ಬೆಂಗಳೂರಿನ ಕನಕಪುರ ರಸ್ತೆಯ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ‘ಮಂಡಲ ಸಾಂಸ್ಕೃತಿಕ ಕೇಂದ್ರ’ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಈ ಕೇಂದ್ರದ ಒಳಗೆ ಸುತ್ತು ಹಾಕಿದರೆ ಅಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶದ ಬೊಂಬೆಗಳ ಜಗತ್ತು ತೆರೆದುಕೊಳ್ಳುತ್ತದೆ. 600 ಆಡಿಸುವ ಬೊಂಬೆಗಳು ಹಾಗೂ 400 ಪ್ರದರ್ಶಕ ಬೊಂಬೆಗಳ ಸಂಗ್ರಹವೇ ಇದೆ. ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ, ಮಹಾರಾಷ್ಟ್ರದ ಸಾಂಪ್ರದಾಯಿಕ ಬೊಂಬೆಗಳಿವೆ. ಇಂಡೊನೇಷ್ಯಾ, ಶ್ರೀಲಂಕಾದ ರಾಮಾಯಣದ ಕಥಾನಕದ ಬೊಂಬೆಗಳೂ ಉಂಟು. ಜರ್ಮನಿ, ಬಲ್ಗೇರಿಯಾ, ಸ್ಪೇನ್, ಫ್ರಾನ್ಸ್, ಅಮೆರಿಕ ಸಹಿತ ಹಲವು ದೇಶಗಳ ಬೊಂಬೆಗಳು ಜಾಗ ಪಡೆದಿವೆ.

ಬೊಂಬೆ ಪ್ರದರ್ಶನಕ್ಕಾಗಿಯೇ ಇಲ್ಲಿ ಗ್ಲಾಸ್ ಹೌಸ್, ರಥ ಬೀದಿ, ವಸಂತ ವನ, ಸಮರಸ ಹೆಸರಿನ ಅಂಗಳಗಳಿವೆ. ಇಲ್ಲಿ ನಿಯಮಿತವಾಗಿ ಪ್ರದರ್ಶನ, ಕಾರ್ಯಾಗಾರ, ಮಕ್ಕಳಿಗೆ ಬೊಂಬೆಗಳ ಅರಿವು ಮೂಡಿಸುವ ಚಟುವಟಿಕೆ ನಡೆಯುತ್ತವೆ. ಶಾಲೆಗಳಿಗೂ ಬೊಂಬೆಗಳನ್ನು ತೆಗೆದುಕೊಂಡು ಹೋಗಿ ಪ್ರದರ್ಶನ ನೀಡಲಾಗುತ್ತದೆ. ದಶಕದಿಂದ ‘ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ’ವು ದೇಶ–ವಿದೇಶದ ಕಲೆ ಮತ್ತು ಕಲಾವಿದರನ್ನು ಬೆಸೆದಿದೆ.

ಈ ಕೇಂದ್ರದ ರೂವಾರಿ ಅನುಪಮ ಹೊಸಕೆರೆ. ಅವರಿಗೆ ಪ್ರದರ್ಶನದ ಜತೆಗೆ ಬೊಂಬೆಗಳನ್ನು ಸಂಗ್ರಹಿಸುವ ಹವ್ಯಾಸ. ಆದ್ದರಿಂದಲೇ ಅವುಗಳಿಗೆ ನೆಲೆ ಒದಗಿಸಬೇಕು. ಬೊಂಬೆಗಳ ಪ್ರದರ್ಶಕ ಕಲೆಗಳ ಕೇಂದ್ರವನ್ನು ರೂಪಿಸಬೇಕು ಎನ್ನುವ ಅವರ ಕನಸಿಗೆ ಪತಿಯ ತಂದೆ ನೀರೆರೆದರು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಒಂದು ಎಕರೆ ಜಾಗ ನೀಡಿದರು. ಅಲ್ಲಿ ಒಂದೂವರೆ ದಶಕದ ಹಿಂದೆಯೇ ‘ಧಾತು ಬೊಂಬೆಗಳ ಕೇಂದ್ರ’ ಸಣ್ಣದಾಗಿ ಆರಂಭಿಸಿ ಈಗ ‘ಮಂಡಲ ಸಾಂಸ್ಕೃತಿಕ ಕೇಂದ್ರ’ದ ರೂಪ ಪಡೆದುಕೊಂಡಿದೆ.

ಅನುಪಮ ಅವರು ಮೂರು ದಶಕದಿಂದ ಬೊಂಬೆಗಳ ಕಲಾವಿದೆ, ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ರೂಪಿಸಿರುವ ಧಾತು ಬೊಂಬೆಗಳ ಪ್ರದರ್ಶಕ ಕೇಂದ್ರವೂ ಹೊಸ ತಲೆಮಾರಿಗೆ ಬೊಂಬೆಗಳು, ಅದರ ಮಹತ್ವ ಸಾರುತ್ತಿದೆ. ಭಾರತ ಹಾಗೂ ವಿದೇಶದ ಬೊಂಬೆ ಸಂಸ್ಕೃತಿಯ ಸೇತುವೆಯಂತೆಯೇ ಅವರು ಕೆಲಸ ಮಾಡುತ್ತಿದ್ದಾರೆ.

ಅನುಪಮ ಅವರಿಗೆ ಸಂಸ್ಕೃತಿ ಅನ್ವೇಷಣೆ, ಹೊಸದನ್ನು ತಿಳಿಯುವುದೆಂದರೆ ಬಲುಪ್ರೀತಿ. ಎಳೆವೆಯಲ್ಲಿ ಅವರಿಗೆ ಪ್ರಭಾವ ಬೀರಿದ್ದು ಅಜ್ಜಿಯ ಕಥೆಗಳು. ನೃತ್ಯ ಪಟುವಾಗಿ ರೂಪುಗೊಂಡಿದ್ದ ಅವರು ಎಂಜಿನಿಯರಿಂಗ್ ಮುಗಿಸಿ ಉನ್ನತ ಶಿಕ್ಷಣಕ್ಕೆ ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಸ್ಟ್ರಕ್ಚರಲ್ ಎಂಜಿನಿಯರ್ ಆಗಿರುವ ಪತಿ ವಿದ್ಯಾಶಂಕರ ಹೊಸಕೆರೆ ಅವರೊಂದಿಗೆ ಒಂದೂವರೆ ದಶಕ ವಿದೇಶದಲ್ಲಿ ನೆಲೆಸಿದರೂ ಅವರ ಕಲಾಸಕ್ತಿಗಳು ಕಡಿಮೆಯಾಗಿರಲಿಲ್ಲ.

ವಿದೇಶದಲ್ಲಿ ಒಮ್ಮೆ ಬೊಂಬೆಗಳ ಪ್ರದರ್ಶನ ನೋಡಿ ಅವರಿಗೆ ಆ ಕಡೆ ಹೆಚ್ಚಿನ ಒಲವು ಬೆಳೆಯಿತು. ಭಾರತದಲ್ಲಿನ ಬೊಂಬೆಗಳ ಕುರಿತು ಅಧ್ಯಯನ ಮಾಡುತ್ತಲೇ ವಿಶೇಷ ಬೊಂಬೆಗಳ ಸಂಗ್ರಹಕ್ಕೂ ಒತ್ತು ನೀಡಿದರು. ಎಂಜಿನಿಯರ್ ಅನುಪಮ ಸಂಪೂರ್ಣ ಕಲಾವಿದೆಯಾಗಿಯೇ ಬದಲಾದರು. ಬೊಂಬೆಯಾಟದ ಹಿರಿಯ ಕಲಾವಿದ ಎಂ.ಆರ್.ರಂಗನಾಥರಾವ್ ಸಹಿತ ಹಲವರು ಜ್ಞಾನ ವಿಸ್ತರಣೆಗೆ ನೆರವಾದರು.

ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರವಾಸ ಮಾಡಿ ಬೊಂಬೆಯಾಟದ ಹಿನ್ನೆಲೆ, ಕುಟುಂಬಗಳು, ಅಲ್ಲಿನ ಪರಂಪರೆಯ ಜ್ಞಾನ ಪಡೆದುಕೊಂಡರು. ಭಾರತದ ಹಲವು ರಾಜ್ಯಗಳಲ್ಲಿ ಇರುವ ಬೊಂಬೆಯಾಟ ಸಂಸ್ಕೃತಿಯ ಅಧ್ಯಯನ ಮಾಡಿದರು. ಹೊರ ದೇಶಗಳಲ್ಲಿನ ಬೊಂಬೆಗಳು, ಅಲ್ಲಿನ ರೀತಿ ರಿವಾಜು, ಬೊಂಬೆಗಳನ್ನು ಬಳಸುವ ಕ್ರಮದ ಅಧ್ಯಯನ ಮಾಡುತ್ತಾ ಹೋದರು. ಇದರಿಂದ ಸ್ಥಳೀಯ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಬೊಂಬೆಗಳ ಕುರಿತಾದ ಜ್ಞಾನ ಅವರನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರೇಪಿಸಿತು.

ಭಾರತದ ಪುರಾತನ ಗ್ರಂಥಗಳು, ಕಥಾನಕಗಳು, ಪಾತ್ರಗಳ ಅರಿವನ್ನು ವಿಸ್ತರಿಸಿಕೊಂಡು ಅನುಪಮ ಅವರಿಗೆ ಬೊಂಬೆಗಳನ್ನು ಬಳಸಿ ಪ್ರದರ್ಶನಗಳನ್ನು ನೀಡಲು ಸಾಧ್ಯವಾಯಿತು. ಕರ್ನಾಟಕ ಮಾತ್ರವಲ್ಲದೇ ಭಾರತದ ನಾನಾ ಭಾಗ, ಹಲವು ದೇಶಗಳಲ್ಲೂ ಬೊಂಬೆಗಳ ಕುರಿತು ಪ್ರದರ್ಶನ, ಉಪನ್ಯಾಸಗಳು, ವಿಚಾರ ವಿನಿಮಯವನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಅಕಾಡೆಮಿಗಳಲ್ಲಿಯೂ ಸಕ್ರಿಯರು.

ಬೊಂಬೆ ಕುಟುಂಬ

ಇದು ಬೊಂಬೆಗಳ ವಿಶೇಷ ನಂಟಿನ ಕುಟುಂಬ. ಅನುಪಮ ಅವರ ಆಸಕ್ತಿಗೆ ನೀರೆರೆದವರು ಪತಿ ವಿದ್ಯಾಶಂಕರ ಹೊಸಕೆರೆ. ಪುತ್ರಿಯರಾದ ದಿವ್ಯ ಹೊಸಕೆರೆ ಹಾಗೂ ಪ್ರಕೃತಿ ಹೊಸಕೆರೆ, ಪುತ್ರ ವೇಧಸ್ ಹೊಸಕೆರೆ. ಇವರೆಲ್ಲಾ ಭಿನ್ನ ವೃತ್ತಿಯಲ್ಲಿದ್ದರೂ ಕಲೆಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡು ಬೊಂಬೆಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಮಹಾದಾಸೆ ಹೊಂದಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳ ಬೊಂಬೆ ಕಲಾವಿದರು, ತಂಡಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಅವರ ಪ್ರದರ್ಶನವನ್ನೂ ಆಯೋಜಿಸುತ್ತಾರೆ.

ಹಿರಿಯ ಕಲಾವಿದರಾದ ದತ್ತಾತ್ರೇಯ ಅರಳಿಕಟ್ಟಿ, ಗಾಯತ್ರಿ ರಾವ್ ಸಹಿತ ಹಲವರ ಬೆಂಬಲವೂ ಇದೆ. ಕರ್ನಾಟಕ ಹಲವು ಭಾಗಗಳಲ್ಲಿ ನೆಲೆಸಿರುವ ಬೊಂಬೆ ಕಲಾವಿದರು ಬಂದು ಪ್ರದರ್ಶನ ನೀಡುತ್ತಾರೆ.

‘ಎಂಜಿನಿಯರ್ ಆಗಿ ಏನು ಗಳಿಸುತ್ತಿದ್ದೆ ಎನ್ನುವುದಕ್ಕಿಂತ ನನ್ನ ಅಭಿರುಚಿ, ಅದನ್ನು ಪೋಷಿಸುವ ಕುಟುಂಬ, ಆಪ್ತೇಷ್ಟರ ಬೆಂಬಲದಿಂದ ಕರ್ನಾಟಕದಲ್ಲಿ ಬೊಂಬೆ ಕೇಂದ್ರ ಸ್ಥಾಪಿಸಿದೆ. ಈಗ ಪ್ರತಿ ವರ್ಷ ಅಂತರರಾಷ್ಟ್ರೀಯ ಬೊಂಬೆಯಾಟದ ಪ್ರದರ್ಶನ ನೀಡುತ್ತಿರುವುದು, ಜಗತ್ತಿನ ಹಲವು ಭಾಗವನ್ನು ಬೊಂಬೆಗಳೊಂದಿಗೆ ನೋಡುವ ಅವಕಾಶ ಸಿಕ್ಕಿರುವುದು ಖುಷಿ ನೀಡುತ್ತದೆ’ ಎನ್ನುತ್ತಾರೆ ಅನುಪಮ.

ಸಾಂಪ್ರದಾಯಿಕವಾಗಿ ಮಾಡಿದ ಮರದಬೊಂಬೆಗಳಿಗೆ ವೇಷಭೂಷಣ, ಅಲಂಕಾರದ ಮೂಲಕ ವಿವಿಧ ರೂಪಗಳನ್ನು ನೀಡಲಾಗುತ್ತದೆ. ತಲೆ, ತೋಳು, ಅಂಗೈ, ಮುಂಗೈಗಳನ್ನು ಹೊಂದಿರುವ ಬೊಂಬೆಗಳನ್ನು ಕಲಾವಿದರು ತಮ್ಮ ಧ್ವನಿಗೆ ಅನುಗುಣವಾಗಿ ಆಡಿಸಿ ಚಾಕಚಕ್ಯತೆ ಮೆರೆಯುತ್ತಾರೆ. ಅರ್ಧ ಗಂಟೆಯಿಂದ ಒಂದೂವರೆ ಗಂಟೆವರೆಗೂ ಇರುವ ಪ್ರದರ್ಶನಗಳು ಬೊಂಬೆಗಳ ಮಹತ್ವವನ್ನು ತಿಳಿಸಿಕೊಡುತ್ತವೆ.

ಮೂರು ದಿನ ಪ್ರದರ್ಶನ

ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಜನವರಿ 9 ರಿಂದ ಮೂರು ದಿನ ನಡೆಯಲಿದೆ.

ಅಲ್ಲಿ ಕರ್ನಾಟಕದ ನಾನಾ ಭಾಗದ ಕಲಾವಿದರು ಪ್ರದರ್ಶನ ನೀಡುವರು. ಜೊತೆಗೆ ಇಟಲಿಯ ಆಂಡ್ರಿಯಾ ಫೇಡಿ ಅವರ ಕ್ರೇಜಿ ಅನಿಮಲ್ಸ್ ಬೊಂಬೆ ಪ್ರದರ್ಶನ ವಿಶೇಷ ಆಕರ್ಷಣೆ. ಮೊದಲ ದಿನ ಬೊಂಬೆಗಳೊಂದಿಗೆ ಪಥ ಸಂಚಲನ ಗಮನ ಸೆಳೆಯಲಿದೆ. ಪ್ರವೇಶ ಉಚಿತವಾಗಿದೆ.

ಎಂಟು ಬಗೆಯ ಬೊಂಬೆಗಳು...

ಮರದ ಬೊಂಬೆ, ಸಲಾಕಿ ಬೊಂಬೆ, ಸೂತ್ರದ ಸಲಾಕಿ ಬೊಂಬೆ, ಕೀಲು ಬೊಂಬೆ, ದೊಡ್ಡಾಟ, ಈಚನೂರು ಶೈಲಿ, ಮೂಡಲಪಾಯ ಬೊಂಬೆ, ಆಧುನಿಕ ಬೊಂಬೆಗಳನ್ನು ಗುರುತಿಸಲಾಗುತ್ತದೆ. ಇವುಗಳನ್ನು ಕೇಂದ್ರೀಕರಿಸಿಯೇ ತಂಡಗಳು ಬೊಂಬೆಯಾಟದ ಪ್ರದರ್ಶನ ನೀಡುತ್ತವೆ.

ಸೂತ್ರ ಸಲಾಕಿ ಬೊಂಬೆಯಾಟಕ್ಕೆ ಭಾರತದಲ್ಲಿ ಸುದೀರ್ಘ ಪರಂಪರೆಯಿದೆ. ವಿಜ್ಞಾನ, ತತ್ವ, ಸಿದ್ಧಾಂತ, ನಾಟ್ಯ, ಸಂಗೀತದೊಂದಿಗೂ ಸಂಬಂಧವನ್ನು ಇದು ಹೊಂದಿದೆ. ಸಾಹಿತ್ಯ, ಸಂಗೀತವನ್ನು ಬಳಸಿ ಸಹಜ ಅಭಿಯನದ ಮೂಲಕವೇ ಬೊಂಬೆಯ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತದೆ.

ಬೊಂಬೆಗಳಿಗೆ ಸಲಾಕಿಗಳೇ ಆಸರೆ. ಬೊಂಬೆಗಳು ಹೆಚ್ಚು ತೂಕ ಹೊಂದಿರುವುದರಿಂದ ಅವುಗಳನ್ನು ನಿಯಂತ್ರಿಸಲು ಸಲಾಕಿಗಳನ್ನು ಬಳಸಲಾಗುತ್ತದೆ. ಆ ಚಾಕಚಕ್ಯತೆಯೂ ಕಲಾವಿದರಿಗೆ ಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.