿ, ನೋಡುಗನ ಕಣ್ಣಿಗೆ , ಮುಗುವಿನ ಮಧುರವಾದ ಭಾವನೆಗಳನ್ನು ಗುರುತಿಸಬಲ್ಲ ಸಾಧ್ಯತೆ ಊಹೆಗಷ್ಟೇ ಹೆಚ್ಚು ಸೀಮಿತವಾಗಿದೆ.

ಸಂಜೆ ಅಥವಾ ಮುಂಜಾನೆಯ ಸೂರ್ಯನ ಓರೆಯಾದ ಬೆಳಕು ಈ ಬಗೆಯ ಚಿತ್ರಣಕ್ಕೆ ಹೆಚ್ಚು ಸಹಕಾರಿ. ಅಥವಾ ಆಚೀಚೆ ನೆರಳಿನ ಜಾಗ( ಶೇಡೆಡ್ ) ಹುಡುಕಿ ಮಗುವನ್ನು ಅಲ್ಲಿ ಆಡಲು ಬಿಟ್ಟು, ಸರಿಯಾದ ವರ್ಣ ಪ್ರಸರಣವನ್ನು ( ಟೋನಲ್ ಡಿಸ್ಟ್ರಿಬ್ಯೂಶನ್) ಚೌಕಟ್ಟಿನಿಡೀ ಮೂಡಿಸುವಂತೆ ದೂರದಿಂದ ಟ್ರೈಪಾಡ್ ಬಳಸಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಉತ್ತಮವಾದ ಕ್ರಮ.

ಅಲ್ಲಿ ಮಗುವನ್ನು ಕುಳ್ಳಿರಿಸಿದಂತಾಗಿ, ಅದು ಅಸಹಜವೆಂದೆನಿಸುವ ಅಪಾಯ ತಪ್ಪಿದ್ದಲ್ಲ. ಈ ಚಿತ್ರದಲ್ಲಿ ಮಗುವಿನ ಹತ್ತಿರದಲ್ಲಿ ಹಿಂದೆ ಯಾರೋ ಕುಳಿತಂತಿದೆ ಮತ್ತು ತುಸು ದೂರದಲ್ಲಿ ಜನರ ಸಂಚಾರವೂ ಕಾಣಿಸುತ್ತಿದೆ. ಹಾಗಾಗಿ ಸಹಜತೆಗೆ ( ಕ್ಯಾಂಡಿಡ್ ) ತುಸು ಹತ್ತಿರವಾದ ಪ್ರಯತ್ನ ಇದಾಗಿದೆಯೆನ್ನ ಬಹುದು.

ಕಲಾತ್ಮಕವಾದ ಅಂಶವನ್ನು ಗಮನಿಸುವುದಾದರೆ, ಬಿಚ್ಚು ಕಣ್ಣಿನ ನಾಯಿಮರಿ-ಬೊಂಬೆಯೊಂದಿಗೆ ಆತ್ಮೀಯವಾಗಿ ದೃಷ್ಟಿ ನೆಟ್ಟು ಏನೋ ಮಾತನಾಡುತ್ತ ಸಂವಹನದಲ್ಲಿ ತನ್ನದೇ ಲೋಕದಲ್ಲಿ ತೊಡಗಿರುವಂತಹ ಮಧುರ ಭಾವನೆಗಳನ್ನು ನೋಡುಗನ ಮನದಲ್ಲಿ ಮೂಡಿಸುವಲ್ಲಿ ಈ ಚಿತ್ರ ಉತ್ತಮ ಸಂಯೋಜನೆಯಿಂದ ಸಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT