ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಷ: ಕೋಟಿ ಕೊಡುಗೈ ‘ರವಿ ಮಾಮ’

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಇವರು ಹಾಕುವ ‘ವೇಷ’ ಮನರಂಜನೆಯಷ್ಟೆ ಅಲ್ಲ; ಮಾನವೀಯತೆಯ ತುಡಿತ. ಈ ವೇಷಗಾರನ ಜೋಳಿಗೆಗೆ ದೇಣಿಗೆ ನೀಡುವ ಅದೆಷ್ಟೋ ಕೈಗಳು, ಬಡ ಮಕ್ಕಳ ಕಣ್ಣೀರು ಒರೆಸಿ ಅವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿವೆ.

ಮಕ್ಕಳ ಅಚ್ಚುಮೆಚ್ಚಿನ ಈ ರವಿ ಮಾಮ, ಎಂಟು ವರ್ಷಗಳ ಅವಧಿಯಲ್ಲಿ ಒಟ್ಟು 16 ದಿನ ವೇಷ ಹಾಕಿ ಸಂಗ್ರಹಿಸಿರುವ ದೇಣಿಗೆ ಕೋಟಿ ದಾಟಿದೆ (₹1.13 ಕೋಟಿ). ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸುತ್ತಲಿನ 113 ಬಡ ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ಈ ಹಣ ವಿನಿಯೋಗಿಸಿದ್ದಾರೆ.

‘ಕೋಟ್ಯಧೀಶ ವೇಷಗಾರ’ ರವಿ ಕಟಪಾಡಿ ಶ್ರೀಮಂತರೇನಲ್ಲ. ಅವರದ್ದು ಕಟ್ಟಡ ನಿರ್ಮಾಣದ ಸೆಂಟ್ರಿಂಗ್‌ ಕಾರ್ಮಿಕ ವೃತ್ತಿ. ಉಡುಪಿ ಜಿಲ್ಲೆಯ ಕಟಪಾಡಿ ಹುಟ್ಟೂರು. ವಯಸ್ಸಾದ ತಾಯಿ ದೇಯಿ, ಅಣ್ಣ ಶಂಕರ–ಅತ್ತಿಗೆ, ತಮ್ಮ ಚಂದ್ರಶೇಖರ ಅವರೊಟ್ಟಿಗೆ ವಾಸ. ಸಹೋದರರಿಬ್ಬರೂ ಸೆಂಟ್ರಿಂಗ್‌ ಕಾರ್ಮಿಕರು. ತಂದೆ ಬಿ.ಗೋವಿಂದ ಏಳು ವರ್ಷಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. 

ಕೃಷ್ಣ ಜನ್ಮಾಷ್ಟಮಿ ಮತ್ತು ಉಡುಪಿ ಕೃಷ್ಣ ಮಠದಲ್ಲಿ ಮರುದಿನ ನಡೆಯುವ ವಿಟ್ಲಪಿಂಡಿ ಉತ್ಸವದ ವೇಳೆ ಹಲವರು ವೇಷ ಹಾಕಿಕೊಂಡು ಮನರಂಜನೆ ನೀಡುತ್ತಾರೆ. ಕೆಲವರು ಈ ವೇಳೆ ದೇಣಿಗೆ ಸಂಗ್ರಹಿಸಿ ಅದನ್ನು ಅಗತ್ಯ ಇರುವವರಿಗೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಆರಂಭದಲ್ಲಿ ಮನರಂಜನೆಗಾಗಿ ರವಿ ಸಹ ವೇಷ ಹಾಕಲಾರಂಭಿಸಿದರು. 2014ರಿಂದ ದೇಣಿಗೆ ಸಂಗ್ರಹ ಆರಂಭಿಸಿದರು. ಇವರು ವರ್ಷಕ್ಕೆ ಒಂದು ಬಾರಿ ಮಾತ್ರ ವೇಷ ಹಾಕುವುದು. ಒಮ್ಮೆ ಹಾಕಿದ ವೇಷ ಕೃಷ್ಣ ಜನ್ಮಾಷ್ಟಮಿ ಮತ್ತು ಅದರ ಮರುದಿನವಷ್ಟೆ ಇರುತ್ತದೆ. ಎರಡು ದಿನ ಕಟಪಾಡಿ, ಉಡುಪಿ, ಶಿರ್ವ, ಮಲ್ಪೆ, ಕಾಪು ಭಾಗಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸುತ್ತಾರೆ. ಸಂಗ್ರಹವಾದ ಒಟ್ಟು ಹಣವನ್ನು, ಪ್ರತಿ ವರ್ಷ ಕಟಪಾಡಿಯ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿ ಫಲಾನುಭವಿ ಮಕ್ಕಳ ಪೋಷಕರಿಗೆ ಹಸ್ತಾಂತರಿಸುತ್ತಾರೆ. ರವಿಯ ಸಮಾಜಮುಖಿ ಕಾರ್ಯಕ್ಕೆ ‘ರವಿ ಕಟಪಾಡಿ ಫ್ರೆಂಡ್ಸ್’ ಸಂಘಟನೆ ಬೆನ್ನೆಲುಬಾಗಿ ನಿಂತಿದೆ.

‘‘ಪ್ರತಿ ವರ್ಷ ಹಾಕುವ ವೇಷದಲ್ಲೂ ಹೊಸತನ ಇರುತ್ತದೆ. ಮಿತ್ರರು ಯುಟ್ಯೂಬ್‌ಗಳಲ್ಲಿ ಹುಡುಕಿ, ಹಾಲಿವುಡ್‌ ಸಿನಿಮಾಗಳಲ್ಲಿಯ 10–15 ಪಾತ್ರಗಳನ್ನು ಕಳಿಸುತ್ತಾರೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆ ಪಾತ್ರದ ಅಲಂಕಾರದ ಬಗ್ಗೆ ಕಲಾವಿದರೊಂದಿಗೆ ಚರ್ಚಿಸುತ್ತೇನೆ. ಮಂಗಳೂರು, ಹೈದರಾಬಾದ್‌ ಮತ್ತಿತರೆಡೆಯ ಕಲಾವಿದರು ಈ ಪಾತ್ರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು, ನನಗೆ ಸಿಂಗಾರ ಮಾಡುತ್ತಾರೆ. ನನ್ನ ವೇಷದ ಆಯ್ಕೆ ಗೋಪ್ಯವಾಗಿರುತ್ತದೆ. ನನಗೆ ವೇಷ ತೊಡಿಸುತ್ತಿದ್ದಂತೆಯೇ ಫೋಟೊಗಳು ವೈರಲ್‌ ಆಗಲಾರಂಭಿಸುತ್ತವೆ. ಕಳೆದ ವರ್ಷ ಮಾಡಿದ ‘ಡಾರ್ಕ್‌ ಒನ್ ಎಲೈಟ್’ ಎಂಬ ಹಾಲಿವುಡ್ ವೇಷಕ್ಕೆ ಹೊರದೇಶಗಳಿಂದ ವಸ್ತುಗಳನ್ನು ತರಿಸಬೇಕಾಯಿತು. ಅದಕ್ಕಾಗಿ ₹2.12 ಲಕ್ಷ ವೆಚ್ಚ ಮಾಡಿದೆವು. ಪ್ರತಿ ವರ್ಷವೂ ನನ್ನ ವೇಷಕ್ಕೆ ತಗಲುವ ಹಣವನ್ನು ನನ್ನ ದುಡಿಮೆಯಲ್ಲಿ ಕೂಡಿಟ್ಟದ್ದರಲ್ಲಿ ಹಾಗೂ ಮಿತ್ರರು ಸೇರಿ ಭರಿಸುತ್ತೇವೆ’’ ಎಂದು ರವಿ ತಮ್ಮ ವೇಷದ ಜನಪ್ರಿಯತೆಯ ಮರ್ಮವನ್ನು ತೆರೆದಿಟ್ಟರು.

‘ಕೃಷ್ಣ ಜನ್ಮಾಷ್ಟಮಿಗೆ ತಿಂಗಳು ಇರುವಾಗಲೇ ಮಿತ ಆಹಾರ ಸೇವಿಸಲು ಆರಂಭಿಸುತ್ತೇನೆ. ನಾನು ಹಾಕುವ ಪಾತ್ರದ ಅಭಿನಯ ಕಲಿತುಕೊಳ್ಳುತ್ತೇನೆ. ಜನ್ಮಾಷ್ಟಮಿ ಹಿಂದಿನ ರಾತ್ರಿ 9 ಗಂಟೆಗೆ ವೇಷ ಹಾಕುವ ಕೆಲಸವನ್ನು ಕಲಾವಿದರು ಆರಂಭಿಸಿದರೆ, ಅದು ಮುಗಿಯುವುದು ಮರುದಿನ ಬೆಳಿಗ್ಗೆಯೇ. ದೇಹಕ್ಕೆ ಪೇಂಟ್‌ ಹಾಕುತ್ತಾರೆ. ಗಮ್‌ ಹಚ್ಚುತ್ತಾರೆ. ಇಡೀ ರಾತ್ರಿ ನಿಂತೇ ವೇಷ ಹಾಕಿಸಿಕೊಂಡು ಅಲಂಕಾರ ಮಾಡಿಸಿಕೊಳ್ಳಬೇಕು. ಎರಡು ದಿನ ಹಗಲು–ರಾತ್ರಿ ವೇಷದಲ್ಲಿ ಕಳೆಯಬೇಕು. ನಿದ್ರಿಸುವ ಹಾಗಿಲ್ಲ. ದಿನಕ್ಕೆ ಒಂದು–ಎರಡು ಬಾರಿ ಮಾತ್ರ ನೀರು– ಎಳನೀರು ಕುಡಿಯುವೆ. ಯಾಕೆಂದರೆ, ಶೌಚಕ್ಕೆ ಹೋಗಲೂ ಸಾಧ್ಯವಿರುವುದಿಲ್ಲ. ಹಾಗೆ ಎರಡು ದಿನ ಕಳೆಯುವುದೇ ಕಷ್ಟ. ನಾನು ಸಂಚರಿಸುವೆಡೆ ಕಿಕ್ಕಿರಿದು ಸೇರುವ ಮಕ್ಕಳು, ರವಿ ಮಾಮ.. ರವಿ ಮಾಮ... ಎಂದು ಕೂಗುತ್ತಾರೆ. ಅದೇ ನನ್ನ ನೋವು ಮರೆಸುತ್ತದೆ. ವೇಷ ಕಳಚುವಾಗಲೂ ಕೆಲವೊಮ್ಮೆ ಚರ್ಮ ಕಿತ್ತು ಬರುವ ವೇದನೆ. ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಮತ್ತೆ ಒಂದೆರಡು ವಾರ ಚಿಕಿತ್ಸೆ ಪಡೆಯಬೇಕಾಗುತ್ತದೆ’ ಎಂದು ವೇಷ ಹಾಕುವ ಕಷ್ಟವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು.

ಅನಾರೋಗ್ಯ ಪೀಡಿತ ಮಗನನ್ನು ಉಳಿಸಿಕೊಳ್ಳಲು ಹಣ ಇಲ್ಲದೇ ತಾಯಂದಿರು ಕಣ್ಣೀರಿಡುವ ದೃಶ್ಯಗಳನ್ನು ಮಾಧ್ಯಮದಲ್ಲಿ ನೋಡಿದ್ದು ರವಿ ಅವರ ಮನ ಕಲಕಿತು. ಸಂಕಷ್ಟದಲ್ಲಿರುವವರಿಗೆ ನೆರವಾಗಿ ಜನರ ಪ್ರೀತಿ ಗಳಿಸುವುದೇ ನಿಜವಾದ ಶ್ರೀಮಂತಿಕೆ ಎಂಬ ತಂದೆಯ ಮಾತು ಕಿವಿಯಲ್ಲಿ ರಿಂಗಣಿಸಿತು. ಇದೇ ಅವರಿಗೆ ದೇಣಿಗೆ ಸಂಗ್ರಹಕ್ಕೆ ಪ್ರೇರಣೆ.

ಆರೋಗ್ಯ ಸಮಸ್ಯೆಯಿಂದ ಬಳಲುವ ಕಡುಬಡ ಮಕ್ಕಳಿಗೆ ಮಾತ್ರ ಇವರು ನೆರವು ನೀಡುತ್ತಾರೆ. ನೆರವಿನ ಅಗತ್ಯವಿರುವ ಕೆಲ ಪಾಲಕರು ನೇರವಾಗಿ ಸಂಪರ್ಕಿಸಿದರೆ, ಇನ್ನು ಕೆಲ ವೈದ್ಯರು ಮಕ್ಕಳ ಪಾಲಕರಿಗೆ ನಮ್ಮ ಸಂಪರ್ಕ ಸಂಖ್ಯೆ ಕೊಡುತ್ತಾರೆ. ಮಿತ್ರರೊಂದಿಗೆ ಆ ಮಕ್ಕಳ ಮನೆಗೆ ಭೇಟಿ ನೀಡಿ, ಅವರ ಸ್ಥಿತಿ ಅರಿತುಗೊಂಡ ನಂತರವೇ ಅವರಿಗೆ ನೆರವು ನೀಡುತ್ತಾರೆ.

‘ಕೆಲವರ ಕೊಂಕು ಮಾತಿನಿಂದ ಬಹಳ ನೊಂದಿದ್ದು, ವೇಷ ಹಾಕುವುದನ್ನೇ ಬಿಡಬೇಕೆಂದು ನಿರ್ಧರಿಸಿದ್ದೆ. ನೆರವು ಕೋರಿ ಕರೆಗಳು ಬಂದಾಗ ಮನಸ್ಸು ಮೆತ್ತಗಾಯಿತು. ವೇಷ ಕಟ್ಟುವ ಮುನ್ನವೇ ಚರ್ಚಿಸಿ, ಮಿತ್ರರೆಲ್ಲ ಸೇರಿ 10 ಡಬ್ಬಗಳನ್ನು ಹಿಡಿದು ಹಣ ಸಂಗ್ರಹಿಸುವ ಕ್ರಮವನ್ನು ಬಿಟ್ಟು, ವಾಹನಕ್ಕೆ ಒಂದು ಡಬ್ಬವನ್ನು ಮಾತ್ರ ಕಟ್ಟಿದ್ದೆವು. ನೆರವು ನೀಡುವವರು ಬಂದು ಅದಕ್ಕೆ ಹಾಕಿ ಎಂದು ಕೋರಿದ್ದೆವು. ಈ ವರ್ಷ ಇನ್ನೂ ದೇಣಿಗೆಯ ಡಬ್ಬ ತೆರೆದಿಲ್ಲ. ಗಣೇಶೋತ್ಸವದ ನಂತರ ಡಬ್ಬ ತೆರೆದು, ಅಗತ್ಯ ಇರುವವರಿಗೆ ನೆರವು ನೀಡುತ್ತೇವೆ’ ಎನ್ನುವ ರವಿ ಕಟಪಾಡಿ ಅವರ ಮಾನವೀಯ ಸೇವೆಗೆ ನಟ ಅಮಿತಾಬ್‌ ಬಚ್ಚನ್‌ ಸಹ ಬೆರಗಾಗಿದ್ದರು. ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ‘ಕರ್ಮವೀರ’ ಸರಣಿಗೆ ಆಹ್ವಾನಿಸಿದ್ದರು. ಬಾಬಿ ಬೆಹನ್‌ ಎಂಬ ಸಹ ಸ್ಪರ್ಧಿಯ ಜತೆಗೂಡಿ ರವಿ ₹ 25 ಲಕ್ಷ ಬಹುಮಾನ ಗೆದ್ದಿದ್ದರು. ತಮ್ಮ ಪಾಲಿಗೆ ಬಂದಿದ್ದ ₹ 12.5 ಲಕ್ಷ ಬಹುಮಾನವನ್ನೂ ಬಡಮಕ್ಕಳಿಗಾಗಿ ವಿನಿಯೋಗಿಸಿದರು. ತಮ್ಮ ಅಭಿನಂದನಾ ಸಮಾರಂಭಗಳಲ್ಲಿ ಸನ್ಮಾನಕ್ಕಾಗಿ ಹಣ ಖರ್ಚು ಮಾಡಿಸದೆ, ಅದನ್ನೂ ದೇಣಿಗೆಯಾಗಿ ಪಡೆದು, ಬಡಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದ್ದಾರೆ ರವಿ.

ರವಿ ಕಟಪಾಡಿ ಅವಿವಾಹಿತ. ಮದುವೆ ಬಗ್ಗೆ ಕೇಳಿದರೆ ಅವರು ಹೇಳುವುದು ಹೀಗೆ: ‘ಮದುವೆಯಾದರೆ ಕುಟುಂಬದೊಳಗೆ ಬಂದಿಯಾಗಬೇಕಾಗುತ್ತದೆ. ಬಡ ಮಕ್ಕಳಿಗಾಗಿ ನನ್ನ ಜೀವನ ಮೀಸಲು. ದೇಹದಲ್ಲಿ ಕಸುವು ಇರುವವರೆಗೂ ಅವರಿಗೆ ನೆರವಾಗುವ ಹಂಬಲ. ತುಳುನಾಡು ಆಚರಣೆಯಲ್ಲಿ ಸತ್ತ ನಂತರವೂ ಮದುವೆ ಮಾಡುತ್ತಾರೆ. ಮದುವೆ ಆಗಲೇಬೇಕು ಎಂದಾದರೆ ನನಗೂ ಹಾಗೆಯೇ ಮದುವೆ ಮಾಡಬಹುದು’.

ರವಿ ಕಟಪಾಡಿ
ರವಿ ಕಟಪಾಡಿ
ವೇಷ ಕಲಾವಿದ ರವಿ ಕಟಪಾಡಿ
ವೇಷ ಕಲಾವಿದ ರವಿ ಕಟಪಾಡಿ
ವೇಷದಲ್ಲಿ ರವಿ ಕಟಪಾಡಿ ಚಿತ್ರಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ವೇಷದಲ್ಲಿ ರವಿ ಕಟಪಾಡಿ ಚಿತ್ರಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದ ರವಿ ಕಟಪಾಡಿ
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದ ರವಿ ಕಟಪಾಡಿ
ರವಿ ಕಟಪಾಡಿ ಅವರ ಕೊರೊನಾ ಜಾಗೃತಿ ವೇಷ 
ರವಿ ಕಟಪಾಡಿ ಅವರ ಕೊರೊನಾ ಜಾಗೃತಿ ವೇಷ 
ರವಿ ಕಟಪಾಡಿ ವೇಷ
ರವಿ ಕಟಪಾಡಿ ವೇಷ
ರವಿ ಕಟಪಾಡಿ ವೇಷ
ರವಿ ಕಟಪಾಡಿ ವೇಷ
ರವಿ ಕಟಪಾಡಿ ಅವರ ಅಮೇಸಿಂಗ್ ಮಾನ್‌ಸ್ಟರ್ ವೇಷ
ರವಿ ಕಟಪಾಡಿ ಅವರ ಅಮೇಸಿಂಗ್ ಮಾನ್‌ಸ್ಟರ್ ವೇಷ
ವೇಷದಲ್ಲಿ ರವಿ ಕಟಪಾಡಿ
ವೇಷದಲ್ಲಿ ರವಿ ಕಟಪಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT