ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಪುಟ್ಟ ಮಲೆನಾಡಿನಂತಿರುವ ಸಂಡೂರು ಕಣ್ಮನ ಸೆಳೆಯುತ್ತದೆ. ಗಣಿಗಾರಿಕೆಯ ದೂಳಿನ ಮೇಲುಹೊದಿಕೆ ಹೊದ್ದರೂ ಮಳೆಗಾಲ ಶುರುವಾಗುತ್ತಲೂ ಕೆಂಪಂಗಿ ಕೊಡವಿ ಕಣ್ಣಿಗೆ ತಂಪನೀಯುವ ಹಸಿರುಟ್ಟು ಮೈದುಂಬಿಕೊಳ್ಳುತ್ತದೆ. ಇತ್ತ ಸಂಡೂರಿನ ಚರಿತ್ರೆಯ ಪುಟ ತಿರುವಿದರೆ ರಾಜಶಾಹಿಯ ದರ್ಪ, ಘೋರ್ಪಡೆ ವಂಶಸ್ಥರ ದೌಲತ್ತು, ಜನಸಾಮಾನ್ಯರ ಪ್ರತಿರೋಧ ಒಟ್ಟೊಟ್ಟಿಗೆ ಕಾಣಸಿಗುತ್ತವೆ. 1936ರಲ್ಲಿ ಸಂಡೂರಿಗೆ ಭೇಟಿ ನೀಡಿದ್ದ ಗಾಂಧೀಜಿಯವರು ಸೆಪ್ಟೆಂಬರ್‌ನಲ್ಲಿ ಸಂಡೂರಿನ ನಿಸರ್ಗವನ್ನು ಕಣ್ತುಂಬಿಕೊಳ್ಳಲು ಕರೆ ಕೊಟ್ಟಿದ್ದರು. ಅಂತೆಯೇ ಇದೇ ಸೆಪ್ಟೆಂಬರ್ ಸಂಡೂರಿನ ಇತಿಹಾಸದಲ್ಲಿ ಮರೆಯಲಾರದ ಭೂ ಹೋರಾಟಕ್ಕೂ ನಾಂದಿ ಹಾಡಿತ್ತು. ರೈತರಿಗೆ ಎಂಟು ಸಾವಿರ ಎಕರೆಗಿಂತ ಹೆಚ್ಚಿನ ಭೂಮಿ ಹಂಚಿಕೆ ಮಾಡಿದ ಕರ್ನಾಟಕದ ಸಮಾಜವಾದಿಗಳ ಪಾಲಿಗೆ ಬಹುದೊಡ್ಡ ಸೊಂಡೂರು ಭೂ ಹೋರಾಟ ಶುರುವಾದದ್ದು 1973ರ ಸೆಪ್ಟೆಂಬರ್ 10ರಂದು. ಈ ಚರಿತ್ರೆಗೆ ಈಗ 50 ವರ್ಷ ತುಂಬುತ್ತದೆ.

ಸಂಡೂರು ಭಾಗದ ರೈತರಿಗೆ ಕುಮಾರಸ್ವಾಮಿಯ ಗೇಣಿ ಭೂಮಿ, ಸ್ವಂತ ಹೊಲವಾದದ್ದು ಚರಿತ್ರೆ ಮಾತ್ರವಲ್ಲ, ವರ್ತಮಾನವೂ ಹೌದು. ಹೋರಾಟದಿಂದ ಭೂಮಿ ಪಡೆದ ಫಲಾನುಭವಿಗಳಲ್ಲಿ ಕೆಲವರು ಈಗಲೂ ಈ ಭೂಮಿಯನ್ನು ಆಧರಿಸಿಯೇ ಬದುಕುತ್ತಿದ್ದಾರೆ. ಮತ್ತೆ ಕೆಲವರು ಮಾರಾಟ ಮಾಡಿದ್ದಾರೆ. ಕೆಲವರು ಗಣಿಗಾರಿಕೆ ನಡೆಸುವ ಬೃಹತ್ ಕಂಪನಿಗಳ ಒತ್ತಡಕ್ಕೆ ಮಣಿದು ಹೊಲಗಳನ್ನು ಮಾರಿ ಕೈಚೆಲ್ಲಿದ್ದಾರೆ. ಈ ಮಧ್ಯೆ ಹೋರಾಟದಿಂದ ಪಡೆದ ಭೂಮಿಯನ್ನು ಉಳಿಸಿಕೊಳ್ಳಲು ರೈತರ ಸೆಣಸಾಟ ಇಂದಿಗೂ ನಡೆದಿದೆ. ಎಸ್.ಆರ್.ಹಿರೇಮಠ ಅವರ ನಾಯಕತ್ವದ ‘ಜನ ಸಂಗ್ರಾಮ ಪರಿಷತ್ತು’ ಈಗಲೂ ಭೂ ಸಂಬಂಧಿ ಹೋರಾಟಗಳನ್ನು ನಡೆಸುತ್ತಿದೆ. ಶ್ರೀಶೈಲ ಆಲ್ದಳ್ಳಿ, ಟಿ.ಎಂ.ಶಿವಕುಮಾರ್ ರೈತರ ಒಡನಾಟದಲ್ಲಿದ್ದಾರೆ. ಲಕ್ಷ್ಮೀಪುರದ ಈರಣ್ಣ ಮೊದಲಾದ ರೈತ ನಾಯಕರು ಗಣಿಗಾರಿಕೆ ಕಂಪನಿಗಳ ಭೂ ಒತ್ತುವರಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಸತತ ನಾಲ್ಕನೆ ಬಾರಿಗೆ ಸಂಡೂರು ಶಾಸಕರಾಗಿ ಆಯ್ಕೆಯಾದ ಈ. ತುಕಾರಾಮ ಅವರು ‘‘ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಈ ಹೋರಾಟಕ್ಕೆ ಸ್ಪಂದಿಸಿದ್ದರು. ಅದೇ ಹೊತ್ತಿಗೆ ‘ಉಳುವವನೇ ಭೂ ಒಡೆಯ’ ಕಾಯ್ದೆ ಜಾರಿಯಾದ ಕಾರಣ ರೈತರಿಗೆ ಇನಾಮು ಭೂಮಿ ಸಿಗುವಂತಾಯಿತು’’ ಎನ್ನುತ್ತಾರೆ.

ಬ್ರಿಟಿಷ್ ಕಂಪನಿಯು ಧಾರವಾಡದ ಬಳಿ ಇರುವ ಗಜೇಂದ್ರಗಡ ಸಂಸ್ಥಾನದ ವಂಶಸ್ಥರಾದ ಯಶವಂತರಾವ್ ಹಿಂದೂರಾವ್ ಘೋರ್ಪಡೆ ಅವರನ್ನು 1928ರಲ್ಲಿ ಸನದು ಕೊಟ್ಟು ರಾಜನನ್ನಾಗಿಸಿದರು. ಇವರ ಪುತ್ರ ಎಂ.ವೈ. ಘೋರ್ಪಡೆ. ಯಶವಂತರಾವ್ ಹಿಂದೂರಾವ್ ಘೋರ್ಪಡೆಯವರು ಅಪಾರ ಧನದಾಹಿಗಳಾಗಿದ್ದರು. ಹಾಗಾಗಿ ರೈತರ 15,000 ಎಕರೆ ಭೂಮಿಯನ್ನು 1948ರ ಸಂಡೂರು ಪ್ರೊಕ್ಲಮೇಷನ್‌ನಲ್ಲಿ ‘ಕುಮಾರ ಸ್ವಾಮಿ’ ಭೂಮಿಯನ್ನಾಗಿ ಪರಿವರ್ತಿಸಿದರು. ಭೂಮಿ ಕಳೆದುಕೊಂಡ ಅದೇ ರೈತರಿಗೆ ವರ್ಷದ ಗೇಣಿಯಂತೆ ಕೊಟ್ಟು ಉಳುಮೆ ಮಾಡಿಸತೊಡಗಿದರು. ಹೀಗೆ ಭೂಮಿ ಕಳೆದುಕೊಂಡವರು ತಮ್ಮ ಭೂಮಿಗಾಗಿ ಪ್ರತಿಭಟಿಸಿದ್ದರೂ ರಾಜರು ಈ ಪ್ರತಿಭಟನೆಗಳನ್ನು ತಣ್ಣಗಾಗಿಸಿದ್ದರು. 1973ರ ವರೆಗೆ ಈ ಭೂಮಿಗಾಗಿ ತೀವ್ರವಾದ ಹೋರಾಟವನ್ನು ಹುಟ್ಟುಹಾಕಲು ಸಾಧ್ಯವಾಗಿರಲಿಲ್ಲ.

ಬಳ್ಳಾರಿಯ ಯಜಮಾನ ಶಾಂತರುದ್ರಪ್ಪ, ಸಂಡೂರಿನ ರೈತ ನಾಯಕ ಎಲಿಗಾರ ತಿಮ್ಮಪ್ಪ ಜನರನ್ನು ಸಂಘಟಿಸಿದರು. ಎಲಿಗಾರ ತಿಮ್ಮಪ್ಪ ಅವರು ರಾಜ್ಯ ಸೋಷಿಯಲಿಸ್ಟ್ ಪಾರ್ಟಿಯ ಅಧ್ಯಕ್ಷರಾಗಿದ್ದ ಕೆ. ಜಿ. ಮಹೇಶ್ವರಪ್ಪನವರಲ್ಲಿ ಸಂಡೂರು ಸಮಾಜವಾದಿ ಪಕ್ಷದ ಬೆಂಬಲ ಕೇಳಿದರು. ಭೂಮಿ ಸಂಬಂಧಿ ಚಳವಳಿಗಳನ್ನು ರೂಪಿಸುತ್ತಲೇ ಬಂದಿದ್ದ ಸೋಷಿಯಲಿಸ್ಟ್ ಪಾರ್ಟಿ ಇದಕ್ಕೆ ಸ್ಪಂದಿಸಿತು. ಕೆ. ಜಿ. ಮಹೇಶ್ವರಪ್ಪನವರು ರಾಷ್ಟ್ರೀಯ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸರ ಬಳಿ ಚರ್ಚಿಸಿ, ಸಂಡೂರಿನಲ್ಲಿ ರೈತರ ಚಳವಳಿಯನ್ನು ರೂಪಿಸುವುದಾಗಿ ತೀರ್ಮಾನಿಸಲಾಯಿತು.  1973ರ ಜನವರಿ 28ರಲ್ಲಿ ಸೋಷಲಿಸ್ಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್ ಪೂರ್ವಭಾವಿಯಾಗಿ ಸಂಡೂರಿನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೆ.ಜಿ. ಮಹೇಶ್ವರಪ್ಪನವರು ಈ ದಿನವನ್ನು ನೆನಪಿಸಿಕೊಳ್ಳುತ್ತ, ‘ಜಾರ್ಜ್ ಅಂದು ಗುಡುಗಿದ್ದರು. ಸಂಡೂರು ರಾಜರು ಜನರನ್ನು ಹೇಗೆ ಮೋಸಗೊಳಿಸುತ್ತಾ ಇದ್ದಾರೆ ಎಂಬುದನ್ನು ಭಾಷಣದಲ್ಲಿ ಹೇಳಿ ರೈತರೆಲ್ಲಾ ಒಂದಾಗಿ ಅಂತ ಕರೆಕೊಟ್ರು. ಆ ದಿನ ಸಂಡೂರಿನ ಇತಿಹಾಸದಲ್ಲಿಯೇ ಮಹತ್ವದ್ದು’ ಎನ್ನುತ್ತಾರೆ.

1973ರ ಮಾರ್ಚ್ 3ರಂದು ಬೆಂಗಳೂರಿನಲ್ಲಿ ಸೋಷಿಯಲಿಸ್ಟ್ ಪಕ್ಷದ ಕಾರ್ಯಕರ್ತರು ಮತ್ತು ಸಂಡೂರಿನ ರೈತರು ‘ಅಂದು ಕಾಗೋಡು ಇಂದು ಸಂಡೂರು’ ಎಂಬ ಘೋಷಣೆ ಕೂಗಿ ಧರಣಿ ಮಾಡಿದರು. ಈ ಮೆರವಣಿಗೆಯಲ್ಲಿ ಕೆ. ಜಿ. ಮಹೇಶ್ವರಪ್ಪ, ಜೆ.ಎಚ್. ಪಟೇಲ್, ಬಳ್ಳಾರಿ ಜಿಲ್ಲೆಯ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದ ಎಂ.ಪಿ. ಪ್ರಕಾಶ್, ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ, ಎಸ್. ಎಸ್. ಕುಮುಟ, ಕಾಗೋಡು ತಿಮ್ಮಪ್ಪ ಮುಂತಾದ ಪ್ರಮುಖರನ್ನೊಳಗೊಂಡ ನೂರಕ್ಕೂ ಹೆಚ್ಚು ಸಮಾಜವಾದಿ ಪಕ್ಷದ ಕಾರ್ಯಕರ್ತರೂ, ಸಂಡೂರಿನ ರೈತರೂ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದರು. ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ವಿಧಾನಸೌಧದಿಂದ ಚಳವಳಿಗಾರರ ಬಳಿಗೆ ಬಂದು ಸಂಡೂರು ಚಳವಳಿ ಕುರಿತ ಮನವಿ ಸ್ವೀಕರಿಸಿದ್ದರು.

ಈ ಮೊದಲು ನಿರ್ಧರಿಸಿದಂತೆ ಹೋರಾಟವನ್ನು 1973ರ ಸೆಪ್ಟೆಂಬರ್ 10ರಂದು ಸಂಡೂರಿನಲ್ಲಿ ಆರಂಭಿಸಲಾಯಿತು. ರಾಜ್ಯ ಸಮಾಜವಾದಿ ಪಕ್ಷ ಹಾಗೂ ಸಂಡೂರು ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಅಂದಿನ ಬೆಳಿಗ್ಗೆ ಮೆರವಣಿಗೆ ನಡೆಯಿತು. ಕೆ.ಜಿ. ಮಹೇಶ್ವರಪ್ಪ ಈ ಸಂದರ್ಭವನ್ನು ನೆನಪಿಸಿಕೊಳ್ಳುತ್ತ ‘ಸಂಡೂರಿನ ಬಸ್‌ಸ್ಟ್ಯಾಂಡ್‌ನಲ್ಲಿ ಒಂದು ಬಹಳ ದೊಡ್ಡ ಬಹಿರಂಗ ಸಭೆ ಮಾಡಿದ್ವಿ. ಇಲ್ಲಿ ಸಾರ್ವಜನಿಕ ಸಭೆಗಳು ಆಗ್ತಾ ಇರ್ಲಿಲ್ಲ. ಆ ರಾಜರದು ಎಷ್ಟರ ಮಟ್ಟಿಗೆ ದಬ್ಬಾಳಿಕೆ ಅಂದ್ರೆ ಒಂದು ಸಾರ್ವಜನಿಕ ಸಭೆ ಆಗ್ಲಿ, ಅವರ ವಿರುದ್ಧ ಮಾತಾಡೋದಾಗ್ಲಿ ಇಲ್ಲಿ ಸಾಧ್ಯ ಇರ್ಲಿಲ್ಲ. ನಮ್ಮ ಬಹಿರಂಗ ಸಭೆ ಪ್ರಾರಂಭವಾಗುತ್ತಲೂ ರಾಜವಂಶದ ಕಡೆಯವರು ಈ ಸಭೆಗೆ ಯಾರು ಪರ್ಮಿಷನ್ ಕೊಟ್ರು ಅಂತ್ಹೇಳಿ... ಅದ್ಹೆಂಗೆ ಮಾಡ್ತೀರಿ ಮಾಡ್ರಿ... ಎಂದು ಧಮಕಿ ಹಾಕಿದ್ರು. ಇದ್ಯಾವುದನ್ನೂ ಲೆಕ್ಕಿಸದೆ ನಾವು ಸಭೆಯನ್ನು ಮಾಡಿದ್ವಿ’ ಎನ್ನುತ್ತಾರೆ.

ಹೀಗೆ ಸೆಪ್ಟೆಂಬರ್ 10ರಿಂದ ಅಕ್ಟೋಬರ್ 26ರ ತನಕ 46 ದಿನ ನಡೆದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಒಟ್ಟು 1036 ಸತ್ಯಾಗ್ರಹಿಗಳು ಪಿಕೆಟಿಂಗ್ ಭೂ ಆಕ್ರಮಣಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ರಾಜಮನೆತನದ ಯಾವುದೇ ವೈಯಕ್ತಿಕ ಆಸ್ತಿಗೆ ಧಕ್ಕೆಯುಂಟು ಮಾಡದೆ, ರಾಜಮನೆತನ ವಶಪಡಿಸಿಕೊಂಡಿದ್ದ ನಂದಿಹಳ್ಳಿ ರಾಘಾಪುರ ಮತ್ತು ಸಿದ್ದಾಪುರ ಹಳ್ಳಿಗಳ ಹೊಗೆಸೊಪ್ಪಿನ ಜಮೀನುಗಳಲ್ಲಿ ಇನಾಮು ಭೂಮಿಯಲ್ಲಿ ಮಾತ್ರ ಸತ್ಯಾಗ್ರಹಿಗಳು ಒಟ್ಟು ಎಂಟು ಬಾರಿ ಭೂ ಆಕ್ರಮಣ ಚಳವಳಿ ನಡೆಸಿದರು.

ಹೋರಾಟದಲ್ಲಿ ದಾಸೋಹ ಕಲ್ಪನೆಯಿತ್ತು. ಹಳ್ಳಿಗಳಿಂದ ಹೋರಾಟಗಾರರಿಗೆ ಜೋಳ, ರಾಗಿ, ನವಣಕ್ಕಿ, ನೆಲ್ಲಕ್ಕಿ ಮುಂತಾದ ದವಸ–ಧಾನ್ಯಗಳನ್ನು ರೈತರು ತರುತ್ತಿದ್ದರು. ವಾರದ ಸಂತೆ, ದಿನ ಸಂತೆಗೆ ಹೋಗಿ ತರಕಾರಿಯನ್ನು ಎತ್ತುತ್ತಿದ್ದರು. ಎಲ್ಲರೂ ಕೂಡಿಯೇ ಊಟ ಮಾಡುತ್ತಿದ್ದರು. ಈ ಆಂದೋಲನದಲ್ಲಿ ಅನೇಕ ಮಹಿಳೆಯರು ತಮ್ಮ ಕೂಸುಗಳ ಸಮೇತ ಪಿಕೆಟಿಂಗ್ ಭೂ ಹೋರಾಟದ ಆಕ್ರಮಣಗಳಲ್ಲಿ ಭಾಗವಹಿಸಿ ಬಂಧಿತರಾದದ್ದು ಗಮನಾರ್ಹ. ಹರಿಜನ ನಾಯಕಿ ಬುಡ್ಡಮ್ಮ, ಮಾರಮ್ಮ, ಮೇದಾರ ಹುಲ್ಗೆಮ್ಮ, ಮೇದಾರ ಭೀಮಕ್ಕ, ಬೆಂಗಳೂರಿನ ಸೋಹನ್ ಕುಮಾರಿ, ಭುಜಂಗನರದ ವಡ್ಡನಕಟ್ಟೆ ಶಾಂತಮ್ಮ, ಎನ್. ಎಂ. ಶಿವದೇವಮ್ಮ, ಬಿಹಾರದ ನಾಯಕಿ ಸಂತೋಷಿತಿಗಾ, ಮಹಾರಾಷ್ಟ್ರದ ಸಮಾಜವಾದಿ ನಾಯಕಿ ಮುಷಲ್ ಘೋರೆ ಇವರೆಲ್ಲ ಸ್ತ್ರೀ ಶಕ್ತಿಯಾಗಿ ಹೋರಾಟದಲ್ಲಿ ಪ್ರತಿನಿಧಿಸಿದರು. 46 ದಿನಗಳ ಭೂ ಹೋರಾಟ ಶಾಂತಿಯುತವಾಗಿಯೇ ನಡೆದರೂ ಪೊಲೀಸರ ದೌರ್ಜನ್ಯದಿಂದಾಗಿ ಕೊನೆಗೆ ಅಹಿಂಸಾತ್ಮಕ ರೂಪ ತಾಳಿತು.

ಹೋರಾಟದ ಫಲವಾಗಿ ಇನಾಂ ರದ್ದಿಯಾತಿ ಕಾನೂನನ್ನು ಜಾರಿಗೆ ತಂದಿದ್ದರಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಸೇರಿದ 8,029 ಎಕರೆ ಭೂಮಿ ರೈತರಿಗೆ ಹಂಚಲು ಅರ್ಜಿ ಆಹ್ವಾನಿಸಲಾಯಿತು. ಯಶವಂತ ರಾವ್ ಘೋರ್ಪಡೆಯವರ ಕುಮಾರಸ್ವಾಮಿ ದೇವಸ್ಥಾನದ ವಂಶಪಾರಂಪರ್ಯ ಧರ್ಮದರ್ಶಿತ್ವ ರದ್ದಾಯಿತು. ರಾಜಮನೆತನವು 2,000 ಎಕರೆ ಅರಣ್ಯ ಭೂಮಿಯಲ್ಲಿ ತಮಗಿದ್ದ ಬೇಟೆ ಹಕ್ಕನ್ನು ಬಿಟ್ಟುಕೊಟ್ಟಿತು. ಈ ತನಕ ಹಂತ ಹಂತವಾಗಿ ಭೂನ್ಯಾಯ ಮಂಡಳಿಯಲ್ಲಿ ಇನಾಂ ರದ್ದತಿ ಕಾಯ್ದೆ ಅಡಿ 7,176 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳ ಭೂಮಿಯ ಒಟ್ಟು ವಿಸ್ತೀರ್ಣ 39,868 ಎಕರೆ. ಆದರೆ ಅರ್ಜಿದಾರರ ಪರವಾಗಿ ತೀರ್ಮಾನವಾದದ್ದು 3,448 ಅರ್ಜಿಗಳು. ಇದರಿಂದಾಗಿ ಈ ತನಕ 20,180 ಎಕರೆ ಇನಾಮು ಭೂಮಿ ಸೊಂಡೂರು ರೈತರಿಗೆ ದೊರೆತಿದೆ.

ಹೋರಾಟದ ರೂವಾರಿಗಳಲ್ಲಿ ಪ್ರಮುಖರಾದ ಕಾಗೋಡು ತಿಮ್ಮಪ್ಪ ‘ಕಾಗೋಡು ಚಳವಳಿಯ ಸಂದರ್ಭಕ್ಕೆ ಕಾಂಗ್ರೆಸ್ ಹೋರಾಟದ ಬಗ್ಗೆ ತಳೆದ ನಿಲುವು ತುಂಬ ಕಠೋರವಾಗಿತ್ತು. ಕೊನೆಗೂ ಸ್ಪಂದಿಸಲಿಲ್ಲ. ಆದರೆ ಸಂಡೂರು ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ತಡವಾಗಿಯಾದರೂ ಸ್ಪಂದಿಸಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರು ಇರುವ ಕಾರಣಕ್ಕೆ ಸೊಂಡೂರಿನ ಜನರಿಗೆ ಭೂಮಿ ಸಿಗುವಂತಾಯಿತು’ ಎನ್ನುತ್ತಾರೆ. ಸ್ವಾತಂತ್ರ್ಯಾನಂತರ ಈ ಹೋರಾಟ ರಾಜಶಾಹಿಯನ್ನು ಕೊನೆಗೊಳಿಸಿದ್ದು ಚಾರಿತ್ರಿಕ ಸಂಗತಿಯಾಗಿ ನೆನೆಯಬೇಕಿದೆ.

ಎಲಿಗಾರ ತಿಮ್ಮಪ್ಪ
ಎಲಿಗಾರ ತಿಮ್ಮಪ್ಪ
ಯಜಮಾನ ಶಾಂತರುದ್ರಪ್ಪ
ಯಜಮಾನ ಶಾಂತರುದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT