ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ರಿ ಭಿನ್ನವಾಗೈತ್ರಿ

Published 17 ಮೇ 2024, 23:30 IST
Last Updated 17 ಮೇ 2024, 23:30 IST
ಅಕ್ಷರ ಗಾತ್ರ

ಮಳೆಗಾಲ ಬಂತು. ತುಂತುರು ಹನಿಯೇ ಇರಲಿ, ಬಿರುಸು ಮಳೆಯೇ ಬರಲಿ ಆಶ್ರಯ ನೀಡುವುದು ಕೊಡೆ/ ಛತ್ರಿಗಳೇ. ಮಳೆಗಾಲದಲ್ಲಿ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಕೊಡೆಯಂತೂ ಇದ್ದೇ ಇರುತ್ತದೆ. ತೋಯ್ದು ತೊಪ್ಪೆಯಾಗಿ, ಮಳೆಯನ್ನು ಬೈದುಕೊಂಡು ಓಡಾಡುವ ಮೊದಲು ಹೊರಗೆ ಕಾಲಿಡುವ ಮುನ್ನ ಬ್ಯಾಗ್‌ನಲ್ಲಿ ಕೊಡೆಯೊಂದನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. 

ಕೊಡೆಗೆ ಎಂಥ , ಹೇಗಾದರೂ ಇದ್ದೀತು ಎಂದು ಮೂಗು ಮುರಿಯಬೇಡಿ. ಕೊಡೆಗಳಲ್ಲಿಯೂ ತರಹೇವಾರಿ ಉಂಟು. ಸಂದರ್ಭಕ್ಕೆ ಅನುಸಾರವಾಗಿ ದಿರಿಸಿಗೆ ಹೊಂದಿಕೆಯಾಗುವಂಥ ಕೊಡೆ ಹಿಡಿದರೆ ಅದರ ಗತ್ತು, ಗೈರತ್ತೇ ಬೇರೆ ಎನ್ನಿ. ಮಳೆ ಗಾಳಿಯಲ್ಲಿಯೂ ಬಿರುಸಾಗಿ ನಡೆಯಲು ನೆರವಾಗುವ ಕೊಡೆಗಳ  ಬಣ್ಣ, ವಿನ್ಯಾಸ, ಬಾಳಿಕೆಯಲ್ಲಿ ಹಲವು ಬಗೆಯುಂಟು. 

ಕ್ಲಾಸಿಕ್‌ ಕೊಡೆಗಳು 

ಈ ಕ್ಲಾಸಿಕ್‌ ಕೊಡೆಗಳು ಸಹಜವಾಗಿ ಮಡಚುವ, ಉದ್ದ ಮರದ ಹಿಡಿಕೆಯನ್ನು ಹೊಂದಿರುವ ಕೊಡೆಗಳು. ಈಗೀಗ ಮರದ ಹಿಡಿಕೆ ಬದಲು, ಪಾಲಿಸ್ಟರ್‌, ಮೆಟಲ್‌ಗಳನ್ನು ಬಳಸಿಯೂ ಹಿಡಿಕೆ ಮಾಡಲಾಗುತ್ತದೆ. ತುದಿಯು ಮೊನಚಾಗಿದ್ದು, ಎಲ್ಲ ಸಂದರ್ಭಗಳಲ್ಲಿಯೂ ಬಳಸಬಹುದು. ಆದರೆ ಇದರಲ್ಲಿ ಸಾಮಾನ್ಯವಾಗಿ ಪುಶ್‌ ಬಟನ್‌ ಇರುವುದಿಲ್ಲ. ಇದು ಇಂಗ್ಲೆಡ್‌ನ ವಾತಾವರಣಕ್ಕೆ ಸೂಕ್ತವಾಗುವಂತೆ ತಯಾರದ ಕೊಡೆಗಳಂತೆ. ಸದ್ಯ ಎಲ್ಲ ಕಡೆಗಳಲ್ಲಿಯೂ ಬಳಕೆಯಾಗುತ್ತಿದೆ. 

 ತ್ರಿಫೋಲ್ಡ್ ಕೊಡೆಗಳು 

ಇವು ಪ್ರಯಾಣಕ್ಕೆ ಹೇಳಿ ಮಾಡಿಸಿದಂಥ ಕೊಡೆಗಳು. ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂಥ ಕೊಡೆಗಳಿವು. ಮಡಚಿ, ಬ್ಯಾಗಿನಲ್ಲಿ ಇಟ್ಟುಕೊಳ್ಳುವಷ್ಟು ಗಾತ್ರದಲ್ಲಿ ಸಣ್ಣದಿರುತ್ತದೆ. ಧರಿಸುವ ಕೋಟ್‌ ಜೇಬಿನಲ್ಲಿ ಇಟ್ಟುಕೊಂಡು ಆರಾಮಾಗಿ ನಡೆಯಬಹುದು. ಅಯ್ಯೊ ಕೊಡೆ ಮರೆತೆ! ಎನ್ನುವ ಮರೆಗುಳಿಗಳಿಗೂ ಹೇಳಿಮಾಡಿಸಿದಂಥ ಕೊಡೆ ಇದು. 

ಡೋರ್‌ಮನ್‌ ಕೊಡೆಗಳು

ಇವು ಇತರೆ ಕೊಡೆಗಳಿಂತ ತುಸು ದೊಡ್ಡದಾಗಿರುತ್ತದೆ. ಇಬ್ಬರೂ ಒಟ್ಟಿಗೆ ಸಾಗಲು ಈ ಕೊಡೆ ಹೆಚ್ಚು ಅನುಕೂಲಕರ. ಆದರೆ  ಗಾತ್ರದಲ್ಲಿ ಸ್ವಲ್ಪ ಹಿರಿದೇ ಆಗಿರುವುದರಿಂದ ಇದನ್ನು ಒಯ್ಯಲು ತುಸು ಕಷ್ಟವಾಗುತ್ತದೆ. ಬೆಲೆಯೂ ತುಸು ದುಬಾರಿ ಇರುತ್ತದೆ. ಮಳೆಯಲ್ಲಿ ಜೊತೆಯಾಗಿ ನಡೆಯಬೇಕು ಎನ್ನುವ ಆಸೆಯಿದ್ದವರು ತಮ್ಮಿಷ್ಟದ ಜೀವದೊಂದಿಗೆ ಡೋರ್‌ಮನ್‌ ಕೊಡೆ ಹಿಡಿದು ಸಾಗಬಹುದು. 

ಬಬಲ್‌ ಕೊಡೆಗಳು

ಇದು ಪಾರದರ್ಶಕವಾಗಿರುವ ಕೊಡೆಗಳು. ಮುಗಿಲಿನಿಂದ ಮಳೆ ಹನಿಗಳು ಬೀಳುವ ಖುಷಿ ನೋಡಲು ಈ ಕೊಡೆಗಳನ್ನು ಬಳಸಬಹುದು. ಇದು ಬಬಲ್‌ ಆಕಾರದಲ್ಲಿರುವುದರಿಂದ ಬಬಲ್‌ ಕೊಡೆಗಳೆಂದು ಕರೆಯುತ್ತಾರೆ. ಈಗೀಗ ಈ ಕೊಡೆಗಳನ್ನು ಫ್ಯಾಷನ್‌ ಪ್ರಿಯರು ಹೆಚ್ಚಾಗಿ ಬಳಸುತ್ತಾರೆ. ಉತ್ತಮ ಗುಣಮಟ್ಟದ ಬಬಲ್‌ ಕೊಡೆಗಳು ಎಂಥ ಬಿರುಸುಮಳೆಯಲ್ಲಿಯೂ ಸುಲಭವಾಗಿ ನಡೆಯುವಂತೆ ಮಾಡುತ್ತದೆ. 

ಪ್ಯಾರಸೋಲ್‌ ಕೊಡೆಗಳು

ಇವು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತವೆ. ಬೀಚ್‌ ಕೊಡೆಗಳೆಂದೇ ಹೆಸರು ಪಡೆದಿವೆ. ಇವು ಒಂದು ಕಡೆಯಿಂದ ಮತ್ತೊಂದು ಕಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಇದನ್ನು ಇಟ್ಟು, ಇದರ ಕೆಳಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂಥ ಕೊಡೆಗಳಿವು. ಸಾಮಾನ್ಯವಾಗಿ ನದಿ ಹಾಗೂ ಸಮುದ್ರ ತೀರ ಪ್ರದೇಶಗಳಲ್ಲಿ, ನಿಮ್ಮದೇ ಸ್ವಂತ ಉದ್ಯಾನಗಳಲ್ಲಿ ವಿಶ್ರಾಂತಿ ಪಡೆಯುವಾಗ ಬಳಸಲು ಅಡ್ಡಿಯಿಲ್ಲ. 

ಬಣ್ಣದ ಬಣ್ಣದ ಛತ್ರಿಗಳಿಗೆ ಹೊಂದಿಕೆಯಾಗುವ ಲೇಸ್‌ಗಳನ್ನು ಬಳಸಿಯೂ ಮಾಡಲಾಗುತ್ತದೆ. ಫ್ಯಾಷನೇಬಲ್‌ ಆಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ಈ ಕೊಡೆಗಳನ್ನು ಬಳಸಲಾಗುತ್ತದೆ ಹೊರತು ಮಳೆಯಿಂದ ರಕ್ಷಣೆ ಪಡೆಯಲು ಅಲ್ಲ. 

 ಮಕ್ಕಳ ಕೊಡೆಗಳು

ಗಾಢ ಬಣ್ಣದ, ಕಾರ್ಟೂನ್‌, ಕಾರು, ಬೈಕ್‌, ಪ್ರಾಣಿಗಳ ಚಿತ್ರಗಳಿರುವ ಮಕ್ಕಳ ಕೊಡೆಗಳಿವು. ಬೇರೆ ಕೊಡೆಗಳಿಗೆ ಹೋಲಿಸಿದರೆ ಮಕ್ಕಳ ಕೋಮಲ ಬೆರಳುಗಳಿಗೆ ಹಾನಿಯಾಗದಂತೆ ಪುಶ್‌ ಬಟನ್‌ ಅನ್ನು ವಿನ್ಯಾಸಗೊಳಿಸಿರುವ ಕೊಡೆಗಳಿವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT