ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಿನ ಸತ್ವವೇ ಮುಖ್ಯ

Last Updated 8 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಜೀವನದಲ್ಲಿಸೋಲು ಸಹಜ. ಆದರೆ ನಾವು ಸೋಲಿನ ಹೊಣೆಯನ್ನು ಯಾರ ತಲೆಗೆ ಕಟ್ಟುತ್ತೇವೆ?

ಹೊರಗಿನ ವಸ್ತುಗಳನ್ನೇ ನಮ್ಮ ಸೋಲಿಗೆ ಕಾರಣಗಳನ್ನಾಗಿ ನೋಡುತ್ತೇವೆ. ‘ನನ್ನಲ್ಲಿ ಹಣ ಇದಿದ್ದರೆ ನಾನು ಯಶಸ್ವಿಯಾಗುತ್ತಿದ್ದೆ’; ‘ರಸ್ತೆ ಸರಿ ಇದ್ದಿದ್ದರೆ ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದೆ; ‘ಕೀಬೋರ್ಡ್‌ ಚೆನ್ನಾಗಿದ್ದಿದ್ದರೆ ಲೇಖನವನ್ನು ಚೆನ್ನಾಗಿ ಬರೆಯುತ್ತಿದ್ದೆ’ – ಇಂಥ ಮಾತುಗಳನ್ನು ಆಡುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಈ ಮಾತುಗಳು ಸತ್ಯವೆ?

ಇಲ್ಲೊಂದು ಶ್ಲೋಕವನ್ನು ನೋಡಬಹುದು:

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀತ್ ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

ತಾತ್ಪರ್ಯ: ಗೆಲ್ಲಬೇಕಾದದ್ದು ಲಂಕೆಯನ್ನು, ದಾಟಬೇಕಾದದ್ದು ಸಮುದ್ರವನ್ನು, ವೈರಿಯೂ ಸಾಮಾನ್ಯನಲ್ಲ, ಪುಲಸ್ತ್ಯವಂಶದವನು; ಯುದ್ಧಭೂಮಿಯಲ್ಲಿ ಇವನಿಗೆ ಸಹಾಯಕರಾಗಿರುವವರು ಯಾರೆಂದರೆ ಕಪಿಗಳು. ಆದರೂ ರಾಮ ಒಬ್ಬನೇ ರಾಕ್ಷಸಕುಲವನ್ನು ಸಂಪೂರ್ಣ ನಾಶಮಾಡಿದನು. ಹೀಗಾಗಿ ಮಹಾತ್ಮರ ಕಾರ್ಯದ ಫಲವು ಅವರ ಅಂತರಂಗದ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು, ಹೊರಗಿನ ಉಪಕರಣಗಳನ್ನಲ್ಲ.

ರಾಮಾಯಣದ ಹಿನ್ನೆಲೆಯಲ್ಲಿ ಕವಿ ನಮಗೆ ಅಂತರಂಗದ ಶಕ್ತಿಯನ್ನು ಹೇಳುತ್ತಿದ್ದಾನೆ. ಸೀತೆಯ ಅಪಹರಣವಾಗಿದೆ. ಆದರೆ ಅಪಹರಣವನ್ನು ಮಾಡಿದವರು ಯಾರು – ಎಂದು ಕೂಡ ರಾಮನಿಗೆ ತತ್‌ಕ್ಷಣಕ್ಕೆ ತಿಳಿದಿರಲಿಲ್ಲ. ಆದರೆ ಅವನು ಎಡೆಬಿಡದೆ ಅನ್ವೇಷಿಸಿದ. ಹಂತಹಂತವಾಗಿ ಯಶಸ್ಸನ್ನು ಸಂಪಾದಿಸಿದ. ಕೊನೆಗೆ ಅವನು ಹತ್ತುತಲೆಯ ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದ. ಒಬ್ಬನೇ ರಾಮ ಒಟ್ಟು ರಾಕ್ಷಸಕುಲವನ್ನೇ ನಾಶಮಾಡಿದ. ಆರಂಭದಲ್ಲಿ ಅವನ ಬಳಿ ಇದ್ದದ್ದು ಬಲವಾದ ಸಂಕಲ್ಪ ಮಾತ್ರವೇ. ಎಂದರೆ ಮಹಾತ್ಮರ ಕಾರ್ಯವಂತಿಕೆಯನ್ನು ನಿರ್ಧರಿಸುವುದು ಅವರ ಅಂತರಂಗದ ಶಕ್ತಿಯೇ ಹೊರತು ಹೊರಗಿನ ಸಾಧನಗಳಲ್ಲ.

ಹೀಗಾಗಿ ನಾವು ಕೂಡ ಹೊರಗಿನ ಸಾಧನಗಳಿಗಿಂತಲೂ ಮುಖ್ಯವಾಗಿ ಗಮನವನ್ನು ಕೊಡಬೇಕಾದ್ದು ನಮ್ಮ ಅಂತರಂಗದ ಶಕ್ತಿಯ ಕಡೆಗೆ. ನಮ್ಮ ಮುಂದೆ ಹೀಗೆ ಸಾಧನೆ ಮಾಡಿದವರು ಹಲವರು ಇದ್ದಾರಷ್ಟೆ. ಬಡತನದಲ್ಲೂ ಗಣಿತಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದ ಶ್ರೀನಿವಾಸ ರಾಮಾನುಜನ್‌, ತೀವ್ರವಾದ ಅನಾರೋಗ್ಯದಲ್ಲಿದ್ದರೂ ವಿಜ್ಞಾನರಂಗದಲ್ಲಿ ಅಪೂರ್ವ ಸಂಶೋಧನೆಯನ್ನು ಮಾಡಿದ ಸ್ಟೀಫನ್‌ ಹಾಕಿಂಗ್‌ – ಇಂಥ ಹಲವರು ನಮಗೆ ಆದರ್ಶವಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT