ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿಯ ಸಸ್ಯರಾಮ

ಜಿ.ಎಸ್. ಜಯದೇವ, ಕೃಷ್ಣಮೂರ್ತಿ ಹನೂರು
Published 30 ಜೂನ್ 2024, 0:09 IST
Last Updated 30 ಜೂನ್ 2024, 0:09 IST
ಅಕ್ಷರ ಗಾತ್ರ

ಕೆ .ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಬರುವ ಕೆಸರೂರು ಸುತ್ತಿನ ಅನೇಕಾನೇಕ ವ್ಯಕ್ತಿಗಳ ನಡುವೆ ಅಲ್ಲಿಯ ಅರಣ್ಯವೂ ಒಂದು ಪಾತ್ರವೇ ಆಗಿ ಬರುತ್ತದೆ. ಕೆಸರೂರಿನ ಸಮೃದ್ಧ ಬೆಳೆಯಾದ ಏಲಕ್ಕಿಗೆ ಅಂಟಿದ ವೈರಸ್ ಅದು ಮತ್ತೊಂದು ಬಗೆಯಲ್ಲಿ ಜನಗಳ ಅಂತರಂಗ ಬಹಿರಂಗ ವ್ಯವಹಾರಕ್ಕೂ ತಗುಲಿಕೊಂಡು, ಇಲ್ಲಿಯ ಶ್ರೀಮಂತರಿಗೆ ತಮ್ಮ ಇನ್ನಷ್ಟು ಶ್ರೀಮಂತಿಕೆಗೆ ಕಾಡಿನ ಒಂದೊಂದು ಗಿಡ ಮರ ಬಳ್ಳಿಯೂ ದುಡ್ಡಿನ ಚೀಲದಂತೆ ಕಾಣುತ್ತದೆ. ಈ ಕಾರಣವಾಗಿ ಕೆಸರೂರಿನ ಕಾನಿನಾದ್ಯಂತ ಹೆಜ್ಜೆಯೂರಲು ಎಡೆಯಿಲ್ಲದಂತೆ ಅಥವಾ ಅಲ್ಲಿಯೇ ಹುಟ್ಟಿ ಬೆಳೆಯುವ ಪ್ರಾಣಿ ಸಂಕುಲವೇ ಸಹಜವಾಗಿ ಹೆಜ್ಜೆಯಿಡಲಾಗದಂತೆ ಲಾಂಟಾನ ಬೆಳೆದುಕೊಂಡಿರುವುದನ್ನು ತೇಜಸ್ವಿ ಪುನರಾವರ್ತನೆಯಾಗಿ ಹೇಳುತ್ತಾರೆ.

ತೇಜಸ್ವಿಯವರು ಒಮ್ಮೆ ಗಂಭೀರವಾಗಿ ಮತ್ತೊಮ್ಮೆ ಹಾಸ್ಯದ ಪರಿಕ್ರಮದಲ್ಲಿ ಬರೆದಿರುವ ನಲವತ್ತು ವರ್ಷಗಳ ಹಿಂದಿನ ಕಾದಂಬರಿ ಸಂಗತಿಯಂತೆ, ಈ ಹೊತ್ತಿನ ವಾಸ್ತವ ಎಂದರೆ ದಕ್ಷಿಣ ಭಾರತ ಅಥವಾ ಏಷ್ಯಾದ ಸಸ್ಯ ಸಮೃದ್ಧಿಯ ತಾಣ ಎನಿಸಿರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಇನ್ನಿಲ್ಲದಂತೆ ಬೆಳೆಯುತ್ತಿರುವ ಲಾಂಟಾನದ ಹಾವಳಿ ತಡೆಯದಂತಿದೆ. ಊರ ಬಯಲಲ್ಲಿ ಪಾರ್ಥೇನಿಯಂ ಬೆಳೆದಂತೆ ಇದೀಗ ಅರಣ್ಯ ಸುತ್ತಿನಲ್ಲಿ ಲಂಟಾನಾ ಹಬ್ಬತೊಡಗಿದೆ. ನಲವತ್ತು ವರ್ಷಗಳ ಹಿಂದೆ ತೇಜಸ್ವಿ ಬರೆದದ್ದನ್ನೇ, ಹೇಳುತ್ತಿದ್ದುದನ್ನೇ ಇಂದು ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಬುಡಕಟ್ಟಿನ ರಾಮೇಗೌಡರೂ ಪುನರಾವರ್ತನೆಯಾಗಿ ಹೇಳುತ್ತಾರೆ.

ಈಶಾನ್ಯದ ದೇವಮೂಲೆಯಿಂದ ಆರಂಭವಾಗುವ ಕರ್ನಾಟಕದ ಅರಣ್ಯ ಸೀಮೆ, ಅದು ಹಾಗೆಯೇ ಹಬ್ಬಿಕೊಂಡು ನೈರುತ್ಯ ದಿಕ್ಕಿನ ಬಿಳಿಗಿರಿ ರಂಗನ ಗುಡ್ಡ ಬೆಟ್ಟಗಳಿಂದ ಹಾಯುತ್ತ ದಕ್ಷಿಣದ ಬಂಡೀಪುರ ಅಲ್ಲಿಂದ ಕೊಡಗಿನಾಚೆಯ ಸಹ್ಯಾದ್ರಿ ಮುಟ್ಟುತ್ತದೆ. ಇದು ಕರ್ನಾಟಕದ ಪ್ರಾಕೃತಿಕ ಶ್ರೀಮಂತಿಕೆ. ಈ ಅರಣ್ಯದ ಜೀವಸಂಕುಲ ಮತ್ತು ಸಸ್ಯಸಂಕುಲದ ನಡುವೆ ಅನೇಕ ಬುಡಕಟ್ಟು ಸಮೂಹಗಳು ವಾಸವಾಗಿರುತ್ತವೆ. ಇಲ್ಲಿಯ ಆದಿವಾಸಿ ಸಮೂಹಗಳ ಜೀವನ ಬದಲಾವಣೆ, ಗ್ರಾಮ ನಗರಗಳ ಸುಧಾರಣೆಯಷ್ಟು ಸುಲಭವಲ್ಲ. ಬುಡಕಟ್ಟುಗಳದು ಸರಳ ಜೀವನವಾದರೂ ಇವರ ನಡುವೆ ಕೆಲವೇ ಕೆಲವು ನಂಬಿಕೆ ಸಂಪ್ರದಾಯಗಳು ಬಲವಾದವು. ಅರಣ್ಯದ ನಡುವಣ ಮೃಗ ಸಂತತಿಗೆ ಹೆದರದ ಇವರು ತಮ್ಮ ನಂಬಿಕೆಗಳ ಪಲ್ಲಟಕ್ಕೆ ಬೆದರುತ್ತಾರೆ. ಇದೇನೇ ಇರಲಿ, ಇಪ್ಪತ್ತಾರು ವರ್ಷಗಳಿಂದ ರಾಮೇಗೌಡರ ಸಸ್ಯ ಸಂರಕ್ಷಣೆ ಮತ್ತು ಆ ಕುರಿತು ಅವರಿಗಿರುವ ಜ್ಞಾನವನ್ನು ನಾಡಿನ ಜನ ಮೆಚ್ಚಲೇಬೇಕು.

ಹುಟ್ಟಿನಿಂದ ತಮ್ಮ ಜೀವನ ಪರ್ಯಂತ ಅರಣ್ಯದಲ್ಲೇ ಬದುಕುವ ಈ ಸೋಲಿಗ ಸಮೂಹದ ಮೈ ಮನಸಿನಲ್ಲಿ ಕಾಡು ಮತ್ತು ಅಲ್ಲಿಯ ಜೀವ ವೈವಿಧ್ಯದ ಸಂಗತಿಗಳು ಸಹಜವಾಗಿಯೇ ತುಂಬಿರುತ್ತವೆ. ಇನ್ನೇನು ಬಿಳಿಗಿರಿ ರಂಗನ ಬೆಟ್ಟದ ಊರಲ್ಲದ ಊರನ್ನು ಸೇರುತ್ತೇವೆ ಅನ್ನುವ ಒಂದು ಕಿಲೊಮೀಟರ್‌ ಹಿಂದಕ್ಕೆ ರಸ್ತೆಯ ಅಂಚಿನಲ್ಲೇ ಜಡೆ ರುದ್ರಸ್ವಾಮಿಯ ಹೆಸರಿನ ರಾಮೇಗೌಡರ ಸಸ್ಯ ಸಂಕುಲದ ನರ್ಸರಿ ಕಾಣಿಸುತ್ತದೆ. ಅದರ ಪಕ್ಕದಲ್ಲೇ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಆ ನರ್ಸರಿಯಲ್ಲಿ ಬೆಳೆಸಲಾಗಿರುವ ಮತ್ತು ಮಾರಾಟಕ್ಕಿರುವ ಹೂವು ಮತ್ತು ಮೂಲಿಕೆ ಸಸ್ಯ ಸಮೂಹದ ಹೆಸರುಗಳ ದೊಡ್ಡ ಫಲಕವಿದೆ. ಈ ಸಸ್ಯಾರಾಮದ ಗಿಡಗಳು ಸೀಮೆಗೊಬ್ಬರ, ದ್ರಾವಕ ಇತ್ಯಾದಿಗಳಿಂದ ಬೆಳೆಯುತ್ತಿರುವವಲ್ಲ. ಅಷ್ಟು ಬಂಡವಾಳ ಹಾಕಿ ಈ ಸಸಿಗಳನ್ನು ಬೆಳೆಸುವ ಶಕ್ತಿ ರಾಮೇಗೌಡರಿಗೆ ಇಲ್ಲವೂ ಇಲ್ಲ. ಈ ಸಸಿಗಳು ಬರಿಯ ಮಣ್ಣು ಅದರ ಸಾರದ ಮೇಲೆ ಬೆಳೆದವು. ಮಳೆಯ ಹೆಚ್ಚಳದಿಂದಲೋ, ಬಿಸಿಲಿನಿಂದಲೋ, ಮತ್ಯಾವುದೋ ಕಾರಣಕ್ಕೋ ಕೊಳೆ ರೋಗ ತಗುಲಿದರೆ ಒಂದಿಷ್ಟು ಶಿಲಿಂದ್ರ ನಾಶಕ ಸಿಂಪಡಿಸಿದರೆ ಆಯಿತು. ರಾಮೇಗೌಡರಿಗೆ ಯಾವ ಸೀಜನ್ನಿಗೆ ಯಾವ ಗಿಡ ತಂದು ತಮ್ಮ ನರ್ಸರಿಯಲ್ಲಿ ಬೆಳೆಸಬೇಕೆಂಬುದು ಗೊತ್ತು. ಇಲ್ಲಿರುವ ಸಸ್ಯ ವೈವಿಧ್ಯ ಸುಮಾರು ಮುನ್ನೂರರಿಂದ ನಾನೂರು. ಉಪ್ಪಿನಕಾಯಿಯ ಕಾರಣಕ್ಕಾಗಿ ಮಾಗಳಿ ಬೇರಿಗೆ ಹೆಚ್ಚಿನ ಬೇಡಿಕೆ. ಅಳಲೆಕಾಯಿಗೂ ಅದರ ಔಷಧಿಗೂ ಕೋರಿಕೆ ಉಂಟು. ರಾಮೇಗೌಡರಿಗೇ ಅಷ್ಟಿಷ್ಟು ಮೂಲಿಕೆ ಔಷಧಿ ಜ್ಞಾನವಿದೆ.

ಬಿಕ್ಕಿಲು, ಏಕಮುಖ ರುದ್ರಾಕ್ಷಿ ಬಿತ್ತನೆ ಈ ವರ್ಷ ಮಾಡಿದರೆ ಅದು ಚಿಗುರೊಡೆಯುವುದು ಮುಂದಿನ ವರ್ಷವೇ. ಕಾನು ಧೂಪವೂ, ಜಾಲಾರಿಯೂ ಅಷ್ಟೇ. ನೂರಾರು ವರ್ಷ ಬದುಕುವ ಗಿಡಮರಗಳ ಹುಟ್ಟು ಬೆಳವಣಿಗೆ ನಿಧಾನವೇ. ಧೂಪದ ಗಿಡ, ಮಾಗಳಿ ಬಳ್ಳಿ ಸಿಕ್ಕುವುದು ಕಷ್ಟ. ಕಾಡೆಲ್ಲ ತಿರುಗಬೇಕು. ಬೆಳೆದಿರುವ ಲಾಂಟಾನಾದ ನಡುವೆ ಅಡ್ಡಾಡುವುದೇ ಕಷ್ಟ. ಮಾಗಳಿ ಬೇರಿನ ಇನ್ನೊಂದು ಹೆಸರು ನಿಮಗೆ ಗೊತ್ತೇ? ಅದನ್ನು ರಾವಣನ ಮೀಸೆ ಎಂದು ಕರೆಯುವುದುಂಟು ಎನ್ನುತ್ತಾರೆ ರಾಮೇಗೌಡರು. ಇದೀಗ ಬೆಟ್ಟದ ನೆಲ್ಲಿಕಾಯಿ ಹೆಚ್ಚು ಸಿಗುತ್ತಿಲ್ಲ, ಉಪ್ಪಿಲು ಗಿಡ ಕಳೆಯಂತೆ ಬೆಳೆದು ಅದರ ಸಂತಾನವನ್ನು ಹಾಳು ಮಾಡುತ್ತಿದೆಯಂತೆ.

ಹೀಗೆ ಸಸ್ಯ ಸಂತತಿಯ ವಿವರಗಳನ್ನು ಕೇಳಿದಂತೆಲ್ಲ ಹೇಳುತ್ತ ಹೋಗುವ ರಾಮೇಗೌಡರು ಅರಣ್ಯದ ಯಾವ್ಯಾವ ಪ್ರಾಣಿ ಪಕ್ಷಿಗಳಿಗೆ ಯಾವ್ಯಾವ ಥರದ ಬೀಜ ಸೊಪ್ಪು ಮಾಂಸ ಇಷ್ಟವೆಂಬುದನ್ನು ಹೇಳುತ್ತಾರೆ. ಇವರ ನರ್ಸರಿಯ ನೀರಿನ ಅನುಕೂಲಕ್ಕೆ ಕೊಳವೆಬಾವಿ ಕೊರೆಸಲು ಅನುಮತಿ ಇಲ್ಲದೇ ಹೋದುದರಿಂದ ನಿತ್ಯ ಬೇರೆ ಕಡೆಯಿಂದ ನೀರು ಸಾಗಿಸಿ ತಂದು ನರ್ಸರಿಯ ಸಸ್ಯ ಸಂಕುಲವನ್ನು ರಕ್ಷಿಸುತ್ತಿದ್ದಾರೆ. ಕಾಡನ್ನು ಯಾರ ಕೈಯಲ್ಲೂ ಕೃತಕ ರೀತಿಯಿಂದ ಬೆಳೆಸಲಾಗದು, ಆದರೆ ರಕ್ಷಿಸಬಹುದು. ಇಂಥದೊಂದು ಕಾಯಕಕ್ಕೆ ರಾಮೇಗೌಡರಿಗೆ ಬೆಂಬಲವಾಗಿ ನಿಂತಿರುವವರು ಅವರ ಹೆಂಡತಿ ಮತ್ತು ಮೂವರು ಹೆಣ್ಣು ಮಕ್ಕಳು. ಈ ಹಿಂದೆ ರಾಮೇಗೌಡರು, ಮದ್ಯಪಾನ ಚಟಕ್ಕೆ ದಾಸರಾಗಿದ್ದು ಈ ಸಸ್ಯಜೀವಿಗಳ ಸಹವಾಸದಿಂದ ದೂರವಾಗಲು ಸಾಧ್ಯವಾಯಿತು ಎನ್ನುತ್ತಾರೆ.

ಅರಣ್ಯದ ನಡುವಣ ಈ ಬಗೆಯ ಸಸ್ಯ ಕಾಯಕಕ್ಕೆ ರಾಮೇಗೌಡರಿಗೆ ಈಚೆಗೆ ಅವರಿರುವ ಬಿಳಿಗಿರಿ ರಂಗನ ಬೆಟ್ಟದ ಬಂಗ್ಲೆ ಪೋಡಿನಲ್ಲಿಯೇ ಬೆಂಗಳೂರಿನ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್‌ನ  ರಾಜಶೇಖರ್ ಅವರಿಂದ ಒಂದು ಲಕ್ಷ ರೂಪಾಯಿಗಳ ನಗದು ಸಹಾಯದ ಸನ್ಮಾನ ಸಮಾರಂಭ ಜರುಗಿತು. ಇದರೊಂದಿಗೆ ರಾಮೇಗೌಡರ ನರ್ಸರಿಯ ಕೆಲಸಕ್ಕೆ ಇನ್ನಿತರ ಸಾಮಾನು ಸರಂಜಾಮನ್ನೂ ಒದಗಿಸಿ, ಅವರ ಅರಣ್ಯ ರಕ್ಷಣೆಯ ಸೇವೆಯನ್ನು ಶ್ಲಾಘಿಸಲಾಯಿತು.

ಪ್ರಕೃತಿಯನ್ನು ಮಣಿಸುವುದು ಕಷ್ಟ. ಎರಡು ಮೂರು ವಾರಗಳ ಹಿಂದೆ ಇದ್ದ ಬಿಸಿಲ ಝಳ ಈಗಲೂ ಮುಂದುವರೆದಿದ್ದರೆ ಅದೆಂಥ ವಾತಾವರಣ ಸೃಷ್ಟಿಯಾಗುತ್ತಿತ್ತೋ ಏನೋ! ಹೀಗಾಗಿ ಪ್ರಕೃತಿಯ ನಡುವೆ ಇರುವವರು ಪ್ರಕೃತಿಗೆ ಮಣಿದೇ ಬದುಕಬೇಕಾಗಿದೆ.

ಬೆಳೆಸಿರುವ ಸಸ್ಯಗಳು
ಬೆಳೆಸಿರುವ ಸಸ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT