ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಹರಿ: ಅಳಿವಿನ ಅಪಾಯ ಹೇಳುವ ಗುಡ್ಡ ಕುಸಿತ

Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ನಾವು ಚಿಕ್ಕವರಿರುವಾಗ ಪರಿಸರದ ಬಗ್ಗೆ ಪ್ರಬಂಧ ಬರೆಯಿರಿ ಎಂದರೆ ‘ನಮ್ಮ ಸುತ್ತ ಮುತ್ತಲಿನ ವಾತಾವರಣ’ ಎಂದು ಪ್ರಾರಂಭ ಮಾಡಿ ‘ವಾತಾವರಣ ಎಂದರೆ ಮರ-ಗಿಡ, ಗುಡ್ಡ- ಬೆಟ್ಟ ಎಂದು ಮುಂದುವರಿಸಿಕೊಂಡು ಹೋಗುತ್ತಿದ್ದೆವು… ಈಗಿನ ಮಕ್ಕಳೂ ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಬರವಣಿಗೆಯಲ್ಲಿ ಅವರು ಉಲ್ಲೇಖಿಸಿದ ಪರಿಸರ ಕಾಣಿಸುತ್ತಿದೆಯೇ? ಮರಗಳು, ಗುಡ್ಡ- ಬೆಟ್ಟಗಳು ಸುಭಿಕ್ಷವಾಗಿವೆಯೇ? ಎಂದರೆ ನಮ್ಮಲ್ಲಿ ಉತ್ತರವಿಲ್ಲ.

ಎಳೆಯ ಮಕ್ಕಳು ಬೃಹತ್ ಉದ್ಯಾನ ನೋಡಿದರೆ ‘ಕಿತ್ನಾ ಬಡಾ ಜಂಗಲ್ ಹೈ’ ಎಂದು ಉದ್ಗಾರ ಎಳೆಯುತ್ತಿವೆ. ವನ್ಯಜೀವಿಗಳು ಬಹುತೇಕ ಚಿತ್ರಗಳಲ್ಲಿ ಬಂಧಿಯಾಗಿವೆ.

ಬರ ಅಲ್ಲಿರದೆ ಇಲ್ಲೇಕೆ ನುಸುಳುವುದೋ!

ಇಲ್ಲಿ ಬಿಸಿಲಿನ ಬೇಗೆ: ಅಲ್ಲಿ ಚಳಿಗಾಲ.

ತೊರೆ ಒತ್ತಿದರೆ ಇಲ್ಲಿ ಜಲಪ್ರಳಯವೋ ಅಲ್ಲಿ! ಏಕಾಗುವುದೋ ಹೀಗೆ? –ಮುದ್ದುರಾಮ ಎಂಬ ಕೆ.ಸಿ. ಶಿವಪ್ಪನವರ ಈ ಚೌಪದಿಯ ಪ್ರಶ್ನೆಗಳು ಪ್ರಾಪಂಚಿಕ ಪ್ರಶ್ನೆಗಳಾಗಿವೆ. ‌

ಕರಗುತ್ತಿರುವ ಕಾಡುಗಳು, ಬದಲಾಗುತ್ತಿರುವ ಮಾರುತಗಳು, ಹವಾಮಾನ ವೈಪರೀತ್ಯ ಸಾಮಾನ್ಯವಾಗಿದೆ. ಮುದನೀಡುವ ಮುಂಗಾರು ಭಯನೀಡುವ ಮುಂಗಾರಾಗಿ ರೂಪುಗೊಂಡಿದೆ. ಮನುಷ್ಯನ ಐಷಾರಾಮಿತನದ ಹಪಾಹಪಿಗೆ ಪ್ರಕೃತಿಯ ಶೋಷಣೆ ನಡೆದಿದೆ. ಅರಣ್ಯನಾಶವಾಗಿ ಕಾಡು ಪ್ರಾಣಿಗಳು ಊರ ಬಾಗಿಲು ದಾಟಿ ಮನೆ ಬಾಗಿಲುಗಳಿಗೆ ಬಳಿ ಬಂದು ನಿಂತಿವೆ. ಮಾನವನ ದುರಾಸೆಗಳೇ ದುರಂತದ ಬೀಜಗಳಾಗಿವೆ.

ಮೊದಲಿಗೆ ಮನುಷ್ಯ ನೆಲೆ ಕಂಡುಕೊಳ್ಳಲು ಕಾಡನ್ನು ಬಳಸಲು ಆರಂಭಿಸಿದ. ನಂತರ ಪ್ರಕೃತಿಯನ್ನು ಅನುಭವಿಸಬೇಕೆಂದು ಹಚ್ಚ ಹಸುರಿನ ಕಾಡಿನ ನಡುವೆ ಬಂದ. ಅಷ್ಟಕ್ಕೆ ಸುಮ್ಮನಿರಲಾದೆ ದುಡಿತದ ದಾಹ ಹೆಚ್ಚಿಸಿಕೊಂಡ, ಪಾರಂಪರಿಕ ಕಾಡನ್ನು ಕಡಿದು ಚಹಾತೋಟಗಳಂಥ ವಾಣಿಜ್ಯ ತೋಟಗಳನ್ನು ನಿರ್ಮಿಸಿದ ಕಡೆಗೆ ಇನ್ನೆಂದೂ ರಿಪೇರಿ ಮಾಡಲಾಗಂಥ ಸ್ಥಿತಿಗೆ ಪರಿಸರವನ್ನು ತಂದು ಅನೇಕ ಸಸ್ಯ,ಪ್ರಾಣಿಸಂಕುಲ, ಪಕ್ಷಿಸಂಕುಲಕ್ಕೆ ಸಂಚಕಾರ ತಂದಿಟ್ಟ. ಜೊತೆಗೆ ಕಾರ್ಮಿಕ ಹೋರಾಟಗಳು ಮೂಲಭೂತ ಅವಶ್ಯಕತೆಗೆ ಹೋರಾಟಗಳು ಪ್ರಾರಂಭವಾವು ಇದಕ್ಕೆ ತಮಿಳು ನಾಡಿನ ವಾಲ್ಪರೈ ದುರಂತವೆ ಸಾಕ್ಷಿ. ಇಂಥ ಅನೇಕ ಮಾದರಿಗಳು ನಮ್ಮಲ್ಲಿವೆ.

ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿ ಎಂಡೋಸಲ್ಫಾನ್ ದುರಂತ ವಾಯಿತು, ಕುದುರೆಮುಖ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿ ಈಗ ಗೋಸ್ಟ್ ಸಿಟಿ ಎಂದು ಕರೆಸಿಕೊಳ್ಳುತ್ತಿದೆ. ರಣಭೀಕರ ಮಳೆಯಿಂದ 2018ರಲ್ಲಿ ಕೊಡಗಿನಲ್ಲಿ ಭೀಕರಗುಡ್ಡಕುಸಿತ ಉಂಟಾಯಿತು. ಇನ್ನೂ ಕುಸಿಯುವ ಆತಂಕವಿದೆ. ಕಳೆದ ಹತ್ತು ದಿನಗಳಲ್ಲಿ ಶಿರೂರು ಗುಡ್ಡ ಕುಸಿತವಾಯಿತು ಅದು ಮರೆವಿನಂಚಿಗೆ ಜಾರುವಷ್ಟರಲ್ಲಿ, ವಯನಾಡ್ ಭೂಕುಸಿತ ಉಂಟಾಗಿ ಹಳ್ಳಿಗಳ ಹೆಸರುಗಳೆ ಇಲ್ಲದಂತೆ ಜಲಸಮಾಧಿಯಾಗಿದೆ ಇನ್ನೂ ಸಾವಿನ ಲೆಕ್ಕ ಸಿಕ್ಕಿಲ್ಲ. ಇದರ ನಡುವೆ ಎತ್ತಿನ ಹೊಳೆ ಪ್ರಾಜೆಕ್ಡ್ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಖಾಸಗಿ ತೋಟಗಳಿಗೆ ಹಾನಿಯಾಗಿದೆ. ದೂರದವರಿಗೆ ನೀರು ಕೊಡಹೋಗಿ ಸ್ಥಳೀಯರು ನೆಲೆ ಕಳೆದುಕೊಳ್ಳುವ ಹಾಗಾಗಿದೆ.

ಶಿರಾಡಿಘಾಟ್, ಚಾರ್ಮಾಡಿ ಘಾಟ್‌ಗಳಲ್ಲಿ ಗುಡ್ಡ ಕುಸಿತದಿಂದ ರೈಲ್ವೆ ಸಂಪರ್ಕ ಕಡಿದುಹೋಗಿದೆ. ಮತ್ತೆ ಸಹಜ ಸ್ಥಿತಿಗೆ ತಲುಪಲು ಇನ್ನೆಷ್ಟು ದಿನಗಳು ಬೇಕು ತಿಳಿದಿಲ್ಲ. ಇನ್ನೂ ಮುಂದುವರಿದಂತೆ ಚಿಕ್ಕ ಪಟ್ಟಣ ಪ್ರದೇಶಗಳ ಕೆರೆಅಂಗಳಗಳು ಮನೆಯಂಗಳಗಳಾಗಿವೆ. ನೈಸರ್ಗಿಕ ಜಲದ ಕಣ್ಣನ್ನು ಮುಚ್ಚಿ ಬೋರ್‌ವೆಲ್‌ಗಳನ್ನು ಕೊರೆಯುತ್ತಿದ್ದೇವೆ. ಎಲ್ಲಿ ನೋಡಿದರೂ ಕೃಷಿ ಮಾಡುವ ಭೂಮಿಯನ್ನು ರೆಸಿಡೆನ್ಶಿಯಲ್ ಏರಿಯಾ ಮಾಡಿ ಐಷಾರಾಮಿ ಬಂಗಲೆಯಲ್ಲಿ ಜೊಮ್ಯಾಟೋ, ಸ್ವಿಗ್ಗಿ ಆರ್ಡರ್ ಮಾಡಿ ಬೀಗುವವರಿಗೆ ಎಚ್ಚರಿಕೆಯ ದಿನಗಳು ಇವು.

ಸೇವಿಸುವ ಅನ್ನಾಹಾರದ ಬೆಲೆ ಹೀಗೆ ಏರುತ್ತಾ ಹೋದರೆ ದುಡಿಯೋದೆಲ್ಲ ಹೊಟ್ಟೆಗೇ ಹೋಗುತ್ತದೆ. ಮುಂದೊಂದು ದಿನ ಹಸಿವು ಜಾಗತಿಕ ಸಮಸ್ಯೆಯಾಗಬಹುದು. ಹಸಿವು ಈಗಾಗಲೇ ಕ್ರೂರಿಯಾಗಿರುವ ಮನುಷ್ಯನನ್ನು ಕ್ರೂರಿಯಾಗಿಸಬಹುದು. ಈ ಬಗ್ಗೆ ಉಪಕ್ರಮಗಳು ಅಗತ್ಯವಾಗಿ ಬೇಕಿವೆ. ಗುಡ್ಡ ಕುಸಿತ ಉಂಟಾಗಿರುವ ಶಿರೂರು, ವಯನಾಡು, ಎತ್ತಿನಹೊಳೆ ಯೋಜನೆಗಳ ಸ್ಥಳ ಇಲ್ಲೆಲ್ಲಾ ಅಭಿವೃದ್ಧಿಯಾಗಬೇಕು, ಉದ್ಯಮ ಬೆಳೆಸಬೇಕು, ಹಣ ಮಾಡಬೇಕು ಎನ್ನುವುದೆ ಉದ್ದೇಶವಾಗಿದೆ ಬಿಟ್ಟರೆ ಪರಿಸರ ಉಳಿಸುವ ಚಿಕ್ಕ ಪ್ರಯತ್ನವೂ ಕಾಣುವುದಿಲ್ಲ.

ಪರಿಸರ ಹೋರಾಟಗಳು ಇದ್ದರೂ ಬಡವನ ಕೂಗು ಮುಗಿಲಿಗೆ ಎನ್ನುವಂತಾಗಿದೆ. ನಮ್ಮ ಸರ್ಕಾರಗಳು ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡಿಸಿ ಉದ್ಯಮಿಗಳ ಜೇಬು ತುಂಬಿಸುತ್ತಿವೆ.

ಇನ್ನೂ ಅಣೆಕಟ್ಟುಗಳಲ್ಲಿ ಮೂಲಸಾಮರ್ಥ್ಯದ ನೀರಿಲ್ಲ. ಹೂಳು ತುಂಬಿದ್ದು, ತುಂಬಿದ್ದ ಮರಳು ಖಾಲಿಯಾಗಿದೆ. ಇದೂ ಪ್ರವಾಹಗಳಿಗೆ ಕಾರಣ. ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿ ಯೋಜನೆಗಳು ಪ್ರಸ್ತುತ ಜೀವದ ಪ್ರಶ್ನೆಗಳಾಗಿ ಕಾಡುತ್ತಿವೆ. ಪ್ರಕೃತಿಯ ಮೇಲೆ ದಿಗ್ವಿಜಯ ಸಾಧಿಸ ಹೊರಟ ಮಾನವನ ಸಾಧನೆ ಕಡೆಗೆ ‘ನೆಲೆಯೂ ಇಲ್ಲ ನೆಲವೂ ಇಲ್ಲ ಎನ್ನುವಲ್ಲಿಗೆ ಬಂದು ನಿಂತಿದೆ! ಹಾಗಿದ್ದರೆ ಇಷ್ಟೆಲ್ಲಾ ಕಾಮಗಾರಿಗಳು ಪ್ರವಾಸೋದ್ಯಮ ಮೂಲಸೌಕರ್ಯಗಳು ಎನ್ನುವುದಕ್ಕೆ ಅರ್ಥವೆಲ್ಲಿ?

ಪ್ರವಾಸೋದ್ಯಮದಿಂದ ಆದಾಯವೃದ್ಧಿ, ಉದ್ಯೋಗಸೃಷ್ಟಿ ಎಂಬುದು ಈಗ ವಯನಾಡು ಪ್ರದೇಶದಲ್ಲಿ ಉಳಿದಿಲ್ಲ. ಪ್ರೇಕ್ಷಕರು ಈಗ ಮೂಕಪ್ರೇಕ್ಷಕರು ಆಗಿ ಉಳಿದಿದ್ದಾರೆ.

ಗುಡ್ಡ ಕುಸಿದು ರಸ್ತೆಗಳು ಕೊಚ್ಚಿಹೋಗಿವೆ. ತೋಟಗಳು ಜಲಾವೃತವಾಗಿವೆ. ರೈಲ್ವೆ ಸಂಪರ್ಕ ಕಡಿದುಹೋಗಿದೆ. ಅರ್ಥಾತ್ ಮನುಷ್ಯನ ಓಡಾಟ ಸ್ಥಗಿತ ಅಷ್ಟೇ. ಎಷ್ಟು ಹೆಜ್ಜೆ ಮುಂದೆ ಹೋದರೂ ಅದಕ್ಕಿಂತ ಒಂದು ಹೆಜ್ಜೆ ಹಿಂದೆಯೇ ಬಂದು ನಿಂತಿದ್ದೇವೆ. ಮನುಕುಲದ ದಾರಿ ವಿನಾಶದತ್ತ ಎನ್ನುವ ಸ್ಪಷ್ಟ ಸಂದೇಶಗಳು ಮತ್ತೆ ಮತ್ತೆ ಸಿಗುತ್ತಿವೆ. ಎಚ್ಚರಗೊಳ್ಳಲು ಇನ್ನೆಷ್ಟು ಮಾದರಿಗಳು ಬೇಕು? ಸಾಮಾಜಿಕರ ಸಾಂಘಿಕ ಹೋರಾಟ ಆಗಬೇಕು. ಒಲಂಪಿಕ್ಸ್‌ನಲ್ಲಿ ಪದಕ ದೊರೆಯಲಿಲ್ಲ ಎಂದು ಆಟಗಾರರನ್ನು ನಿಂದಿಸುತ್ತೇವೆ ಕನಿಷ್ಠ ಅವರು ದೇಶವನ್ನು ಪ್ರತಿನಿಧಿಸಿದ್ದಕ್ಕೆ ಕನಿಷ್ಠ ಸೌಜನ್ಯವೂ ನಮ್ಮಲ್ಲಿಲ್ಲ .

ಅಂತೆಯೇ ಗುಡ್ಡ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತಡವಾಯಿತು ಎಂದರೆ ಸರ್ಕಾರವನ್ನು ಜರೆಯುತ್ತೇವೆ. ಎಲ್ಲ ಸರಿ ಹೋದ ನಂತರ ಅಲ್ಲಿ ಹೋಗಿ ಒಂದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಬರ್ತೀವಿ. ಹಕ್ಕುಗಳನ್ನು ಮಾತ್ರ ಕೇಳುತ್ತಿದ್ದೇವೆ ಪರಿಸರ ಸಂರಕ್ಷಣೆ ಎಂಬ ಮೂಲಭೂತ ಕರ್ತವ್ಯವನ್ನು ಮರೆತಿದ್ದೇವೆ… ಇನ್ನಾದರೂ ಜಾಗೃತರಾಗೋಣ. ‘ಉಣಬಹುದು ನಗುತ ನೀ ಬಂಗಾರ ತಟ್ಟೆಯಲಿ ಉಣಲುಸಾಧ್ಯವೆ ನಿನಗೆ ಬಂಗಾರವನ್ನ’ ಎಂಬ ಮಾತು ನಮ್ಮಲ್ಲಿ ಮಾರ್ದನಿಸಬೇಕು. ಜಲ ಬತ್ತಿ ಹೋದಾಗ ಚಿಲುಮೆ ಕತೆ ಮುಕ್ತಾಯ; ನೆಲ ಬಂಜರಾದಾಗ ಹಸಿರಿನವಸಾನ, ಎಲೆ ಸೋತು ನಿಂತಾಗ ಹೂಬಣ್ಣವೆ ಮಾಯ ; ಮಲೆ ಇದ್ದರಿದೆ ತಂಪು- ಮುದ್ದುರಾಮ ಎಂಬ ಚೌಪದಿಯ ಸತ್ವವನ್ನು ಎಲ್ಲರೂ ಒಪ್ಪಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT