ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಕೂಟವೇ ಚೈತನ್ಯದ ಶಕ್ತಿ

Last Updated 3 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಅಲ್ಲಿರುವವರೆಲ್ಲ 65ರಿಂದ 90ರ ವಯೋಮಾನದವರು. ಮೊದಲು ನಡೆಯಲು ಆಗದವರು ಈಗ ಓಡುತ್ತಿದ್ದಾರೆ. ಕುಳಿತುಕೊಂಡರೆ ಏಳಲು ಆಗದವರೀಗ ಜಿಗಿಯುತ್ತಾರೆ. ನಿವೃತ್ತಿಯ ನಂತರವೂ ಉತ್ಸಾಹಿಗಳಾಗಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಹೊಸ ಉಲ್ಲಾಸದಿಂದ ಜೀವನ ಕಳೆಯುತ್ತಿದ್ದಾರೆ.

ಇದಕ್ಕೆಲ್ಲ ಕಾರಣವಾಗಿರುವುದು ನಗೆಕೂಟ. ಅದು ಜಯಗರದ ಐದನೇ ಬ್ಲಾಕ್‌ನಲ್ಲಿರುವ ‘ರೋಸ್ ಗಾರ್ಡನ್‌ ನಗೆಕೂಟ’. ಇದು ಆರಂಭವಾಗಿದ್ದು 1999ರಲ್ಲಿ. ಕೇವಲ ಐದು ಜನರಿಂದ ಆರಂಭವಾದ ಈ ಕೂಟದಲ್ಲೀಗ 70 ಸದಸ್ಯರಿದ್ದಾರೆ. ಇದರಲ್ಲಿ 25 ಮಹಿಳೆಯರು.

ವಿವಿಧ ಇಲಾಖೆಗಳಲ್ಲಿನ ನಿವೃತ್ತ ಸಿಬ್ಬಂದಿ, ಬ್ಯಾಂಕ್‌ಗಳ ನಿವೃತ್ತ ಸಿಬ್ಬಂದಿ, ವ್ಯಾಪಾರಸ್ಥರು, ವೈದ್ಯರು, ಎಂಜಿನಿಯರ್‌ಗಳು ಈ ಕೂಟದ ಸದಸ್ಯರು. ಇವರು ಸೇರುವುದು ಜಯನಗರ 5ನೇ ಬ್ಲಾಕ್‌ನಲ್ಲಿರುವ ಲಕ್ಷ್ಮಣರಾವ್‌ ಉದ್ಯಾನದಲ್ಲಿ. ನಿತ್ಯ ಬೆಳಿಗ್ಗೆ 6.20ಕ್ಕೆ ಬಂದು ಪಾರ್ಕ್‌ನಲ್ಲಿ ‘ವಾಕ್‌’ ಮಾಡುವ ಇವರೆಲ್ಲರೂ 7 ಗಂಟೆಗೆ ಒಂದೆಡೆ ಸೇರುತ್ತಾರೆ. ‘ವೆಲ್‌ಕಂ’ ಕ್ಲಾಪ್ಸ್‌ ಜತೆಗೆ ಮಾನವ ಸರಪಳಿ ನಿರ್ಮಿಸುವ ನಗೆಕೂಟದ ಸದಸ್ಯರ ಕ್ರಮೇಣ ವಿವಿಧ ವ್ಯಾಯಾಮ, ಯೋಗಾಸನದ ಚಟವಟಿಕೆಗಳಲ್ಲಿ ತೊಡಗುತ್ತಾರೆ.

ಪ್ರಮುಖವಾಗಿ ಪ್ರಾಣಾಯಾಮ, ಸೂರ್ಯ ನಮಸ್ಕಾರ, ಮಂಡಿ, ಪಾದ, ಮೊಣಕೈ, ಕುತ್ತಿಗೆ ಸಂಬಂಧಿ ಆಸನಗಳನ್ನೂ ಸುಲಲಿತವಾಗಿ ಮಾಡುವ ಅವರಿಗೆಲ್ಲ ವಯಸ್ಸೆಂಬುದು ಕೇವಲ ಅಂಕಿಗಳಷ್ಟೇ. ಮನಸ್ಥಿತಿಯಲ್ಲ. ‘ನಾವೆಲ್ಲ ಖುಷಿ, ಸಂತೋಷವಾಗಿದ್ದೇವೆ’ ಎಂಬ ಘೋಷಣೆಗಳನ್ನು ಕೂಗುತ್ತಾ ನಗುವಿನ ಕ್ಷಣಗಳನ್ನು ಅವರಿಲ್ಲಿ ಕಳೆಯುತ್ತಾರೆ.

ನಂತರ ಎಲ್ಲರೂ ಜತೆಗೂಡಿ ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಅಂದಿನ ಪ್ರಮುಖ ಸುದ್ದಿಗಳು, ಗಾಸಿಪ್‌, ಲೋಕಾರೂಢಿ ಮಾತುಗಳನ್ನಾಡುತ್ತಾರೆ. ಗಹನವಾದ ವಿಚಾರಗಳನ್ನು ಚರ್ಚಿಸುವುದರ ಜತೆಗೆ ನಗೆಚಟಾಕಿಗಳನ್ನೂ ಹಾರಿಸಿ ಎಲ್ಲರಲ್ಲೂ ನಗೆಯುಕ್ಕುವಂತೆ ಮಾಡುತ್ತಾರೆ.

ನಡೆಯಲಾಗದವರು ಓಡಲು ಸಜ್ಜಾದ ಬಗೆ: ‘ಮೊದಮೊದಲು ಸಹಾಯಕರೊಂದಿಗೆ ನಡೆದುಕೊಂಡು ಬರುವುದೇ ಕಷ್ಟವಾಗುತ್ತಿತ್ತು. ಕುಳಿತುಕೊಂಡರೆ ಏಳುವುದು ಕಷ್ಟ, ಎದ್ದರೆ ಕೂರುವುದು ಕಷ್ಟವಾಗುತ್ತಿತ್ತು. ಆದರೆ ಈಗ ಎಷ್ಟರಮಟ್ಟಿಗೆ ಸುಧಾರಣೆ ಆಗಿದೆ ಎಂದರೆ ಓಡುವಷ್ಟು ಚೇತರಿಸಿಕೊಂಡಿದ್ದೇನೆ. ಇದಕ್ಕೆ ಕಾರಣವಾಗಿರುವುದು ನಗೆಕೂಟ ಮತ್ತು ಇಲ್ಲಿನ ಸ್ನೇಹಮಯ ಸದಸ್ಯರು. ನಾವಿಲ್ಲಿ ವ್ಯಾಯಾಮ, ಯೋಗ ಮಾಡುತ್ತೇವೆ. ಅದರ ಜತೆ ಜತೆಗೆ ಹೊಸ ಬಗೆಯ ಕೌಟುಂಬಿಕ ವಾತಾವರಣವೂ ಇಲ್ಲಿ ಸೃಷ್ಟಿಯಾಗಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ’ ಎನ್ನುತ್ತಾರೆ 85ರ ಹರೆಯದ ಎಂ. ಬಾಲಸುಬ್ರಮಣಿಯನ್‌.

‘ಶ್ಯಾಮಲಾ ಎಂಬ 85 ವರ್ಷದ ಮಹಿಳೆಯೂ ಆರಂಭದಲ್ಲಿ ಸಹಾಯಕರ ನೆರವಿನಿಂದಲೇ ಬರುತ್ತಿದ್ದರು. ಕ್ರಮೇಣ ಒಬ್ಬರೇ ನಡೆಯುವಷ್ಟು ಮತ್ತು ವ್ಯಾಯಾಮ ಮಾಡುವಷ್ಟು ಸುಧಾರಿಸಿಕೊಂಡಿದ್ದಾರೆ’ ಎಂದು ಕೂಟದ ಸದಸ್ಯ ಡಾ. ಪಾಂಡುರಂಗ ಮಾಹಿತಿ ನೀಡಿದರು.

ನಗೆಕೂಟದಲ್ಲಿ ಹಬ್ಬಗಳ ಆಚರಣೆ: ‘ನಮ್ಮ ಕುಟುಂಬದ ಹೊರಗೆ ಮತ್ತೊಂದು ಕುಟುಂಬ ಇಲ್ಲಿ ಸೃಷ್ಟಿಯಾಗಿದೆ. ನಾವಿಲ್ಲಿ ಸ್ವಾತಂತ್ರ್ಯ ದಿನ, ಗಣರಾಜ್ಯೊತ್ಸವ ಸೇರಿದಂತೆ ಎಲ್ಲ ರಾಷ್ಟ್ರೀಯ ಹಬ್ಬ ಆಚರಿಸುತ್ತೇವೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ಮೊನ್ನೆ ರಕ್ಷಾಬಂಧನ ಆಚರಿಸಿದೆವು. ಕೂಟದ ಮಹಿಳಾ ಸದಸ್ಯರು ನಮ್ಮ ಸಹೋದರಿಯರಾದರು. ನಮ್ಮಲ್ಲರ ಕುಟುಂಬಗಳು ಈ ಮೂಲಕ ಮತ್ತಷ್ಟು ವಿಸ್ತರಣೆಗೊಂಡಿವೆ’ ಎನ್ನುತ್ತಾರೆ ಅವರು.

‘ಕೂಟದ ಸದಸ್ಯರ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಾವೆಲ್ಲ ಕಾಯಂ ಅತಿಥಿಗಳು. ಅದು ಗೃಹಪ್ರವೇಶವಿರಲಿ, ನಾಮಕರಣವಿರಲಿ, ಮಕ್ಕಳ ವಿವಾಹವಿರಲಿ, ವಿವಾಹದ ವಾರ್ಷಿಕೋತ್ಸವಗಳಿರಲಿ ಕೂಟದ ಬಹುತೇಕ ಸದಸ್ಯರು ಹಾಜರಾಗುತ್ತೇವೆ. ಎಲ್ಲರೂ ಪ್ರತಿಯೊಬ್ಬರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತೇವೆ’ ಎಂದು ವಿವರಿಸುತ್ತಾರೆ ಸದಸ್ಯ ಎನ್‌.ಎಚ್‌. ವೆಂಕಟೇಶ್‌.

‘ನಗೆಕೂಟದ ಅಧ್ಯಕ್ಷ ಸೂರ್ಯನಾರಾಯಣ ಶರ್ಮ ಅವರ ಮುತುವರ್ಜಿಯಿಂದ ಕೂಟದ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಕೂಟದ ಸದಸ್ಯರ ವಿವಾಹ ವಾರ್ಷಿಕೋತ್ಸವ ಮತ್ತು ಹುಟ್ಟಿದ ಹಬ್ಬವನ್ನು ನಾವುಗಳು ಇಲ್ಲಿ ಆಚರಿಸುತ್ತೇವೆ. ಅಲ್ಲದೆ ತಿಂಗಳಿಗೊಮ್ಮೆ ಎಲ್ಲ ಸದಸ್ಯರು ಯಾವುದಾದರೂ ಉತ್ತಮ ಹೋಟೆಲ್‌ನಲ್ಲಿ ಊಟಕ್ಕೆ ಸೇರಿ ಎಂಜಾಯ್‌ ಮಾಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ ಎನ್‌. ವಸಂತ್‌ ಕುಮಾರ್‌.

ಕೊಡಗಿಗೆ ನೆರವು

ಕೊಡಗಿನಲ್ಲಿ ನೆರೆಹಾವಳಿಯಿಂದ ಅಪಾರ ನಷ್ಟವಾಗಿರುವುದನ್ನು ಮಾಧ್ಯಮಗಳ ಮೂಲಕ ತಿಳಿದ ಈ ಹಿರಿ ಜೀವಗಳು ತಲ್ಲಣಗೊಂಡಿವೆ. ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಬೇಕು ಹಾಗೂ ಪ್ರಕೃತಿ ಸೌಂದರ್ಯದ ಸೊಬಗು ಮತ್ತೆ ಕಂಗೊಳಿಸಬೇಕು ಎಂದು ಬಯಸಿರುವ ರೋಜ್‌ಗಾರ್ಡನ್‌ ನಗೆಕೂಟದ ಸದಸ್ಯರು ತಮ್ಮ ಉಳಿತಾಯ ಹಾಗೂ ಪಿಂಚಣಿ ಮೊತ್ತದಿಂದಲೇ ₹ 70 ಸಾವಿರವನ್ನು ‘ಡೆಕ್ಕನ್‌ ಹೆರಾಲ್ಡ್‌– ಪ್ರಜಾವಾಣಿ ಪರಿಹಾರ ನಿಧಿ’ಗೆ ದೇಣಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT